ಅರುಣಾ ನರೇಂದ್ರ ಗಜಲ್

ಕಾವ್ಯ ಸಂಗಾತಿ

ಗಜಲ್

ಅರುಣಾ ನರೇಂದ್ರ

ಗುಳೆ ಹೋದ ಕನಸುಗಳಿನ್ನೂ ಮರಳಿ ಬಂದಿಲ್ಲ ನಿಲ್ಲು ಯುಗಾದಿ
ಬರಡಾದ ಎದೆ ನೆಲಕೆ ಹಸಿರಿಲ್ಲ ಉಸಿರಿಲ್ಲ ನಿಲ್ಲು ಯುಗಾದಿ

ಒಣಗಿದ ಹೂವು ಹೊರ ಚೆಲ್ಲಲಾಗದೆ ಸೆರಗಲಿ ಕಟ್ಟಿಕೊಂಡಿದ್ದೇನೆ
ಬನಕ್ಕೆ ಬಂದ ಚೈತ್ರ ಬದುಕಿಗಿನ್ನೂ ಬರಲಿಲ್ಲ ನಿಲ್ಲು ಯುಗಾದಿ

ಒಡಲ ನೋವುಗಳ ನುಂಗಿ ನಗೆಯ ಆಭರಣ ತೊಟ್ಟಿದ್ದೇನೆ
ಮಾಸಿದ ಗೋಡೆಗಳಿಗಿನ್ನೂ ಬಣ್ಣ ಬಳಿದಿಲ್ಲ ನಿಲ್ಲು ಯುಗಾದಿ

ಅಂಗಳಕೆ ಚಳೆ ಹೊಡೆದು ರಂಗವಲ್ಲಿ ಹಾಕಬೇಕೆಂದಿದ್ದೇನೆ
ಹೊಸಿಲು ತೊಳೆದು ತಳಿರು ತೋರಣ ಕಟ್ಟಿಲ್ಲ ನಿಲ್ಲು ಯುಗಾದಿ

ಬಾಳ ದಾರಿಯಗುಂಟ ಬೆಲ್ಲಕೆ ಬೆಲೆ ತೆರಲಾಗದೆ ಬೇವು ಸವಿದಿದ್ದೇನೆ
ಕಾಳ ರಾತ್ರಿಯ ಕತ್ತಲೆ ಸರಿದು ಬೆಳಕು ಹರಿದಿಲ್ಲ ನಿಲ್ಲು ಯುಗಾದಿ

ಹೊಸ ಚಿಗುರನುಟ್ಟು ನೀ ಬರಬರನೇ ಬಂದು ನಿಂತರಾಯಿತೆ
ಒಲವಿನ ವಸಂತನ ಅತ್ತರಿನ ಘಮವಿಲ್ಲ ನಿಲ್ಲು ಯುಗಾದಿ

ಭರವಸೆಯ ಬಣ್ಣದ ಕಾಮನ ಬಿಲ್ಲಿಗೆ ಕೈಚಾಚಿದ್ದಾಳೆ ಅರುಣಾ
ತೇಲಾಡುವ ಕಪ್ಪುಮೋಡಗಳಿನ್ನೂ ಕರಗಿಲ್ಲ ನಿಲ್ಲು ಯುಗಾದಿ


Leave a Reply

Back To Top