ಕಾವ್ಯ ಸಂಗಾತಿ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ನಾಕು ಸಲಿಗೆ ನಾಲಿಗೆ
ಆಚೆ ಮೊನ್ನೆ-
ಎದೆಯ ಉಮ್ಮಳ
ತೇಲುಗಣ್ಣಿನ ವಾಸ್ತವ
ಬೆದೆ ಬಂದ ತುಪ್ಪಳ
ಮತ್ತು…
ಅರಿವಿನ ನಿರಾಳವನು
ಬರೆಸಿಕೊಳ್ಳುತ್ತಿದ್ದವು
ಈಚೆ ಮೊನ್ನೆ-
ಮೂರ್ಖರ ಕಿವುಡು
ಅಲೆಯುವ ಜಾಡು
ವ್ಯಾಕುಲದ ಒದ್ದೆ ತೆವಲು
ಮಡಿವಂತರ ಆಷಾಡಭೂತಿತನ
ಮತ್ತು……
ಬೆಳಕಿನ ಒಳಿತು ಕೆಡುಕು
ಬರೆಸಿಕೊಳ್ಳುತ್ತಿದ್ದವು
ನಿನ್ನೆಯ ದಿನ-
ಹಣದ ಕಣದಲಿ
ಸಲಿಗೆಯಲಿ ಕೂತು-
ಎಲುಬು ಕಡಿದು
ಮೃದು ಫಾಯಿದ ಪಡೆಯಲು
ದೀಪ ನಂದಿಸಿ
ನಾಕು ನಾಲಿಗೆಗಳು
ಕಿವಿಯೊಳಗೆ ಉಸುರುತ್ತಾ
ಬರೆಸಿಕೊಳ್ಳಲಾರಂಭಿಸಿವೆ
ಈ ದಿನ-
ಎಂಜಲು ಮುಲಾಜಿಗೆ
ನಗುವು ಅಳುವು
ಮೈಗೆ-ಮೈ ಒತ್ತಿ ನಿಂತು,
ಜಗವನು ದುರಾಕ್ರಮಿಸಿ
ಅಸತ್ಯಗಳ ಬರೆಸುತ್ತವೆ
ನನ್ನಂತವರಿಂದ
ಮಂದ್ರದಿಂದ ತಾರಕದವರೆಗೆ
ಗೂಡು ಕಟ್ಟಿದ ಹದ್ದುಗಳ ಅಳಿಸಿ ಸವಿಯಾಗಿ
ಬರೆದು ಹಂಚಲು,
ನಾಕಾರು ಮಾತಿನ ಮಾತನ್ನು
ತೇಯಲು…….
ಇಚ್ಛಿತ ಸಾಲುಗಳ ಬಿತ್ತಿಸಿದರೂ ಭಾವ-
ಫಲಿಸದೆ ಗೋಣು ಮುರಿದುಕೊಳ್ಳುತ್ತಿದೆ
ಕಾವ್ಯದ ಮುದಿ ಜೀವ
————————
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ನಾಲಿಗೆ ಜೊತೆ ಜೊತೆ ಬುದ್ದಿ ಯೂ….
ಹಲವಾರು
ಅಧ್ಬುತ ಭಾವನೆ ಸಹೋದರ, ಮನುಜನ ಜೀವನ ಎತ್ತ ಸಾಗಿದೆ ಒತ್ತಾಸೆಗೂ ಮಿಗಿಲಾಗಿ ಬಳಲುವವರ ಚಿಂತನೆ ಅಮೋಘ. ಅಭಿನಂದನೆಗಳು