ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಅಭಿವೃದ್ಧಿ ಮತ್ತು ಮಹಿಳೆ

ಅಭಿವೃದ್ಧಿ ಮತ್ತು ಮಹಿಳೆ


ಇಂದು ಜನರು ಅಭಿವೃದ್ಧಿಯ ಕೇಂದ್ರ ಬಿಂದುವಾಗಿದ್ದಾರೆ. ಏಕೆಂದರೆ ಜನರೇ ಒಂದು ದೇಶದ ನಿಜವಾz ಸಂಪತ್ತು. ಅಭಿವೃದ್ಧಿಯ ನಿಜವಾದ ಉದ್ದೇಶವೆಂದರೆ ಜನರ ಅಭಿವೃದ್ಧಿ ಆಯ್ಕೆಯನ್ನು ಹೆಚ್ಚಿಸುವುದಾಗಿದೆ. ಆದಾಯವು ಈ ಆಯ್ಕೆಗಳಲ್ಲಿ ಒಂದು ಅತ್ಯಂತ ಪ್ರಮುಖವಾದ ಪರಿಪಕಲ್ಪನೆಯಾಗಿದೆ. ಆದರೇ ಆದಾಯವೇ ಮಾನವನ ಇರುವಿಕೆಯ ಒಟ್ಟಾರೆ ಗುರಿಯಲ್ಲ. ಆರೋಗ್ಯ, ಶಿಕ್ಷಣ, ಉತ್ತಮ ಭೌತಿಕ ಪರಿಸರ ಹಾಗೂ ಸ್ವಾತಂತ್ರ್ಯ ಮುಂತಾದ ಜೀವನದ ಅಂಶಗಳು ಆದಾಯದಷ್ಟೇ ಮಹತ್ವವನ್ನು ಪಡೆಯುತ್ತವೆ. ಅದ್ದರಿಂದ ಅಭಿವೃದ್ಧಿಯು ಒಂದು ಸಾಮಾಜಿಕ ವ್ಯವಸ್ಥೆಯ ಸಮಗ್ರ ಬದಲಾವಣೆಯನ್ನು ಪ್ರತಿನಿಧಿಸಬೇಕು. ಅದು ವ್ಯವಸ್ಥೆಯಲ್ಲಿನ ಸಾಮಾಜಿಕ ಗುಂಪುಗಳ ಮತ್ತು ಜನರ ಮೂಲಭೂತ ಆಶೋತ್ತರಗಳನ್ನು ಈಡೇರಿಸುವಂತಿರಬೇಕು.
ಅಭಿವೃದ್ಧಿ ಪ್ರಕ್ರಿಯೆಯು ಮಹಿಳೆಯರು ಮತ್ತು ಪುರುಷರಿಬ್ಬರನ್ನು ಸಬಲೀಕರಣಗೊಳಿಸುವ ಆಶಯವನ್ನು ಹೊಂದಿರಬೇಕು. ಮೆಹಬೂಬ್ ಉಲ್ ಹಕ್ ವ್ಯಾಖ್ಯಾನಿಸುವ ಪ್ರಕಾರ ಸಬಲೀಕರಣವೆಂದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಜನರು ತಮ್ಮ ಜೀವನಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ತಾವೇ ತೆಗೆದುಕೊಳ್ಳುವಂತಾಗಬೇಕು. ಅದಕ್ಕೆ ಅತ್ಯಧಿಕ ಆರ್ಥಿಕ ನಿಯಂತ್ರಣಗಳು ಮತ್ತು ನಿಯಮಾವಳಿಗಳಿಂದ ಮುಕ್ತವಾದ ಆರ್ಥಿಕ ವಾತಾವರಣ ಜನರಿಗೆ ದೊರೆಯುವಂತಾಗಬೇಕು.1 ಸಬಲೀಕರಣವು ಲಿಂಗಾಧಾರಿತ ನೆಲೆಯಲ್ಲಿ ಮೊದಲ ಆದ್ಯತೆಯಾಗಿ ಕೈಗೊಳ್ಳುವ ಅಗತ್ಯವಿದೆ. ಇಂದು ಸಮಾಜದಲ್ಲಿ ಲಿಂಗಾಧಾರಿತ ಅಸಮಾನತೆ ತೀವ್ರವಾಗಿದೆ. ಮಹಿಳೆಯು ವಿವಿಧ ನೆಲೆಗಳಲ್ಲಿ ಅಸಮಾನತೆಯನ್ನು ಎದುರಿಸುತ್ತಿದ್ದಾಳೆ. ಮಹಿಳೆಯ ಮೊದಲ ಅಸಮಾನತೆಯ ನೆಲೆ ಅವಳ ದುಡಿಮೆ. ಮಹಿಳೆಯರ ದುಡಿಮೆಯನ್ನು ತಪ್ಪಾಗಿ ನಿರ್ವಚಿಸಿಕೊಂಡಿರುವುದರಿಂದ ಅವರ ದುಡಿಮೆ ಇಂದು ಅತ್ಯಂತ ಕೀಳು ಮಟ್ಟದಲ್ಲಿದೆ. ಹಾಗಾಗಿ ಅವರ ದುಡಿಮೆಯ ಫಲ ಪೂರ್ಣ ಪ್ರಮಾಣದಲ್ಲಿ ಸಮಾಜಕ್ಕೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟಿತ ವಲಯಗಳಲ್ಲಿ ಅವರ ದುಡಿಮೆಯ ಸಹಭಾಗಿತ್ವ ಹೆಚ್ಚಾಗಬೇಕೆಂದು ಹೇಳಲಾಗುತ್ತಿದೆ. ಎರಡನೆಯದಾಗಿ, ಮಹಿಳೆಯರಲ್ಲಿ ಅತಿಯಾದ ಅಪೌಷ್ಟಿಕತೆಯ ಸಮಸ್ಯೆ ಇದೆ ಇದು ಮಹಿಳೆಯರಲ್ಲಿ ಅನಿಮೀಯ ಹೆಚ್ಚಾಗಲು ಕಾರಣವಾಗಿದ್ದು ಇದು ಲಿಂಗ ಸಂಬಂಧಿ ತಾರತಮ್ಯದ ಪ್ರತೀಕವಾಗಿದೆ. ಅಪೌಷ್ಠಿಕತೆಯನ್ನು ಹಿಡನ್ ಹಂಗರ್ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಮ್ಮ ಸಮಾಜದಲ್ಲಿ ಶೇ.35 ರಿಂದ ಶೇ.40 ರಷ್ಟು ಮಹಿಳೆಯರು ಅನಿಮೀಯದಿಂದ ಬಳಲುತ್ತಿದ್ದರೂ ಸರ್ಕಾರಗಳು ಸ್ಪಂಧಿಸುತ್ತಿಲ್ಲ. ಮೂರನೆಯದಾಗಿ, ಸರ್ಕಾರಗಳು ಮಹಿಳೆಯರ ಅಸ್ತಿಯ ಹಕ್ಕಿಗಾಗಿ ಕಾನೂನುಗಳನ್ನು ರೂಪಿಸಿದೆ ಆದರೆ ವಾಸ್ತವಿಕವಾಗಿ ಮಹಿಳೆಯರು ಅಸ್ತಿಯ ಹಕ್ಕನ್ನು ಅನುಭವಿಸುತ್ತಿಲ್ಲ. ಈ ಸಂಗತಿಯಲ್ಲಿ ಶಾಸನಗಳಿಗಿಂತ ಮಹಿಳೆಯರ ಧಾರಣಾ ಶಕ್ತಿ ಹೆಚ್ಚಿಸುವ ಅಗತ್ಯವಿದೆ. ನಾಲ್ಕನೆಯದಾಗಿ, ಇಂದು ಸಮಾಜದಲ್ಲಿ ಪುರುಷಶಾಹಿ ಆಧಾರಿತ ಜ್ಞಾನ ಕ್ಷೇತ್ರಗಳು ನೆಲೆಗೊಂಡಿವೆ. ಪುರುಷರ ಅನುಭವಗಳು ವಸ್ತುನಿಷ್ಠವಾಗಿರುತ್ತವೆ ಮತ್ತು ವಿಶ್ವಾಸಾರ್ಹತೆ ಹೊಂದಿರುತ್ತವೆ ಇದಕ್ಕೆ ಪ್ರತಿಯಾಗಿ ಮಹಿಳೆಯರ ಅನುಭವಗಳು ಭಾವಾನಾತ್ಮಕವಾಗಿರುತ್ತವೆ ಎನ್ನುವ ವಾದವೇ ಇಂತಹ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣವಾಗಿವೆ. ಇಂತಹ ಪುರುಷ ಪ್ರಧಾನ ಜ್ಞಾನ ಕ್ಷೇತ್ರಗಳನ್ನು ಬದಲಾಹಿಸುವ ಅಗತ್ಯವಿದೆ. ಐದನೆಯದಾಗಿ, ಮಹಿಳೆಯರು ಇನ್ನೂಬ್ಬರ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡುವ ಅಗತ್ಯವಿದೆ. ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ಅತಿ ಮುಖ್ಯ. ಎಲ್ಲಿಯವರೆಗೆ ಮಹಿಳೆ ಮತ್ತೊಬ್ಬರ ಅವಲಂಬಿತಳಾಗಿರುತ್ತಾಳೆಯೋ ಅಲ್ಲಿಯವರೆಗೆ ಅವಳು ತಾರತಮ್ಯವನ್ನು, ಅಸಮಾನತೆಯನ್ನು ಮತ್ತು ಹೊರಗಣತನವನ್ನು ಅನುಭವಿಸಬೇಕಾಗುತ್ತದೆ. ಲಿಂಗ ಸಂಬಂಧಗಳ ದೃಷ್ಟಿಯಿಂದ ನಮ್ಮದು ಅಧೀನತೆಯ ಪರಂಪರೆಯಾಗಿದೆ. ಹೆಣ್ಣು ತನ್ನ ವ್ಯಕ್ತಿತ್ವವನ್ನು, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬಲ್ಲಳು. ಅದ್ದರಿಂದ ಮಹಿಳೆಯರನ್ನು ಅಧೀನತೆಯ ಸಂಸ್ಕøತಿಯಿಂದ ಬಿಡುಗಡೆಗೊಳಿಸುವ ಅಗತ್ಯವಿದೆ.2 ಇಂತಹ ಪರಂಪರೆ ಮತ್ತು ಸಂಸ್ಕøತಿಯಿಂದಾಗಿ ಲಿಂಗ ಅಸಮಾನತೆ ನಮ್ಮ ಸಮಾಜದಲ್ಲಿ ತೀವ್ರಗೊಂಡಿದೆ. ಲಿಂಗ ಸಮಾನತೆಯು ಮಹಿಳೆ ಮತ್ತು ಪುರುಷರ ನಡುವೆ ಅಧಿಕಾರದ ಹಂಚಿಕೆಯು ಹೇಗೆ ನಿರ್ಧರಿಸಲ್ಪಡುತ್ತದೆ ಎಂಬುದಕ್ಕೆ ಸಂಬಂಧಿಸಿದೆ. ಅಮತ್ರ್ಯಸೇನ್ ಹೇಳುವ ಅಭಿವೃದ್ಧಿಯ ಪ್ರಕ್ರಿಯೆಯನ್ನು ನಾವು ಮನಗಾಣಬೇಕಾದರೆ ಎಲ್ಲಾ ಜನರಿಗೂ ಸ್ವಾತಂತ್ರ್ಯವೆಂಬುದು ಲಭ್ಯವಾಗಬೇಕು. ಕೇವಲ ಅಭಿವೃದ್ಧಿ ಎಂಬುದು ಕಡಿಮೆ ಆದಾಯದ ಬಡತನ ಅಥವಾ ಉತ್ತಮ ನ್ಯಾಯದ ಬಳಕೆಯಲ್ಲ ಬದಲಾಗಿ ಮಹಿಳೆ ಮತ್ತು ಪುರುಷರ ನಡುವಿನ ಯೋಗಕ್ಷೇಮದ ಅಂತರವನ್ನು ಕಡಿಮೆ ಮಾಡುವುದಾಗಿದೆ.3 ಆದರೆ ಇತ್ತೀಚಿನವರೆಗೂ ನಮ್ಮ ಅಭಿವೃದ್ಧಿ ಸಿದ್ಧಾಂತಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ.


1.1 ವರಮಾನ ವರ್ಧನೆ ಮತ್ತು ಮಾನವ ಅಭಿವೃದ್ಧಿ ವರ್ಧನೆ ಮುಖಾಮುಖಿ
ಅಭಿವೃದ್ಧಿ ಕುರಿತ ಸಾಹಿತ್ಯ, ಅಭಿವೃದ್ಧಿ ಸಿದ್ಧಾಂತಗಳು ಮತ್ತು ಅಭಿವೃದ್ಧಿಯ ಪ್ರಕ್ರಿಯೆ – ಇವೆಲ್ಲವನ್ನೂ ಕೂಲಂಕುಷವಾಗಿ, ಅಮೂಲಾಗ್ರವಾಗಿ ಪರಿಶೀಲಿಸಿದರೆ ನಮಗೆ ಅಲ್ಲಿ ವರಮಾನ ವರ್ಧನೆಯನ್ನು ಕೇಂದ್ರ ಧಾತುವನ್ನಾಗಿ ಮಾಡಿಕೊಂಡಿರುವ ಪ್ರಧಾನ ಧಾರೆ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಮತ್ತು ಜನರನ್ನು ಮುಖ್ಯ ಧಾತುವನ್ನಾಗಿ ಮಾಡಿಕೊಂಡ ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಎಂಬ ಎರಡು ವಿಭಿನ್ನವಾದ ಸೈದ್ಧಾಂತಿಕ ಧಾರೆಗಳು ಎದುರಾಗುತ್ತವೆ. ಮೆಹಬೂಬ್ ಉಲ್ ಹಕ್ ತನ್ನ ‘ಮಾನವ ಅಭಿವೃದ್ಧಿ ಕುರಿತ ಅಭಿಮತ’ ಎಂಬ ಕೃತಿಯನ್ನು ಹೀಗೆ ಅರಂಭಿಸುತ್ತಾನೆ “ಬದುಕಿನಲ್ಲಿ ಅತ್ಯಂತ ಕ್ಲಿಷ್ಟಕರವಾದ ಸಂಗತಿ ಯೆಂದರೆ ಸದಾ ಕಣ್ಣಿಗೆ ಕಾಣುವ ಸಂಗತಿಗಳನ್ನು ಗುರುತಿಸುವುದು” ಮುಂದುವರಿದು ಹಕ್ ಹೇಳುವ ಪ್ರಕಾರ ಮಾನವ ಅಭಿವೃದ್ಧಿ ಎಂಬುದು ನಮ್ಮ ಅನುಭವದ ಸಂಗತಿಯೇ ಅಗಿದ್ದರೂ ಅದನ್ನು ನಾವು ಗುರುತಿಸಿರಲಿಲ್ಲ. ಅಭಿವೃದ್ಧಿ ಕುರಿತ ಅನೇಕ ದಶಕಗಳು ಕಳೆದು ಹೋದ ಮೇಲೆ ವರಮಾನ ವರ್ಧನೆ ಎಂಬುದು ತನ್ನಷ್ಟಕ್ಕೆ ತಾನೆ ಸಹಜವಾಗಿ ಜನರ ಬದುಕಾಗಿ ಪರಿವರ್ತನೆಯಾಗುವುದಿಲ್ಲವೆಂಬುದು ತಿಳಿದು ಬಂತು ಎಂದು ಬರೆಯುತ್ತಾನೆ. ಈ ಕಾರಣಕ್ಕಾಗಿಯೇ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ಅಸಾಧಾರಣ ಸಾಧನೆ ಸಾಧಿಸಿಕೊಂಡಿದ್ದರೂ ಸ್ವಾತಂತ್ರ್ಯದ ನಂತರ ಭಾರತದಲ್ಲಿ ಮತ್ತು ಏಕೀಕರಣದ ನಂತರ ಕರ್ನಾಟಕದಲ್ಲಿ ಇಂದಿಗೂ ಪ್ರಾದೇಶಿಕ ಅಸಮಾನತೆ ಮತ್ತು ಲಿಂಗ ಸಂಬಂಧಿ ಅಸಮಾನತೆಗಳು ಇಂದಿಗೂ ಮುಂದುವರೆದಿವೆ. ಇವೆಲ್ಲವಕ್ಕೂ ಕಾರಣ ಮಾನವಾಭಿವೃದ್ಧಿ ಸಂಗತಿಯನ್ನು ನಿರ್ಲಕ್ಕಿಸಿರುವುದೇ ಪ್ರಮುಖ ಕಾರಣವಾಗಿದೆ. ಯುಎನ್‍ಡಿಪಿಯು 1994 ರ ಮಾನವ ಅಭಿವೃದ್ಧಿ ವರದಿಯಲ್ಲಿ ಮಾನವ ಅಭಿವೃದ್ಧಿಯನ್ನು ಸ್ಪಷ್ಟವಾಗಿ ನಿರ್ವಚಿಸಿಕೊಂಡಿರುವ ಪ್ರಕಾರ “ಮಾನವ ಅಭಿವೃದ್ಧಿಯು ವರಮಾನವನ್ನು ವರ್ಧಿಸುವುದರ ಜೊತೆಗೆ ಅದನ್ನು ಸಮಾನವಾಗಿ ವಿತರಣೆ ಮಾಡುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಅದು ಪರಿಸರವನ್ನು ನಾಶ ಮಾಡುವುದರ ಬದಲಾಗಿ ಅದನ್ನು ಅದು ಪುನರ್‍ಜ್ಜೀವನಗೊಳಿಸುತ್ತದೆ. ಬಡವರ ಬದುಕು ಉತ್ತಮಗೊಳ್ಳುವ ಪ್ರಕ್ರಿಯೆಗೆ ಅಲ್ಲಿ ಅದ್ಯತೆ ದೂರೆಯುತ್ತದೆ. ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅವಕಾಶಗಳ ಹಾಗೂ ಆಯ್ಕೆಗಳ ವ್ಯಾಪ್ತಿಯನ್ನು ಅದು ವಿಸ್ತøತಗೊಳಿಸುತ್ತದೆ. ಬದುಕಿನ ಮೇಲೆ ಪ್ರಭಾವ ಬೀರುವ ತೀರ್ಮಾನಗಳಿಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಜನರಿಗೆ ಸಹಭಾಗಿಗಳಾಗುವ ಅವಕಾಶವನ್ನು ಅದು ಒದಗಿಸಿಕೊಡುತ್ತದೆ. ಅದು ಜನರ ಪರವಾಗಿಯೂ, ಅದು ಉದ್ಯೋಗದ ಪರವಾಗಿಯೂ, ಅದು ಪರಿಸರದ ಪರವಾಗಿಯೂ ಮತ್ತು ಅದು ಮಹಿಳೆಯರ ಪರವಾಗಿಯೂ ಇರುತ್ತದೆ”.4
ಅಂದರೆ ಈ ಹಿಂದಿನ ಅಭಿವೃದ್ಧಿ ಸಿದ್ಧಾಂತಗಳು ಮಹಿಳೆಯರ ಅಭಿವೃದ್ಧಿಯನ್ನು ತಮ್ಮ ವಿಚಾರ ಪ್ರಣಾಳಿಕೆಯ ಭಾಗವಾಗಿಸಿಕೊಂಡಿರಲಿಲ್ಲ. ಹಾಗಾಗಿ ಮಹಿಳೆಯರು ನಿರಂತರವಾಗಿ ಅಸಮಾನತೆಯ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ಲಿಂಗ ಸಮಾನತೆಯು ಅಭಿವೃದ್ಧಿಯ ಉಪಕರಣವಾಗಿದೆ. ಇದು ಆರ್ಥಿಕ ದಕ್ಷತೆ ಮತ್ತು ಇತರ ಅಭಿವೃದ್ಧಿಯ ಸಾಧನಗಳನ್ನು ಹೆಚ್ಚಿಸಲು ಮೂರು ಮಾರ್ಗಗಳನ್ನು ಒಳಗೊಂಡಿರುತ್ತದೆ. ಮೊದಲನೆಯದಾಗಿ, ಪುರುಷರು ಬಳಸುವ ಶಿಕ್ಷಣ, ಆರ್ಥಿಕ ಅವಕಾಶ ಮತ್ತು ಉತ್ಪಾದಕತೆಯನ್ನು ಸೃಷ್ಟಿಸುವ ವಿಶಾಲ ಉತ್ಪಾದಕತೆಯ ಅವಕಾಶಗಳು ಮಹಿಳೆಯರಿಗೂ ಸಮಾನವಾಗಿ ಲಭಿಸಬೇಕು. ಎರಡನೆಯದಾಗಿ, ತಮ್ಮ ಮಕ್ಕಳು ಸೇರಿದಂತೆ ಮಹಿಳಾ ನಿರಪೇಕ್ಷ ಮತ್ತು ಸಾಪೇಕ್ಷ ಸ್ಥಿತಿಯನ್ನು ಸುಧಾರಿಸುವುದು. ಮೂರನೆಯದಾಗಿ, ಸಮಾನ ಅವಕಾಶಗಳ ವೃದ್ಧಿ ಇಲ್ಲಿ ಮಹಿಳೆ ಮತ್ತು ಪುರುಷರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ತೀರ್ಮಾನ ತೆಗೆದುಕೊಳ್ಳುವ ಮತ್ತು ನೀತಿ ನಿಯಮಗಳನ್ನು ರೂಪಿಸುವ ಸಮಾನ ಅವಕಾಶಗಳನ್ನು ಕೊಡಬೇಕು.5 ಅದರೇ ಹಿಂದಿನ ಅಭಿವೃದ್ಧಿ ಪ್ರಣಾಳಿಕೆಗಳು ಇಂತಹ ವಿಚಾರಧಾರೆಯನ್ನು ಅಳವಡಿಸಿಕೊಳ್ಳದೇ ಇರುವುದರಿಂದ ಮಹಿಳೆಯರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಬಡತನ ಮನುಷ್ಯ ನಿರ್ಮಿಸಿದ ಅಸಮಾನತೆ ಮತ್ತು ಅಧೀನತೆಯು ಸಂಚಿನಿಂದ ಕೂಡಿದ್ದು, ಇಂದು ಮಹಿಳೆ ಅಕ್ಷರ ದಕ್ಕಿಸಿಕೊಡ್ಡಿದ್ದರೂ ಅಜ್ಞಾನದಿಂದ ಹೊರ ಬಂದಿಲ್ಲವಾದ್ದರಿಂದ ಅದಕ್ಕೆ ಪ್ರತಿ ಸಂಚನ್ನು ರೂಪಿಸಿ ತನ್ನ ಬದುಕನ್ನು ರೂಪಿಸಿಕೊಳ್ಳುವಲ್ಲಿ ಅಸಮರ್ಥಳಾಗಿದ್ದಾಳೆ.6 ಲೋಹಿಯರವರ ಪ್ರಕಾರ ಪುರುಷ ಮತ್ತು ಮಹಿಳೆಯರ ಮಧ್ಯೆ ಅಸಮಾನತೆ ಇರಕೂಡದು. ಅವರು ಪ್ರತಿಪಾದಿಸಿದ ಕ್ರಾಂತಿಯ ಏಳು ತತ್ವಗಳಲ್ಲಿ ಇದು ಪ್ರಮುಖವಾದುದು. ನಮ್ಮದು ಪಾರಂಪರಿಕವಾದ ಅಸಮಾನ ಸಮಾಜ. ಎಲ್ಲರಿಗೂ ಸಮಾನ ಅವಕಾಶ ನೀಡುವ ಮೂಲಕ ಸಮಾನತೆ ತರಲು ಸಾಧ್ಯವಿಲ್ಲ. ಮುಂದುವರಿದಿರುವ ಸಮಾಜದಲ್ಲಿ ಸಮಾನತೆ ತರಲು ಹಿಂದುಳಿದ ವರ್ಗಗಳು, ಮಹಿಳೆ, ಹರಿಜನ, ಆದಿವಾಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ದಮನಕ್ಕೊಳಗಾದವರಿಗೆ ವಿಶೇಷ ಅವಕಾಶಗಳನ್ನು ಶೇ.60 ರಷ್ಟು ಮೀಸಲಾತಿ ನೀಡುವ ಮೂಲಕ ಸಾಧ್ಯವಾಗಿಸಬೇಕೆಂದು ಪ್ರತಿಪಾದಿಸುತ್ತಾರೆ.7 ಜೈವಿಕ ಆಧಾರದ ಮೇಲೆ ಅಥವಾ ಲಿಂಗಬೇಧದ ನೆಲೆಯಲ್ಲಿ ಮಾನವ ಜನಾಂಗವನ್ನು ಸ್ತ್ರಿಯರು ಮತ್ತು ಪುರುಷರು ಎಂದು ವರ್ಗೀಕರಿಸುವ ಕ್ರಮವಿದೆ. ಸಾಮಾಜೀಕರಣದ ಪ್ರಕ್ರಿಯೆಗಳು ಅವರಿಬ್ಬರ ನಡುವೆ ಹಲವಾರು ವ್ಯತ್ಯಾಸ ಮತ್ತು ಅಸಮಾನತೆಗಳನ್ನು ಸೃಷ್ಟಿಸಿವೆ. ಇದು ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿಫಲ. ಹಾಗಾಗಿ ಲಿಂಗತ್ವವು ಸಂಪೂರ್ಣವಾಗಿ ಜೈವಿಕ ಅಂಶವೆಂದು ಪರಿಗಣಿಸಲಾಗುತ್ತದೆ. ಇದು ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿಫಲವಾಗಿದೆ. ಲಿಂಗದ ಪರಿಕಲ್ಪನೆ ಇಂದಿಗೂ ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.


1.2 ಲಿಂಗಸಂಬಂಧಿ ಮುಖ್ಯಾವಾಹಿನೀಕರಣ: ಒಂದು ಪರಿಕಲ್ಪನೆ
ಲಿಂಗವೆಂಬ ಪರಿಕಲ್ಪನೆಯು ಸಾಂಸ್ಕøತಿಕ ಲಕ್ಷಣವಾಗಿದೆ. ಇದು ಮಹಿಳೆ ಮತ್ತು ಪುರುಷರ ನಿರೀಕ್ಷೆಗಳು ಮತ್ತು ರೂಢಿಗಳಿಗೆ ಸಂಬಂಧಿಸಿರುತ್ತವೆ. ಕೆಲವು ಅರ್ಹತೆಗಳು ಮಹಿಳೆಯರಿಗೆ ನಿರಪೇಕ್ಷವಾಗಿರುತ್ತವೆ. ಮಹಿಳೆಯರಿಗೆ ಸಂಬಂಧಿಸಿದ ಅನನ್ಯತೆಗಳು ಸಾಮಾಜೀಕರಣದ ಪ್ರಕ್ರಿಯೆಯಿಂದ ರೂಪುಗೊಂಡಿವೆ. ಈ ಪ್ರಕ್ರಿಯೆಗಳು ಮಹಿಳೆಯರು ನಿರ್ವಹಿಸಬೇಕಾದ ಪಾತ್ರಗಳನ್ನು ನಿರ್ಧರಿಸಿದೆ. ಭಾರತೀಯ ಸಮಾಜ ಪಿತೃಪ್ರಧಾನ ವ್ಯವಸ್ಥೆಯಾಗಿದ್ದು ಅದು ಮಹಿಳೆಯರಿಗೆ ದ್ವಿತೀಯ ಸ್ಥಾನವನ್ನು ನಿಗದಿಪಡಿಸಿದೆ. ಅವರ ದೇಹಮೇಲಿನ ನಿರ್ಧಾರ, ಸಂಪನ್ಮೂಲಗಳು ಮುಂತಾದವುಗಳ ಮೇಲೆ ಯಾವ ಅಧಿಕಾರವು ಇಲ್ಲದಂತೆ ರೂಪಿಸಿದೆ. ಹಾಗಾಗಿ ವ್ಯವಸ್ಥೆ ಮತ್ತು ರಚನೆಯಲ್ಲಿ ಅಮೂಲಾಗ್ರವಾದ ಬದಲಾವಣೆಯನ್ನು ತರುವ ಮೂಲಕ ಲಿಂಗಸಂಬಂಧಿ ಅಸಮಾನತೆಯನ್ನು ಹೋಗಲಾಡಿಸಬಹುದಾಗಿದೆ.8 ಆದರೆ ಮಹಿಳೆಯನ್ನು ಸಾಮಾಜಿಕ ಘಟಕವನ್ನಾಗಿ ಅಭಿವೃದ್ಧಿ ನೆಲೆಯಲ್ಲಿ ಪ್ರಜ್ಞಾಪೂರ್ವಕವಾಗಿ ಗುರುತಿಸುವುದಿಲ್ಲ. ಇದರ ಜೊತೆಗೆ ಅಭಿವೃದ್ಧಿ ಪರಿಕಲ್ಪನೆಯು ಇಂದು ವಿವಿಧ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಇದರಲ್ಲಿ ಲಿಂಗ ಸ್ಪಂಧಿ ಅಯಾಮವು ಮುಖ್ಯವಾದುದು.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top