ಜಯಶ್ರೀ.ಜೆ. ಅಬ್ಬಿಗೇರಿಲಹರಿ-ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು

ಲಹರಿ

ಜಯಶ್ರೀ. ಜೆ. ಅಬ್ಬಿಗೇರಿ.

ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು

ಮೊದಲೇ ನಾನು ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದ ಹಳ್ಳಿ ಹೈದ. ನಿನ್ನಂತಹ ಕಡಲ ತೀರದ ಬಟ್ಟಲುಗಣ್ಣಿನ ಚೆಲುವಿ ಕಣ್ಣಿಗೆ ಬಿದ್ದಾಗ ಬೆರಳುಗಳು ಗೀಚಿದ ಕವಿತೆಗಳಿಗಳಿಗೆ ಲೆಕ್ಕವಿಲ್ಲ. ನಮ್ಮೀರ್ವರ ನವಿರಾದ ಪ್ರೇಮ ಕತೆಯನ್ನು ಪದಗಳಲ್ಲಿ ಕಟ್ಟಿಕೊಡುವುದು ನನ್ನಂತಹ ಒರಟನಿಗೆ ತುಸು ಕಷ್ಟವೇ ಅನ್ನು. ಮೊದಲ ಸಲದ ಪ್ರೀತಿಯೇ ಅಂಥದ್ದು ಏನೋ ವಿನೂತನ.
ನಮ್ಮಲ್ಲೆಲ್ಲ ಹೋಳಿ ಹಬ್ಬವೆಂದರೆ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಎರಚಿ ಸಂಭ್ರಮಿಸುವುದು ಸಾಮಾನ್ಯ. ನಿಮ್ಮಲ್ಲಿ ಪುರುಷರು ಮೇಳವನ್ನು ಕಟ್ಟಿಕೊಂಡು ಬಣ್ಣ ಬಣ್ಣದ ಧಿರಿಸು ಧರಿಸಿ ಹಾಡು ನರ್ತನದ ಮೂಲಕ ಆಚರಿಸುವ ಹಬ್ಬ ನನಗೆ ಎಲ್ಲಿಲ್ಲದ ಕುತೂಹಲ ಮೂಡಿಸಿತ್ತು. ಅಂದೇ ಮನಸ್ಸಿನಲ್ಲಿ ನಿನ್ನೊಲವು ಸುತ್ತಿ ಸುಳಿದು. ಪ್ರೀತಿಯೆಂಬ ಬಣ್ಣದ ಓಕುಳಿಯಾಟ ಆರಂಭವಾಗಿತ್ತು. ಬಣ್ಣದಾಟದಲ್ಲಿ ಕಣ್ಣಿಗೆ ಬಿದ್ದವಳು ಪ್ರಥಮ ನೋಟದಲ್ಲೇ ಹೃದಯ ಗೆದ್ದವಳು ನಿದಿರೆ ಕದ್ದವಳು ಎಂದು ಆಶು ಕವನವನ್ನು ಹೇಳುತ್ತ ಮೃದುವಾದ ಕೈ ಸವರಿ ಸಪೂರ ಗಲ್ಲವನು ಸವರಿದ್ದು ಇನ್ನೂ ನೆನಪಿದೆ.
ಆಗ ಕಡುಬಡತನದ ದಿನಗಳು ಕೊನೆ ದಿನ ಎಣಿಸುತ್ತಿದ್ದವು. ಎರಡು ಹೊತ್ತಿನ ಊಟಕ್ಕೆ ಒಂದು ಮನೆ ಬಾಡಿಗೆಗೆ ಉಳಿದೆಲ್ಲ ಖರ್ಚಿಗೆ ಆಗುವಷ್ಟು ಸಂಪಾದನೆ ಶುರುವಾಗಿತ್ತು. ಹೆಚ್ಚಿನ ಆಸೆ ಆಕಾಂಕ್ಷೆಗಳೇನೂ ಇರಲಿಲ್ಲ ಹೀಗಾಗಿ ಮನಸ್ಸು ಪ್ರಸನ್ನತೆಯಿಂದ ಕೂಡಿತ್ತು. ಜೀವನದಲ್ಲಿ ಮುಖ್ಯವಾಗಿ ಬೇಕಾಗಿದ್ದು ಅಂದರೆ ಒಂದು ಹಿಡಿಯಷ್ಟು ಪ್ರೀತಿ ಮತ್ತು ಬೊಗಸೆಯಷ್ಟು ನೆಮ್ಮದಿ ಅಲ್ಲವೇ ಗೆಳತಿ.

ಜೀವನೋಪಾಯಕ್ಕಾಗಿ ಕರಾವಳಿಗೆ ಬಂದು ನಿನ್ನೊಂದಿಗೆ ಜೀವನವನ್ನು ಕಟ್ಟಿಕೊಳ್ಳುವ ಸೌಭಾಗ್ಯ ನನ್ನದಾಗಿತ್ತು.
ಹತ್ತಾರು ಸೋಲುಗಳು ಮನಸ್ಸನ್ನು ಹಿಂಡಿದಾಗ, ಸಾವಿರಾರು ಕಷ್ಟಗಳು ಎದುರು ನಿಂತಾಗ, ಹಲವಾರು ಅವಮಾನಗಳನ್ನು ಸಹಿಸಿದಾಗಲೂ ಇಂತಹ ನೋವಿನ ಅನುಭವ ಆಗಿರಲಿಲ್ಲ. ಪ್ರೀತಿ ಕೊಡುವ ನೋವಿನಲ್ಲೂ ಒಂಥರ ಹೇಳಲಾಗದ ಸುಖವಿದೆ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ಒಲವಿನ ದೋಣಿಯ ಪಯಣದಲ್ಲಿ ಕೆಲವೊಂದಿಷ್ಟು ಸಮಯವಾದರೂ ನೀನು ನನ್ನೊಂದಿಗಿದ್ದೆ ಎನ್ನುವ ಸುಖದ ಮುಂದೆ ಇನ್ನಾವ ಸುಖವಿದೆ ಹೇಳು ಸಖಿ. ‘ಬದುಕಿದ್ದರೆ ಜೊತೆಯಲ್ಲೇ ಬದುಕಿರುವಾ.’ ಎಂದು ನೀನಾಡಿದ ಮಾತು ಎದೆಗೂಡಿನಲ್ಲಿ ಇನ್ನೂ ಖುಷಿಯನ್ನು ಜೋಪಾನವಾಗಿ ಬಚ್ಚಿಟ್ಟಿದೆ. ಅದೇ ಮಾತಿನ ಆಧಾರದಲ್ಲಿ ಹೃದಯದ ದಾಹವನ್ನು ನೀಗಿಸಿಕೊಳ್ಳುತ್ತಿರುವೆ. “ಭೂಮಿಯಷ್ಟು ಸಂಯಮಿ ನೀನಿರುವೆ ಆ ಸಹನೆಗೆ ನಾ ಕರಗಿ ಹೋಗಿರುವೆ.” ಕಣ್ಣ ಭಾಷೆಯಲ್ಲೇ ಎಲ್ಲವನ್ನೂ ಹೇಳುವಷ್ಟು ಜಾಣೆ.
ಸೀತೆಗೆ ಜಿಂಕೆ ಮರೀಚಿಕೆಯಾದಂತೆ ನೀನೆಲ್ಲಿ ನನಗಾಗುವೆಯೋ ಎಂಬ ಅನುಮಾನವೂ ಎಷ್ಟೋ ಸಲ ಕಾಡಿದ್ದೂ ಉಂಟು. ಮನಸ್ಸಿನ .ಕಡಲುದ್ದಕ್ಕೂ ನಿನ್ನ ಚಿತ್ತಾರದಲೆಗಳದೆ ಆಟ. ವಿರಹ ವೇದನೆಯಲ್ಲಿರುವ ಮನಸ್ಸು ಹಪಹಪಿಸುತ್ತದೆ. ಬೊಗಸೆ ತುಂಬಿದ ಪ್ರೀತಿಗಾಗಿ. ಸ್ವಚ್ಛಂದವಾಗಿ ಹಾರುವ ಚಿಟ್ಟೆಯನ್ನು ಹಿಡಿಯಲು ಹೋಗಿ ಬೆರಳಿಗೆ ಅದರ ಬಣ್ಣದ ಹುಡಿಯಷ್ಟೇ ಅಂಟಿಸಿಕೊಂಡಂತಾಗಿದೆ ನನ್ನ ಸ್ಥಿತಿ.
ಮೊಗ್ಗುಗಳು ಹಿಗ್ಗುವುದನು ಮರೆಯಬಹುದು. ಬಣ್ಣ ಬಣ್ಣದ ಚಿಟ್ಟೆಗಳು ಕಂಗಳ ಸೆಳೆಯುವುದನು ಬಿಟ್ಟು ನಿದ್ದೆಗೆ ಜಾರಬಹುದು.ವಸಂತ ಮಾಸದಿ ಮಾಮರದಿ ಕುಳಿತ ಪುಟ್ಟ ಕೋಗಿಲೆ ಕುಹೂ ಎನ್ನದಿರಬಹದು ಆದರೆ ನಾನು ನಿನ್ನ ಮರೆಯುವುದು ದೂರದ ಮಾತು. ಸದಾ ನಿನ್ನ ಗುಂಗಿನಲ್ಲಿ ಎಲ್ಲೆಂದರಲ್ಲಿ ತಿರುಗುವ ನಾನು ಮಳೆ ಚಳಿ ಬಿಸಿಲು ಮರೆತು ಹೋಗಿದ್ದೇನೆ ಎಂದು ಬೇರೆ ಹೇಳಬೇಕಿಲ್ಲ. ಚಳಿಗಾಲದ ರಾತ್ರಿಗಳಲ್ಲಂತೂ ನಿದಿರೆಯಿಲ್ಲದೇ ಮೆತ್ತನೆಯ ದಿಂಬನ್ನು ನೀನೆಂದು ತಿಳಿದು ಮುದ್ದಿಸಿದ್ದನ್ನು ನೆನೆದರೆ ಈಗಲೂ ನಾಚಿಕೆಯಾಗುತ್ತದೆ. ಪ್ರೀತಿ ಪ್ರೇಮ ಪ್ರಣಯಗಳು ಹರೆಯದ ಹೃದಯದ ವಿಷಯಗಳು ಇಂತಹ ಯುವ ಭಾವನೆಗಳಲ್ಲಿ ನಿನ್ನನ್ನು ಬಲು ನಾಜೂಕಿನಿಂದ ಕಲಾತ್ಮಕವಾಗಿ ನರನಾಡಿಗಳನ್ನೆಲ್ಲ ರೋಮಾಂಚನಗೊಳಿಸಿ ಆನಂದಿಸುವುದು ನನಗೆ ಮನಾನಂದ ನೀಡುವುದು ಅಂತ ವಿಶೇಷವಾಗಿ ಹೇಳಬೇಕಿಲ್ಲ.
ಪ್ರೀತಿ ಅನ್ನೋದು ಬಾಳಿನ ಬಾಗಿಲಿಗೆ ಕಟ್ಟುವ ತೋರಣ. ಅದು ಯೋಚಿಸಿ ಯೋಜಿಸಿ ಕಟ್ಟುವಂಥದ್ದಲ್ಲ. ತನ್ನಿಂದ ತಾನೇ ಸಂಭವಿಸುವಂಥದ್ದು. ಪ್ರೀತಿ ಕಡಲಿನಂತೆ ಆಳ ಅಗಲ ವಿಸ್ತಾರ ಅಗಾಧತೆಯನ್ನು ಅರಿಯುವುದು ಬಹಳ ಕಷ್ಟ. ಪ್ರೇಮದ ಅಗ್ನಿ ಪರೀಕ್ಷೆಗೆ ಯಾರೇ ಖಳನಾಯಕರಾಗಿ ಬಂದರೂ ಅದು ವಿಷಾದದಲ್ಲಿ ಕೊನೆಗೊಳ್ಳಬಾರದು. ಅದು ವಿಫಲವಾದರೆ ಬದುಕಿನ ಬಗ್ಗೆ ಮನಸ್ಸು ಕಹಿಯಾಗುತ್ತದೆ. ಸಿಹಿ ತುಂಬಿದ ಜೀವನಕ್ಕೆ ಇನ್ನೇನು ಬೇಕೆಂದು ತಡಕಿದರೆ ಉತ್ತರ ಪ್ರೀತಿಯೆಂದೇ ಬರುತ್ತದೆ. ಆದರೆ ಬರಬರುತ್ತ ಅದು ಉತ್ತರವೂ ಅಲ್ಲ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುವ ಎರಡೂವರೆ ಅಕ್ಷರದ ಪದ ಎಂದೆನಿಸುತ್ತದೆ. ಬಂಧನದ ಚಂದವನರಿತು ಬಂಧದ ಹದವರಿತು ಹೆಜ್ಜೆ ಹಾಕುವುದೇ ಚೆಂದವಲ್ಲವೇ? ಕದ್ದು ಮುಚ್ಚಿ ನಿನ್ನ ಹಿಂದೆ ಸುತ್ತುವುದು ಖುಷಿಯಲ್ಲವೇ ಸಖಿ?
ಅಗಲವಾದ ಬೆನ್ನ ತುಂಬ ಹೊಂಗೂದಲು ಹರವಿ ಕಣ್ಣು ಮಿಟುಕಿಸಿದವಳು. ಮಲ್ಲಿಗೆ ಅಚ್ಚು ಬಿಳುಪಿನಂತಹ ಮೈ ಬಣ್ಣದವಳು ಎಂಥವರನ್ನಾದರೂ ಆಕರ್ಷಿಸುವ ಪ್ರೀತಿ ತುಳುಕುವ ಮೊಗದ ನಗುವಿನವಳು. ನನ್ನೆಡೆಗೆ ಬಾಗುತ್ತ ಮುಂಗುರುಳು ಸವರುತ್ತ ಪಿಸುಗುಟ್ಟುವವಳು. ನಿನ್ನನಗಲಿ ಅದ್ಹೇಗೆ ಇರಲಿ ಹೇಳು ಗೆಳತಿ.
ಮೊದಲ ಭೇಟಿ, ತಂಪಾದ ಸಂಜೆಯಲಿ ತಣ್ಣನೆಯ ಹೆಜ್ಜೆ ಹಾಕುತ್ತ ಎದೆಯ ಬಾಗಿಲು ತೆರೆದೆ. ಮೈ ತೀಡುವ ಸುಳಿವ ತಂಗಾಳಿಯಂತೆ. ನೀನೊಂದು ವಿಸ್ಮಯದ ಅಚ್ಚರಿಯಂತೆ ಕಂಡೆ. ಆ ಅಚ್ಚರಿಯ ಸೌಂದರ್ಯ ರಾಶಿ ನಿನ್ನನು ಹತ್ತಿರಕ್ಕೆ ಬರ ಸೆಳೆದು ಅಪ್ಪುವಂತೆ ಮಾಡಿತ್ತು. “ಹೇ ಮುದ್ದು, ಎಷ್ಟು ಮುದ್ದಿಸಿದರೂ ಕಡಿಮೆಯೇ ನಿನ್ನ ನನ್ನ ಚಿನ್ನ!” ಎಂದಾಗ ನಾಚಿ ನನ್ನ ಎದೆಗೊರಗಿದೆ. ನಿನ್ನ ಉಬ್ಬಿದೆದೆಯ ಜೀವ ಮಿಡಿತದ ಸಂಗೀತದ ಸದ್ದು ಕಿವಿಗೆ ಬೀಳುತ್ತಿತ್ತು. ಮಿಲನ ಭಾವದಲ್ಲಿ ಬೆರೆತು ಗಂಧವಾಗಿದ್ದೆ. ನನ್ನ ಕೀಟಲೆ ತುಂಟಾಟಗಳು ಮತ್ತೆ ಮತ್ತೆ ನಿನಗೆ ಬೇಕೆನಿಸಿದ್ದರೂ ಮುಂದೇನಾಗುತ್ತೋ ಎಂಬ ಭಯದಲ್ಲಿದ್ದೆ. ಎಲ್ಲ ಕೋನಗಳಿಂದ ಅಳೆದು ತೂಗಿ ಮುಂದುವರೆಯುವುದು ಒಳ್ಳೆಯದು ಎಂದು ಹೇಳಬೇಕೆಂದಿದ್ದೇನೋ ಎಂದೆನಿಸಿತು. ಆದರೆ ಒಲವು ಯಾರ ಮಾತು ಕೇಳುವುದಿಲ್ಲ. ನದಿಯಂತೆ ಮುಂದಕ್ಕೆ ಹರಿಯುತ್ತಲೇ ಇರುತ್ತದೆ. ಬಾಹು ಬಂಧನದಿ ರೆಪ್ಪೆಗಳಪ್ಪುಗೆಯಲ್ಲಿ ಬೆಚ್ಚನೆಯ ಭಾವ ಸವಿಯುತ್ತಿದ್ದೆ. ಇಬ್ಬನಿ ಹನಿ ಬಿಂದುವಿನಂತೆ ಮೆಲ್ಲಗೆ ಆಪೋಷನ ಮಾಡುವಾಗಲೇ ಸೋತು ಶರಣಾಗಿದ್ದೆ. ನೀ ಕೆನ್ನೆಗಿತ್ತ ಚೆಲುವಿನಧರದ ಸವಿಮುತ್ತುಗಳನು ಕಂಡು ಕಡಲೊಳಿಗಿನ ಮುತ್ತುಗಳು ನಾಚಿದವು ಸುತ್ತ ಮುತ್ತಲು ಕತ್ತಲು ಕವಿಯುತ್ತಿತ್ತು. ಆ ಕ್ಷಣ ನನಗೆ ಲೈಲಾ ಮಜುನರ ನೆನಪಾಗಿತ್ತು. ತುಟಿಕಚ್ಚಿ ಜೇನು ಸವಿಯುವ,ಮುತ್ತುಗಳ ಸರಪಳಿಯಲ್ಲಿ ಭಾವದ ಉತ್ಕಟತೆಯಲ್ಲಿ ಇನ್ನೇನು ಕಳೆದುಹೋಗುವ ಸಮಯದಲ್ಲಿ ಮತ್ತೆ ಬರುವೆ ಪ್ರೀತಿಯ ಹೂಗುಚ್ಛಗಳ ಹಿಡಿದು ಎನ್ನುತ್ತ ದೂರ ಸರಿದೆ.
ಅಂದಿನಿಂದ ನಾನು ಉನ್ಮತ್ತ ಪ್ರೇಮಿಯಾದೆ. ಜಾತಕ ಪಕ್ಷಿಯಂತೆ ಕಾದು ಕುಳಿತೆ. ನಿನಗಾಗಿ ಚಂದಿರನ ಬೆಳದಿಂಗಳು ಸಾಲದ ಸಾಲು ಸಾಲು ರಾತ್ರಿಗಳಲ್ಲಿ ಕಳೆದು ಹೋಗಿರುವೆ. ಯವುದೋ ಕ್ಷಣದಲ್ಲಿ ಒಲವು ಹುಟ್ಟಿಕೊಂಡಿತು ಬದುಕಿನ ಹಾಡು ಬರೆಯಿತು.. ಜಗದ ಯಾವ ಉಸಿರು ನೆರಳು ಸೋಕದಂತೆ ಒಳಗೊಳಗೆ ಕಾತುರ ಹೆಚ್ಚಿಸಿ ಕದಲದ ನೋಟ ಹೆಚ್ಚಿತು. ನಿನ್ನಂತರಂಗದ ಭಾವಕೋಶಗಳನ್ನು ನನ್ನ ಭಾವಪರಿಧಿಯಲ್ಲಿ ಬಿತ್ತಿದೆ ಸದ್ದಿಲ್ಲದೆ. ಒಡಲು ಸುಡುವ ಒಳಗಿನ ಕಾವನ್ನು ಹೊರಗೆ ರಾಚುವುದಾದರೂ ಹೇಗೆ? ಕನಸಲಿ ಬರುವ ನಿನ್ನ ತಡೆಯುವುದಾದರೂ ಹೇಗೆ? ನೂರೊಂದು ನೆನಪುಗಳನ್ನು ಹೃದಯದಲ್ಲಿ ಚಿತ್ರಿಸಿ ಕಣ್ಣಿಗೆ ಕಾಣದೆ ಹೀಗೆ ದೂರ ಹೋದರೆ ತಡೆದುಕೊಳ್ಳುವುದಾದರೂ ಎಂತು? ಇದೀಗ ನೆನಪಿನ ಗಂಗೋತ್ರಿಯಲ್ಲಿ ದಿನವೂ ಮೀಯುತ್ತಿರುವೆ. ಸತಾಯಿಸದೇ ಬೇಗ ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು ಪ್ರಣಯದರಮನೆಗೆ. ಅರ್ಧಕೆ ನಿಂತ ಶುಭಮಿಲನದ ಕನಸು ನನಸಾಗಿಸೋಣ ಪ್ರತಿ ರಾತ್ರಿಯನ್ನು ಪ್ರಥಮ ರಾತ್ರಿಯಾಗಿಸೋಣ.
ನಿನ್ನ ಬರುವನ್ನೇ ಕಾಯುತ್ತಿರುವ


ಜಯಶ್ರೀ.ಜೆ. ಅಬ್ಬಿಗೇರಿ.

3 thoughts on “ಜಯಶ್ರೀ.ಜೆ. ಅಬ್ಬಿಗೇರಿಲಹರಿ-ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು

Leave a Reply

Back To Top