ಭಾರತಿ ಅಶೋಕ್ ಕವಿತೆ-ನೀನು ನನ್ನ ರಾಮನಲ್ಲ

ಕಾವ್ಯ ಸಂಗಾತಿ

ನೀನು ನನ್ನ ರಾಮನಲ್ಲ

ಭಾರತಿ ಅಶೋಕ್

ನೆಲದ ಮಕ್ಕಳ ಶ್ರಮದ ಬೆವರ ಗಮಲಿನಲ್ಲಿ….
ಅನಾಥ ಹೆಣ್ಣಿನ ಕಂಬನಿಯ ಬಿಸಿಯಲ್ಲಿ
ಇರುವ ರಾಮ ನನ್ನ ರಾಮ

ಗುಡಿಸಲೊಳಗೆ ಬಂಧಿ ಅವನು
ತೇಪೆ ಸೀರೆ ಇಣುಕು ಬೆಳಕು
ನನ್ನ ಹಾಗೆ ಇರುವೆಗೆ
ನುಚ್ಚಿಕ್ಕಿ ಹಕ್ಕಿಗೆ ನೀರು
ಕೊಡುವ ರಾಮ ನನ್ನ ರಾಮ
ನೀನು ಅವನಲ್ಲ,ಕಾಡು ಸುಟ್ಟೆ, ಕನ್ಯೆ ಸುಟ್ಟೆ
ಅವನೋ
ನನ್ನಜ್ಜನ ಊರುಗೋಲಾದವನು
ಅಪ್ಪನ ಒಡನಾಡಿ
ಕಂಬಳಿಯಾದವನು! ಅವನು
ಅವನು ನನ್ನ ರಾಮ!

ನೀನೋ ಕೇಸರಿ ಪತಾಕೆ ಹಿಡಿದವನು
ಕೋದಂಡ ಎದೆಗೇರಿಸಿ
ನೆಲದವ್ವನ ಮಡಿಲ ಮಕ್ಕಳ
ಕುತ್ತಿಗೆ ಸೀಳಿದವನು!
ವಾಲಿ ಶಂಬೂಕರ ಎದೆಗೆ ಬಾಣ ಬಿಟ್ಟವನು

ನೀನು ನನ್ನ ರಾಮನಲ್ಲ
ಅವನೋ ಬೀದಿಯಲ್ಲಿ ಚಿಂದಿ ಆಯುವ ಗಮಾರನು
ಕಲ್ಲ ಕುಟ್ಟುವ ಕುಟಿಕನು

ನೀನೋ….
ಮಹಲ ಹಂಗಿನವನು
ಹೊಟ್ಟೆಗೆ ಹಿಟ್ಟಿಲ್ಲದ ನನ್ನಂತ ಹೆಣ್ಣುಗಳ
ಹೊಲೆ ಬಟ್ಟೆಯಲಿ ನಿಂದ ರಾಮನಲ್ಲ!

ಚಿಂದಿ ಕೌದಿಯ ಕೋಟಿ ಸೂರ್ಯನ
ಬೆಳದಿಂಗಳ ಅಂಗಳವೇ ಅರಮನೆ
ನನ್ನ ರಾಮನಿಗೆ.
ಕೊಳಚೆ ಬೀದಿಯಲಿ ಅವನ ದರ್ಬಾರು
ಹಸಿದು ಗುಳಿಬಿದ್ದ ಕಂಗಳ ಆಳದಲಿ
ಅಮೃತವ ತುಂಬಿ ಬೀದಿಗುಂಟ ಹರಿಸುವವನು
ನನ್ನ ರಾಮ

ನೀನವನಲ್ಲ ಬಿಡು.
ತುಂಬಿದ ಬಸುರಿಯ
ಕಾಡಿಗಟ್ಟಿದವನು, ಬೆಂಕಿಗೆ ನೂಕಿದವನು!

ನಾನು.‌‌‌…ನೀನು…. ಬೇರಲ್ಲವೆಂದು
ಪಾತಿವೃತ್ಯಕೆ ಜೋಲದೆ ಗೆಳೆತನದ ಬಾಷ್ಯ
ಬರೆದವನು
ಯಾರ ಮಾತಿಗೂ ಬಗ್ಗುವವನಲ್ಲ ಸ್ವಂತ ವಿವೇಕಿ
ಅರಿವಿನ ರಾಮ,
ನನ್ನ ರಾಮ!ಹೆಂಗರುಳ ರಾಮ ನನ್ನ ರಾಮ.


Leave a Reply

Back To Top