ಪ್ರಸ್ತುತ

ಮಾನವನ ಮಿದುಳಿಗೇ ತಗಲಿರುವ ವೈರಸ್

Image result for images of stock market

ಗಣೇಶಭಟ್, ಶಿರಸಿ

ಮಾನವನ ಮಿದುಳಿಗೇ ತಗಲಿರುವ ವೈರಸ್…………..


ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ವೈರಸ್ ಯಾವುದೆಂದು ಕೇಳಿದರೆ ಚಿಕ್ಕ ಮಕ್ಕಳೂ ಕೂಡಾ ಕೊರೊನಾ ಎಂದು ಹೇಳುವಷ್ಟು ಅದರ ಹೆಸರು ಜನಜನಿತವಾಗಿದೆ. ಕೊರೊನಾ ವೈರಾಣು ತಗಲದಂತೆ ಸುರಕ್ಷಾ ಕ್ರಮವಾಗಿ ಮಾಲ್‍ಗಳನ್ನು, ಸಿನಿಮಾ, ನಾಟಕಗಳನ್ನು ಬಂದ್ ಮಾಡಲಾಗಿದೆ. ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಯದಿಂದಾಗಿ ಜನರ ಓಡಾಟ ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯ ಬಳಕೆದಾರರ ಸಂಖ್ಯೆ ಕುಗ್ಗುತ್ತಿದೆ. ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿರುವುದರಿಂದ ಅಂಗಡಿ, ಹೋಟೆಲ್‍ಗಳ ವ್ಯಾಪಾರ, ವ್ಯವಹಾರ ಕುಂಠಿತವಾಗಿದೆ. ಕೆಲವು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳಲ್ಲಿ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಶಾಲಾ- ಕಾಲೇಜುಗಳಿಗೆ ರಜಾ ನೀಡಲಾಗಿದೆ. ಒಟ್ಟಾರೆಯಾಗಿ ಜನಜೀವನ ಸ್ತಬ್ಧಗೊಳ್ಳುತ್ತಿದೆ. ಇದಕ್ಕೆಲ್ಲಾ ಕೊರೊನಾ ವೈರಸ್ ಕುರಿತಾದ ಅತಿ ಎನ್ನುವಷ್ಟು ಭಯವೇ ಕಾರಣ.


ಕೊರೊನಾ ನೆಪದಲ್ಲಿ ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಅಲ್ಲೋಲ- ಕಲ್ಲೋಲ ಏರ್ಪಟ್ಟಿದೆ. ವ್ಯಾಪಾರ, ವ್ಯವಹಾರ, ಉದ್ದಿಮೆಗಳು ಹಿನ್ನೆಡೆ ಅನುಭವಿಸುತ್ತಿವೆ; ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಕಾಡ ತೊಡಗಿದೆ. ಕೇವಲ ಮೂರು- ನಾಲ್ಕು ತಿಂಗಳುಗಳಲ್ಲಿ ಇಡೀ ಜಗತ್ತಿನ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡುವಷ್ಟು ಕೊರೊನಾ ವೈರಸ್ ಬಲಿಷ್ಠವಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಇಂದಿನ ಹಿಂಜರಿತ ಹಾಗೂ ಏರುಪೇರಿಕೆ ಕೊರೊನಾಕ್ಕಿಂತ ಎಷ್ಟೋ ಪಟ್ಟು ಬಲಿಷ್ಠ ಹಾಗೂ ಅಪಾಯಕಾರಿಯಾದ ವೈರಸ್ ಕಾರಣವಾಗಿದೆ. ಈ ಅನಿಷ್ಠವನ್ನು ಕಂಡೂ ಕಾಣದಂತೆ , ಆರ್ಥಿಕ ತಜ್ಞರು ವರ್ತಿಸುತ್ತಿದ್ದಾರೆ; ರಾಜಕಾರಣಿಗಳು ತಮ್ಮ ಹಾಗೂ ತಮ್ಮ ಪಕ್ಷದ ಲಾಭಕ್ಕಾಗಿ ಈ ವೈರಸ್‍ನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. ಮಾನವನ ಮಿದುಳಿಗೇ ಅಂಟಿರುವ ಇಂತಹ ಅತಿ ಅಪಾಯಕಾರಿ ವೈರಸ್‍ನ ಹೆಸರೇ ಸಂಪತ್ತು ಸಂಗ್ರಹಣಾ ಮನೋಭಾವ.
ಸಂಪತ್ತನ್ನು ಗಳಿಸುವುದು ಎಲ್ಲರಿಗೂ ಅವಶ್ಯಕ. ಆದರೆ ಸಂಪತ್ತಿನ ಗಳಿಕೆ ಹಾಗೂ ಸಂಗ್ರಹಣೆಯನ್ನೇ ಜೀವನದ ಗುರಿಯಾಗಿಸಿಕೊಂಡ ಕೆಲವರು ನಡೆಸುವ ವ್ಯವಹಾರಗಳಿಂದ , ಆರ್ಥಿಕ ರೀತಿ- ನೀತಿಗಳಿಂದಾಗಿ ಇಡೀ ಸಮಾಜ ಕಷ್ಟ- ನಷ್ಟ ಅನುಭವಿಸಬೇಕಾಗುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಇಂದಿನ ದುಸ್ಥಿತಿಗೆ ಇದೇ ವೈರಸ್ ಪ್ರಮುಖ ಕಾರಣವಾಗಿದೆ.


ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಏರು-ಪೇರುಗಳಿಗೆ ಕೊರೊನಾವನ್ನು ಕಾರಣವೆಂದು ಹೇಳಲಾಗುತ್ತಿದೆ. ವಾಸ್ತವ ಮಾತ್ರ ಇದಕ್ಕೆ ತೀರಾ ವ್ಯತಿರಿಕ್ತವಾಗಿದೆ. ಶೇರು ಮಾರುಕಟ್ಟೆಯೆಂದರೆ ಸರಕಾರದಿಂದ ಮಾನ್ಯತೆ ಪಡೆದ ಜೂಜುಕಟ್ಟೆ; ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಇದು ಪರವಾನಿಗೆ ಪಡೆದ ಓಸಿ ಅಡ್ಡೆ.


ಯಾವ ಕಂಪನಿಯ ಶೇರಿನ ಬೆಲೆ ಮುಂದಿನ ವಾರ ಹೆಚ್ಚಾದೀತು, ಯಾವುದರ ಬೆಲೆ ಇಳಿದೀತು ಮುಂತಾಗಿ ಊಹಿಸಿ, ಶೇರುಗಳ ಖರೀದಿ, ವಿಕ್ರಿ ನಡೆಯುತ್ತದೆ. ಶೇರು ಮಾರಾಟದ ಪ್ರಾರಂಭದ ಹಂತದಲ್ಲಿ ಮಾತ್ರ ಕಂಪನಿಗಳಿಗೆ ಬಂಡವಾಳ ದೊರೆಯುತ್ತದೆಯೇ ಹೊರತು, ಮುಂದಿನ ಹಂತದ ಶೇರು ಮಾರಾಟ ಅಥವಾ ಕೈ ಬದಲಾವಣೆಯಿಂದ ಆ ಕಂಪನಿಗೆ ಯಾವುದೇ ಬಂಡವಾಳ ಸಿಗುವುದಿಲ್ಲ. ಊಹಾ- ಪೋಹದ ದಂಧೆಯಲ್ಲಿ ಕೆಲವು ಶೇರುಗಳ ಬೆಲೆ ಅತಾರ್ಕಿಕ ಹೆಚ್ಚಳವನ್ನು ಅಥವಾ ಇಳಿಕೆಯನ್ನು ಕಾಣುತ್ತದೆ. ಈ ಏರಿಳಿತವನ್ನು ಉದ್ದೇಶಪೂರ್ವಕವಾಗಿ ನಿರ್ದೇಶಿಸುವ ಕಾಣದ ಕೈಗಳು ತಮ್ಮ ಲಾಭ ಗಳಿಕೆಯ ಉದ್ದೇಶವನ್ನು ಪೂರ್ತಿಗೊಳಿಸಿಕೊಳ್ಳುತ್ತಿರುತ್ತವೆ.


ಆರ್ಥಿಕ ತಜ್ಞರು ಹೇಳುವಂತೆ ಶೇರು ಮಾರುಕಟ್ಟೆಯ ಊಹಾ-ಪೋಹದ ಗುಳ್ಳೆ ಅತಿಯಾಗಿ ಉಬ್ಬಿದೆ. ಯಾವುದೇ ಕ್ಷಣದಲ್ಲಿ ಈ ಗುಳ್ಳೆ ಒಡೆಯುವ ಸಾಧ್ಯತೆಯಿದೆಯೆಂದು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಶೇರು ಮಾರುಕಟ್ಟೆಯ ಕುಸಿತದಿಂದ ಸಂಪತ್ತಿನ ನಷ್ಟವಾಗುತ್ತಿರುವುದು ಜೂಜಾಟದಲ್ಲಿ ತೊಡಗಿಕೊಂಡವರಿಗೆ ಮಾತ್ರ. ಕಂಪನಿಗಳಿಗೆ ಆಗುತ್ತಿರುವ ನಷ್ಟವೂ ಕಾಲ್ಪನಿಕ ಮೌಲ್ಯದಲ್ಲಿಯೇ ಹೊರತು ನೈಜ ಸಂಪತ್ತಿನಲ್ಲಿ ಅಲ್ಲ. ಕೊರೊನಾ ನೆಪದಲ್ಲಿ ಶೇರು ಮಾರುಕಟ್ಟೆಯ ಗುಳ್ಳೆ ಒಡೆಯುತ್ತಿರುವುದರಿಂದ ಜನಸಾಮಾನ್ಯರಿಗೆ ಯಾವ ನಷ್ಟವೂ ಇಲ್ಲ.


ನ್ಯೂಯಾರ್ಕ್‍ನಿಂದ ಮುಂಬೈ ಶೇರು ಪೇಟೆಯವರೆಗಿನ ಪ್ರಮುಖ ಕೇಂದ್ರಗಳಲ್ಲಿ ಶೇರಿನ ಮೌಲ್ಯಗಳು ಕುಸಿಯುತ್ತಿವೆ; ಆದರೆ ಕೊರೊನಾ ವೈರಸ್‍ನ ಹರಡುವಿಕೆಯ ಕೇಂದ್ರವಾದ ಚೀನಾದ ಶೇರು ಮಾರುಕಟ್ಟೆ ಮಾತ್ರ ಏರಿಕೆಯ ದಾರಿಯಲ್ಲಿದೆ. ಇದಕ್ಕೆ ಮೂಲ ಕಾರಣ ಅಮೇರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ. ಜಗತ್ತಿನ ಸಂಪನ್ಮೂಲಗಳ ಮೇಲೆ ತನ್ನ ಹತೋಟಿ ಹೊಂದುವ ಸಲುವಾಗಿ ಅಮೇರಿಕವು ಯುದ್ಧವೂ ಸೇರಿದಂತೆ ಹಲವು ವಿಧಾನಗಳನ್ನು ಬಳಸುತ್ತದೆ. ಅಮೇರಿಕಾದ ಮಾರುಕಟ್ಟೆಯ ಮೇಲಿನ ತನ್ನ ನಿಯಂತ್ರಣಗಳನ್ನು ಬಿಗಿಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ. ಡಾಲರ್ ಮತ್ತು ಅಮೇರಿಕಾದ ಟ್ರೆಸರಿ ಬಾಂಡ್‍ಗಳಲ್ಲಿ ಹಣ ತೊಡಗಿಸಿರುವ ಜಪಾನ್‍ಗೆ ಅಮೇರಿಕಾದ ಅರ್ಥವ್ಯವಸ್ಥೆ ಬೆಳೆಯುವುದು ಅನಿವಾರ್ಯ. ಆರ್ಥಿಕ ಮುತ್ಸದ್ಧಿತನ ಹೊಂದಿಲ್ಲದ ರಾಜಕಾರಣಿಗಳನ್ನು ಹೊಂದಿರುವ ಭಾರತ ಮತ್ತು ಅಂತಹ ಕೆಲವು ದೇಶಗಳು ಅನಗತ್ಯವಾಗಿ ಅಮೇರಿಕಾದ ಪಲ್ಲಕ್ಕಿ ಹೊರುತ್ತಿವೆ.


ಕಾಡುತ್ತಿರುವ ಆರ್ಥಿಕ ಹಿಂಜರಿತದಿಂದ ಪಾರಾಗಲು ಶಸ್ತ್ರಾಸ್ತ್ರಗಳ ಮಾರಾಟ ಮಾಡುವುದು ಅಮೇರಿಕಾಕ್ಕೆ ಅನಿವಾರ್ಯ. ಯಾಕೆಂದರೆ , ಶಸ್ತ್ರಾಸ್ತ್ರ ಮತ್ತು ವಿಮಾನ ತಯಾರಿಕೆಯ ಹೊರತಾಗಿ ಬೇರೆಲ್ಲಾ ವಸ್ತುಗಳ ಉತ್ಪಾದನಾ ಚಟುವಟಿಕೆ ಲಾಭದಾಯಕವಲ್ಲದ ಕಾರಣ ಅಲ್ಲಿ ಸ್ಥಗಿತಗೊಂಡಿದೆ.


ಉಪ್ಪಿನಿಂದ ಉಕ್ಕು ತಯಾರಿಕಾ ಕ್ಷೇತ್ರದವರೆಗೂ ತನ್ನ ಕಂಪನಿಯೇ ಹಿಡಿತ ಹೊಂದಿರಬೇಕೆಂಬ ಉದ್ದೇಶ ಕೇವಲ ಭಾರತ ಮೂಲದ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಜಗದ್ವ್ಯಾಪಿಯಾಗಿದೆ. ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂಬ ದಾಹಕ್ಕೆ ಬಲಿಯಾದವರಿಗೆ ಇತರರ ಕಷ್ಟ- ನಷ್ಟಗಳನ್ನು ಗಮನಿಸುವ ವ್ಯವಧಾನವೇ ಇರುವುದಿಲ್ಲ. ಆಡಳಿತ ನಡೆಸುವವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಚುನಾವಣಾ ನಿಧಿಯನ್ನು ನೀಡಿ, ತಮಗೆ ಬೇಕಾದಂತೆ ಕಾಯ್ದೆ ಕಾನೂನುಗಳನ್ನು ರೂಪಿಸಿಕೊಳ್ಳುತ್ತಾರೆ.


ಸಂಪತ್ತು ಗಳಿಕೆಯ ವ್ಯಾಮೋಹ ಹೆಚ್ಚಿನ ಜನರಿಗೆ ಇರುತ್ತದಾದರೂ ಆ ದಾರಿಯ ಓಟದಲ್ಲಿ ಕೆಲವರು ಮಾತ್ರ ಇತರರನ್ನು ಹಿಂದಿಕ್ಕಿ ಮುಂದೆ ಬರುತ್ತಾರೆ. ಇದರ ಪರಿಣಾಮದಿಂದಾಗಿ ಜಗತ್ತಿನ ಅತಿ ಶ್ರೀಮಂತ ಶೇಕಡಾ ಒಂದರಷ್ಟು ಜನರು ಜಾಗತಿಕ ಸಂಪತ್ತಿನ ಅರ್ಧದಷ್ಟರ ಒಡೆತನ ಹೊಂದಿದ್ದಾರೆ. ಇದರ ಇನ್ನೊಂದು ಮುಖವೆಂದರೆ ಜಗತ್ತಿನ 10% ಜನರು ಸಂಪತ್ತಿನ 85% ರ ಒಡೆತನ ಹೊಂದಿದ್ದಾರೆ. ಅಂದರೆ ಜಗತ್ತಿನ 90% ಜನರ ಕೈಯಲ್ಲಿರುವುದು ಉಳಿದ 15% ಸಂಪತ್ತು ಮಾತ್ರ.


ಸಂಪತ್ತಿನ ವಿತರಣೆಯಲ್ಲಿನ ಅಸಮಾನತೆಯಿಂದ ತೊಂದರೆ ಏನೆಂದು ಪ್ರಶ್ನೆ ಬರುವುದು ಸಹಜ. ವ್ಯಕ್ತಿಯ ಕೈಯಲ್ಲಿ ಸಂಗ್ರಹವಾಗುವ ಸಂಪತ್ತಿನ ಬಳಕೆಯ ರೀತಿ, ನೀತಿ ಹಾಗೂ ಉದ್ದೇಶಗಳು ಅದರ ಪ್ರಮಾಣದ ಮೇಲೆ ಅವಲಂಬಿತವಾಗುತ್ತದೆ. ಒಂದು ಸರಳ ಉದಾಹರಣೆಯಿಂದ ಈ ವಿದ್ಯಮಾನವನ್ನು ವಿವರಿಸಬಹುದು. ಒಬ್ಬ ವ್ಯಕ್ತಿಯ, ಕೈಯಲ್ಲಿರುವ ಬಂಡವಾಳವು ಸಾವಿರ ಅಥವಾ ಹತ್ತು ಸಾವಿರ ರೂಪಾಯಿಗಳಿದ್ದಾಗ, ತನ್ನ ಜೀವನ ನಿರ್ವಹಣೆಗಾಗಿ ಕಡಿಮೆ ಪ್ರತಿಫಲವಿರುವ ಉದ್ಯಮ ಅಥವಾ ವ್ಯವಹಾರವನ್ನು ಆ ವ್ಯಕ್ತಿ ಕೈಗೊಳ್ಳುತ್ತಾನೆ. ತೊಡಗಿಸಿದ ಬಂಡವಾಳದ ಮೇಲೆ 5 ಅಥವಾ 10 ಶೇಕಡಾ ಲಾಭ ಬಂದರೂ ಆತ ತೃಪ್ತಿ ಪಡುತ್ತಾನೆ. ಆದರೆ ಅದೇ ಬಂಡವಾಳದ ಪ್ರಮಾಣ ಏರುತ್ತಾ ಹೋಗಿ ಕೋಟಿಗಟ್ಟಲೇ ಆದಾಗ, ಸಣ್ಣ ಪ್ರಮಾಣದ ಲಾಭವುಳ್ಳ ವ್ಯವಹಾರದಲ್ಲಿ ಅಂತಹ ಆಸಕ್ತಿ ಇರುವುದಿಲ್ಲ. ಬದಲಿಗೆ ಅತಿ ಹೆಚ್ಚು ಲಾಭ ಬರುವ ಉದ್ಯೋಗದ ಆಯ್ಕೆಯನ್ನು ಮಾಡುತ್ತಾನೆ.


ಈ ಪ್ರವೃತ್ತಿಯಿಂದಾಗಿ ಸಂಪನ್ಮೂಲಗಳನ್ನು ಲಾಭ ಗಳಿಕೆ ಹೆಚ್ಚಿರುವ ಉದ್ಧೇಶಕ್ಕೆ ಬಳಸಲಾಗುತ್ತದೆ. ಅಂದರೆ ಸಂಪನ್ಮೂಲಗಳ ದುರುಪಯೋಗವಾಗುತ್ತದೆ. ಜನರಿಗೆ ಅಗತ್ಯವಾದ ಉದ್ಧೇಶದ ಬಳಕೆ ಹಿನ್ನೆಲೆಗೆ ಸರಿಯುತ್ತದೆ. ಉದಾಹರಣೆಗಾಗಿ ಸೀಮಿತವಾಗಿರುವ ಸಿಹಿನೀರು ಕುಡಿಯಲು ಅಥವಾ ಕೃಷಿಗೆ ಬಳಕೆಯಾಗುವ ಬದಲಿಗೆ ತಂಪು ಪಾನೀಯ ಅಥವಾ ಹೆಂಡದ ಉತ್ಪಾದನೆಗೆ ಬಳಸಲ್ಪಡುತ್ತದೆ. ಉತ್ಪಾದಿತ ವಸ್ತುವಿಗೆ ಬೇಡಿಕೆ ಸೃಷ್ಟಿಸುವ ಸಲುವಾಗಿ ಅಪಾಯಕಾರಿ ವಿಧಾನಗಳನ್ನು ಹುಟ್ಟು ಹಾಕಲಾಗುತ್ತದೆ.


ಸಾಮಾನ್ಯವಾಗಿ ಊಹಾ- ಪೋಹದ ದಂದೆಯಲ್ಲಿಯೇ ಅತಿ ಹೆಚ್ಚು ಲಾಭ ಗಳಿಕೆಯಾಗುತ್ತದೆ. ಅದರಿಂದಾಗಿ ಕೂಡಿಟ್ಟ ಸಂಪತ್ತನ್ನು ಶೇರು ಮಾರುಕಟ್ಟೆಯಲ್ಲಿ ಅಥವಾ ಅಕ್ರಮ ದಾಸ್ತಾನು ದಂಧೆಯಲ್ಲಿ ತೊಡಗಿಸುತ್ತಾರೆ. ಇಂತಹ ಅವಕಾಶಗಳು ದೊರೆಯದಿದ್ದಾಗ ಸಂಪತ್ತನ್ನು ಬಳಸದೇ ಹಾಗೆಯೇ ಕೂಡಿಡಲಾಗುತ್ತದೆ.


ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕ್ರೋಢೀಕೃತಗೊಂಡಾಗ ಹಲವರ ಕೈಯಲ್ಲಿ ಹಣ ಚಲಾವಣೆಯಾಗುವದಕ್ಕೆ ತಡೆ ಉಂಟಾಗುತ್ತದೆ ಮತ್ತು ಅವರ ಖರೀದಿ ಶಕ್ತಿ ಕುಂಠಿತವಾಗುತ್ತದೆ. ಹೊಸದಾಗಿ ಸೃಷ್ಟಿಯಾಗುವ ಸಂಪತ್ತು ಉಳ್ಳವರ ಕೈಗೇ ಪುನಃ ಸೇರುತ್ತದೆ ಹಾಗೂ ವ್ಯಕ್ತಿಗತ ಆದಾಯದಲ್ಲಿ ಕೂಡಾ ಅಸಮಾನತೆ ಉಂಟಾಗುತ್ತದೆ.


ದೊಡ್ಡ ಕಂಪನಿಗಳು ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸುವುದರಿಂದಾಗಿ, ಸಣ್ಣ ಪುಟ್ಟ ಉದ್ಯಮಗಳು ಸ್ಪರ್ಧಿಸಲಾಗದೇ ಸೋಲುತ್ತವೆ. ಪ್ರತಿ ಸ್ಪರ್ಧಿಗಳನ್ನು ಮಣಿಸುವುದಕ್ಕಾಗಿ ಬೆಲೆ ಇಳಿಕೆಯ ಸಮರವನ್ನೇ ಸಾರುವ ಉಳ್ಳವರು, ಎದುರಾಳಿ ಸೋತ ನಂತರ ಬೆಲೆ ಏರಿಸಿ ಲಾಭ ದೋಚುತ್ತಾರೆ. ಭಾರತದ ಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಇದಕ್ಕೆ ತಾಜಾ ಸಾಕ್ಷಿ.


ಸಂಪತ್ತು ಸೃಷ್ಟಿಸುವವರು ಹಾಗೂ ಉಳ್ಳವರು ತೆರಿಗೆ ಪಾವತಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆಂದು ಹೇಳುವುದು ಬರೀ ಮಿಥ್ಯೆ. ಅಂತಹ ಉದ್ಯಮ ದೈತ್ಯರು ಪಡೆಯುವ ತೆರಿಗೆ ವಿನಾಯಿತಿಗಳು ಹಾಗೂ ಸರ್ಕಾರ ನೀಡುವ ಮೂಲ ಸೌಕರ್ಯಗಳು ಅವರು ನೀಡುವ ತೆರಿಗೆಯ ಎಷ್ಟೋ ಪಟ್ಟು ಹೆಚ್ಚಿಗೆ ಇರುತ್ತದೆ.


ದೇಶದ ಸಂಪತ್ತು ಸೀಮಿತ ವ್ಯಕ್ತಿಗಳ ಕೈಯಲ್ಲಿ ಶೇಖರವಾಗುವುದರ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆಗುತ್ತಿರುವುದನ್ನು ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ. ಸಂಪತ್ತು ಸೃಷ್ಟಿಸುವವರು ಹಾಗೂ ಹೂಡಿಕೆದಾರರೇ ದೇಶೋದ್ಧಾರಕರು ಎಂಬ ಭ್ರಮೆಯಿಂದಾಗಿ ಬ್ಯಾಂಕ್‍ಗಳು ಅವರಿಗೆ ಮಿತಿಮೀರಿ ಸಾಲ ನೀಡುತ್ತವೆ. ಹೊಟ್ಟೆ,ಬಟ್ಟೆ ಕಟ್ಟಿ ಜನಸಾಮಾನ್ಯರು ಉಳಿಸಿದ ಹಣವನ್ನು ಸಾಲ ರೂಪದಲ್ಲಿ ಪಡೆದು ಶ್ರೀಮಂತ ಉದ್ಯಮಿಗಳು ತಮ್ಮ ವೈಯಕ್ತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ. ಅವರು ಪಡೆದ ಸಾಲಗಳು ರೈಟ್ ಆಪ್ ಹೆಸರಿನಲ್ಲಿ ಮನ್ನಾ ಆಗುತ್ತವೆ. ಅಂತಹ ಬ್ಯಾಂಕ್‍ಗಳ ರಕ್ಷಣೆಗೆ ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಗಳಿಸಿದ ಲಾಭವನ್ನು ಬಳಸಲಾಗುತ್ತದೆ


ಯಸ್ ಬ್ಯಾಂಕ್ ಹಗರಣ ಇತ್ತೀಚಿನ ಉದಾಹರಣೆ. ಬೇರೆ ಬ್ಯಾಂಕ್‍ಗಳಲ್ಲಿ ಸುಸ್ತಿದಾರರಾಗಿ ಪಡೆದ ಸಾಲವನ್ನು ಹಿಂದಿರುಗಿಸಿರದ ಹತ್ತು ಕಂಪನಿಗಳಿಗೆ ನೀಡಿದ ಮೂವತ್ತಾರು ಸಾವಿರ ಕೋಟಿ ರೂಪಾಯಿ ಸಾಲ ವಸೂಲಿಯಾಗದೇ ಯಸ್ ಬ್ಯಾಂಕ್ ಅಪಾಯಕ್ಕೆ ಸಿಲುಕಿದ್ದರಿಂದ , ಅದರ ರಕ್ಷಣೆಗಾಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್‍ನ್ನು ಮುಂದೆ ಮಾಡಿರುವುದನ್ನು ಕಾಣುತ್ತಿದ್ದೇನೆ. ಬ್ಯಾಂಕ್‍ನಿಂದ ಚಿಕ್ಕ ಮೊತ್ತದ ಸಾಲ ಪಡೆಯಲು ಸಾಮಾನ್ಯ ವ್ಯಕ್ತಿ ನೀಡಬೇಕಾದ ಭದ್ರತೆಯನ್ನು ಸಾವಿರಾರು ಕೋಟಿ ರೂಪಾಯಿ ಸಾಲ ಪಡೆಯುವ ವ್ಯಕ್ತಿ ನೀಡಬೇಕಾಗಿಲ್ಲ; ಅವನಿಂದ ಪಡೆಯುವುದೂ ಇಲ್ಲ. ಸಾವಿರ ರೂಪಾಯಿಗಳಲ್ಲಿ ಸಾಲ ಪಡೆಯುವಾಗ ಇತರ ಬ್ಯಾಂಕ್‍ಗಳಿಂದ ಬೇಬಾಕಿ ಪತ್ರ ತರುವುದು ಕಡ್ಡಾಯ. ಆದರೆ ಸಾವಿರಾರು ಕೋಟಿ ರೂಪಾಯಿ ಸಾಲಕ್ಕೆ ಇದು ಅನ್ವಯಿಸುವುದಿಲ್ಲ. ಯಸ್ ಬ್ಯಾಂಕ್‍ನ ಪ್ರಮುಖ ಸುಸ್ತಿದಾರ ಸಾಲಗಾರರಾದ ಅಂಬಾನಿ, ಐಎಲ್‍ಎಫ್‍ಎಸ್ ಮುಂತಾದವರು ಇತÀರ ಬ್ಯಾಂಕ್‍ಗಳಲ್ಲಿ ಈಗಾಗಲೇ ಸುಸ್ತಿದಾರರಾಗಿದ್ದುದು ಬಹಿರಂಗವಾಗಿದ್ದರೂ ಅವರಿಗೆ ಹೊಸ ಸಾಲ ಸಿಗುತ್ತದೆ.
ಸಂಪತ್ತಿನ ಕೇಂದ್ರೀಕರಣವನ್ನು ತಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಜಗತ್ತಿನ ಹಲವು ರಾಷ್ಟ್ರಗಳು ಕೈಗೊಳ್ಳಲಿಲ್ಲ. ಭಾರತದ ಅತಿ ಶ್ರೀಮಂತರಾದ 1% ಜನರು ಅಂದರೆ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನರ ಕೈಯಲ್ಲಿ 70% ಜನರ ಅಂದರೆ 90 ಕೋಟಿ ಜನರ ಕೈಯಲ್ಲಿರುವ ಸಂಪತ್ತಿನ ನಾಲ್ಕು ಪಟ್ಟು ಸಂಪತ್ತು ಶೇಖರವಾಗಿದೆ. ಈ ಪ್ರಮಾಣ ಏರುತ್ತಲೇ ಇದೆ. ಭಾರತದ ಮುಕ್ಕಾಲು ಪಾಲು ಸಂಪತ್ತು ಕೇವಲ ಹದಿಮೂರು ಕೋಟಿ ಜನರ ಕೈಯಲ್ಲಿಯೇ ಇದೆ. ಅತಿ ಶ್ರೀಮಂತ 63 ಭಾರತೀಯರ ಸಂಪತ್ತು ಸುಮಾರು 80 ಕೋಟಿ ಜನರ ಸಂಪತ್ತಿಗೆ ಸಮವಾಗಿದೆ. ಜಗತ್ತಿನ 26 ಅತಿ ಶ್ರೀಮಂತರ ಸಂಪತ್ತು ಜಗತ್ತಿನ ಅರ್ಧದಷ್ಟು ಜನರ ಅಂದರೆ ಸುಮಾರು 380 ಕೋಟಿ ಜನರ ಸಂಪತ್ತಿಗೆ ಸಮವಾಗಿದೆ.
ಸಂಪತ್ತು ವಿತರಣೆಯ ಪ್ರಮಾಣ ಈಗಾಗಲೇ ಅಪಾಯಕಾರಿ ಹಂತ ತಲ್ಪಿದ್ದು,, ಅದರ ಪರಿಣಾಮದಿಂದಾಗಿ ಆರ್ಥಿಕ ಹಿಂಜರಿತ, ಸಾಮಾಜಿಕ ಸಂಘರ್ಷ, ಅಶಾಂತಿ ಕಟ್ಟಿಟ್ಟ ಬುತ್ತಿ ಎಂಬುದು ಅರ್ಥಶಾಸ್ತ್ರಜ್ಞರ ಅಭಿಮತ. ಸಂಪತ್ತು ಗಳಿಕೆಯ ವ್ಯಾಮೋಹ ಇಡೀ ಸಮಾಜವನ್ನು ಸಾಂಸರ್ಗಿಕ ರೋಗದ ರೀತಿಯಲ್ಲಿ ಆವರಿಸುತ್ತಿದೆ.
ಈ ಪಿಡುಗನ್ನು ತಡೆಯುವ ಭೌತಿಕ ವಿಧಾನವೆಂದರೆ ಸಂಪತ್ತಿನ ಸಂಗ್ರಹಣೆಯ ಮೇಲೆ ಮಿತಿ ವಿಧಿಸುವುದು, ವಿಕೇಂದ್ರೀಕೃತ ಅರ್ಥವ್ಯವಸ್ಥೆ ಅಂದರೆ ಜನಾಧಿಕಾರ ಅರ್ಥ ವ್ಯವಸ್ಥೆಯ ಅನುಷ್ಠಾನ ಹಾಗೂ ಸಹಕಾರೀ ರಂಗಕ್ಕೆ ಪ್ರೋತ್ಸಾಹ. ಖಾಸಗೀಕರಣದ ಗುಂಗಿನಲ್ಲೇ ಇರುವ ಇಂದಿನ ಭಾರತ ಸರ್ಕಾರ ಇವನ್ನು ಅನುಷ್ಠಾನಗೊಳಿಸಲು ಮುಂದಾಗುವುದಿಲ್ಲ. ಸಹಕಾರಿ ಕ್ಷೇತ್ರದ ಪಿ.ಎಮ್.ಸಿ ಬ್ಯಾಂಕ್ ವಿಫಲಗೊಳ್ಳದಿದ್ದರೂ, ಅದರ ಗ್ರಾಹಕರ ಮೇಲೆ ಗದಾಪ್ರಹಾರ ಮಾಡಿ ನಾಲ್ಕೈದು ತಿಂಗಳುಗಳಾದರೂ ವ್ಯವಹಾರ ನಡೆಸಲು ಅನುಮತಿ ನೀಡದ ಆರ್.ಬಿ.ಐ , ಖಾಸಗಿ ರಂಗದ ಯಸ್ ಬ್ಯಾಂಕ್ ವಿಫಲಗೊಂಡರೂ, ಎರಡೇ ವಾರಗಳಲ್ಲಿ ದೈನಂದಿನ ವ್ಯವಹಾರ ನಡೆಸಲು ಅನುಮತಿ ನೀಡಿದೆ. ಕೇಂದ್ರ ಸರ್ಕಾರದ ಖಾಸಗಿ ಕ್ಷೇತ್ರದ ಪ್ರೇಮವೇ ಇದಕ್ಕೆ ಕಾರಣ.
ಸಂಪತ್ತಿನ ವ್ಯಾಮೋಹದ ವೈರಸ್ ಸೋಂಕಿತರಿಗೆ ಇನ್ನಷ್ಟು ,ಮತ್ತಷ್ಟು ಸಂಪತ್ತು ಗಳಿಸಬೇಕೆಂಬ ದಾಹ ಅಡವರಿಸುತ್ತದೆ. ಎಷ್ಟೇ ಸಂಪತ್ತು ಗಳಿಸಿದರೂ ಅವರ ದಾಹ ತಣಿಯುವುದಿಲ್ಲ. ಇದೊಂದು ರೀತಿಯ ಮಾನಸಿಕ ವ್ಯಾಧಿ. ಇಂಥವರನ್ನು ಸರಿಪಡಿಸಲು ಮಾನಸಿಕ ಚಿಕಿತ್ಸೆಯನ್ನು ಕಡ್ಡಾಯವಾಗಿ ಕೊಡಿಸುವ ವ್ಯವಸ್ಥೆ ಜಾರಿಗೆ ಬರಬೇಕು.


ಅನಂತತೆಯ ಮಿತರೂಪವೇ ಮಾನವ. ಅನಂತ ಚೈತನ್ಯದ ಮೂಲ ರೂಪವನ್ನು ಪಡೆಯುವ ದಾರಿಯಲ್ಲಿ ಸಾಗುತ್ತಿರುವ ಮಾನವನಿಗೆ ಅನಂತ ಕ್ಷುಧೆ ಇರುವುದು ಸ್ವಾಭಾವಿಕ. ಈ ದಾಹವನ್ನು ತಣಿಸಲು ಇರುವ ಏಕೈಕ ದಾರಿಯೆಂದರೆ ಮನಸ್ಸನ್ನು ಅನಂತತೆಯತ್ತ ತಿರುಗಿಸುವುದು,, ಅಂದರೆ ಆಧ್ಯಾತ್ಮದ ದಾರಿಯಲ್ಲಿ ನಡೆಯುವುದು. ಅದರ ಬದಲಿಗೆ ಭೌತಿಕ ಕ್ಷೇತ್ರದಲ್ಲಿ ಮನಸ್ಸನ್ನು ತೊಡಗಿಸಿ ಅಮಿತವಾದ ದಾಹವನ್ನು ತಣಿಸಲು ಪ್ರಯತ್ನಿಸುವುದರಿಂದ ವ್ಯಕ್ತಿ ಹಾಗೂ ಸಮಾಜಕ್ಕೆ ಹಾನಿ ಉಂಟಾಗುತ್ತದೆ.


ಬದುಕಿನ ಸರ್ವ ಅಭಿವ್ಯಕ್ತಿಗಳನ್ನು ಆಧ್ಯಾತ್ಮೀಕರಣಗೊಳಿಸುವುದೇ ಈ ವೈರಸ್ಸನ್ನು ನಿಯಂತ್ರಣದಲ್ಲಿಡುವ ಅಸ್ತ್ರ. ಜೀವನದ ಭದ್ರತೆಯನ್ನು ಆರ್ಥಿಕ ಕ್ಷೇತ್ರದಲ್ಲಿ ಎಲ್ಲರಿಗೂ ನೀಡುವ ವ್ಯವಸ್ಥೆಯನ್ನು ಅಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆ ಅರ್ಥಾತ್ ಜನಾಧಿಕಾರ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ, ಆಧ್ಯಾತ್ಮದ ದಾರಿಯಲ್ಲಿ ಸಾಗಲು ಎಲ್ಲರಿಗೂ ಅವಕಾಶ ಕಲ್ಪಿಸುವುದು ಮನುಕುಲದ ಪ್ರಗತಿಗೆ ಅವಶ್ಯ.

*********

Leave a Reply

Back To Top