ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ ಅವರ ಲೇಖನಿಯಿಂದ
ನಾನಿಯವರ ಗಜಲ್ ಗಳಲ್ಲಿ ಹೆಪ್ಪುಗಟ್ಟಿದ ನೋವು
ಹಾಯ್….
ಎಲ್ಲರೂ ಹೇಗಿದ್ದೀರಿ, ‘ಗುರುವಾರ’ ಬಂದರೂ ಈ ಗಜಲ್ ಪಾಗಲ್ ಇನ್ನೂ ಬರಲಿಲ್ವಲ್ಲಂತ ಕಾಯ್ತಾ ಇದ್ದೀರಾ… ಈಗೊ, ತಮ್ಮ ಮುಂದೆ ನಾನು ಹಾಜರ್, ಗಜಲ್ ಗೋ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ. ನಾನು ಯಾವತ್ತಾದರೂ ನಿಮಗೆ ನಿರಾಸೆಗೊಳಿಸಿದ್ದುಂಟಾ… ಖಂಡಿತ ಇಲ್ಲ. ನೀವು ಸುಖನವರ್ ಅವರ ಪರಿಚಯದೊಂದಿಗೆ ಚಲಿಸುತ್ತಿರುವುದನ್ನು ನೋಡೋದೇ ಒಂದು ಸಡಗರ. ಮತ್ತೇಕೆ ತಡ… ಏಕ್ ಷೇರ್ ಅರ್ಜ್ ಹೈ…!!
“ನಿನ್ನ ಕ್ಷಮೆಯ ಭರವಸೆಯ ಮೇಲೆ ತಪ್ಪುಗಳನ್ನು ಮಾಡಿದ್ದೇನೆ
ನಿನ್ನ ಕರುಣೆಯ ಸಹಾಯದಿಂದ ಅಪರಾಧಗಳನ್ನು ಮಾಡಿದ್ದೇನೆ”
-ಮುಬಾರಕ್ ಅಜೀಮಾಬಾದಿ
ಪ್ರಕೃತಿಯನ್ನೊಮ್ಮೆ ಅವಲೋಕನ ಮಾಡಿದಾಗ ಅಸಂಖ್ಯಾತ ಅದ್ಭುತಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಅಂಥಹ ಅದ್ಭುತಗಳಲ್ಲಿ ಮನುಷ್ಯನ ವಿಕಾಸ ಪ್ರಕ್ರಿಯೆ ನಮ್ಮನ್ನು ದಿಗ್ಭ್ರಮೆಗೆ ನೂಕುತ್ತದೆ. ಕಾರಣ, ಮನುಕುಲದ ತೊಟ್ಟಿಲನ್ನು ತೂಗುತ್ತಿರುವ ಬೌದ್ಧಿಕತೆ! ಮನುಷ್ಯ ತನ್ನ ವಿಚಾರಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಳ್ಳಬಲ್ಲ; ಜೊತೆಗೆ ಅದನ್ನು ಅಭಿವ್ಯಕ್ತಿಗೊಳಿಸಲೂ ಬಲ್ಲ. ಪ್ರತಿಭೆಯ ಧಣಿಯಾದ ಮನುಜ ಭೂಮಂಡಲವನ್ನು ತನ್ನ ಅಪರಿಮಿತವಾದ ಸಂಶೋಧನೆಗಳಿಂದ ಮ್ಯೂಸಿಯಂ ನಂತೆ ಅನಾವರಣಗೊಳಿಸಿದ್ದಾನೆ. ಅಂಥಹ ಅಸಂಖ್ಯಾತ ಸೃಜನಶೀಲತೆಯಲ್ಲಿ ಮನುಷ್ಯ ಪ್ರತಿಭೆ ಸೃಷ್ಟಿಸಿದ ಸೌಂದರ್ಯ ನಿರ್ಮಿತಿಯೇ ಕಲೆ. ಇದರಲ್ಲಿ 'ಸಾಹಿತ್ಯ' ಎನ್ನುವುದು ಭಾಷೆಯ ಮೂಲಕ ಅರಳುವ ಅನುಪಮ ಕಲೆ. ಸಾಹಿತ್ಯ ಎಂದರೆ ಸ+ಹಿತವಾದುದು. ಉತ್ತಮ ಸಾಹಿತ್ಯ ಜೀವನದ ಸಮಗ್ರ ದರ್ಶನವನ್ನು ಮಾಡಿಸಬಲ್ಲದು. ಅದರಲ್ಲಿ ಸಮಕಾಲೀನ ಹಾಗೂ ಸಾರ್ವಕಾಲಿಕ ಅಂಶಗಳು ನೆಲೆ ಪಡೆದಿರುತ್ತವೆ. ಇಂಥಹ ಸಾಹಿತ್ಯ ಜನರಲ್ಲಿ ಜೀವನೋತ್ಸಾಹವನ್ನು ತುಂಬಬಲ್ಲದು, ವಿವೇಕವನ್ನು ಮೂಡಿಸಬಲ್ಲದು. ಸಾಹಿತ್ಯ ಜೀವನವನ್ನು ತಿದ್ದಬೇಕು, ಬರೇ ವಿಲಾಸಕ್ಕಾಗಿ ಅಲ್ಲ, ವಿನೋದಕ್ಕಾಗಿ ಅಲ್ಲ, ವಿಹಾರಕ್ಕಾಗಿ ಅಲ್ಲ. ಬಾಳನ್ನು ಕಾಯುವ ಸತ್ಯ ಅಲ್ಲಿ ಪಡಿಮೂಡಿರಬೇಕು. ಒಳ್ಳೆಯದಾದ ಸಾಹಿತ್ಯ ಎಲ್ಲರಿಗಾಗಿ ಇರುತ್ತದೆ, ಎಲ್ಲ ಕಾಲಕ್ಕೂ ಸಲ್ಲುತ್ತದೆ. ಅದಕ್ಕೆ ಕಾಲ, ದೇಶದ ಬಂಧನವಿಲ್ಲ. ಇದಕ್ಕೊಂದು ಸಕಾಲಿಕ ಉದಾಹರಣೆ ಎಂದರೆ 'ಗಜಲ್'. ಅರಬ್, ಪರ್ಷಿಯನ್, ಉರ್ದು...ಮಾರ್ಗವಾಗಿ ಇಡೀ ಜಾಗತಿಕ ಸಾರಸ್ವತ ಲೋಕವನ್ನು ತನ್ನ ಸೆಳೆತಕ್ಕೆ ಸಿಲುಕಿಸಿದೆ. ಇದರಿಂದ ನಮ್ಮ ಕನ್ನಡ ವಾಙ್ಮಯ ಲೋಕ ಪಾರಾಗಲು ಹೇಗೆ ತಾನೇ ಸಾಧ್ಯ ಹೇಳಿ...? ಇಂದು ಎಣಿಕೆಗೆ ಸಿಗದಂತೆ ಅನೇಕ ಬರಹಗಾರರು ಗಜಲ್ ಮುಸ್ಕಾನ್ ನ ಸೌಂದರ್ಯವನ್ನು ತಮ್ಮ ಕಲಮ್ ನಲ್ಲಿ ಹಿಡಿದಿಟ್ಟಿದ್ದಾರೆ, ಹಿಡಿದಿಡಲು ಪ್ರಯತ್ನಿಸುತಿದ್ದಾರೆ. ಅವರುಗಳಲ್ಲಿ ಶ್ರೀ ನಾರಾಯಣಸ್ವಾಮಿ.ವಿ ಬಂಡಹಟ್ಟಿ ಅವರೂ ಒಬ್ಬರು.
'ನಾನಿ'ಯೆಂಬ ಕಾವ್ಯನಾಮದಿಂದ ಕವಿತೆ, ಗಝಲ್ ಬರೆಯುತ್ತಾ ಕನ್ನಡ ಸಾಹಿತ್ಯಲೋಕದಲ್ಲಿ ಗಮನ ಸೆಳೆಯುತ್ತಿರುವ ನಾರಾಯಣಸ್ವಾಮಿ.ವಿ ಬಂಡಹಟ್ಟಿಯವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಪಕ್ಕದ ಗ್ರಾಮವಾದ ಬಂಡಹಟ್ಟಿಯ ರೈತ ಕುಟುಂಬದ ಶ್ರೀ ವೆಂಕಟರಮಣಪ್ಪ ಮತ್ತು ಶ್ರೀಮತಿ ಚಿಕ್ಕ ಪಾಪಮ್ಮನವರ ಒಡಲಿನಲ್ಲಿ ೧೯೭೭ ರ ಜುಲೈ ೨೧ರಂದು ಜನಿಸಿದರು. ಬಹಳಷ್ಟು ಬಡತನದಲ್ಲಿಯೇ ಬೆಳೆದಂತಹ ನಾರಾಯಣಸ್ವಾಮಿಯವರು ಜೀವನದ ಏಳುಬೀಳುಗಳ ನಡುವೆಯೂ ಮಾಲೂರಿನ ಪ್ರಥಮದಜೆ೯ ಕಾಲೇಜಿನಲ್ಲಿ ಪದವಿಯವರೆಗೂ ವ್ಯಾಸಂಗ ಮಾಡಿ, ನಂತರ ತುಮಕೂರಿನ ವಿದ್ಯೋದಯಾ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಮುಗಿಸಿ, ಪ್ರಸ್ತುತವಾಗಿ ಬೆಂಗಳೂರಿನಲ್ಲಿ ವಕೀಲಿ ವೃತಿಯನ್ನು ಮಾಡುತ್ತಿದ್ದಾರೆ. ವೃತಿಯ ಜೊತೆ ಜೊತೆಗೆ ಕನ್ನಡ ಸಾಹಿತ್ಯದ ನಂಟನ್ನು ಹೊಂದಿರುವ ಇವರು ಉತ್ತಮ ಬರಹಗಾರರೂ ಹೌದು. ಇವರು ಕಾವ್ಯ, ವಿಮರ್ಶೆ, ಗಜಲ್.. ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. "ಮೌನದೊಳಗಣ ಭಾವ" ಎಂಬ ಕವನಸಂಕಲನ ಹಾಗೂ "ಅಂತರಂಗದ ಧ್ಯಾನ"ಎಂಬ ಗಜಲ್ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ನಾರಾಯಣಸ್ವಾಮಿಯವರ ಹಲವು ಬರಹದ ತುಣುಕುಗಳು ನಾಡಿನ ಆನ್ ಲೈನ್, ಆಫ್ ಲೈನ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶ್ರೀಯುತರು ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ, ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಅವುಗಳಲ್ಲಿ ಬೆಂಗಳೂರಿನ ಬೆಳಕು ಸಂಸ್ಥೆಯವರು ನೀಡುವ 'ಬಸವಶ್ರೀ' ಎಂಬ ರಾಜ್ಯಮಟ್ಟದ ಪ್ರಶಸ್ತಿ, ಬೀದರಿನ ಸಾಂಸ್ಕೃತಿಕ ಸಂಸ್ಥೆಯಾದ ಮಂದಾರ ವೇದಿಕೆ (ರಿ) ಯ ರಾಜ್ಯಮಟ್ಟದ 'ಕಾವ್ಯ ಚೂಡಾಮಣಿ' ಎಂಬ ಪ್ರಶಸ್ತಿ, ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ಬೆಂಗಳೂರು ಸಹಭಾಗಿತ್ವದ 'ಕನ್ನಡ ಸೇವಾ ರತ್ನ' ಪ್ರಶಸ್ತಿ, ಕುವೆಂಪು ಅನಿಕೇತನ ಸಾಂಸ್ಕೃತಿಕ ಸಂಸ್ಥೆ ಕೆ ಆರ್ ಪುರಂ ಬೆಂಗಳೂರು, ಸಿರಿಗನ್ನಡ ವೇದಿಕೆ ಕೋಲಾರ ವಚನ ಸಾಹಿತ್ಯ ಪರಿಷತ್ತು ಸಹಭಾಗಿತ್ವದ 'ರಾಜ್ಯ ಅನಿಕೇತನ ಕಾವ್ಯ ಪ್ರಶಸ್ತಿ'... ಮುಂತಾದವುಗಳನ್ನು ಹೆಸರಿಸಬಹುದು.
'ಪ್ರೀತಿ' ಎಂಬುದೊಂದು ಚಿರನೇಸರ, ಮುಳುಗುವುದಿಲ್ಲ; ಮರೆಯಾಗುವುದಿಲ್ಲ. ಇದು ಎರಡು ಮನಸುಗಳನ್ನು ಬೆಸೆಯುವ ಅಲ್ಲಾವುದ್ದೀನನ ಚಿರಾಗ್. ಇದೊಂದು ಅಕ್ಷಯಜ್ಯೋತಿ. ಅನಾದಿಕಾಲದಿಂದಲೂ ಮನುಕುಲವನ್ನು ಮುನ್ನಡೆಸುತ್ತಲೆ ಬಂದಿದೆ, ಭವಿಷ್ಯದಲ್ಲೂ ಮುನ್ನಡೆಸುತ್ತದೆ ಯಾವ ಅನುಮಾನವೂ ಬೇಡ. ಅಮೂರ್ತವಾದ ಪ್ರೀತಿಗೆ ಅಹೆಸಾಸ್ ನೀಡುವ, ಫೀಲ್ ಟಚ್ ಕೊಡುವ ಸಾಧನವೆಂದರೆ ಪ್ರೇಮಾಮೃತವಾದ ನಮ್ಮ ಗಜಲ್. ಅಂದಿನ ಗಜಲ್ ಇಂದಿಗೂ ಹೃದಯಗಳಲ್ಲಿ ಮಿಡಿಯುತಿದೆ ಎಂದರೆ ಇದಕ್ಕೆ ಇದರಲ್ಲಿ ಅಂತರ್ಗತವಾದ ಪ್ರೀತಿಯೇ ಕಾರಣ. ಜಾಗತೀಕರಣದ ಆಡಂಬರದ ಒಡ್ಡೋಲಗದಲ್ಲಿ ಧನ, ಕನಕಾದಿಗಳಿಗೇನೂ ಬರವಿಲ್ಲ. ಬರ ಏನಾದರೂ ಇದ್ದರೆ ಅದು ಶ್ವೇತಚ್ಛಾದಿತ ಪ್ರೀತಿ, ಪ್ರೇಮ, ಪ್ರಣಯ ಹಾಗೂ ವಿರಹ. 'ಗಜಲ್' ಇವೆಲ್ಲವುಗಳ ಸುಂದರವಾದ ಮಿಸ್ರಣ, ಕೆನೆಭರಿತ ಭಾವಸಮುಚ್ಛಯ. ಗಜಲ್ ಗೋ ನಾರಾಯಣಸ್ವಾಮಿಯವರ ಗಜಲ್ ಗಳಲ್ಲಿ ಬಡತನ, ಬಾಲ್ಯದ ಬವಣೆ, ಕಷ್ಟ-ನಷ್ಟ, ನೋವು, ಬೆವರು-ಬೇಗೆ, ಅಪಮಾನ, ಸಾಮಾಜಿಕ ತುಡಿತ, ಮೌಲ್ಯಗಳ ಕಣ್ಣಾಮುಚ್ಚಾಲೆ, ಕದಡುತ್ತಿರುವ ಧಾರ್ಮಿಕ ಚಿತ್ರಣ, ಮತಾಂಧತೆ, ಚಿಂತನೆಯ ಗುಚ್ಛ, ತಾಯ್ತನದ ಅನುಪಮತೆ, ಸಂಬಂಧಗಳ ತಾಕಲಾಟ, ಕನಸುಗಳ ಜೀವಂತಿಕೆ.... ಎಲ್ಲವೂ ಹೆಪ್ಪುಗಟ್ಟಿವೆ. ಇವುಗಳೊಂದಿಗೆ ಗಜಲ್ ನ ಮೂಲ ಆಶಯ ಒಲವಿನ ಅಂಬರವೂ ಮನಕ್ಕೆ ಮುದ ನೀಡುತ್ತದೆ. ಪ್ರೀತಿ, ಪ್ರೇಮ, ಪ್ರಣಯ ಹಾಗೂ ವಿರಹದ ಭಾವವನ್ನೂ ಸಹೃದಯ ಓದುಗರ ಎದೆಗೆ ಇಳಿಸಿದ್ದಾರೆ.
ಹೃದಯದ ನೋವಿಗೆ ಮಧುವೊಂದೇ ಮುಲಾಮು ಎಂದು ಹಲವರು ನಂಬಿರುವುದಕ್ಕೆ ನಮ್ಮ ಗಜಲ್ ಪರಂಪರೆ ಸಾಕ್ಷಿಯಾಗುತ್ತ ಬಂದಿದೆ. ಈ ನೆಲೆಯಲ್ಲಿ ವಫಾ, ಬೇವಫಾ ಎನ್ನುವ ಸ್ಥಾಯಿ ಭಾವ ಗಜಲ್ ಲೋಕವನ್ನು ಆಳಿವೆ, ಆಳುತ್ತಿವೆ; ಮುಂದೆಯೂ ಆಳುತ್ತವೆ. ಇಲ್ಲಿ ಸುಖನವರ್ ನಾರಾಯಣಸ್ವಾಮಿಯವರ ಗಜಲ್ ನಲ್ಲಿ ವಿರಹದ ಬೇಗೆಯನ್ನು ಕಾಣಬಹುದು.
“ಕಾಲ್ನಡುಗೆಯಲಿ ಹೊರಟೆ ಮದಿರೆಯು ಸಿಗುವ ಅಂಗಡಿಯ ಕಡೆಗೆ
ಹೃದಯದ ಗಾಯದ ನೋವಿಗೆ ಮುಲಾಮು ಖರೀದಿಸುತಿರುವೆ ಒಲವೆ”
ಇಲ್ಲಿ ‘ಕಾಲ್ನಡುಗೆ’ ಎಂಬುದು ಬಡತನಕ್ಕಿಂತಲೂ ಭಾವದ ನಿರಶನವನ್ನು ಪ್ರತಿಧ್ವನಿಸುತ್ತದೆ. ಮದಿರೆ, ಮದಿರಾಲಯದ ಪರಂಪರೆ ಗಜಲ್ ನ ಪರಂಪರೆಯಾಗಿ ಬೆರೆತು ಹೋಗಿರುವುದನ್ನು ಗಮನಿಸಬಹುದು. ಮದಿರೆ, ಮುಲಾಮು ಆಗುವ ಪರಿಯನ್ನು ಪ್ರೇಮಿಯೊಬ್ಬನ ಅಂತರಂಗದ ತೊಳಲಾಟದ ಮುಖಾಂತರ ನಾನಿಯವರು ತುಂಬಾ ಸರಳವಾಗಿ ದಾಖಲಿಸಿದ್ದಾರೆ.
'ರಾಮರಾಜ್ಯ' ಎನ್ನುವುದು ಹೆಚ್ಚಿನವರ ಅಂತರಂಗದ ತುಡಿತವಾಗಿದೆ. ಇದರೊಂದಿಗೆ 'ರಾಮರಾಜ್ಯವಾದರೂ ರಾಗಿ ಬೀಸೋದು ತಪ್ಪಲ್ಲ' ಎನ್ನುವ ಜನಪದರ ನುಡಿಯು ರಾಮರಾಜ್ಯ ಎಂಬುದು ಯಾವತ್ತೂ ಗಗನ ಕುಸುಮ ಎಂಬುದನ್ನು ಸಾರುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ಕನಸಾಗಿಯೇ ಉಳಿದಿದೆ ಎನ್ನುವುದನ್ನು ಈ ಕೆಳಗಿನ ಷೇರ್ ಪ್ರಚುರಪಡಿಸುತ್ತದೆ.
“ನೀನು ಬಯಸಿದ ರಾಮರಾಜ್ಯ ರಕ್ಕಸ ರಾಜ್ಯಾಗುತಿದೆ ಇಂದು
ರಾಮನು ಹುಟ್ಟಿದ ನೆಲದಲ್ಲಿ ರಕ್ತಪಿಪಾಸುಗಳು ಜನ್ಮವೆತ್ತಿವೆ ಬಾಪು”
ಶಾಂತಿಯನ್ನು ಬಯಸುವ ನಾವುಗಳು ಯಾವಾಗಲೂ ಅಶಾಂತಿಯ ಗೂಡಲ್ಲಿ ಉಸಿರಾಡುತ್ತಿರುವುದು ವೈಚಿತ್ರವೇ ಸರಿ. ಇಲ್ಲಿ ಶಾಯರ್ ನಾರಾಯಣಸ್ವಾಮಿಯವರು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಬೇರುಗಳು ಸಡಿಲವಾಗುತ್ತಿರುವ ಬಗೆಯನ್ನು ಕಂಡು ವಿಷಾದ ವ್ಯಕ್ತಪಡಿಸಿದ್ದಾರೆ.
ಆಧುನಿಕತೆಯ ತಕ್ಕಡಿಯಲ್ಲಿ ಅತಿಯಾಗಿ ಚಲಾವಣೆಯಲ್ಲಿರುವ ಪದವೆಂದರೆ 'ರೀಪ್ಲೇಸಮೆಂಟ್'. ಆದರೆ ಇದು ಕೇವಲ ವಸ್ತುಗಳಿಗೆ ಸೀಮಿತವಾದದ್ದು ಎಂಬುದನ್ನು ಮರೆಯುವಂತಿಲ್ಲ, ಮರೆಯಬಾರದು. 'ಗಜಲ್' ಎನ್ನುವುದು ಭಾವನೆಗಳ ತವರೂರು. ಈ ತವರೂರಿಗೆ ಯಾವುದೇ 'ರಿಪ್ಲೇಸಮೆಂಟ್' ಇಲ್ಲ. ಗಜಲ್ ಗೆ ಗಜಲ್ಲೆ ಸಾಟಿ, ಬೇರೆ ಯಾವುದೂ ಅಲ್ಲ. ಈ ನೆಲೆಯಲ್ಲಿ ಗಜಲ್ ಗೋ ಶ್ರೀ ನಾರಾಯಣಸ್ವಾಮಿ ಅವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಕೃಷಿ ಆಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.
“ನಿನ್ನಿಂದ ಅಗಲಿದ ಆ ಕರಾಳ ಸಂಜೆ ನನಗೆ ಇನ್ನೂ ನೆನಪಿದೆ
ನೀನು ಮೌನವಾಗಿ ನಿಂತಿದ್ದಿ ಆದರೆ ಕಾಡಿಗೆ ಮಾತನಾಡುತ್ತಿತ್ತು”
-ನಾಸೀರ್ ಕಾಜ್ಮಿ
ಕಾಲವನ್ನು ಶಪಿಸುವುದು ಬಿಟ್ಟು ನಮಗೆ ಇನ್ನಾವ ಆಯ್ಕೆ ಇದೆ ಹೇಳಿ, ಸಮಯದ ಮುಂದೆ ತೆರೆ ಎಳೆದು ನಿರ್ಗಮಿಸಲೆಬೇಕು ಅಲ್ಲವೇ!! ಸರಿ, ಇರಲಿ ಪರವಾಗಿಲ್ಲ; ಬೇಸರ ಬೇಡ. ಮತ್ತೆ ಮುಂದಿನವಾರ, ಇದೇ ಗುರುವಾರದಂದು ತಮ್ಮ ಮುಂದೆ ಬರುವೆ, ಅಲ್ಲಿಯವರೆಗೆ ಬಾಯ್, ಟೇಕ್ ಕೇರ್...!!
ನಮಸ್ಕಾರಗಳು..
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ