ಲಹರಿ ಸಂಗಾತಿ
ನಿಂಗಮ್ಮ ಭಾವಿಕಟ್ಟಿ
ಬೊಗಸೆ ಮಣ್ಣು
ಮತ್ತು ಚಂದನೆ ಕನ್ನಡ.
ಮಕ್ಕಳು ಬೆಂಗಳೂರಲ್ಲಿ ನೌಕರಿ ಮಾಡ್ತಾರೆ. ಓದುವಾಗೆಲ್ಲ ಅನಿವಾರ್ಯವಾಗಿ ಹೊರಗೆ ತಿಂದಿದ್ದು ಸಾಕು ಅಂತ ಅಲ್ಲಿಗೆ 1 BHK ಮನೆ ಮಾಡಿದ್ವಿ. ಊರಲ್ಲಿ ಮನೆ ಮುಂದೆ ಗಾರ್ಡನ್ ಗಾಗಿ ಒಂದು ಮನೆ ಎಷ್ಟು ಜಾಗ ಬಿಟ್ಟು ಹಣ್ಣು ಹೂವು ಬೆಳೆಸಿ ಸಂಜೆ ಬೆಳಿಗ್ಗೆ ಬರುವ ಚಿಟ್ಟೆಗಳ ದಂಡು ನೋಡಿ ಖುಷಿಪಡುವ ಅಭ್ಯಾಸವಾಗಿತ್ತು. ಇಲ್ಲೂ ಕೂಡ ಇಂದಿರಾನಗರದ ನಾಲ್ಕನೇ ಅಂತಸ್ತಿನ ಮನೆ ಮುಂದೆ ಒಂದೆರಡು ಗಿಡವನ್ನಾದರೂ ನೆಡಲು ಮನಸ್ಸು ಹಾತೊರೆಯಿತು. ಬೆಂಗಳೂರು ಕಾಂಕ್ರೀಟ್ ಕಾಡು ಅಂತೇನು ಅಲ್ಲ ಇಲ್ಲೂ ಎಲ್ಲರೂ ಹಸಿರು ಪ್ರಿಯರೇ. ಮನೆ ಮುಂದೆ ಒಂದಾದರೂ ಕುಂಡ ಚಂದ ಚಂದದ ಗಿಡಗಳು ಇದ್ದೇ ಇರುತ್ತವೆ. ಬೆಳಿಗ್ಗೆ 9 ಕ್ಕೆ ಹೋಗಿ ಸಂಜೆ ಬರೋ ಒಬ್ಬ ಮಗ, ವರ್ಕ್ ಫ್ರಮ್ ಹೋಂ ಅಂತ ಮನೆಯಲ್ಲಿದ್ದರೂ ಡ್ಯೂಟಿ, ಮೀಟಿಂಗ್ ಅಂತ ಒಬ್ಬ ಮಗ. ಯಾರಿಗೆ ಹೇಳಬೇಕು? ಒಂದು ಸಂಜೆ ಸಣ್ಣಗೆ ಶುರು ಮಾಡಿದೆ ನಾವು ಒಂದಾದರೂ ಗಿಡ ಹಾಕಬೇಕು ಕಣೋ. ಅದಕ್ಕೆ ಇಬ್ಬರು ಮಕ್ಕಳು “ನಮ್ಮನೆ ಹಿಂದೇನೆ ‘ಪಾಟ್ ಲವರ್ಸ’ ಅಂತ ಶಾಪ್ ಇದೆ ಅಲ್ಲಿ ಎಲ್ಲ ತರದ ಗಿಡಗಳು ಕುಂಡಗಳು ಸಿಗುತ್ತವೆ ನಾಳೆ ಸಂಡೇ ಹೋಗಿ ಬರೋಣ ನಿನಗೆ ಯಾವುದು ಬೇಕು ಎಷ್ಟು ಬೇಕು ತರೋಣ’ ಅಂದ್ರು.
ಬೇಡ ಮನೆಯಲ್ಲಿ ಹಳೆಯ ಬಕೆಟ್ , ಒಂದು ಹಳೆಯ ವಾಟರ್ ಕ್ಯಾನ್ ಇದೆ ಅದರಲ್ಲಿ ಮಣ್ಣು ಹಾಕಿ ಏನಾದ್ರೂ ಹಾಕೋಣ ಮಣ್ಣು ಬೇಕು ಅಷ್ಟೇ ಎಲ್ಲಿ ಸಿಗುತ್ತೆ ಎಂದೆ. 'ಅಯ್ಯೋ ಮಣ್ಣಾ ಎಲ್ಲಿ ತರ್ತೀಯಮ್ಮ ಇಲ್ಲೆಲ್ಲಾ ಮಣ್ಣು ಸಿಗಲ್ಲ' ಅಂದುಬಿಟ್ಟರು. 'ಹೌದಾ ಸರಿ ಆ ಪಾಟ್ ಶಾಪ್ ಗೆ ಹೋಗಿ ನೋಡೋಣ' ಎಂದೆ. ಸಂಜೆ ಆ ಕಡೆ ಸುಮ್ನೆ ಹೋದ್ವಿ. ಅಂಗೈಯಗಲದ ಒಂದು ಪ್ಲಾಂಟ್ ಗೆ ರೂ.200 ಉಳಿದದ್ದು ನೀವೇ ಯೋಚಿಸಿ 2000, 5000 ವರೆಗೆ ಗಿಡಗಳು ಶಿವನೇ ಬೇಡ ಎನ್ನದೆ 'ಬರ್ತೀವಿ' ಎಂದು ಹೊರ ಬಂದ್ವಿ.
ಸಂಜೆ ವಾಕಿಂಗ್ ಹೋದಾಗೆಲ್ಲ ಎಲ್ಲರ ಮನೆ ಎದುರಿನ ಗಿಡ ಹೂಕುಂಡಗಳನ್ನು ನೋಡುತ್ತಾ ಎಷ್ಟು ಚಂದ ಬೆಳೆಸಿದ್ದಾರೆ ಎನ್ನುತ್ತಾ ಬರುತ್ತಿದ್ದೆ. ನನ್ನ ಹಳಹಳಿ ನೋಡಿ ಅಣ್ಣ ಅಂದ “ಆ ಮನೆ ಮುಂದೆ ಕ್ಯಾಮೆರಾ ಇದೆಯಾ ನೋಡು” ಅಂದ ಯಾಕಣ್ಣ ಅಂತ ತಮ್ಮ “ಒಂದು ಪಾಟ್ ಎತ್ಕೊಂಡು ಹೋಗೋಣ ಅಮ್ಮನ ಕಾಟಕ್ಕೆ” ಅಂತ ಅಣ್ಣನ ತಮಾಷೆ. “ಕೋತಿಗಳಾ ನೀವು ಹೀಗೆಲ್ಲ ಮಾತಾಡ್ತೀರಾ” ಎಂದೆ. ನಗುತ್ತಾ ಬಂದ್ವಿ. ನಮ್ಮ ನಾಲ್ಕನೇ ಫ್ಲೋರಿನ ಮನೆ ಎದುರು ನಿಂತರೆ ಸರ್ಕಾರಿ ಶಾಲೆ ದೊಡ್ಡ ಕಂಪೌಂಡ್ ಕಾಣುತ್ತಿತ್ತು ಅಲ್ಲಲ್ಲಿ ಮಣ್ಣಿನ ಸಣ್ಣ ಗುಡ್ಡೆ ಕಾಣ್ತಿತ್ತು ಆದರೆ ಅಲ್ಲಿಗೆ ದಾರಿ ಎಲ್ಲಿದೆ ಗೊತ್ತಾಗ್ಲಿಲ್ಲ. ಒಂದಿನ ವಾಕಿಂಗ್ ಹೋಗುವಾಗ ಅದೇ ರೂಟಿಗೆ ಹೋಗಿ ನೋಡಿಕೊಂಡು ಬಂದ್ವಿ. ಈಗ ಇಲ್ಲಿ ದಾರಿ ಇಲ್ಲ ಆ ಕಡೆ ಮೇನ್ ರೋಡ್ ಇಂದ ಹೋಗಬೇಕು ಅಂದ್ರು ಅಲ್ಲಿ ಜನ. ಮೇನ್ ರೋಡ್ ಎಲ್ಲಿ ಬರುತ್ತೆ ಗೊತ್ತಾಗ್ಲಿಲ್ಲ. ದಾರಿ ಗೊತ್ತಾದ್ರೂ ಅಲ್ಲಿಂದ ಮಣ್ಣು ತರುವುದು ಹೇಗೆ? ಆಫೀಸ್ಗೆ ಹೋಗೋ ಮಕ್ಕಳಿಗೆ ತರೋಕೆ ಹೇಳೋದು ಹೇಗೆ ? ಯೋಚನೆ ಮಾಡುವುದನ್ನು ಕಂಡ ಸಣ್ಣ ಮಗ ”ಅಮ್ಮಾ.. ತಾಯಿ ನಾನು ಹೋಗಿ ತರ್ತೀನಿ ಬಿಡು ನಿನ್ನ ಸಲುವಾಗಿ” ಅಂದ ‘ಬಂಗಾರ’ ಎಂದೆ. ಒಂದು ಸಂಡೆ ಇವನಿಂಗ್ ಹೋಗಿ ಒಂದು ಸಣ್ಣ ಅಕ್ಕಿ ಚೀಲದಲ್ಲಿ ಮಣ್ಣು ತಂದ . ಅಬ್ಬಾ ಬೆಂಗಳೂರಲ್ಲಿ ಮಣ್ಣು ಸಿಕ್ತು ಎನಿಸಿತು. ಬಕೆಟ್ಗೆ ಹಾಕಿ ಅದಕ್ಕೆ ಬೆಳ್ಳುಳ್ಳಿ ಸಿಪ್ಪೆ, ಬನಾನ ಎಗ್ (ಪೀಲ್) ಸಿಪ್ಪೇ ಹಾಕಿ ಕಲಸಿ ನೀರು ಚುಮುಕಿಸಿ ಹದ ಮಾಡಿ ಇಟ್ಟೆ. ಗಿಡ ನೂರಾರು ರೂಪಾಯಿ ಕೊಟ್ಟು ತರೋಕೆ ಮನಸ್ಸು ಒಪ್ಪಲಿಲ್ಲ. ಅದೇ ವಾರ ಊರಿಗೆ ಹೋಗುವ ಪ್ರಸಂಗ ಬಂತು. ನಾಲ್ಕೈದು ದಿನ ಬಿಟ್ಟು ಬರುವಾಗ ಹಿಟ್ಟು, ಖಾರ, ರವೆ ಜೊತೆಗೆ ನಮ್ಮ ಗಾರ್ಡನ್ನಲ್ಲಿಯ ಒಂದೆರಡು ಪುಟ್ಟ ಮನಿ ಪ್ಲಾಂಟ್ ಶೋ ಪ್ಲಾಂಟು ಗಳನ್ನು ಜೋಪಾನವಾಗಿ ತಂದೆ. ಮರುದಿನವೇ ನೆಟ್ಟು ನಮ್ಮನೆ ಮುಂದೇನು ಒಂದೆರಡು ಗಿಡ ಉಂಟು ಎಂದು ನಮ್ಮ ಅಪಾರ್ಟ್ಮೆಂಟ್ನವರಿಗೆ ಹೇಳದೆ ತೋರಿಸಿದೆ. ಹುನಗುಂದದ ಗಿಡಗಳು ಬೆಂಗಳೂರಿನ ಮಣ್ಣಿಗೆ ನಿಧಾನವಾಗಿ ಹೊಂದಿಕೊಂಡು ಈಗ ಚಿಗುರತೊಡಗಿವೆ. ಮಕ್ಕಳು ಗಿಡವನ್ನು ನನ್ನ ಮುಖವನ್ನು ನೋಡಿ ನಗುತ್ತವೆ. ಮನೆ ಹತ್ತಿರ ಯಾರಾದರೂ ಕೆಂಪು ಮಣ್ಣು ಹಾಕಿಸಿಕೊಂಡರೆ ಅಲ್ಲಿಂದ ಒಂದಿಷ್ಟು ಮಣ್ಣು ತಂದು ಗಿಡ ಹಾಕುವುದು ನಾವು ಹಾಕಿಸಿಕೊಂಡಾಗ ಬೇರೆಯವರಿಗೆ ತಗೊಂಡು ಹೋಗಿ ಅದೇನು ದೊಡ್ಡ ಮಾತಲ್ಲ ಮಣ್ಣು ಅಂತ ಕೊಡೋದು ಮಾಡ್ತಿದ್ದ ನಮಗೆ ಬೆಂಗಳೂರಲ್ಲಿ ಮಣ್ಣಿಗೆ ಇಷ್ಟೊಂದು ರಗಳೆ ಆಯ್ತು ಹಾಗೆ ಕನ್ನಡದವರಿಗೂ…
ನಮ್ಮ ಅಪಾರ್ಟ್ಮೆಂಟ್ನ ಬಹುತೇಕ ಎಲ್ಲರೂ ಇಂಗ್ಲೀಷ್ ತೆಲುಗರು. ಹೊರಗೆ ಹಿಂದಿ ಓಕೆ. ಮೆಟ್ರೋದಲ್ಲೂ ಆಲ್ಮೋಸ್ಟ್ ಇಂಗ್ಲಿಷ್ ತಮಿಳ್, ತೆಲುಗು, ಕನ್ನಡಾ…. ಎಂದು ಹಾಡುವ ಮನಸಿಗೆ ಕನ್ನಡ ಅಲ್ಲಲ್ಲಿ ಶಾಪಲ್ಲಿ ಸಿಕ್ಕರೂ ಹರುಕು ಮುರುಕು, ಪಾಪ ಕನ್ನಡ ಒದ್ದಾಡಿದಂತೆ ಅನಿಸುತ್ತಿತ್ತು ಅವರ ಬಾಯಲ್ಲಿ. ನಮ್ಮ ವಾಚ್ಮನ್ ಫ್ಯಾಮಿಲಿ ಗ್ರೌಂಡ್ ಫ್ಲೋರಲ್ಲಿ ಪುಟ್ಟ ಕೋಣೆಯಲ್ಲಿ ಇತ್ತು, ಅವರು ನಮ್ಮ ಕಡೆಯವರೆ, ಆ ಮೂರು ಮಕ್ಕಳ ಜಗಳ, ಮಾತು, ನಗು, ನಮ್ಮೂರನ್ನು ಕೊಂಚಮಟ್ಟಿಗೆ ಮರೆಸುತ್ತಿತ್ತು. ಸಂಜೆ ಮಕ್ಕಳು ಆಫೀಸಿಂದ ಬರೋವರೆಗೆ. ಅಂತೂ ಬೆಂಗಳೂರಲ್ಲಿ ಚಂದನೇ ಕನ್ನಡಕ್ಕೆ, ಬೊಗಸೆ ಮಣ್ಣಿಗೆ ಈಗಲೂ ಪರದಾಡುತ್ತಿದೆ ಮನಸ್ಸು
ನಿಂಗಮ್ಮ ಭಾವಿಕಟ್ಟಿ ಹುನಗುಂದ .