ಹನಿಬಿಂದು ಕವಿತೆ-ಮಾನವರಾಗಿರೋಣ

ಕಾವ್ಯ ಸಂಗಾತಿ

ಹನಿಬಿಂದು

ಮಾನವರಾಗಿರೋಣ

ನಾವೇನೂ ಇಲ್ಲೇ ಸಾವಿರ ವರುಷ ದೀರ್ಘವಾಗಿ ಉಳಿಯಲು ಬಂದಿಲ್ಲ
ಹಿಂದಿರುಗಿ ಹೋಗುವವರೆಗೆ ನಗುವ ಸಾರುತ ನಗಿಸಿ ನಗುತ ವಿರಮಿಸೋಣ

ನಾವೇನೂ ಎಂದಿಗೂ ನೋವುಣ್ಣುತ್ತಾ ಎಂದಿಗೂ ಖುಷಿ ಪಡುತಿರಲು ಸಾಧ್ಯವೇ ಇಲ್ಲ
ಪರರಿಗೂ ನೋಯಿಸುವ ನೋವು ಕೊಟ್ಟು ಅವರನ್ನು ಹಿಂಸಿಸದೆ ಇರೋಣ

ನಾವೇನೂ ಹಾಯಾಗಿ ಕಣ್ಣೀರು ಹಾಕದೆ ಬದುಕ ನಾವೆಯ ದಡ ಸೇರಿಸಲು ಆಗುವುದೇ ಇಲ್ಲ
ಪಕ್ಕದಲ್ಲಿರುವವರಿಗೆ ನಮ್ಮ ಕಾರಣದಿಂದ ಕಣ್ಣೀರು ಬರಿಸದೆ ಬಾಳೋಣ

ನಾವೇನೂ ದ್ವೇಷ ಹಂಚಲು, ಚಾಡಿ ಹೇಳಿ ಮನೆ ಮನ ಒಡೆಯಲು ಹುಟ್ಟಿದವರಲ್ಲ
ಪ್ರೀತಿ ಬಳಸಿ ಪ್ರೀತಿ ಗಳಿಸಿ ಪ್ರೀತಿ ಉಳಿಸಿ ಪ್ರೀತಿ ತೋರಿಸಿ ಪ್ರೀತಿ ಹಂಚುವವರಾಗೋಣ

many thumbs up

ನಾವೇನೂ ಬರುವಾಗಲೇ ಅಕ್ಕ ಅಣ್ಣ ತಂದೆ ತಾಯಿ ಅತ್ತೆ ಮಾವ ಎನ್ನುವ ಸಂಬಂಧಗಳ ಬಂಧ ತಂದವರಲ್ಲ
ಸರ್ವರ ಅನುಬಂಧವ ಸದಾ ರಮ್ಯವಾಗಿ ಧರೆಯಲಿ ಉಸಿರಾಡುವವರೆಗೆ ಉಳಿಸಿಕೊಳ್ಳಲು ಪ್ರಯತ್ನಿಸೋಣ

ನಾವೇನೂ ನಮಗಾಗಿ ಕಣ್ಣೀರು ಒರೆಸುವವವರನು, ನಮ್ಮನ್ನು ಪ್ರೇಮಿಸುವವರನು ಹೊತ್ತುಕೊಂಡು ಬಂದಿಲ್ಲ
ನಮ್ಮನ್ನು ನೆಲದ ಮೇಲಿರಿಸಿ ಸದಾ ಪೊರೆಯುತಿರುವ ಕಾಣದ ದೇವರ ದಯೆ ಕರುಣೆಯ ಮರೆಯದೆ ಇರೋಣ..

ನಾವೇನೂ ಪ್ರಕೃತಿಯ ತಾಳ್ಮೆ, ಸಹಾಯದ ಬದಲಿಗೆ ಪರಿಸರಕ್ಕೆ ಏನೂ ಕೊಟ್ಟವರಲ್ಲ
ನಮ್ಮ ಅತ್ಯಾಸೆಗಾಗಿ ಹಣ್ಣು ತರಕಾರಿ, ತಿನ್ನುವ ಅನ್ನ ಕುಡಿವ ನೀರಲ್ಲೂ ವಿಷ ಬೆರೆಸದೆ ಇರೋಣ

ನಾವು ಹೊಟ್ಟೆ ತುಂಬಿದಾಗ ಮಾತ್ರ ಒಮ್ಮೆ ಸಂತೃಪ್ತನಾಗುತ್ತೇವೆ ಜಗದಲಿ
ನಮ್ಮ ಜೀವನದಿ ಒಮ್ಮೆಯಾದರೂ ಹಲವರ ಹೊಟ್ಟೆ ತುಂಬಿಸಲು ಪ್ರಯತ್ನಿಸೋಣ

ನಾವೇನೂ ಬರುವಾಗ ತಂದವರು, ಹೋಗುವಾಗ ಕೊಂಡು ಹೋಗಲಿರುವವರು ಯಾರೂ ಇಲ್ಲ
ಶಾಂತಿ ತ್ಯಾಗ ನ್ಯಾಯ ಸತ್ಯ ಕೀರ್ತಿಗಳ ಮೊಗೆದು ಉಪಯೋಗಿಸಿ ಹೆಸರ ಉಳಿಸಿ ಹೋಗೋಣ

ನಾವೇನೋ ನವ್ಯ ಭಾವದ ಪದ ಸಂಪತ್ತ ಬಳಸಿ ಸಿರಿವಂತ ಭಾಷೆ ಕಲಿತವರೇ ಇಲ್ಲಿ
ಪದಪುಂಜ ಬಳಸಿ ಪರರ ಸುಖದಿ ಮೀಯಿಸಿ ಮುತ್ತಿನಂಥ ಮಾತುಗಳನಾಡಿ ಮುದ್ದು ಮಾನವರಾಗಿರೋಣ.

many thumbs up

ಹನಿಬಿಂದು

Leave a Reply

Back To Top