ಯೋಗೇಂದ್ರಾಚಾರ್ ಎ ಎನ್ ಕವಿತೆ-ಗೋರಿಯೊಳಗಿಂದ ಗುಡಿಗೆ

ಕಾವ್ಯ ಸಂಗಾತಿ

ಯೋಗೇಂದ್ರಾಚಾರ್ ಎ ಎನ್

ಗೋರಿಯೊಳಗಿಂದ ಗುಡಿಗೆ

ನೀನಿರದ ಬೆಳದಿಂಗಳು ಕೆಂಡದುಂಡೆಗಳನ್ನು ಉಗುಳುತ್ತಿವೆ
ನನ್ನೆದೆಯ ನಿನ್ನ ಕುರುಹುಗಳು ಬಿಟ್ಟೇರುಗಳನ್ನು ಬೀಸುತ್ತಿವೆ

ಈ ವಕ್ಷಕ್ಕೆ ನೀನಿಟ್ಟ ಇಕ್ಷು ರಸದ ಖುಷಿಯ ಮತ್ತಲ್ಲಿ ತೇಲಿದ್ದೆ
ನೀನೆಸೆದ ಸಿಬುರುಗಳು ವಿರಹಮೊನೆಗಳನ್ನು ಚುಚ್ಚುತ್ತಿವೆ

ನಯನದಂಚಿಗೆ ಬಂದು ನಿಂತ ಕಥೆಗೆ ಹಾಸುಗಲ್ಲು ಕರಗಿದೆ
ಪರದೆ ಎಳೆದ ಕೈಗಳು ಘಟನೆಗಳನ್ನು ವ್ಯತಿರಿಕ್ತಗೊಳಿಸುತ್ತಿವೆ

ನಿನ್ನಂಗಳದಲ್ಲರಳಿದ ಪುಷ್ಪಗಳನ್ನೂ ನೋಡಲೊಲ್ಲೆಯಾ
ಸಾಗರವಾದ ನುಡಿಗಳು ನಾಡಿಗಳನ್ನು ತಲ್ಲಣಗೊಳಿಸುತ್ತಿವೆ

ಮೌನಯೋಗಿಯುಸಿರುಸಿರಲ್ಲಿ ನಿನ್ನ ಜಪವೇ ತಪವಾಗಿಹುದು
ಮೌನವಾದ ಮಾತುಗಳು ಬರಹಗಳನ್ನು ಸ್ಮಶಾನಗೊಳಿಸುತ್ತಿವೆ


Leave a Reply

Back To Top