ಮಹಿಳಾ ದಿನದ ವಿಶೇಷ

ತಂತ್ರಜ್ಞಾನದ ಯುಗದಲ್ಲೂ ದೌರ್ಜನ್ಯದ ಕವಲುಗಳು

ನಾಗರೇಖಾ ಗಾಂವಕರ

ಪ್ರತಿ ಕೆಲಸದಲ್ಲೂ, ನಾವಿನ್ಯತೆ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಹಿಳೆ ಎದುರಿಸುತ್ತಿರುವ ಸವಾಲುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪ್ರತಿಯೊಂದು ಹೆಣ್ಣಿನ್ನು ವಿಭಿನ್ನ ಸಂಕೀರ್ಣ ವರ್ತುಲದಲ್ಲಿ ಈ ಜಗತ್ತು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ನಿರೂಪಿಸಬಹುದು. ಹೆಣ್ಣನ್ನು ಪ್ರಕೃತಿಯ ಅಂಶವಾಗಿ ಕಾಣುವ ಜಗತ್ತು ಸ್ತ್ರೀತ್ವದ ಕಲ್ಪನೆಯಲ್ಲಿ ಆಕೆಯನ್ನು ವಸ್ತುವಿನ ರೂಪದಲ್ಲಿ, ಮನೋರಂಜನೆಯ ಭಾಗವಾಗಿ ಕಾಣಬಯಸುತ್ತದೆಯೇ ಹೊರತು ಆ ವ್ಯಕ್ತಿತ್ವದ ಸ್ವತಂತ್ರ ಅಭಿವ್ಯಕ್ತಿಯನ್ನು ನಿರಾಕರಿಸುತ್ತದೆ. ಹೆಣ್ಣಿನ ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ವಿವಿಧ ಪ್ರಯತ್ನಗಳ, ಅಟ್ಟಹಾಸ ಮತ್ತು ವ್ಯಗ್ರತೆ ತಲ್ಲಣ ಹುಟ್ಟಿಸುತ್ತವೆ. ಅಂತಹ ಅನೇಕ ಪ್ರತಿರೋಧವನ್ನು ಹಾಯ್ದು ಬಂದ ಹೆಣ್ಣು ಕಂಡುಕೊಳ್ಳುವ ಮೌಲ್ಯಗಳನ್ನು, ವಿಲಕ್ಷಣತೆಗಳನ್ನು ಗಂಡು ಅಸಡ್ಡೆಯಿಂದಲೋ, ಕುಚೋದ್ಯದ ಸಂಗತಿಯನ್ನಾಗಿಯೋ ನೋಡಲು ಬಯಸುತ್ತಾನೆ, ಇಲ್ಲವೇ ಕೌರ್ಯದ ಮೂಲಕ ನಿಯಂತ್ರಿಸಬಯಸುತ್ತಾನೆ.

ರಾಪ್ಟ್ರಕವಿ ಕುವೆಂಪುರವರ ಸಾಹಿತ್ಯಿಕ ಪಾತ್ರವಾದ ‘ಸುಬ್ಬಮ್ಮ ಹೆಗ್ಗಡತಿ’ಯಿಂದ ಹಿಡಿದು ಇಂದಿನ ಮಹ್ಸಾ ಅಮಿನಿ ಎಂಬ ನೈಜ ಪಾತ್ರಗಳ ದನಿಯನ್ನು ಹತ್ತಿಕ್ಕುವ ಕೈಗಳು ಜಗತ್ತಿನುದ್ದಕ್ಕೂ ವ್ಯಾಪಿಸಿವೆ. ಅಸ್ತಿತ್ವದ ಅಭಿವ್ಯಕ್ತಿಗೆ ಸಮಾಜದ ಸ್ವಿಕೃತ ವಿನ್ಯಾಸಗಳನ್ನು ಮೀರುವ ಎಲ್ಲ ದನಿಗಳನ್ನು ಅದುಮಲಾಗುತ್ತದೆ.
‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿ ಓದಿದಾಗಲೆಲ್ಲಾ ಒಂದು ಬಗೆಯ ವಿಷಾದ ಕಾಡುತ್ತದೆ. ಎದೆಯೊಳಗೊಂದು ವ್ಯಥೆಯ ನಿಟ್ಟುಸಿರು ಗೊತ್ತಿಲ್ಲದೇ ಹಾಯುತ್ತದೆ. ಪುರುಷ ವಿರಚಿತ ಕಾದಂಬರಿಗಳಲ್ಲಿ ಪುರುಷ ಸ್ತ್ರೀಯನ್ನು ಒಂದು ಸಾಮಾಜಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಗ್ರಹಿಸುವ ಕಾರಣದಿಂದ ಈ ಪಾತ್ರ ಪ್ರಮುಖವಾಗುತ್ತದೆ. ಸುಬ್ಬಮ್ಮ ದುರಂತ ನಾಯಕಿ. ತಂದೆ ಮನೆಯಲ್ಲಿ ಬಡತನದಲ್ಲೆ ಬೆಂದ ಸುಬ್ಬಮ್ಮ ಶ್ರೀಮಂತ ಕುಟುಂಬವಾದ ಕಾನೂರಿನ ಹೆಗ್ಗಡತಿಯಾಗಿ ಬರುತ್ತಾಳೆ. ಕಾನೂರು ಹೆಗ್ಗಡೆ ಕುಟುಂಬದ ತರುಣ ಹೂವಯ್ಯನನ್ನೆ ಮದುವೆಯಾಗುತ್ತಿರುವೆ ಎಂದುಕೊಂಡವಳಿಗೆ ತಾನು ವಿವಾಹವಾದದ್ದು ಮುದುಕ ಚಂದ್ರಯ್ಯ ಹೆಗ್ಗಡೆಯನ್ನು ಎಂಬ ಅರಿವಾದೊಡನೆ ಅದು ಬದುಕಿನುದ್ದಕ್ಕೂ ಅಸಹನೆಯಾಗಿ ಕಾಡುತ್ತದೆ. ಗಂಡ ಪರಸ್ತ್ರೀಯೊಂದಿಗೆ ಮಾಡಿಕೊಂಡ ಸಂಬಂಧ ತಿಳಿದೂ ಅದನ್ನು ಸಹಜವಾಗಿ ಸ್ವೀಕರಿಸುವಲ್ಲಿ ಆಕೆಗೆ ಗಂಡನ ಬಗ್ಗೆ ಎಂದೂ ಇರದ ವ್ಯಾಮೋಹ ಕಾಣುತ್ತದೆ. ಚಂದ್ರಯ್ಯನ ಮರಣದ ನಂತರ ಆಕೆ ಮನೆಯ ಜವಾಬ್ದಾರಿಗಳನ್ನು ಹೊತ್ತುಕೊಂಡು ಸಮರ್ಥವಾಗಿ ನಿಭಾಯಿಸುತ್ತಾಳೆ. ಆದರೆ ಮನೋಕಾಮನೆಗಳಿಂದ ಮುಕ್ತವಾಗದ ಮನಸ್ಥಿತಿಯಿಂದ ಸೇರೆಗಾರನ ಸಂಗ ಮಾಡುತ್ತಾಳೆ. ವೈವಾಹಿಕ ಬದುಕಿನ ಅತೃಪ್ತಿಯ ಪಳಿಯುಳಿಕೆ ಸೇರೆಗಾರನೊಂದಿಗೆ ಸುಖದ ಹೊನಲನ್ನು ಬಯಸುವಂತೆ ಮಾಡುತ್ತದೆ. ಆದರೆ ಈ ಸುಖದ ಅಮಲಿನ ಜಾರುವಿಕೆಗೆ ಹೆಣ್ಣೇ ಬೆಲೆ ತೆರಬೇಕಾದ ಅಸಹಾಯಕತೆಯಲ್ಲಿ ಗಂಡನಿಲ್ಲದೆಯೂ ಗರ್ಭವತಿಯಾದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಹೆದರಿ ಗರ್ಭಪಾತ ಮಾಡಿಸಿಕೊಳ್ಳುತ್ತಾಳೆ. ಅದು ಅವಳ ಜೀವವನ್ನೆ ಬಲಿ ಪಡೆಯುತ್ತದೆ. ತಾಯ್ತನದ ಆಕಾಂಕ್ಷೆ ಗಂಡನಿಲ್ಲದೇ ಇರುವಾಗ ಇರಬಾರದೆಂಬ ಕಟ್ಟಳೆ ಎಷ್ಟು ಸರಿ? ಮೌಲ್ಯ ವಿನಾಶದ ಭಯದಲ್ಲಿ ಬದುಕನ್ನೆ ಬಲಿಪಡೆವ ಸಾಮಾಜಿಕ ಸಿದ್ಧಾಂತಗಳು ನಿಯಮ ವಿಧಿಸುವುದು ಹೆಣ್ಣಿಗೆ ಮಾತ್ರ ಏಕೆ?
ಇದೊಂದು ಕಾಲ್ಪನಿಕ ಪಾತ್ರ. ಆದರೆ ನ್ಯಾಯಕ್ಕಾಗಿ ಹತ್ತಾರು ವರ್ಷ ಕಾದರೂ ತೆರೆಯದ ಬಾಗಿಲನ್ನು ತಟ್ಟಿತಟ್ಟಿ ಬಡಿದರೂ ಕೊನೆಗೂ ಮರಿಚಿಕೆಯಾಗಿಯೇ ಉಳಿದ ನ್ಯಾಯಕ್ಕೆ ಕಣ್ಣಿಲ್ಲ!!
ಆದರೆ ಇಂತಹ ನೈಜ ಕಥೆಗಳಿಗೂ ಬರವಿಲ್ಲ!!

ಗುಜರಾತಿನ ಗೋಧ್ರಾದಲ್ಲಿ ಧರ್ಮದ ಅಮೇಲಿರಿಸಕೊಂಡ ಕುರುಡು ಕಣ್ಣುಗಳ ಕೌರ್ಯದ ಕಾರಣ ೨೦೦೨ರ ಫೆಬ್ರುವರಿಯಲ್ಲಿ ೫೮ ಜನ ಹಿಂದೂ ಕರಸೇವಕರು ಮತ್ತು ಯಾತ್ರಿಗಳು ರೈಲಿನಲ್ಲಿ ಬೆಂಕಿಗೆ ಬಲಿಯಾಗಿ ಸಜೀವ ದಹನಗೊಂಡಿದ್ದರು. ಇದಕ್ಕೆ ಕಾರಣ ಮುಸ್ಲಿಂರೆಂದು ತಿಳಿದು ಆ ಸೇಡನ್ನೆ ಮುಂದುವರೆಸಿದ ಹಿಂದೂಗಳು ಮುಸ್ಲಿಂರ ಮಾರಣಹೋಮಕ್ಕೆ ಪಣತೊಟ್ಟಂತೆ ಸಾವಿರಾರು ಜನರನ್ನು ಬಲಿಪಡೆದರು. ಈ ಉದ್ರಿಕ್ತ ಪರಿಸ್ಥಿತಿಯಲ್ಲಿ ಬದುಕನ್ನೇ ಕಳೆದುಕೊಂಡ ಬಿಲ್ಕಿಸ್ ಬಾನು ಎಂಬ ಯುವ ಹೆಂಗಸು ತನ್ನ ಕಣ್ಣೆದುರೇ ತನ್ನ ಮಗಳ ಹತ್ಯೆಯನ್ನು ಕಂಡಳು. ಸಂಬAಧಿಗಳ ಕೊಲೆಗೆ ಸಾಕ್ಷಿಯಾದಳು ಗರ್ಭಿಣಿಯಾದ ಅವಳನ್ನು ಅತ್ಯಾಚಾರ ಎಸಗಿ ಹಿಂಸಿಸಲಾಗಿತ್ತು. ತನಗಾದ ಅನ್ಯಾಯದ ವಿರುದ್ಧ ನ್ಯಾಯದ ಮೊರೆ ಹೋದ ಆಕೆಗೆ ಸಿಕ್ಕಿದ್ದು ನ್ಯಾಯವಲ್ಲ. ಯಾರೋ ಮಾಡಿದ ತಪ್ಪಿಗೆ ಅನ್ಯಾಯವಾಗಿ ಅಮಾಯಕ ಹೆಣ್ಣು ಮಗಳ ಬದುಕನ್ನು ನಾಶಮಾಡುವ ಹಕ್ಕನ್ನು ಯಾರು ಕೊಟ್ಟರು? ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳನ್ನು ಸಮಾಜದ ಕೆಟ್ಟ ದೃಷ್ಟಿಯನ್ನು ಎದುರಿಸುವ ಜೊತೆಗೆ ಬದುಕಿನ ಆಶಯವನ್ನು ಕಳೆದುಕೊಳ್ಳುತ್ತಾರೆ. ಆದರೆ ಬಿಲ್ಕಿಸ್ ಇಂತಹದ್ದನ್ನೆಲ್ಲ ಮೆಟ್ಟಿನಿಂತರೂ ಆಕೆಗೆ ಸಾಮಾಜಿಕ ಭದ್ರತೆ ಕೊಡುವಲ್ಲಿ ನ್ಯಾಯ ಕೊಡಿಸುವಲ್ಲಿ ಅನ್ಯಾಯದ ನೀತಿಯನ್ನು ಅನುಸರಿಸಲಾಗಿದೆ. ಈ ಪ್ರಕರಣವೂ ಹೀಗೆ ಮುಚ್ಚಿಹೋಗಲಿದೆ. ಮಹಿಳೆ ತನ್ನದಲ್ಲದ ತಪ್ಪಿಗೆ ಅನುಭವಿಸುವ ಈ ಹಿಂಸೆಗೆ ಶಿಕ್ಷೆ ಇಲ್ಲ!! ಘನತೆಯಿಂದ ಬಾಳಬೇಕಾದ ಬದುಕೊಂದು ಜೀವಂತವಿದ್ದು ಶವವಾಗುತ್ತದೆ. ಹೆತ್ತ ಕುಡಿಯನ್ನು ಕಳೆದುಕೊಂಡ ಜೀವಕ್ಕೆ ಬದುಕಿನವರೆಗೂ ನೋವಿನ ನಿಟ್ಟಿಸಿರು ಜೊತೆಯಾಗಿದೆ. ದುಷ್ಟರಿಗೆ ನೀಡಬೇಕಾದ ಶಿಕ್ಷೆಯೆಂಬುದು ಆ ದುರುಳ ಬುದ್ಧಿವಂತರ ಮುಖವಾಡದ ಸನ್ನಡತೆಯ ಹಿಂದೆ ವಜಾ ಅಗಿದೆ. ಈ ವಿನಾಯಿತಿ ಪ್ರಶ್ನಿಸಿ ಸಲ್ಲಿಸಿದ ಇತರರ ಅರ್ಜಿಗಳ ವಿಚಾರಣೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಪ್ರಭುತ್ವದ ಮಾನದಂಡಗಳು ಸ್ತ್ರೀಯರನ್ನು ಕಡೆಗಣಿಸುತ್ತಿವೆ. ಇದು ಪುರುಷನಿಗೆ ಇನ್ನೊಂದು ಇಂತಹ ಕೌರ್ಯ ಮೆರೆಯಲು ಅವಕಾಶ ನೀಡಿದಂತಾಗಿಲ್ಲವೇ? ಮುಖವಾಡದ ಸನ್ನಡತೆಯಿಂದ ಏನೂ ಬೇಕಾದ್ರು ಮಾಡಿ ಪುನಃ ಸಜ್ಜನರಾಗಬಹುದೆಂಬ ಸಂದೇಶವನ್ನು ಬಿತ್ತಿದಂತಾಗುವುದಿಲ್ಲವೇ?
ಜಾಗತಿಕ ಮಟ್ಟದಲ್ಲಿ ಹೆಣ್ಣು ಸುರಕ್ಷಿತಳೇ? ಆಕೆಗೆ ಪುರುಷನಿಗಿರುವ ಎಲ್ಲ ಹಕ್ಕು, ಅಧಿಕಾರಗಳು ಇವೆಯೇ? ಎಂಬುದು ಕೊನೆಯಿಲ್ಲದ ಪ್ರಶ್ನೆ.

ಬಿಗಿಯಾದ ಉಡುಪು ಮತ್ತು ಹಿಜಬ್‌ನ್ನು ಸರಿಯಾಗಿ ಧರಿಸಿಲ್ಲದ ಕಾರಣ ಕಳೆದ ಸಪ್ಟೆಂಬರ್‌ನಲ್ಲಿ ಇರಾನಿನಲ್ಲಿ ೨೨ ವರ್ಷದ ಯುವತಿ ಮಹ್ಸಾ ಅಮಿನಿಯನ್ನು ಇಸ್ಲಾಮಿಕ್ ಧಾರ್ಮಿಕ ಪೋಲಿಸರು ಬಂಧಿಸಿದ್ದರು. ಪೋಲಿಸ ಬಂಧಿಖಾನೆಯಲ್ಲೇ ತೀವ್ರ ಥಳಿತದ ಕಾರಣ ಅರಳಬೇಕಾದ ಹೂವೊಂದು ಬಾಡಿಹೋಗಿತ್ತು. ಪುರುಷ ನಿಯಂತ್ರತ ಜಗತ್ತು ಮಹಿಳೆಯರಿಗೆ ಎಷ್ಟು ಅಸುರಕ್ಷಿತವಾಗಿದೆ. ಮಹಿಳೆಯರ ಮೇಲೆ ಹೆಚ್ಚುತ್ತಿರುವ ಹಿಂಸೆ ಮತ್ತು ಕ್ರೌರ್ಯಗಳಿಗೆ ಕಾರಣ ಪುರುಷ ಮೇಲುಗಾರಿಕೆ. ಅವಳ ಸ್ವತಂತ್ರ ವ್ಯಕ್ತಿತ್ವವನ್ನು ನಿಯಂತ್ರಿಸುವ ಹುನ್ನಾರ.

ಇಂತಹ ಎಲ್ಲ ಉಪದ್ವಾಪ್ಯಗಳಿಗೆ ಪರಿಹಾರವೇನು? ಉತ್ತರ ಸಿಗದ ಪ್ರಶ್ನೆಯೋ ಅಥವಾ ಅಸಡ್ಡೆಯೋ ಅಥವಾ ಶೋಷಣೆಯನ್ನು ಯುವಯುಗಾಂತರವೂ ಪೋಷಿಸಿಕೊಂಡು ಬರುವ ಉತ್ತರಾಧಿಕಾರದ ಪ್ರಶ್ನೆಯೋ?… ಕಾಲ ಉತ್ತರಿಸಬಹುದೇ?


ನಾಗರೇಖಾ ಗಾಂವಕರ

One thought on “ಮಹಿಳಾ ದಿನದ ವಿಶೇಷ

  1. ಲೇಖನ ತುಂಬಾ ಅರ್ಥಪೂರ್ಣವಾಗಿದೆ ಮೇಡಂ.

Leave a Reply

Back To Top