ಹೂ ಕವಿತೆಗಳು.
ರಂಗಮ್ಮ ಹೊದೇಕಲ್
ಗಂಧವಾಗಲು ಬೇರು ಎಷ್ಟು ನೋಯಬೇಕೋ..
ಘಮ ವಾಗಲು ದಾರಿ ಎಷ್ಟು ಸವೆಯಬೇಕೋ..
ನೆಲದಲ್ಲಿ
ಭದ್ರ ಬೇರೂರಿ
ಆಕಾಶಕ್ಕೆ ಕಣ್ಣು ನೆಟ್ಟು
ಪರಿಮಳದ ಬೆಡಗ ಹಾಡುವ
ಸೋಜಿಗವ ಹೂಗಳೇ
ತೆರೆದಾವು ನೋಡಾ…….!!
ಸೋತ ಮಾತು
ಹುಗಿದು
ಗಿಡ ನೆಡಬೇಕು
ಅರಳಿದ ಹೂವಾದರೂ
ಮಾತ ಕಲಿಸಿಯಾತು!!
ಒಲವೂ ವಿಷವಾಗುವ
ಕಾಲದಲ್ಲಿ
ಹೂವೂ ಕೆರಳುವುದು
ಅಚ್ಚರಿಯೇನಲ್ಲ!!
ಬೇರಿನ ನೋವು..ಹೂವಿನ ನಗೆಯು!
ನೊಂದೆನೆಂದು ಡಂಗೂರ ಸಾರದ ಬೇರು
ಹೂ ನಗೆಯಲ್ಲಿ ಲೋಕ ಸೆಳೆಯುತ್ತದೆ!
ಬೇರಿನ ಕಣ್ಣೀರು ಗುರುತಾದವರು
ಹೂವಿನ ಘಮಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ-ಮೌನದಲ್ಲಿ!
ಹೂವಿನ ಸೌಂದರ್ಯ
ಬೇರಿನ ಕಣ್ಣಲ್ಲಿದೆ
ಬೇರಿನ ನಗು
ಅರಳಿದ ಹೂವಿನಲ್ಲಿ!!
ತುಳಿಯುತ್ತಾರೆಂದು
ಗೊತ್ತಿದ್ದೂ
ನೆಲಕೆ ಹೂ ಚಲ್ಲುವ
ಮರ
ನಮಗೆ
ಮಾದರಿಯಾಗುವುದೇ ಇಲ್ಲ!!
ಮತ್ತೇನಿಲ್ಲ…
ನನ್ನ ಶಕ್ತಿಯ ಗುಟ್ಟು
ನನ್ನನ್ನೆತ್ತಿ ನಿಲ್ಲಿಸಿದ ಅದೃಶ್ಯ ಬೇರಿನದು!
ಈ ಹೂ ನಗು
ಬೇರಿನ ಅಂತಃಕರಣಕ್ಕೆ ಕೃತಜ್ಞತೆಯು..!
ನೆಲದಲ್ಲಿ
ಭದ್ರ ಬೇರೂರಿ
ಆಕಾಶಕ್ಕೆ ಕಣ್ಣು ನೆಟ್ಟು
ಪರಿಮಳದ ಬೆಡಗ ಹಾಡುವ
ಸೋಜಿಗವ ಹೂಗಳೇ
ತೆರೆದಾವು ನೋಡಾ…….!!
ಮತ್ತೇನು?
ಹೂ ಅರಳುತ್ತದೆ
ಉರುಳುತ್ತದೆ..!!
ಅಷ್ಟರಲ್ಲೇ
ಬದುಕೂ ಇದೆ!!
ಹೂ ಬೆಡಗ
ಹಾಡುತ್ತಾ ನಿಲ್ಲಬೇಡ!
ಬೆನ್ನ ಹಿಂದೆ
ಚೂರಿ ಇದ್ದಾತು!
ಹೂ ಗಂಧದ
ಹಾಗೆ
ಮೌನ
ತೇಲಿಬರುತ್ತದೆ
ಎಲ್ಲರಿಗೂ
ತಲುಪಲಾಗದು!
ರಂಗಮ್ಮ ಹೊದೇಕಲ್
ಕವಿಪರಿಚಯ:
ಶಾಲಾ ಶಿಕ್ಷಕಿಯಾದ ಇವರು ಶೈನಾ ಕೈಬರಹದ ಪತ್ರಿಕೆಯ ಕೈಬರಹಗಾರ್ತಿ.ಒಳದನಿ,ಜೀವಪ್ರೀತಿಯ ಹಾಡು ಇವರ ಕವನಸಂಕಲನಗಳು.
Nice madam