ಕಾವ್ಯ ಸಂಗಾತಿ
ನಯನ ಭಟ್
ಗಜಲ್
ಎನ್ನೆದೆಯ ಮಾತುಗಳ ಸಾರವನು ಹೀರುವುದೆಂದರೆ ಅದೇನು ನಗು ನಿನಗೆ
ಮೌನ ಭಾವಗಳನು ಹಿಂಜಿ ಹಿಪ್ಪೆಯಾಗಿಸುವುದೆಂದರೆ ಅದೇನು ನಗು ನಿನಗೆ
ಕುಡಿನೋಟ ನೆಟ್ಟ ನಗುವಿನಲಿ ಅಂಕುರಿಸಿತು ಒಲವ ಚಿಗುರೊಂದು ಅಂದು
ಭಾವಬಸಿರಿನ ತುಂಬು ಸ್ವಪ್ನಗಳನು ಸ್ರವಿಸುವುದೆಂದರೆ ಅದೇನು ನಗು ನಿನಗೆ
ನಗುವ ಮಂಜರಿ ಸೇಚಿಸಿದ ನವ್ಯತೆಯ ಚಿಲುಮೆ ನೆನೆಗುದಿಗೆ ಸರಿಯಿತೇನು
ಹೃನ್ಮನದ ಹರ್ಷವನು ಬಾಷ್ಪದಿ ವರ್ಷಿಸುವುದೆಂದರೆ ಅದೇನು ನಗು ನಿನಗೆ
ಮೇರೆ ನಿಲುಕದ ಬಾಳ್ಗೆಯ ರಹದಾರಿಯಲಿ ಗಮ್ಯದ ನಿಶಾನೆ ಮೂಡಿದ್ದು ಹೇಗೆ
ಪುಟಿಯುತಿಹ ಚೇತನಕೆ ವೃಥಾ ತಡೆಹಾಕುವುದೆಂದರೆ ಅದೇನು ನಗು ನಿನಗೆ
ನಲ್ಮೆಯಲಿ ಅಸುವನು ತೇಯ್ದ ನಯನಾಳ ನಂಟಿನಲಿ ದೋಷವಾದರೂ ಏನಿದೆ
ಉಸುರಿದ ತುಮುಲಗಳಲಿ ಚೋದ್ಯ ಅರಸುವುದೆಂದರೆ ಅದೇನು ನಗು ನಿನಗೆ