ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಕಾರ್ಯಕ್ರಮದ ಅತಿಥಿ ಭಾಷಣಕಾರನಾಗುವ

ಸಂಕಟದ ಸಂಭ್ರಮಗಳು….

ಗೆಳೆತನಕ್ಕೊ ಇಲ್ಲವೆ ಯಾವುದೋ ಮಮತೆಯ ಕರೆಗೆ ಓಗೊಟ್ಟು ಅತಿಥಿಯಾಗುವದರ ಹಿಂದೆ.. ಎಂತಹ ಅನುಭವಗಳು ಮೂಡುವ ಸಂಕಟ, ಸಂಭ್ರಮ, ನೋವು – ನಲಿವು ಒಂದೇ ಎರಡೇ…ಅಬ್ಬಾಬ್ಬ..!!

ಮೊದಲಿನಿಂದಲೂ ಬರೆವ ಗೀಳಿಗೆ ಬಿದ್ದು ಒಂದೆರಡು ಪುಸ್ತಕ ಪ್ರಕಟಿಸಿದ ಕಾರಣಕ್ಕೋ…ಗೆಳೆಯರ ಗುಂಪಿನಲ್ಲಿ ಚೆನ್ನಾಗಿ ಮಾತನಾಡಿದ ಕಾರಣಕ್ಕೋ ಅಂತೂ ಇಂತೂ ಕಾರ್ಯಕ್ರಮದಲ್ಲಿ ಅತಿಥಿಯಾಗುವ ಯೋಗಾಯೋಗ ದೊರಕಿತು.

ಮೊದಲ ಕಾರ್ಯಕ್ರಮದಲ್ಲಿ ಅತಿಥಿಯಾಗುವ ಸಂಭ್ರಮ, ಸಂತೋಷ ಹೇಳತೀರದು.

ಹೌದು… ಪ್ರತಿಯೊಬ್ಬ ಭಾಷಣಕಾರನಿಗೆ, ಬರಹಗಾರನಿಗೆ, ಚಿಂತಕನಿಗೆ ಇಂತಹ ಅವಕಾಶ ದೊರಕಿದಾಗ ಇದು ಸಹಜವೂ ಕೂಡ ಹೌದು..!!

ಆದರೆ….

ಭಾಷಣಕಾರನಾಗುವ ನಾವುಗಳು ಪಡುವ ಪಾಡು ಹೇಳಲಾಗದ ನೋವುಗಳು ಹಲವು.

ಕಾರ್ಯಕ್ರಮದ ಸಂಘಟಕರು ಇಂತಹ ವಿಷಯ ಕುರಿತು, ಇಂತಹ ದಿನದಂದು ಮಾತನಾಡಬೇಕೆಂದು ಕೋರಿಕೆಗೆ ಮನ್ನಿಸಿ, ಅವರ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸುವುದು ಸರ್ವೇಸಾಮಾನ್ಯ.

ಇಲ್ಲಿಂದ ಪ್ರಾರಂಭವಾಯಿತು…

ಭಾಷಣಕ್ಕೆ ಟಿಪ್ಪಣಿ ಮಾಡಿಕೊಳ್ಳಲು ಸಾಕಷ್ಟು ಪುಸ್ತಕಗಳನ್ನು ಹುಡುಕಿ ತೆಗೆದುಕೊಳ್ಳುವುದು. ವಿಷಯಕ್ಕೆ ಸಂಬಂಧಿಸಿದಂತೆ ಅಡಿಗೆರೆ ಎಳೆದು ನೋಟ್ಸ್ ಮಾಡುವಾಗ…

“ಅದೇನು ನೀವು ಪುಸ್ತಕ ಪುಸ್ತಕ ಅಂತ..ಮನಿಯಾಗ ತರಕಾರಿ ಇಲ್ಲ, ಕುಡಿಯುವ ನೀರು ಬೇರೆ ಖಾಲಿಯಾಗ್ಯಾವ….”
ಅಡುಗೆ ಮನೆಯಿಂದ ‘ದಡಲ್’ ಎಂದು ಭೂಕಂಪದಂತಹ ಶಬ್ದ..!! ಹ್ಯಾಗೋ ಮನೆಯವರ ಕರೆಗೆ ಸಮಜಾಯಿಷಿ ಕೊಟ್ಟು, ಬರೆಯಲು ಪ್ರಾರಂಭಿಸಿದರೇ ಮತ್ತೆ ಮಗಳ ವರಾತ…

“ಅಪ್ಪಾ..ಅಪ್ಪ ಶಾಲಾ ಫೀಜ್ ಕಟ್ಟಬೇಕಂತ ಟೀಚರ್ ಹೇಳ್ಯಾರ ಮತ್ತ..” ಎನ್ನುವ ಮಾತುಗಳನ್ನು ಎದೆಯೊಳಗಿಟ್ಟುಕೊಂಡೆ ಕಾರ್ಯಕ್ರಮಕ್ಕೆ ಹೊರಡಲು ಸಿದ್ಧವಾಗುವ ಸಂಕಟ ಬೇರೆ…!

ಅಂತೂ.. ಇಂತೂ.. ಕಾರ್ಯಕ್ರಮದ ಕಡೆ ಹೆಜ್ಜೆ ಹಾಕಿದರೇ ನಮ್ಮನ್ನು ಕರೆದ ವ್ಯಕ್ತಿ ಕಾಣಿಸುವುದೇ ಇಲ್ಲ..!! ಕಾರ್ಯಕ್ರಮದ ಸಂಘಟಕರಿಗೆ ನಾವೇ ಪರಿಚಯ ಮಾಡಿಕೊಂಡು, ನೀರು ಕುಡಿಯಬೇಕು ಎನ್ನುವದರೊಳಗೆ ಕರೆದ ವ್ಯಕ್ತಿ ಪ್ರತ್ಯಕ್ಷ..!!

“ಸಾರಿ ಸರ್ ನಾನು ಬೇರೆ ಕೆಲಸದ ಮೇಲೆ ಹೋಗಿದ್ದೆ..” ಎಂದು ಕಾರ್ಯಕ್ರಮದ ವೇದಿಕೆಯ ಹಿಂದಿನ ಕೊಠಡಿಯಲ್ಲಿ ಕುಳಿಸಿ ಹೋದವರು ನಾಪತ್ತೆ..!! ಮೈಕ್ ನಲ್ಲಿ ಜೋರಾದ ಧ್ವನಿ …

“ನಮ್ಮ ಕಾರ್ಯಕ್ರಮದ ಇಂದಿನ ಪ್ರಮುಖ ಮುಖ್ಯ ಅತಿಥಿಗಳು.. ವಿದ್ವಾಂಸರು, ಖ್ಯಾತ ಸಾಹಿತಿಗಳು… ” ಇನ್ನೂ ಏನೇನೋ ಪದಪುಂಜವನ್ನು ಹೇಳಿ ಹೇಳಿ ವರ್ಣಿಸುವಾಗ..
ಕೊಠಡಿಯೊಂದರಲ್ಲಿ ಕೂಡಿ ಹಾಕಿದ ನಮ್ಮ ಪರಿಸ್ಥಿತಿ ಯಾರಿಗೂ ಬೇಡ..!!

ವೇದಿಕೆಗೇನೋ ಕರೆದರು ಪ್ರಾರ್ಥನೆ, ಸ್ವಾಗತ, ಸುದೀರ್ಘವಾದ ಅತಿಥಿಗಳ ಪರಿಚಯ, ಊರಗೌಡರಿಗೆ, ಪಂಚಾಯತಿ ಮೆಂಬರಿಗೆ, ಹಿರಿಯರಿಗೆ, ಸಾಧಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ…
ಇನ್ನೂ ಅವರಿವರಿಗೆ ಸನ್ಮಾನ ಮಾಡುವುದರೊಳಗೆ,
“ಕುಮಾರಿ…..ಇವರಿಂದ ಭರತನಾಟ್ಯ.. ” ನಿರೂಪಕನ ಮಾತಿಗೆ ಸುಸ್ತೋ ಸುಸ್ತು..!!

ಎಲ್ಲರ ಭಾಷಣಗಳು, ಮಾತುಗಳು, ಹಾಡುಗಳು ಮುಗಿದ ಮೇಲೆ… ಈಗ ನಮ್ಮ ಸರದಿ…

ನಿರೂಪಣೆ ಮಾಡುವ ವ್ಯಕ್ತಿ “ನಮ್ಮನ್ನು ಉದ್ದೇಶಿಸಿ ಕೇವಲ ಎರಡು ನಿಮಿಷಗಳಲ್ಲಿ ತಮ್ಮ ಮಾತುಗಳನ್ನು ಮುಗಿಸಲಿದ್ದಾರೆ..” ಎಂದಾಗ ನಮ್ಮ ಸಿಟ್ಟು ಆಕ್ರೋಶ ವ್ಯಕ್ತಪಡಿಸಬೇಕೆಂದರೂ ಏನು ಮಾಡುವಂತಿಲ್ಲ…!!

ಹಗಲು – ರಾತ್ರಿ ಹೆಂಡತಿ, ಮಕ್ಕಳೊಂದಿಗೆ ಬೈಸಿಕೊಂಡು, ಕನ್ನಡ ನಾಡು – ನುಡಿ ಸೇವೆಗಾಗಿ ಸುಧೀರ್ಘ ಭಾಷಣ ಸಿದ್ದ ಮಾಡಿಕೊಂಡಿದ್ದು, ಟಿಪ್ಪಣಿ ಮಾಡಿ ನಿದ್ದೆಗೆಟ್ಟಿದ್ದು, ಕಾರ್ಯಕ್ರಮಕ್ಕೆ ಬರಬೇಕಾದ ಸಮಯದಲ್ಲಿ ಬಸ್ ತಪ್ಪಿಸಿಕೊಂಡು ಒಂದೆರಡು ತಾಸು ಕಾದು ಕಾದು ಕಾರ್ಯಕ್ರಮಕ್ಕೆ ಬಂದಿದ್ದು…ಇಷ್ಟೇಲ್ಲಾ ಕಷ್ಟಗಳು ನೋವುಗಳು ಅನುಭವಿಸಿದ್ದು “ಕೇವಲ ಐದು ನಿಮಿಷದ ಮಾತಿಗಾ…??” ಎಂದು ನಾವು ತುಟಿ ಬಿಗಿಹಿಡಿದು ಐದು ನಿಮಿಷಗಳ ಕಾಲ ಭಾಷಣ ಮಾಡುವಾಗ ಬೇಗ ಭಾಷಣ ಮುಗಿಸಿ ಎಂದು ಸಭೀಕರಿಂದ ಸಿಳ್ಳೆ ಕೇಕೇ..ಗುಸುಗುಸು ಪಿಸುಪಿಸು ಮಾತುಗಳ..ಗದ್ದಲ ಗಲಾಟೆ… ಅಂತೂ ನಮ್ಮ ಮಾತುಗಳು ಮುಗಿಸಿ, ವೇದಿಕೆಗೆ ಹಿಂದುರುಗಿ ಕುಳಿತಾಗ ನಿಟ್ಟುಸಿರು..!!

ಮತ್ತೆ ನಿರೂಪಕ..
ತಮ್ಮ ವಿದ್ವತ್ಪೂರ್ಣ ಮಾತುಗಳನ್ನು ನಮ್ಮೇದುರು ಹಂಚಿಕೊಂಡ ಶ್ರೀಯುತ…ರಿಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಸನ್ಮಾನ…!! ಜರುಗುವುದು ಎಂದಾಗ ಅಕ್ಷರಶಃ ಪಾತಳಕ್ಕೆ ಹೋದ ಅನುಭವ..!!

ರಾತ್ರಿ ಹತ್ತೂವರೆ ಮಕ್ಕಳ ಡ್ಯಾನ್ಸ್ ಎಲ್ಲವೂ ಮುಗಿದವು. ತಮ್ಮ ತಮ್ಮ ಮಕ್ಕಳ ಕಾರ್ಯಕ್ರಮ ಮುಗಿದ ನಂತರ ಪಾಲಕರು ಮಕ್ಕಳನ್ನು ಕರೆದುಕೊಂಡು ಮನೆಗೆ ಹೊರಟು ಹೋಗುತಿದ್ದರು..

ಆಗ.. ಮುಖ್ಯ ಅತಿಥಿಗಳಿಗೆ ಸನ್ಮಾನ..!!

ಒಂದು ಶಾಲು, ಹಾರ, ಅದೂ ದೂರದಿಂದ ಯಾರೋ ಎಸೆದ ಅನುಭವ..

ಊರಿಗೆ ಹೊರಡಲು ಸಿದ್ಧವಾಗುವ ವೇಳೆಗೆ ಸವ ರಾತ್ರಿ ಹನ್ನೆರಡು ಗಂಟೆ..!! ಬಸ್ಸಿಲ್ಲ, ಯಾವುದೇ ವಾಹನವಿಲ್ಲ.‌.ಕರೆಸಿದ ಪುಣ್ಯತ್ಮಾನ ಕೈಹಿಡಿದು,

“ದಯವಿಟ್ಟು ನನ್ನ ಊರಿಗೆ ಮುಟ್ಟಿಸಿ ದಡ ಸೇರಿಸಿ..” ಎಂದು ಗೋಗೆರೆಯುವ ನೋವಿನ ಅನುಭವಗಳನ್ನು ವರ್ಣಿಸುವಂತಿಲ್ಲ…

ಒಂದು ವೇಳೆ, “ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ..” ಎಂದು ಖಡಾ ಖಂಡಿತವಾಗಿ ಹೇಳಿದರೇ ” ಈ ಸಾಹಿತಿಗೆ ಎಷ್ಟೊಂದು ಸೊಕ್ಕು..” ಎನ್ನುವ ಕೊಂಕು ಮಾತುಗಳು..!!

ಓದು, ಅಧ್ಯಾಪನ, ಸಾಹಿತ್ಯ, ಪುಸ್ತಕ ಪ್ರಕಟಣೆ.. ಜೊತೆ ಜೊತೆಗೆ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುವ ಆಸೆ ಯಾರಿಗೆ ಇಲ್ಲ….ಹೇಳಿ..?? ಜ್ಞಾನವನ್ನು ಹಂಚುವ ಹುಮ್ಮಸ್ಸು ಯಾರಿಗೆ ಇರುವುದಿಲ್ಲ ಹೇಳಿ…!!

ಸ್ನೇಹಿತರೇ,

ಯಾವುದೇ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳಿಗೆ ಸಾಹಿತಿಗಳನ್ನು, ನಗೆ ಭಾಷಣಕಾರರನ್ನು, ವಿದ್ವಾಂಸರನ್ನು, ಜ್ಞಾನವಂತರನ್ನು ಮುಖ್ಯ ಅತಿಥಿಗಳಾಗಿ ಕರೆಯಿಸಿ, ಅವರಿಂದ ಉತ್ತಮವಾದ ಮಾತುಗಳನ್ನು ಕೇಳುಗರಿಗೆ ತಲುಪಿಸುವ ವ್ಯವಸ್ಥೆ ಮಾಡುವ ಸಂಘಟಕರು ಅವರನ್ನು ಗೌರವಯುತವಾಗಿ ಕಾಣಬೇಕು. ಅವರ ಸಿದ್ಧತೆಯ ಶ್ರಮಕ್ಕೆ ತಕ್ಕ ಗೌರವ, ಸನ್ಮಾನ ನೀಡಬೇಕು. ಕನಿಷ್ಟ ಗೌರವ ಧನವನ್ನು ನೀಡಲು ಪ್ರಯತ್ನ ಪಡಬೇಕು.

ಇಲ್ಲವಾದರೆ,
ಅಲ್ಲಿಯ ಪರಿಸ್ಥಿತಿಯನ್ನು ಸಂಘಟಕರು ತಿಳಿಸಿ, ಅತಿಥಿಗಳ ಮನವೊಲಿಸಬೇಕು.

ಯಾವುದೇ ಒಂದು ಕಾರ್ಯ ಮಾಡಬೇಕಾದರೂ ಅದಕ್ಕೆ ಕಾರಣವಾದವರನ್ನು ಮರೆಯಬಾರದು. ನಮ್ಮ ಜ್ಞಾನದ ಹರವನ್ನು ಹೆಚ್ಚಿಸುವ ವಿದ್ವಾಂಸ, ಕಲಾವಿದರ, ಭಾಷಣಕಾರರ ಶ್ರಮಕ್ಕೆ ನಾವೆಲ್ಲರೂ ಗೌರವ ನೀಡೋಣ. ಅವರ ಒಲವಿನ ಮಾತುಗಳಿಗೆ ಕಿವಿಯಾಗೋಣ…


ರಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ
ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

Leave a Reply

Back To Top