ಯುಗಾದಿ ವಿಶೇಷ
ನಿತ್ಯ ಜಗನ್ನಾಥ್ ನಾಯ್ಕ್
ಲಹರಿ
ಮಳೆ ಮತ್ತು ವಿಜ್ಞಾನ ತರಗತಿ
ಮಾರ್ಚ್ ತಿಂಗಳ ಸುಡು ಬಿಸಿಲಿನ ಬಿರು ಬೇಸಿಗೆಯ ದಿನ, ಉರಿ ಬಿಸಿಲಿಗೆ ಭೂಮಿಯು ಕಾದ ಕಾವಲಿಯಾಗಿತ್ತು. ಎಲ್ಲೆಲ್ಲೂ ಧಗೆ ಆವರಿಸಿ ತಾಪ ಉತ್ತುಂಗಕ್ಕೆ ಏರಿದ್ದರ ಪರಿಣಾಮ ಬೀಸಿ ಬರುವ ಗಾಳಿಯೂ ಮೈ ಸುಡುತಲಿತ್ತು.
ಅಂದು ನೀಲಿ ಬಾನಿನಲ್ಲಿ ಒಂದು ಕಡೆಯಿಂದ ಕಪ್ಪು ಮೋಡ ಕವಿಯಲು ಅಣಿಯಾಗಿತ್ತು. ಅದನ್ನು ಗಮನಿಸಿದ ನಾವು ‘ಇಂದಿನ ವಾತಾವರಣ ಬದಲಾಗಿದೆ, ಮಳೆ ಬರುವ ಹಾಗಿದೆ, ಮಳೆ ಬಂದರೂ ಬಂತು ‘ ಎಂದು ನಮ್ಮ ನಮ್ಮಲ್ಲೆ ಮಾತುಕತೆ ನಡೆಸಿದ್ದೆವು.
ಎಂದಿನಂತೆ ಮಧ್ಯಾಹ್ನದ ಊಟ ಮುಗಿಸಿ ಮೊದಲನೇ ಅವಧಿ ಹತ್ತನೇ ತರಗತಿಯಲ್ಲಿರುವಾಗಲೇ ಆಗೊಮ್ಮೆ ಈಗೊಮ್ಮೆ ದೂರದ ಗುಡುಗಿನ ಸದ್ದು ಕೇಳಲಾರಂಭಿಸಿತು. ಓಹ್ ಮಳೆ ಬರುವ ಎಲ್ಲಾ ಲಕ್ಷಣ ಇದೆ, ಇಂದು ಸಂಜೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ವಿಶೇಷ ತರಗತಿ ಬೇರೆ ಇದೆ ಮಳೆ ಬರದಿದ್ದರೆ ಸಾಕು ಎಂದು ಮನದಲ್ಲೇ ಗೊಣಗುತ್ತಾ ಶಿಕ್ಷಕರ ಕೊಠಡಿಗೆ ಬಂದಾಗ ಸಹೋದ್ಯೋಗಿಯೊಬ್ಬರು ಶಿರಸಿಯಲ್ಲಿ ಮಳೆ ಬರ್ತಿದೆ ಅಂತೆ ಇಲ್ಲೂ ಬರಬಹುದು ಎಂದರು.
ಒಂದು ಕಡೆ ಆಕಸ್ಮಿಕವಾಗಿ ಬಂದ ಮಳೆಗೆ ಛತ್ರಿ ಇಲ್ಲ ಮನೆಗೆ ಹೋಗುವುದಾದರೂ ಹೇಗೆ..? ವಿಶೇಷ ತರಗತಿ ಇದೆ ವಿದ್ಯಾರ್ಥಿಗಳು ಮಳೆಯಲ್ಲಿ ಹೇಗೆ ಮನೆ ಸೇರುವರು ಎಂಬಿತ್ಯಾದಿ ಚಿಂತೆ ಮಾಡುತ್ತಲಿರುವಾಲೇ ಗುಡುಗು ಮಿಂಚುಗಳು ಪಕ್ಕಾ ವಾದ್ಯಗಳೊಂದಿಗೆ ಹನಿ ಹನಿಯಾಗಿ ವರುಣದೇವನ ಅಗಮನವಾಗುತ್ತಿದಂತೆ ಸಂಗೀತ ರಸಮಂಜರಿಯೊಂದು ಆಗಸದಲ್ಲಿ ಪ್ರಾರಂಭವಾಗತೊಡಗಿತು.
ಅಷ್ಟು ಸಮಯದ ವರೆಗೆ ಹನಿ ಹನಿಯಾಗಿ ಬರುತ್ತಿದ್ದ ಮಳೆ ಸುಮಾರು 4.45ರ ಸಮಯಕ್ಕೆ ಧೋ… ಎಂದು ಸುರಿಯಲಾರಂಭಿಸಿತು.
ಸಂಜೆಯ ವಿಜ್ಞಾನ ವಿಶೇಷ ತರಗತಿಯಲ್ಲಿ ನಮ್ಮ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಅಭ್ಯಾಸಕ್ಕಾಗಿ ಕುಳಿತ ವಿದ್ಯಾರ್ಥಿಗಳಿಗೆ ಕಿಟಕಿಯಿಂದ ಇಣುಕಿ ಬರುವ ಮಂದ ಬೆಳಕೇ ಆಧಾರವಾಗಿತ್ತು. ಗುಡುಗು ಮಿಂಚಿನ ಆಟಕ್ಕೆ ವಿದ್ಯುತ್ ಟಾಟಾ ಹೇಳಿತ್ತು. ಮಳೆ ಬರುತ್ತಿರುವುದರ ಪರಿಣಾಮ ತರಗತಿ ಕೋಣೆಗೆ ಕತ್ತಲು ಆವರಿಸಿದಂತಾಗಿತ್ತು. ಆದರೂ ವಿದ್ಯಾರ್ಥಿಗಳು ಗುಡುಗು ಮಿಂಚಿಗೆ ವಿಚಲಿತರಾಗದೆ ಶ್ರದ್ಧೆಯಿಂದ ವಿಜ್ಞಾನದ ಅಭ್ಯಾಸದ ಚಿತ್ರಗಳನ್ನು ಒಬ್ಬೊಬ್ಬರಾಗಿಯೇ ಬೋರ್ಡ್ ನ ಮೇಲೆ ಹೋಗಿ ಬಿಡಿಸುತ್ತಾ , ಪುಸ್ತಕವನ್ನು ಓದುತ್ತಾ ಕುಳಿತಿದ್ದರು.
ಈ ವರ್ಷದ ಮೊದಲ ಮಳೆ ಮುತ್ತಿನ ಮಣಿಗಳಂತೆ ಬೀಳಲು ಶುರುವಾದ ಮಳೆಹನಿಗಳು ತಟಪಟ ಸದ್ದು ಮಾಡುತ್ತಾ ಜೋರಾಗಿ ಮಳೆ ಬೀಳಲು ಶುರುವಾದೊಡನೆ ವಿಜ್ಞಾನ ತರಗತಿಯ ಸುತ್ತೆಲ್ಲಾ ಮೊದಲ ಮಳೆಗೆ ಏಳುವ ಮಣ್ಣಿನ ಗಮಲು ಆವರಿಸಿಕೊಂಡಿತ್ತು. ಮನೆ ಹನಿಗಳ ವೇಗ ಹೆಚ್ಚಿದಂತೆ ಗುಡುಗು ಮಿಂಚುಗಳ ವಾದ್ಯವು ಮನದಲ್ಲೇ ಭಯ ಹುಟ್ಟಿಸುತ್ತಿತ್ತು.
ಆದರೆ ಶಾಲೆಯ ಸುತ್ತಲಿನ ಪ್ರಕೃತಿ ಮಳೆ ನೀರಿನ ಜೊತೆ ಸಂಭ್ರಮಿಸುತ್ತಿತ್ತು. ಬಿರು ಬಿಸಿಲಿಗೆ ಬಾಡಿ ಮಲಗಿದ್ದ ಹೂ ಗಿಡಗಳು ಮಳೆ ನೀರಿಗೆ ನಳನಳಿಸಿ ಪ್ರೀತಿಯಿಂದ ಮಳೆ ನೀರಿನ ಜೊತೆ ಸಂಭಾಷಣೆ ನಡೆಸುತ್ತಿದ್ದವು.ಇನ್ನೊಂದು ಕಡೆ ಹಸಿರೆಲೆಯ ಮೇಲೆ ತೊಟ್ಟಿಕ್ಕುವ ಮಳೆ ಹನಿ ತಾಳ ಹಾಕಿ ನಗುತ್ತಿತ್ತು.
ಇದೆಲ್ಲವೂ ಬಲು ಸೊಗಸಾಗಿ ಕಾಣುತಿತ್ತು.
ತರಗತಿಯ ಕಿಟಕಿಯಲ್ಲಿ ಮಳೆಯನ್ನೇ ನೋಡುತ್ತಾ ಇದ್ದ ನನಗೆ ಎಚ್ಚರಿಸಿದ್ದು ವಿದ್ಯಾರ್ಥಿಯೊಬ್ಬನ ಜೋರಾದ ಸೀನು. ಅಷ್ಟೊತ್ತಿಗಾಗಲೇ ವಾಚಿನ ಮುಳ್ಳು 5.30ಕ್ಕೆ ಸಮೀಪಿಸಿತ್ತು, ಹೊರಗಿನ್ನೂ ಮಳೆ ಹನಿ ಮೆಲ್ಲಗೆ ತೊಟ್ಟಿಕ್ಕುತ್ತಿತ್ತು. ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಮನೆಗೆ ತಲುಪಲು ಸೂಚನೆ ನೀಡಿ ತರಗತಿಯಿಂದ ಹೊರಡಲು ತಿಳಿಸಿದಾಗ, ವಿದ್ಯಾರ್ಥಿಗಳೆಲ್ಲರೂ ಶಾಲೆಯ ವರಾಂಡದಲ್ಲಿ ನಿಂತು ಛೇ… ಈ ಹಾಳಾದ ಮಳೆ ಇಂದೇ ಬರಬೇಕೇ..? ಈ ಮಳೆಯಲ್ಲೇ ನೆನೆಯುತ್ತಾ ಹೋಗಬೇಕಲ್ಲ.. ಈ ಮಳೆ ಇನ್ನೂ ಕಡಿಮೆಯಾಗುವ ಹಾಗೆ ಕಾಣಲ್ಲ ಎಂದು ಮಳೆಗೆ ಶಪಿಸುತ್ತಲೇ ಹೆಜ್ಜೆ ಹಾಕುತ್ತಿದ್ದರು.
ನಾವು ನಮ್ಮ ಬಾಲ್ಯದಲ್ಲಿ ಮಳೆಯಲ್ಲಿ ನೆನೆಯಲು ಇಂತದ್ದೊಂದು ಅವಕಾಶ ಸಿಕ್ಕರೆ ಸಾಕಿತ್ತು ಮನಸೋ ಇಚ್ಚೆ ಮಳೆಯಲ್ಲಿ ನೆನೆದು ಕಾಗದದ ದೋಣಿ ಮಾಡಿ ತೇಲಿಬಿಟ್ಟು ಅದು ತೇಲಿ ಹೋಗುವ ಚಂದವನ್ನು ನೋಡುತ್ತಾ ಮನೆಗೆ ತಡವಾಗಿ ಹೋಗಿ ಮಳೆಯಲ್ಲಿ ನೆನೆದಿರುವುದಕ್ಕೆ ಅಮ್ಮನ ಬಳಿ ಚೆನ್ನಾಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಬಾಲ್ಯದ ಸವಿ ನೆನಪುಗಳ ದಿಬ್ಬಣದ ಮೆರವಣಿಗೆ ನನ್ನ ಮನದಲ್ಲೇ ಹೊರಟಿತ್ತು.
ಇಂದಿನ ಮಕ್ಕಳಿಗೂ ಅಂದಿನ ಮಕ್ಕಳಾಗಿದ್ದ ನಮಗೂ ಎಷ್ಟೆಲ್ಲಾ ವ್ಯತ್ಯಾಸಗಳಿವೆ ಖುಷಿ ನಮ್ಮ ಮುಂದೆಯೇ ಇದ್ದರೂ ಅದನ್ನು ಮನಸಾರೆ ಅನುಭವಿಸಲು ಹಿಂಜರಿಯುವ ಇವರ ಬಗ್ಗೆ ಯೋಚಿಸುತ್ತಲೇ ನಾ ಮನೆ ತಲುಪಿದೆ.
………………………………………………………
Very nice