ಗಣಪತರಾವ್ ಪಾಂಡೇಶ್ವರರ
ಕಾವ್ಯಲೋಕ
ಚಂಗಲವೆ

ಪುಸ್ತಕ ಸಂಗಾತಿ

ಗಣಪತರಾವ್ ಪಾಂಡೇಶ್ವರರ
ಕಾವ್ಯಲೋಕ
ಚಂಗಲವೆ

ಗಣಪತರಾವ್ ಪಾಂಡೇಶ್ವರರ
ಕಾವ್ಯಲೋಕ
ಪಾಂಡೇಶ್ವರರ ಒಂದು ಕವನ ಸಂಕಲನದ ಹೆಸರು ” ಚೆಂಗಲವೆ”. ತಮ್ಮ ಕವನ ಸಂಕಲನಗಳಿಗೆ ಅವರು ಇಡುತ್ತಿದ್ದ ಹೆಸರುಗಳೇ ಅತ್ಯಂತ ಸುಂದರ. ಸುಪಂಥಾ, ಚಾಂದನಿಕ, ಹೂಗೊಂಚಲು, ಕೊಳಲು ಕೃಷ್ಣ, ಇತ್ಯಾದಿ.
ಈ ” ಚೆಂಗಲವೆ ‘ ೧೯೮೩ ರಲ್ಲಿ ಮೈಸೂರಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಮರುಮುದ್ರಣವಾಯಿತು. ಇದರ ಮೊದಲ ಮುದ್ರಣ ೧೯೪೦ ರಲ್ಲಿ ಆಗಿತ್ತು.
ಪಾಂಡೇಶ್ವರರ ಮೊದಲ ಕಾವ್ಯಕೃತಿ ” ವಿವೇಕಾನಂದ ಚರಿತಮ್” . ಅದು ಅವರ ಹದಿನೇಳನೇ ವರ್ಷದಲ್ಲಿ ಹೊರಬಂದಿದ್ದು. ೧೯೨೭ ರಲ್ಲಿ ” ಕೊಳಲ ಕೃಷ್ಣ” ಪ್ರಕಟವಾಯಿತು. ಇದು ಭಾವಗೀತೆಗಳ ಸಂಕಲನ.
ಅವರ ಇಪ್ಪತ್ತನೇ ವಯಸ್ಸಿನಲ್ಲಿ ” ಹೂಗೊಂಚಲು ” ನೂರು ಆಧುನಿಕ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಬಿಎಂಶ್ರೀ , ಗೋವಿಂದ ಪೈ, ಕುವೆಂಪು ಮೊದಲಾದವರಿಂದ ಪ್ರಶಂಸೆಗೊಳಗಾದ ಕೃತಿ‌ ಇದು.
೧೯೨೯ ರಲ್ಲಿ ” Fragrant Buds ” ಎಂಬ ಇಂಗ್ಲಿಷ್ ಕವನಗಳ ಸಂಕಲನ ಹೊರಬಂತು. ಅದರಲ್ಲಿ ೨೩ ಕವನಗಳಿವೆ.
ಚೆಂಗಲವೆಗೆ ಖ್ಯಾತ ಸಂಶೋಧಕ ಕವಿ ಎಂ. ಗೋವಿಂದ ಪೈ ಅವರ ಅದ್ಭುತ ಮುನ್ನುಡಿ ಇದೆ. ಇದರಲ್ಲಿನ ” ಕ್ರಿಸ್ತ ಜನ್ಮ ” ಕವಿತೆಯ ಪ್ರೇರಣೆಯಿಂದಲೇ ಗೋವಿಂದ ಪೈ ಅವರು ತಮ್ಮ ಪ್ರಸಿದ್ಧ ” ಗೊಲ್ಗೊಥಾ” ಎಂಬ ಖಂಡಕಾವ್ಯವನ್ನು ಬರೆದದ್ದು.
ಅವರ ” ಚಾಂದನಿಕ” ಸುಂದರ ಗೀತರೂಪಕಗಳ ಸಂಗ್ರಹ.
ಅವರ ” ಬಲಿ ವಾಮನ” ಎಂಬ ಕಿರು ರೂಪಕ ಕಾವ್ಯವನ್ನು ಬೇಂದ್ರೆಯವರು ” ಮಹಾಕಾವ್ಯದ ತುಣುಕು” ಎಂದು ಕರೆದಿದ್ದಾರೆ. ಆಕಾರದಲ್ಲಿ ಸಣ್ಣದಾದರೂ ಅದೊಂದು ಅಪೂರ್ವ ಕಾವ್ಯಕೃತಿಯಾಗಿ ಹೆಸರಾಗಿದೆ.
ಇದಲ್ಲದೇ ಅವರು ” ಮಾರಾವತಾರ ” ಎಂಬ ಯಕ್ಷಗಾನ ಏಕಪಾತ್ರಾಭಿನಯ ಪ್ರಸಂಗವನ್ನೂ ಬರೆದಿದ್ದಲ್ಲದೇ ತಾವೇ ಮನ್ಮಥನ ಪಾತ್ರ ವಹಿಸಿ ರಂಗಪ್ರದರ್ಶನ ಮಾಡಿದ್ದಾರೆ.
ಪಾಂಡೇಶ್ವರರ ಕಾವ್ಯದ ಸೊಗಸನ್ನು ಓದಿಯೇ ಅನುಭವಿಸಬೇಕು. ಅವರ ಸಂಕಲನಗಳಲ್ಲಿನ ಕವನಗಳ ಕೆಲವು ಸಾಲುಗಳೇ ಸಾಕು ಅವರ ಕಾವ್ಯ ಸತ್ವವನ್ನು ಅರಿಯಲು.
*
ಚಿಂತೆಯ ಮುಗಿಲಂತರದೊಳ-
ಗಿದೆ ಸಂತಸದುದಯ
ತಂತಿಯ ಮರೆಯೊಳಗಿರುವೊಲು
ಸಂಗೀತದ ಹೃದಯ!


  • ಕತ್ತಲೆಯ ಕೊಡದೊಳಗೆ
    ಬಿತ್ತು – ಬೆಳಕಿನ ಬಿತ್ತು,
    ಕೊಡವೆಲ್ಲಬೆಳಕಿಂದ ತುಂಬಿ
    ತುಳುಕಿತ್ತು, ಹೊತ್ತು ಮೂಡಿತ್ತು!
    *
    ಮಾತು ಮನಸಿಗೆ ತೂತು
    ಮೌನ ಜ್ಞಾನಕೆ ಸೇತು
    ಮಾತು ಬಿತ್ತುವ ಬೀಜ
    ಸಿಹಿಕಹಿಯ ಫಲಹೇತು!
    *
    ಪ್ರೇಮವೆಂಬುವಾ ತುಂಬಿದ ತೊರೆಯಲಿ
    ಈಜುತಿರಲು ಮನುಜ
    ಕಾಮವೆಂಬುವಾ ಕಲ್ಲ ಕಟ್ಟಿಕೊಳೆ
    ಸಾವನವನು ಸಹಜ!
    *
    ಬೇಕೆಂಬುದೇ ಬದುಕು, ಸಾಕೆಂಬುದೇ ಸಾವು
    ಬೇಕು ಸಾಕುಗಳಿಕ್ಕುಳಕೆ
    ಸಿಲುಕುವುದೆ ನೋವು

  • ಮೌನದಲಿ ಮಧುವುಂಟು,
    ಮಾತಿನಲಿ ಮತಿಯುಂಟಯ ,
    ಮೌನ- ಮಾತುಗಳೆ ಬಾಳಿರುಳು – ಹಗಲು!

  • ಬೇಕೆಂಬ ಹೆಗಲಿಗಿದೆ
    ನೂರಾರು ಕನಸುಗಳು
    ಸಾಕೆಂಬ ಇರುಳಿಗೋ
    ಶಾಂತಿ ವಿಶ್ರಾಂತಿಗಳು.
    ಪಾಂಡೇಶ್ವರರ ಕವನಗಳ ತುಂಬ ಇಂತಹ ಮೃದು ಮಧುರ ಜೇನ ಹನಿಗಳು ತುಂಬಿಕೊಂಡಿವೆ. a

ಎಲ್. ಎಸ್. ಶಾಸ್ತ್ರಿ

One thought on “ಗಣಪತರಾವ್ ಪಾಂಡೇಶ್ವರರ
ಕಾವ್ಯಲೋಕ
ಚಂಗಲವೆ

Leave a Reply

Back To Top