ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಮತ್ತೆ ವಸಂತ
ಬರಡಾದ ಭಾವಗಳಿಗೆ
ಬಣ್ಣ ಬಳಿಯುತ
ಉಸಿರು ತುಂಬುತ
ಹಸಿರು ಪಿಸುನುಡಿದು
ಮಣ್ಣ ಕಣಕಣದಿ ಕಣ್ಣ ತೆರೆಯುತ
ನನ್ನೆದೆಯ ನೆಲದಲ್ಲಿ
ಮೆಲು ಹೆಜ್ಜೆಗಳನಿಡುತ
ಒಣಗಿದ ತರಗೆಲೆಗಳ
ಮೇಲೆ ಮೆಲ್ಲನಡಿಯಿಡುತ
ಸದ್ದಿಲ್ಲದೆ ಬಂದು ಮುದ್ದಾಗಿ
ನಗು ನಗುತ ತುಂಟ
ಮತ್ತೆ ವಸಂತ…..ತಾ ಬಂದ…
ಬೋಳಾದ ಒಣ ಮರದ
ಅಂತರಾಳದಿ ಪುಟಿದು…
ಕೊಂಬೆ ರೆಂಬೆಗಳ ಸಂದಿಯಲಿ
ಚೈತ್ರದಿ ಕೆಂಪು ಚಿಗುರಾಗಿ ಇಣುಕಿ..
ತಂಪು ಮಾಮರದ ತಳಿರಿನಲಿ
ಇಂಪಾಗಿ ಕರೆದು….
ಪಲ್ಲವಿ ಅನುಪಲ್ಲವಿಯಾಗಿ
ತೋರಣವಾಗಿ ತೂಗಿ…
ಕುಹು ಕುಹೂ ಇಂಚರದ
ಸಂಚಿನಲಿ ಮೈಮರೆಸೆ….
ಮತ್ತೆ ವಸಂತ…. ತಾ ಬಂದ
ಒರಟು ಬಿರುಸುಗಳಳಿಸಿ
ತಿರುಳು ಸಿಹಿಯಾಗಿ…
ಒಗರು ಹುಳಿಯಳಿಸಿ
ಮಾಗಿ ಮಾವಾಗಿ…
ಪರಿಪಕ್ವ ಫಲವಾಗಿ
ಮೃದುವಾಗಿ ಮನದಿ
ಮನೆ ಮಾಡಿ ಕುಣಿಯೆ….
ಹೃನ್ಮನವ ತಣಿಸೆ….
ಗೆಲ್ಲು ಗೆಲ್ಲಿನ ಗುಲಾಬಿ
ಗಲ್ಲವ ಸವರುತ
ಹರುಷವ ಮೆಲ್ಲಲು…
ಮತ್ತೆ ವಸಂತ…. ತಾ ಬಂದ…
ಹಾಡುವುದ ಮರೆತ
ಕೋಕಿಲದ ಕೊರಳಾಗಿ
ಸವಿಗಾನ ಉಲಿಯೇ….
ನರ್ತನವ ಮರೆತ
ನವಿಲಿನ ಹೆಜ್ಜೆಗಳಿಗೆ
ನಲಿವಿನ ಗೆಜ್ಜೆ ತಾನಾಗೇ….
ಅಲರುಣಿಯ ಆಲಾಪ
ಹೂ ದುಂಬಿ ಸಲ್ಲಾಪ….
ಮೈಮರೆತು ಮಲಗಿದ
ಹೂಬನದ ಮೊಲ್ಲೆ ಮೊಗ್ಗಿನ ಮೊಗಕೆ
ಮುತ್ತಿಡಲು ಮೆತ್ತನೆ….
ಮತ್ತೆ ವಸಂತ…. ತಾ ಬಂದ…
ಇಂದಿರಾ ಮೋಟೆಬೆನ್ನೂರ.
Superb mam
Thank you…
ಮಸ್ತ…
Thanks
ಅರ್ಥ ಪೂರ್ಣ ಸುಂದರ ಕವನ ಮೇಡಂ