ಯುಗಾದಿ ವಿಶೇಷ

ಯುಗಾದಿ ಸಂತಸಕೆ ನಾಂದಿ

ಅರ್ಚನಾ ಯಳಬೇರು

ಬದುಕಿನ ನಾಳೆಗೆ ನಗುತಲಿ ನಾಂದಿಯ
ಹಾಡಲು ಬಂದಿತು ಯುಗಾದಿ
ಭರವಸೆ ಬುತ್ತಿಯ ಕಟ್ಟಿರಿ ಎನ್ನುತ
ಮನವನು ಬೆಳಗಿತು ಯುಗಾದಿ

ಚೈತ್ರದ ಚಿಗುರಲಿ ವಸಂತನ ಒಲವನು
ಹೊಸೆದೇ ಬಿಟ್ಟಿತು ಯುಗಾದಿ
ಕೋಗಿಲೆ ಕಂಠಕೆ ಮಾವಿನ ನಂಟನು
ಬೆಸೆಯಲು ಬಂದಿತು ಯುಗಾದಿ

ಕಷ್ಟದ ಬೇವಿಗೆ ಸುಖದ ಬೆಲ್ಲವ
ಬೆರೆಸುತ ನಲಿಯಿತು ಯುಗಾದಿ
ನೋವಿಗೂ ನಲಿವಿಗೂ ಹಿಗ್ಗದೆ ಕುಗ್ಗದೆ
ಮುನ್ನೆಡೆಯಲು ಇದುವೇ ಬುನಾದಿ

ತರುಲತೆಗಳಲಿ ಹಚ್ಚ ಹಸಿರನು ತುಂಬಿ
ಹೊಸ ಹರೆಯವ ತಂದಿತು ಯುಗಾದಿ
ಕನಸು ಕಂಗಳಲಿ ಮಿಂಚಂತೆ ಹೊಳೆವ
ಬಗೆಬಗೆ ಆಸೆಯನಿಟ್ಟಿತು ಯುಗಾದಿ

ನವ ಮನ್ವಂತರವನು ತೊಟ್ಟಿಲಲಿಟ್ಟು
ಜೋಗುಳ ಹಾಡಿತು ಯುಗಾದಿ
ಹರುಷವ ಹೊತ್ತು ಮನುಜಗೆ ಇತ್ತು
ನವ ಪಲ್ಲವಕಾಯಿತಿದು ಪ್ರವಾದಿ

-[

ಅರ್ಚನಾ ಯಳಬೇರು

Leave a Reply

Back To Top