ಯುಗಾದಿ ವಿಶೇಷ
ವತ್ಸಲಾ ಶ್ರೀಶ
ಹಸಿರ ಕುವರಿ ಗಂಭೀರೆ
ಯುಗಾದಿಯಾಗಮ ನವ ಭಾವ ಸಂಗಮ
ಚೆಲುವಾಯ್ತು ಜಗದ ವಿನ್ಯಾಸ|
ಮರಳಿ ಬಂದಿರಲು ಹೊಸತನವ ತಂದಿರಲು
ಮುಗಿದಾಯ್ತು ಭುವಿಯ ಸನ್ಯಾಸ||
ತಳಿರ ನೂಪುರವ ತೊಟ್ಟು ನಿಂದಿಹಳು
ಹಸಿರ ಕುವರಿ ಗಂಭೀರೆ|
ಯುಗದ ಆದಿಯಲಿ ಕಾವ್ಯ ಬರೆದಳು
ಉಟ್ಟು ಚಿಗುರ ಸೀರೆ||
ಮೂಕವಾಗುತಿವೆ ಸಪ್ತ ಸ್ವರಗಳು
ಭ್ರಮರ ಉಲಿವ ವೇಳೆ|
ಖಗಗಳಿಂಚರಕೆ ಮೃಗಗಳಾಟಕೆ
ಸ್ತಬ್ಧ ಸಂಗೀತ ನೃತ್ಯ ಶಾಲೆ||
ಎಳೆಯ ಹಸಿರಿನ ಒಡವೆ ತಂದನು
ಕಿರು ನಗೆಯ ಬೀರಿ ವಸಂತ|
ಒಡಲು ತುಂಬಿಹ ಸೌಂದರ್ಯ
ದೇವಿಗೆ ಸಂಭ್ರಮದ ಸೀಮಂತ||
ಬೇವು ಬೆಲ್ಲದ ಒಗಟಿನಲ್ಲಿದೆ
ಬದುಕ ಸಾವಧಾನ|
ಸಿಹಿಯ ಕಹಿಯ ನಂಟು ತೆರೆಯಿತು
ಬಾಳ ನಿಜ ವಿಧಾನ||
ಹೊಸತಿನಲ್ಲಿದೆ ಹಳೆಯ ಕೊಳೆಗಳ
ತೊಳೆವ ಇಂದ್ರಜಾಲ|
ಮರೆತು ದ್ವೇಷಗಳ ಪ್ರೀತಿ ಪ್ರೇಮದೊಳು
ಮಿಂದು ನಲಿವ ಕಾಲ||
ವಾವ್,ಸುಂದರ ರಚನೆ. ಅಭಿನಂದನೆಗಳು ಬಾಲ್ಯಸಖಿ
ಧನ್ಯವಾದಗಳು
Super….