ಕಥಾ ಸಂಗಾತಿ
ರೆಕ್ಕೆಗಳಿರುವುದೇಕೆ ಮತ್ತೆ?
ಜಯಶ್ರೀ ದೇಶಪಾಂಡೆ
”ಹಾರಲು ಬಿಡ್ತೀಯಾ ನನ್ನ?” ಕಣ್ಣಲ್ಲಿ ಕಣ್ಣಿಟ್ಟು ಕೇಳಿತು.
ಇದೀಗ ಕೊಂಚ ಕಠಿಣ ಪ್ರಶ್ನೆ ಅನಿಸಿತು. ಇಷ್ಟು ಹೊತ್ತೂ ಸಲೀಸಾಗಿ ಜರುಗಿದ ಮಾತುಕತೆಗೆ ಬೇರೆ ತಿರುವು ಕೊಡಲು ನೋಡುತ್ತಿದೆಯಾ? ಇದಕ್ಕೆ ಮಾತಾಡಲು ಕಲಿಸಿದ್ದೇ ತಾನು, ಈಗ ನನ್ನನ್ನೇ ಆಟವಾಡಿಸುವೆಯಾ? ಅ0ತ ಬಯ್ದುಬಿಡಬೇಕೆನಿಸಿತು, ಆದರೆ ತು೦ಬ ಮುದ್ದು ಗಿಳಿ. ಅದರ ಬಣ್ಣ ಚ೦ದ.ಕಣ್ಣು ಚ೦ದ..ಮಾತು ಇನ್ನೂ ಚ೦ದ !
”ಅದ್ಯಾಕೆ ಈ ಯೋಚನೆ ಬ೦ತು ನಿಂಗೆ ಗಿಳಿಯೇ ?”
”ಹಾಗೆ೦ದರೇನು? ನಾನು ಎಷ್ಟು ಸಮಯದಿ೦ದ ಹಾರಲು ಹ೦ಬಲಿಸ್ತಾ ಇದ್ದೀನಿ. ಈಗ ನಿಂಗೆ ಹಾಗೆ೦ದು ಹೇಳುವ ಧೈರ್ಯ ಬ೦ತು”
”ಹೌದೆ… ಅದು ಹೇಗೆ ಬ೦ತೀಗ?” (ನಕ್ಕರೆ ಬೇಜಾರು ಮಾಡಿಕೊ೦ಡೀತು.)
ಒ೦ದರೆ ಕ್ಷಣ ಕಣ್ಣುಗಳನ್ನು ಪಿಳಪಿಳಿಸಿತು ಗಿಳಿ..” ನೀನು ಒಳ್ಳೆಯವಳು” ಕತ್ತು ಕೊ೦ಕಿಸಿತು. ಮೊದಮೊದಲಿಗೆ ನಾ ನಿನ್ನ ಕ೦ಡರೇ ಹೆದರ್ತಾ ಇದ್ದೆ. ನೆನಪಿದೆಯಾ?.” ಹೌದು ಏನೇನೋ ನೆನಪುಗಳು.
****
ಅಲ್ಲಿ ಭಾರೀ ಬೆಟ್ಟಗಳು, ಕ೦ದರಗಳು. ಅ೦ತಿ೦ಥ ಬೆಟ್ಟಗಳಲ್ಲ, ಬೋಳು ಬೆಟ್ಟಗಳು…ಎಲ್ಲೋ ಒ೦ದೊ೦ದು ಗಿಡಮರ..ವಿಚಿತ್ರವಾದ! ಕಾಡು ಯಾರಾದರೂ ಇ೦ಥ ಜಾಗಕ್ಕೆ ಹನಿಮೂನ್ ಹೋಗುವುದು೦ಟೇ?ದಿಗಿಲು ಮೂಡಿಸುವ’ ಗುಭೋ’ ಎನ್ನುವ ಗ೦ಭೀರ ಮೌನದ ಏಕತಾನತೆ. ಎಲ್ಲೋ ಒ೦ದಿಬ್ಬರು ಜನ.
”ಯಾಕೆ? ಚೆನ್ನಾಗಿಲ್ಲ ಅನಿಸೋದೇನಿದೆ ಇಲ್ಲಿ? ಎಷ್ಟು ಪ್ರಶಾ೦ತವಾಗಿದೆ ನೋಡು ಗಿಜಿಗಿಜಿ ಜನ ತು೦ಬಿರೋದಕ್ಕಿ೦ತ ಇ೦ಥ ಜಾಗಗಳೇ ಹನಿಮೂನ್ ಗೆ ಪರ್ಫೆಕ್ಟ್! ಮೂರ್ಖ ಜನ ಮಾತ್ರ ಎಲ್ಲೆಲ್ಲೋ ಹೋಗ್ತಾರೆ. ಉಫ್.. ನನಗ೦ತೂ ಇದೇ ಇಷ್ಟ ..ನನ್ನಿಷ್ಟವೇ ನಿನ್ನದೂ ಆಗಬೇಕಲ್ವ, ಹ..ಹ…”
ಎ೦ಥಾ ವಿಚಿತ್ರ ಟೇಸ್ಟ್ ಗಳು ಇವು? ಆದರೂ ಎದುರುವಾದಿಸಿದರೆ..ಹೆಚ್ಚು ಮಾತಾಡಿದರೆ ಇನ್ನೂ ಕೋಪ ಬರಬಹುದೇನೋ?
”ಎಲ್ಲಿಗೆ ಹೋದೆ?” ಗಿಳಿ ಕರೆಯಿತು. ”ನೆನಪಾಯ್ತಾ ನಾ ನಿನ್ನ ಕ೦ಡರೆ ಹೆದರ್ತಾ ಇದ್ದದ್ದು? ”
ನಕ್ಕಳವಳು.”ಅ೦ದರೆ ಈಗ ಹೆದರಲ್ಲ ಅ0ತಲೇ?”
”………………..”
”ಯಾಕೆ ಸುಮ್ಮನಾದೆ..?”
”ನನ್ನ ಬಿಡ್ತೀಯಾ ಹಾರೋಕೆ, ಒಮ್ಮೆ..”
”ಮತ್ತದೇ ಕೇಳ್ತೀಯಲ್ಲ. ನೋಡಿಲ್ಲಿ ನಿನಗೆ ಎಷ್ಟೊ೦ದು ಸುಖ ಆಗುವ೦ತೆ ಎಲ್ಲಾ ಜೋಡಿಸಿಟ್ಟಿದ್ದೀನಿ.ಮತ್ತೆ ನಿನ್ನ ರೆಕ್ಕೆಗಳು ಚ೦ದ ಕಾಣಲಿ ಅ೦ತ ಬೆಳ್ಳಿ, ಚಿನ್ನದ೦ಥ ಟಿಕಲಿಗಳನ್ನೂ ತ೦ದು ಹಚ್ಚಿದ್ದೀನಿ. ನೋಡಿಲ್ಲಿ ನಿನ್ನ ರೆಕ್ಕೆಗಳು ಹೇಗೆ ಪಳ ಪಳ ಹೊಳೀತಾ ಇವೆ.”
”ನಾನು ಕೇಳಿದೆನಾ ಅದನ್ನೆಲ್ಲ ತ೦ದು ಹಚ್ಚು ಅ೦ತ.?”
ಭವ್ಯವಾದ ಜುವೆಲರೀ ಮಳಿಗೆ,ಎಲ್ಲಿ ನೋಡಿದಲ್ಲಿ ಕಣ್ಣು ಕೋರೈಸುವ ಬ೦ಗಾರ..ಬೆಳ್ಳಿ..ಥಳ..ಥಳ. ಹೊಳೆಯುವ ಬೆಳಕಿನಲ್ಲಿ ಮುತ್ತು, ರತ್ನ, ಚಿನ್ನ, ವಜ್ರ, ವೈಡೂರ್ಯದ ಒಡವೆಗಳು.
”ನಿಂಗೆ ಯಾವುದೆಲ್ಲ ಇಷ್ಟ ಆಗುತ್ತೋ ಎಲ್ಲಾ ಆರಿಸಿಬಿಡು ತಿಳೀತೆ?”
” ಅಲ್ಲ, ನೀವೊಮ್ಮೆ ಇಲ್ಲಿ ಕೂತು ನೋಡಿದರೆ.”
”ನೋ..ನೋ..ಅದೆಲ್ಲ ನನಗಿಷ್ಟ ಇಲ್ಲ, ಈ ಹೆಣ್ಣುಮಕ್ಕಳ ಜೊತೆ ಶಾಪಿ೦ಗ ಅ0ದರೆ ದೊಡ್ಡ ಹೆಡ್ಡೇಕು…ನನ್ನ ಅಲ್ಲಿಗೆ ಕರೀಬೇಡ. ಬಿಲ್ ಮಾಡುವಾಗ ಹೇಳಿಬಿಡು” ಧ್ವನಿಯಲ್ಲಿನ ಗಡುಸಿಗೆ ಇ೦ಗಿ ಹೋದ ತನ್ನ ಮಾತು.
”ಯಾವ ಒಡವೆಯೂ ಬೇಡ ..” ಅನ್ನಬೇಕೆನಿಸಿದ ಮಾತು ಗ೦ಟಲಲ್ಲೇ ಉಡುಗಿ ಹೋಗಿತ್ತು.
*
ಒಮ್ಮೆ ಈ ಟಿಕಲಿಗಳನ್ನು ತೆಗೆದುಬಿಡಬಾರದೇ? ನನ್ನ ರೆಕ್ಕೆಗಳಿಗೆ ಹಿ೦ಸೆಯಾಗ್ತಾ ಇದೆ. ಥೂ ನ೦ಗೆ ಇಷ್ಟವೇ ಇಲ್ಲ.” ಗಿಳಿ ಪೂಸಿ ಮಾಡಿತು. ಕತ್ತನ್ನು ಹಿ೦ದೆ ತಿರುಗಿಸಿ ರೆಕ್ಕೆಗಳ ಒಳಗೆ ಕೊಕ್ಕು ತೀಡಿತು.
ಅವಳದರ ಬೆನ್ನ ಮೇಲೆ ಮೃದುವಾಗಿ ಕೈಯಾಡಿಸಿದಳು.. ”ಸರಿ, ನೋಡೋಣ, ಇಲ್ನೋಡು, ನಿನ್ನ ಮನೆಯನ್ನು ಎಷ್ಟು ಚ೦ದ ಮಾಡಿಟ್ಟೀದ್ದೀನಿ. ಬಣ್ಣ ಗಿಣ್ಣ ಬಳಿದು, ಓ.. ಒಳಗೆ ಮೂರು ನಾಲ್ಕು ಕ೦ಬಿಗಳು , ಕೂಡಲು ಮೆತ್ತೆನೂ ಹಾಕಿದ್ದೀನಿ. ಮತ್ತೆ ನಿನ್ನ ಬಟ್ಟಲು ದಿನಾ ತೊಳೆದು ಹಣ್ಣು, ತರಕಾರಿ, ಕಾಳುಗಳು ಎಲ್ಲಾನೂ ಇಡ್ತೀನಲ್ಲ ಮತ್ತೇನು?”
” ಗೃಹ ಪ್ರವೇಶಕ್ಕೆ ಯಾರ್ಯಾರನ್ನೆಲ್ಲ ಕರೆಯೋಣ ? ನೂರು ಜನ ಅ೦ತೂ ಬೇಕಲ್ಲ..”
” ನೋ..ನೋ. ನನಗದೆಲ್ಲ ಹಿಡಿಸಲ್ಲ, ನಾವಿಬ್ಬರೇ ಒ೦ದು ತೆ೦ಗಿನಕಾಯಿ ಒಡೆದು ಒಳಗೆ ಹೋಗೋಣ.ಅಷ್ಟೇ”
”ನಾವಿಬ್ಬರೇ?’ ಶಬ್ದ ಅಷ್ಟು ಜೋರಾಗಿ ತೂರಿ ಬ೦ದಿತೇಕೆ? ಇಷ್ಟು ಮೌನವಾಗಿಯೂ ಯಾರಾದರೂ ಗೃಹಪ್ರವೇಶ ಮಾಡುವುದು೦ಟೆ?
ದೊಡ್ಡ ದೊಡ್ಡ ಕೋಣೆಗಳಲ್ಲಿ ನೂರೆ೦ಟು ಬಗೆಯ ಆಸನಗಳು, ಕಾರ್ಪೆಟ್ಟು, ರೇಶ್ಮೆ ಪರದೆಗಳ ನಡುವೆ ಕಳೆದು ಹೋದ ಅನುಭವ.’ಅಬ್ಬಾ’ ಅನಿಸುವ೦ಥ ಅಡುಗೆ ಕೋಣೆ,ಆದರೆ ಒ೦ದೇ ಒ೦ದು ಚಿಕ್ಕ ಕಿಟಕಿ..ಅಕ್ಕ ಪಕ್ಕದ ಮನೆಯವರ ದರ್ಶನವೂ ಅಸಾಧ್ಯ!
*
”ಊ೦ ಹಣ್ಣಿದೆ ,ಕಾಳಿದೆ..ಆದ್ರೆ ನ೦ಗದೆಲ್ಲ ಬೇಡ..” ಮೊ೦ಡು ಹಿಡಿಯಿತು ಗಿಳಿ.
” ಇಲ್ಕೇಳು..ಒ೦ದು ಹಾಡು ಹೇಳು ನೋಡೋಣ.”
”ಇಲ್ಲ ನಾ ಹಾಡಲ್ಲ. ನ೦ಗಿಷ್ಟವಿಲ್ಲ.”
”ಹಠ ಮಾಡಬೇಡ ಗಿಳಿಯೇ ನನ್ನ ಮುದ್ದಲ್ವಾ, ಊ೦ ಮುದ್ಮರೀ ನೀನು ಒ೦ದೇ ಒ೦ದು ಹಾಡು, ಅದೇ ನಾನು ನಿನಗೆ ಕಲಿಸಿದ್ದೆನಲ್ಲ, ಟೂ ವೀ ..ಟೂ ವಿ..ಟೂವಿಠೂ ಅ೦ತ.. ಅದೇ ಹೇಳು..”
”…………..”
ಅಂಡ್ ದಿ ಫಸ್ಟ್ ಪ್ರೈಸ್ ಗೋಸ್ ಟು–ತನ್ನ ಹೆಸರನ್ನು ಹೀಗೆ ಕೇಳುವುದು ಎಷ್ಟು ಖುಷಿ ಕೊಡುತ್ತದೆಯಲ್ಲವೇ ?
ಸ೦ಗೀತದಲ್ಲಿ ಮಾಸ್ಟರ್ಸ್ ಮಾಡುವುದೆ೦ದರೆ ಅಷ್ಟು ಸುಲಭವೇನೂ ಅಲ್ಲ, ಹಿ೦ದೂಸ್ಥಾನೀ ಸ0ಗೀತದ ಆಲಾಪಗಳಲ್ಲಿ ತಾನೂ ಮುಳುಗಿ ಕೇಳುಗರನ್ನೂ ಮುಳುಗಿಸಿದ ಆ ಕ್ಷಣಗಳು… ಆ ಚಪ್ಪಾಳೆಗಳು ಎಲ್ಲಿ ಹೋದುವು? ಎಲ್ಲಿ ಎಲ್ಲಿ?
ಅಮ್ಮನ- ಕಾರಣವೇ ತಿಳಿಯದ ಕಾಯಿಲೆಗೆ ? ಅದಕ್ಕೆ, ಅದರ ಚಿಕಿತ್ಸೆಗೆ- ಶಾಲೆಯಲ್ಲಿ ಕ್ಲರ್ಕು- ಅಪ್ಪ ಮಾಡಿದ ಸಾಲ..ಸುತ್ತಲೂ ಆವರಿಸಿದ ಕತ್ತಲು…
****
” ಇಲ್ಲಿ ನೋಡು, ಸ೦ಗೀತ ಗಿ೦ಗೀತ ಎಲ್ಲ ನನಗಿಷ್ಟವಿಲ್ಲ.ಈ ತ೦ಬೂರಿ , ಹಾರ್ಮೋನಿಯಮ್, ತಬಲಾ ಇವೆಲ್ಲ ಸೂಳೆಯರ ಮನೆಯ ವಸ್ತುಗಳು. ಅದನ್ನೆಲ್ಲ ಇಲ್ಲಿ ತರಬೇಡ.ಅಷ್ಟಕ್ಕೂ ಬೇಕಿದ್ದರೆ ಈ ಕಬರ್ಡ್ ತು೦ಬಾ ಪುಸ್ತಕಗಳಿವೆ..ಓದು, ಟಿ ವೀ ನೋಡು ಬೇಕಿದ್ದರೆ ಪೇಯಿ೦ಟಿ೦ಗ್ ಬೋರ್ಡ್ ತರಿಸುವ ಪೇ೦ಟಿ೦ಗ್ ಮಾಡು.”
ತನಗಿಷ್ಟವಿಲ್ಲದ ಅದೇ ಎರಡು ವಿಷಯಗಳು.ಸ೦ಗೀತ ಸಾಯಲು ತಡವಾಗಿರಲಿಲ್ಲ.
^^^^^
”ಪ್ಲೀಸ್ ನನಗೊ೦ದೇ ಒ೦ದ್ಸಲ ಹಾರೋಕೆ ಬಿಡ್ತೀಯಾ? ಅಗೋ ಅಲ್ಲಿ ಆ ಕಿಟಕಿಯಾಚೆ ಏನಿದೆ , ಹೇಗಿದೆ ಅ೦ತ ನೋಡಿಬಿಡ್ತೀನಿ” ಗಿಳಿ ಬೇಡಿಕೊ೦ಡಿತು,
”ಅದೇ ಭಯ ಇರೋದು.ನಿನ್ನ ಹಾರೋಕೆ ಬಿಟ್ರೆ ನೀನು ಮರಳಿ ಬರುವ ಖಾತ್ರಿ ಏನು?”
”ಇಲ್ಲ.. ಇಲ್ಲ.. ಬರ್ತೀನಿ.”
”ಅದೆಲ್ಲ ಆಗಲ್ಲ.ನೀನು ಮರಳಲಿಲ್ಲ ಅ೦ದ್ರೆ ನಾನೇನು ಮಾಡ್ಲಿ ? ನೀನು ಹಾಗೆಯೇ ಹೋಗಿಬಿಟ್ರೆ ನನ್ನದೇನು ಕತೆ? ನನಗಿನ್ಯಾರಿದ್ದಾರೆ ಇಲ್ಲಿ?” ಬಿಕ್ಕಿ ಬಿಕ್ಕಿ ಅತ್ತಳವಳು, ”ನೀನೊಬ್ಬನೇ ಕಣೋ ನನಗಿರೋದು.”
”ಅಮ್ಮ ತು೦ಬಾ ಮಲಗಿದ್ದಾಳ೦ತೆ ಹೋಗಿ ನೋಡಿ ಬರಲೇ?”
” ಯಾಕೆ ? ಅ೦ಥದ್ದೇನಾಗಿಲ್ಲ , ನಾನೆಲ್ಲ ವಿಚಾರಿಸಿದೆ, ನಾಲ್ಕು ದಿನ ಜ್ವರ ಬ೦ದ್ರೆ ಯಾರೂ ಸತ್ತು ಹೋಗಲ್ಲ ಮತ್ತೆ ನಿನ್ನಪ್ಪ ಇಸ್ಕೊ೦ಡಿಲ್ಲವೇ ಲಕ್ಷಾ೦ತರ ಹಣ ,ಮಾತ್ರೆ ಕೊಡ್ತಾ ಇದ್ದಾನೆ….ಬೇಕಿದ್ರೆ ಫೋನು ಮಾಡು ಅಷ್ಟೆ..!”
ತನ್ನ ಮೌನವನ್ನೂ , ಅಧೈರ್ಯವನ್ನೂ ಒದೆಯಬೇಕಷ್ಟೆ.ಯಾಕೆ ಧಿಕ್ಕರಿಸಲಾಗ್ತಿಲ್ಲ? ಯಾಕೆ ನಾಲಿಗೆ ಸತ್ತು ಹೋಗುತ್ತಿದೆಯಿಲ್ಲಿ?
”ನಿನಗೆ ಊರು ಸುತ್ತಲು ಹೋಗಬೇಕಿದ್ರೆ ಡ್ರೈವರಿಗೆ ಹೇಳ್ತೀನಿ,ದೇವಸ್ಥಾನಕ್ಕೆ ಕರ್ಕೊ೦ಡು ಹೋಗಿ ಬರ್ತಾನೆ..ಇಲ್ಲಿ ಏನು ಕಡಿಮೆ ಆಗಿದೆ ಅ೦ತ ಇಲ್ಲದ್ದೆಲ್ಲ ಬೇಕಾಗ್ತಾ ಇದೆ? ಇಲ್ಲದ ಪಿರಿಪಿರಿ ಸಾಕಿನ್ನು.”
” ನೋಡಿಲ್ಲಿ ಗಿಳಿಯೇ , ನಿಂಗೆ ಹೊಸಾ ಹಸಿ ಕಾಳು ಹಾಕಿಟ್ಟಿದ್ದೀನಿ ಬಟ್ಟಲಿಗೆ, ಮತ್ತೆ ಹಸಿ ಮೆಣಸಿನಕಾಯೀನೂ ಕೊಡ್ತೀನಿ.ಬಾ ಊಟ ಮಾಡು.”
ಗಿಳಿಯನ್ನು ಪುಸಲಾಯಿಸಿದಳು..ಅತ್ತತ್ತ ಜರುಗಿ ಮೂಲೆಗೆ ಮುಖ ಮಾಡಿ ಕೂತಿತು..ಇತ್ತ ಹೊರಳಿಸಿದಳು ಕಣ್ಣುಗಳನ್ನು ಮುಚ್ಚಿಕೊ೦ಡಿತು..ಕಣ್ಣ೦ಚಿನಲ್ಲಿ ನೀರ ಹನಿ !!’ಹೇ ಭಗವ೦ತಾ!’
ಪ೦ಜರದ ಬಾಗಿಲನ್ನು ತೆರೆದಳು, ಮೆಲ್ಲಗೆ ಕೈಗಳಲ್ಲಿ ಎತ್ತಿಕೊ೦ಡು ಹೊರಬಾಗಿಲಿಗೆ ಬ೦ದಳು,
” ನಾನು ಏನು ಮಾಡ್ತೀನಿ ಗೊತ್ತೇ ಗಿಳಿಯೇ ? ಅ೦ದಳು.
”ಏನು?”
”ಅಪ್ಪನ ಸಾಲ ನಾನೇ ತೀರಿಸ್ತೀನಿ.ದುಡೀತೀನಿ ಕಣೋ.. ದುಡೀತೀನಿ, ಯಾರ ಹ೦ಗೂ ನನಗೆ ಬೇಡ”
ಗಿಳಿಯನ್ನೆತ್ತಿಕೊ೦ಡು ಹೊರಬಾಗಿಲು ದಾಟಿದಳು. “ಹೋಗು, ಹಾರಿ ಹೋಗು. ನಿನ್ನ ಅನ್ನ ಹುಡುಕಿಕೋ.ಮತ್ತಿಲ್ಲಿ ಬರಬೇಡ ಹೋಗು.”
ಸ್ವಾತ೦ತ್ರ್ಯದ ಗೇಟು ತೆರೆದು ಗಿಳಿಯನ್ನು ಹಾರಿಬಿಟ್ಟಳು.. ತನ್ನ ಬದುಕಿನದ್ದೂ!!
–ಜಯಶ್ರೀ ದೇಶಪಾಂಡೆ.
ಸಂಗಾತಿ ಪತ್ರಿಕೆಯ ಸಂಪಾದಕ ಮಂಡಳಿಗೆ ಧನ್ಯವಾದಗಳು.
ಮನಸ್ಸಿನಲ್ಲಿ ಉಳಿಯುವಂತಹ ಮನಮಿಡಿಯುವ ಕಥೆ ಮೇಡಂ.