ಜಿ.ಎಸ್.ಹೆಗಡೆ-ನಾನು ಬೆಕ್ಕು ( ಸ್ವಗತ) ಲಲಿತ ಪ್ರಬಂಧ

ಪ್ರಬಂಧ ಸಂಗಾತಿ

ಜಿ.ಎಸ್.ಹೆಗಡೆ

ನಾನು ಬೆಕ್ಕು ( ಸ್ವಗತ)

ನಾನು ಬೆಕ್ಕು ( ಸ್ವಗತ)

(ಮಾನವನ ಬೇಕುಗಳ ಸೆರ್ಪಡೆಗೆ ಬೆಕ್ಕು)

ಮಾನ್ಯರೇ,

ಸಪ್ರೇಮ ವಂದನೆಗಳು

       ನಾನು ಮಾನವನೊಟ್ಟಿಗೆ ಹೇಗೆ ಒಡನಾಡಿಯಾದೆ ಎಂದು ನನಗಂತೂ ತಿಳಿಯದು. ಒಮ್ಮೊಮ್ಮೆ ಯೋಚಿಸಿದರೆ ನನಗೆ ಸ್ವಂತ ನೆಲೆಯೇ ಇಲ್ಲ. ಕಾಡಿನ ವಾಸಿ ನಾನಲ್ಲ. ಅಲ್ಲಿ ವಾಸಿಸುವ ನನ್ನ ಪ್ರಬೇಧಗಳೇ ಬೇರೆ‌. ಅವುಗಳಿಗಾದರೂ ಕಾಡೆಂಬ ಸ್ವಚ್ಛಂದ ನೆಲೆಯುಂಟು.ಇತ್ತ ನಾನೋ ಮಾನವನ ಕೃಪಾಕಟಾಕ್ಷದಲ್ಲಿಯೇ ಇರಬೇಕು. ನನ್ನ ಪಾಡು ಒಮ್ಮೊಮ್ಮೆ ನಾಯಿ ಪಾಡಿಗಿಂತಲೂ ಕಡೆ. ಮಾನವನ ಬಂಧನದಿಂದ ತಪ್ಪಿಸಿಕೊಂಡು ಬಂದ ನಾಯಿ ಬೀದಿಯಲ್ಲಿ ಬದುಕುವ ಸಾಮರ್ಥ್ಯ ಹೊಂದಿದ್ದರೆ ನನಗೆ ಆ ಸಾಮರ್ಥ್ಯವೂ ಇಲ್ಲ. ನನ್ನನ್ನು ಇಷ್ಟಪಡದ ಕೆಲವು ಮನುಜರು  ಗೋಣಿಚೀಲದಲ್ಲಿ ತುಂಬಿ ಮೂರು ರಸ್ತೆ ಸೇರುವ ಜಾಗದಲ್ಲಿ ಬಿಟ್ಟಾಗ ಬದುಕೇ ದುಸ್ತರ.ನಾಯಿಯಂಯತೆ ಬೀದಿಯಲ್ಲಿ ಬದುಕುವ ಸಾಮರ್ಥ್ಯ ನನಗಿಲ್ಲ ಎಂದು ಅನುಭವಕ್ಕೆ ಬಂದದ್ದು ಆವಾಗಲೇ. ಕೊನೆಗೆ  ಅಲ್ಲಿಯೇ ಹತ್ತಿರದ ಮನೆ ಸೇರಿ ಅವರು ನನ್ನ ಪ್ರವೇಶಕ್ಕೆ ನಿರ್ಬಂಧಿಸದೇ ಆದರ ತೋರಿದರೆ ಮಾತ್ರ ನಾನು ಬದುಕುವೆನು.ಇಲ್ಲವಾದಲ್ಲಿ ನಾನು ಮನೆಯಿಂದ ತೆಗೆದೆಸೆದ ಕಸದಂತೆ. ಎಲ್ಲೋ ಪ್ರಾಣ ಕಳೆದುಕೊಂಡು ಕೊಳೆತು ಮಣ್ಣೊಳು ಲೀನವಾಗುವವನು ನಾನು. ಕೊನೆಗೂ ಮಾನವನ ಕೃಪಾಕಟಾಕ್ಷದಿಂದಲೇ ನನ್ನ ಬದುಕು ಎನ್ನುವುದು ಸಾಬೀತುಪಡಿಸಿದ ಸತ್ಯ.

          ಹಲವು ಕಾಲದಿಂದ ಮಾನವನ ಒಡನಾಡಿ ನಾನು. ಇಲಿ ಹಿಡಿಯಲೋಸುಗ ನನ್ನನ್ನು ಸಾಕುತ್ತಿದ್ದರೇ ಹೊರತು ನನ್ನ ತುಂಟಾಟ ನೋಡಲು ಅಲ್ಲ.  ಕೊಟ್ಟಿಗೆಯಿಂದ ಹಾಲು ಕರೆದುಕೊಂಡು ಬಂದಾಗ ನಿಮ್ಮ ಕಾಲು ಸುತ್ತುತ್ತಿದ್ದೆ. ಒಮ್ಮೊಮ್ಮೆ ಬಾಲ ಮೆಟ್ಟಿಸಿಕೊಂಡು ಅರಚಿದೆ. ಕೊನೆಗೆ ನಾಲ್ಕು ತೊಟ್ಟು ಹಾಲನ್ನು ಮೂಲೆಯಲ್ಲಿ ಸುರಿಸಿದಿರಿ. ಅದನ್ನೇ ಕುಡಿದೆ. ತುಂಬಲಿಲ್ಲ ಹೊಟ್ಟೆ. ಕೊನೆಗೆ ಅನಿವಾರ್ಯವಾಗಿ ಅಟ್ಟ ಸೇರಿದೆ. ಇಲಿ ಬೇಟೆಯಾಡಿ ನನ್ನ ಆಹಾರವನ್ನು ನಾನೇ ಹುಡುಕಿದೆ. ಇಲಿ ಕಾಟ ತಗ್ಗಿಸಿದೆ. ಒಲೆಯಲ್ಲಿ ಮಲಗಿದೆ. ಕೆಂಡದ ಅರಿವಿಲ್ಲದೇ ಮೈ ಮೇಲಿನ ಕೂದಲುಗಳಿಗೆ ಬೆಂಕಿ ತಗುಲಿಸಿಕೊಂಡು ಮೈ ಸುಟ್ಟಿಕೊಂಡೆ. ಅದಕ್ಕಾವ ಔಷಧಿಯನ್ನೂ ಮಾಡಲಿಲ್ಲ. ನಾನು ಸುಟ್ಟಿಕೊಂಡು ಓಡಿದ್ದನ್ನು ನೋಡಿ ಹೊಟ್ಟೆತುಂಬಾ ನಕ್ಕಿರಿ. ಕೊನಗೆ ಇನ್ನೊಬ್ಬರನ್ನು ಅವಮಾನಿಸುವಾಗ ‘ ಅಂಡು ಸುಟ್ಟ ಬೆಕ್ಕಿನಂತೆ’ ಎಂದು ನನ್ನನ್ನು ದೃಷ್ಟಾಂತವಾಗಿ ತೆಗೆದುಕೊಂಡಿರಿ. ಇದಕ್ಕೆ ಮಾತ್ರವಲ್ಲ ಅನೇಕ ಸಲ ನನ್ನನ್ನು ಪಡೆನುಡಿಗಾಗಿ ಬಳಸಿಕೊಂಡಿದ್ದಿದೆ. ‘ತಟ್ಟಿಯನ್ನು ತಟ್ಟಿ ಬೆಕ್ಕನ್ನು ಬೆದರಿಸಿದ ಹಾಗಲ್ಲ.’

‘ಬೆಕ್ಕಿಗೆ ಗಂಟೆ ಕಟ್ಟುವರಾರು’

‘ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ’

ಇಂತಹುದ್ದಕ್ಕೆಲ್ಲ ನಾನು ಬೇಕು. ನಿಮ್ಮ ಒಣ ಪಾಂಡಿತ್ಯ ಮೆರೆಯಲು ನಾನಿರಬೇಕು. ನನ್ನ ಬಗ್ಗೆ ಮಾತ್ರ ಒಂದಿನಿತೂ ಗೌರವ ಆದರವಿಲ್ಲ. ಎಷ್ಟೊತ್ತಿಗೂ ಹಚಾ!, ಹಚಾ! ಎಂದು ಗದರಿಸುತ್ತಲೇ ಇರುತ್ತಿದ್ರಿ. ಅದಕ್ಕೆ ಕಾರಣವೂ ಉಂಟು ನಾನು ಬಾಲ್ಯದಲ್ಲಿ ಹೊರ ಹೋಗಲು ನಾಯಿಗಳ ಭಯದಿಂದ ಮನೆಯೊಳಗೇ ಮಲ ಮೂತ್ರ ಮಾಡುತ್ತಿದ್ದೆ. ನಿಜ. ಅದನ್ನು ಯಾಕೆ ತಪ್ಪು ಎಂದು ಭಾವಿಸುತ್ತೀರಿ? ನಿಮ್ಮ ಮನೆಯ ನಿಮ್ಮ ಶಿಶುಗಳು ಎಲ್ಲಿ‌ ಮಲ‌ಮೂತ್ರ ವಿಸರ್ಜಿಸುತ್ತಿದ್ದರು?. ಹಾಸಿಗೆಯಲ್ಲಿ ತಾನೇ? ಅವರು ಮಲ ಮೂತ್ರ ಮಾಡಿದ ಹಾಸಿಗೆಯನ್ನು ಬಲು ಪ್ರೀತಿಯಿಂದ ತೊಳೆಯುತ್ತಿದ್ರಿ. ನಾನು ಈ ರೀತಿ‌ ಮಾಡಿದಾಗ ನನ್ನನ್ನು ಹಿಡಿದು ತಂದು‌ ಮುಖವನ್ನು ನೆಲಕ್ಕೆ ಹಾಕಿ ಉಜ್ಜಿ ಕೊಡಬಾರದ ಹಿಂಸೆ ಕೊಟ್ಟು ಮನೆಯೊಳಗೆ ಮತ್ತೆ ಗಲೀಜು ಮಾಡಬಾರದೆನ್ನುವ ಪಾಠ ಕಲಿಸಿದರಿ. ಆಯ್ತು ಬಿಡಿ. ಪಾಠ ಕಲಿತೆ. ಆದರೆ ನನ್ನಷ್ಟು ಸ್ವಚ್ಛ ನೀವಿರುವಿರೇ ಒಮ್ಮೆ ಯೋಚಿಸಿ. ನಾನು ಮಲ ವಿಸರ್ಜಿಸುವಾಗ ಹೊಂಡ ತೋಡಿ ಮಲ ವಿಸರ್ಜಿಸಿ ಮುಚ್ಚಿ ಬರುವೆ. ಇಂತಹ ಆರೋಗ್ಯಯುತ ಅಭ್ಯಾಸ ಮತ್ತಾವ ಜೀವಿಗಳಿಂದಲೂ ನೀವು ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನೈರ್ಮಲ್ಯದ ಕಡೆ ಕಾಳಜಿ ನನಗಿದೆ. ಸದಾ ಮುಖವನ್ನು ಬಾಗಿಲ ಮೆಟ್ಟಿಲ‌ ಮೇಲೆ ಕುಳಿತು ಉಜ್ಜುತ್ತಾ ಸ್ವಚ್ಚಗೊಳಿಸುತ್ತಿರುವುದನ್ನು ನೀವು ಗಮನಿಸಿರಬಹುದು. ಆ ವಿಚಾರದಲ್ಲಿ ನಾನು ನಿಮಗಿಂತ ಸ್ವಚ್ಛ ಎಂದೇ ಹೇಳಬಹುದು.

       ನಾನೆಂದರೆ ಅಪಶಕುನ ಎನ್ನುವದನ್ನೂ ಜನರ‌ ಮನದಲ್ಲಿ ಬಿತ್ತಿದಿರಿ. ನಾನೆಲ್ಲೋ ಆಹಾರಕ್ಕೆಂದು ಹೊರಟಾಗ ದಾರಿಯ ಮಧ್ಯೆ ನಾನೆದುರಾದಾಗ ನಿಮ್ಮ ಪಯಣವನ್ನು ಮೊಟಕುಗೊಳಿಸಿದ ನಿದರ್ಶನಗಳನ್ನು ಸಾಕಷ್ಟು ನೋಡಿದ್ದೇನೆ. ನಾನೂ ಸಹ ಆಹಾರಕ್ಕೆಂದು ಹೊರಟಾಗ ನೀವೆದುರಾದಾಗ ಸಿಗಬೇಕಾದ ಆಹಾರ ದೊರಕದೇ ನಿರಾಶನಾದದ್ದು ಇದೆ.ಅದರೆ ನಾನೆಂದೂ ನಿಮ್ಮನ್ನು ಶಪಿಸಲಿಲ್ಲ. ಆಹಾರ ಹುಡುಕುವ  ಪ್ರಯತ್ನವನ್ನು ಬಿಡಲಿಲ್ಲ.

    ಕೆಲವು ವರ್ಷಗಳ ಹಿಂದೆ ಸುಸಜ್ಜಿತವಾದ ಮನೆಗಳನ್ನು ಕಟ್ಟಿಕೊಂಡಿರಿ. ಇಲಿಗಳು ಒಳ ಪ್ರವೇಶಿಸದಂತೆ ಮನೆ ಕಟ್ಟಿದಿರಿ. ಕೊಟ್ಟಿಗೆಗಳನ್ನು ಖಾಲಿ ಮಾಡಿದಿರಿ. ಹಾಲಿಗಾಗಿ ಪರದಾಡುತ್ತಿರುವಿರಿ. ನನಗೆ ಇಡುವ ನಾಲ್ಕು ತೊಟ್ಟು ಹಾಲನ್ನೂ ಲೆಕ್ಕ ಹಾಕಿದಿರಿ. ನನ್ನ ಅವಶ್ಯಕತೆ ಕಡಿಮೆಯಾದಾಗ ನನ್ನನ್ನು ಸಾಕುವುದನ್ನೇ ನಿಲ್ಲಿಸಿದಿರಿ. ಒಮ್ಮೆ ನನ್ನ ಸಂತತಿ ಕ್ಷೀಣಿಸಿತೇ ಎಂದು ಬೆದರಿದ್ದೆ. ಆದರೆ ಹಾಗಾಲಿಲ್ಲ. ನಿಮ್ಮ ಶೋಕಿಯ ಮನಸ್ಥಿತಿಯಿಂದಾಗಿ ನಾವು ಪುನರುಜ್ಜೀವನಗೊಂಡೆವು. ಮತ್ತೆ ಸಾಕತೊಡಗಿದಿರಿ. ಅಂದು ಹಸಿವಿನಿಂದ ಬಳಲಿಸಿ ಬೇಟೆಗೆ ಅಣಿಗೊಳಿಸುತ್ತಿದ್ದಿರಿ‌. ಇಂದು ಹೊಟ್ಟೆ ತುಂಬಿಸಿ ಮಲಗಿಸುತ್ತಿದ್ದೀರಿ. ಬೇಟೆಯೇ ಮರೆತು ಹೋಗಿದೆ. ಕಾರಣ ಹಸಿವಿಲ್ಲ. ಹೊಟ್ಟೆಯೂ ಭಾರ. ವೈದ್ಯಕೀಯ ಉಪಚಾರವನ್ನೂ ಮಾಡುತ್ತಿದ್ದೀರಿ. ತಿಂದೂ ತಿಂದೂ ಬಿಳಿಯಾನೆಯಂತೆ ಮಾಡುತ್ತಿರುವಿರಿ‌. ಇಲಿ ನನ್ನ ಬೇಟೆ ಎನ್ನುವುದೆ ನನಗೆ ಮರೆತು ಹೋಗಿದೆ.ಮುಂದೊಂದು ದಿನ ‘ ಈ ಬೆಕ್ಕು ಇಲಿ ಹಿಡಿಯದು’ ಎಂದು ನನಗೆ ಬೈದರೆ ನೀವೇ ಕಾರಣವೆಂದು ಆರೋಪಿಸುತ್ತೇನೆ.ಕಾರಣ ನೀವು ದಣಿವಿಲ್ಲದೇ ಬದುಕುವದನ್ನು ಕಲಿತ ಹಾಗೇ ನಮಗೂ ದಣಿವೆಂದರೇನೆನ್ನುವುದನ್ನು ಮರೆಯುವಂತೆ ಮಾಡಿದಿರಿ.

        ವೈದ್ಯಕೀಯ ಉಪಚಾರವೆಂದಾಗ ಒಂದು ವಿಚಾರ ಮರೆತೆ. ಹಿಂದೆ ಪಶುವೈದ್ಯರಿಗೆ ತುಂಬಾ ಕೆಲಸದ ಹೊರೆ ಇತ್ತು. ಕಾರಣ ಕೊಟ್ಟಿಗೆ ತುಂಬಾ ಹಸುಗಳು. ಇಂದು ಕೊಟ್ಟಿಗೆ ಹಾಳು ತುಂಬುವ ಸ್ಥಳವಾಗಿದೆ. ಕೆಲವು ಕಡೆ ತರಕಾರಿ ತೋಟವಾಗಿದೆ. ಈ ಪಶುವೈದ್ಯರಿಗೆ ಈಗ ಕೆಲಸ ಕಡಿಮೆಯಾಗಿದೆ. ಎಂದು ಹಲವರು ಭಾವಿಸಬಹುದು. ಆದರೆ ಹಾಗಾಗಿಲ್ಲ. ಅವರಿಗೂ ಕೆಲಸದ ಭಾರ ಹೊರಿಸಿದ್ದೀರಿ. ಹಸುಗಳ ಚಿಕಿತ್ಸೆ ಬದಲು ನಾಯಿಗಳಿಗೆ ಮತ್ತು ನಮ್ಮ ಸಂತತಿಯವರ ಬಗ್ಗೆ ಕಾಳಜಿ ತೋರಿಸುತ್ತಿದ್ದೀರಿ. ಅದಕ್ಕೆ ನಾನು ಋಣಿಯಾಗಿರುವೆ. ಈ ನಿಮ್ಮ ಕಾಳಜಿ, ಶೋಕಿಯ ಮನೋಭಾವ ಎಲ್ಲೆಡೆ ಪಸರಿಸಲಿ. ನಮ್ಮ ಸಂತತಿ ವೃದ್ಧಿಸಲಿ ಎಂದು ಆಶಿಸುವ

 ಇಂತಿ‌ ನಿಮ್ಮ

ಅಧ್ಯಕ್ಷರು

ಮಾರ್ಜಾಲ ಕ್ಷೇಮಾಭಿವೃದ್ಧಿ ಸಂಘ

ಕಿಟನ್ ಪುರ.


2 thoughts on “ಜಿ.ಎಸ್.ಹೆಗಡೆ-ನಾನು ಬೆಕ್ಕು ( ಸ್ವಗತ) ಲಲಿತ ಪ್ರಬಂಧ

Leave a Reply

Back To Top