“ನಂಜಿಲ್ಲದ ಉಸಿರು “

ಪುಸ್ತಕ ಸಂಗಾತಿ

ಮೆದು ಮಾತಿನ

“ನಂಜಿಲ್ಲದ ಉಸಿರು “

ಮೆದು ಮಾತಿನ “ನಂಜಿಲ್ಲದ ಉಸಿರು

ಈ ಸಂಕಲನವನ್ನು ಹನಿಗವನಗಳ ಗುಚ್ಛ ಅನ್ನಿ ಕಿರುಗವನಗಳ ಗುಚ್ಛ ಅನ್ನಿ ಮಿನಿ ಗವನಗಳ ಗುಚ್ಛ ಅನ್ನಿ ಏನೇ ಅಂದರೂ ಒಂದು ಹೃದಯ ಸಂವಾದ ಏರ್ಪಡಿಸುವ ಸಂಕಲನ.

ಈ ರೀತಿಯ ಕವಿತೆಗಳನ್ನು ಕೆಲವರು ಪ್ರಾಸಕ್ಕಾಗಿ ಬರೆದರೆ ಕೆಲವರು ಗಂಭೀರವಾಗಿ ಸಾಮಾಜಿಕ ಕಳಕಳಿಯಿಂದ ಬರೆಯುತ್ತಾರೆ.ಪ್ರಾಸಕ್ಕಾಗಿ ಬರೆದಿದ್ದು ಆ ಕ್ಷಣಕ್ಕೆ ಖುಷಿ ಕೊಟ್ಟರೆ,ಗಂಭೀರವಾಗಿ ಬರೆದಿದ್ದು ಕಾಡುವ ಗುಣ ಹೊಂದಿರುತ್ತೆ.ಹೀಗೆ ಗಂಭೀರವಾಗಿ ಬರೆಯುವ ಕವಿಗಳ ದಂಡೆ ಕನ್ನಡ ಹನಿಗವನಗಳ ಇತಿಹಾಸದಲ್ಲಿ ಸಿಗುತ್ತೆ.

ದಿನಕರ ದೇಸಾಯಿ, ಎಚ್.ದುಂಡಿರಾಜ್,ಸಿ.ಪಿ.ಕೆ,ಜರಗನಹಳ್ಳಿ ಶಿವಶಂಕರ ಹೀಗೆ ಸಾಲು ಸಾಲು ದಿಗ್ಗಜರು ಕಂಡು ಬರುತ್ತಾರೆ.
ಇಂತಹ ಮಹನೀಯರ ದಾರಿಯಲ್ಲಿ ಸಾಗುವ ಇರಾದೆ ಇರುವ ಸಾಹಿತಿ ಹೊನ್ನಪ್ಪ ಕರೆ ಕನ್ನಮ್ಮನವರು ಎಂದು ಈ ಸಂಕಲನದಲ್ಲಿ ತೋರಿಸಿದ್ದಾರೆ.ಉದಾಹರಣೆಗೆ ಅವರ ಈ ಹನಿಗವನಗಳ ನೋಡಿ…

ದೇವರು

ನೋವನ್ನಾಲಿಸುವ
ಹೃದಯಗಳು
ಕಲ್ಲಾಗಿ ಉಳಿದಿದ್ದರಿಂದಲೇ
ಎಲ್ಲೋ ಬಿದ್ದಿದ್ದ
ಕಲ್ಲುಗಳು
ಎದೆಯ ಭಾರ ಇಳಿಸುವ

ದೇವರಾಗಿ ಬಿಟ್ಟವು…!!

ಮತಿ ಹೀನತೆ

ಅಂದು ಶರಣ
ಸಂತರು ಆಗಿ ಹೋದರು
ಜಾತಿ ಗೋಡೆಯನ್ನು ಒಡೆದು ಹಾಕಿ…
!

ಇಂದು ಅವರನ್ನು
ಪೂಜಿಸುತ್ತಿದ್ದೇವೆ ಅದೇ
ಗೋಡೆಗೆ ನೇತು ಹಾಕಿ!

ಕವಿಯಾದವನಿಗೆ ಒಂದು ಒಳನೋಟವಿರಬೇಕು.ಸಮಾಜವನ್ನು ಬಿಡುಗಣ್ಣಿಂದ ನೋಡಿ ಅಲ್ಲಿಯ ಭೌತಿಕ ಕ್ರಿಯೆ ಗಳನ್ನು ವಿಮರ್ಶೆಸುವ, ಒಂದು ವಿಷಾದ ವ್ಯಂಗ್ಯದ ಮೂಲಕ ಎಚ್ಚರಿಸುವ ಎದೆಗಾರಿಕೆ ಬಹಳ ಮುಖ್ಯ ಅವರಡನ್ನು ಈ ಹನಿಗವನಗಳ ಮೂಲಕ ಹೊನ್ನಪ್ಪನವರು ಮಾಡಿದ್ದಾರೆ.ಇಂತಹ ಅನೇಕ ಹನಿಗವನಗಳು ಈ ಸಂಕಲನದಲ್ಲಿ ಕಾಣ ಸಿಗುತ್ತವೆ.

ಸಮಾಜದಲ್ಲಿಯ ನೈತಿಕ ಮೌಲ್ಯಗಳ ಕುಸಿತ ಕಂಡು ನೊಂದು ತಮ್ಮ ಹನಿಗವನಗಳಲ್ಲಿ ಬಿಂಬಿಸಿದ ಅವರು ಮಿದು ವಾದ ಭಾಷೆಯಲ್ಲಿ ಅದನ್ನ ಹೇಳುವುದು ಅವರ ಹೆಚ್ಚುಗಾರಿಕೆ ಕೂಡ.ಉದಾಹರಣೆಗೆ..

ವಾಸ್ತವ


ಮಗನನ್ನು ಓದಿಸಿದರು
ಅಪ್ಪ ಅಮ್ಮ
ಹೊಟ್ಟೆ ಬಟ್ಟೆ ಕಟ್ಟಿ…!
ಮಗ ಸುಖವಾಗಿದ್ದಾನೆ
ಅಪ್ಪ ಅಮ್ಮನನ್ನು
ಹೊರಗಟ್ಟಿ…!!

ಯಕ್ಷ ಪ್ರಶ್ನೆ


ಜಗದಲಿ
ಯಾವ ತಾಯಿಯೂ
ಇಡುವುದಿಲ್ಲ ಮಕ್ಕಳು ತಿಂದ
ರೊಟ್ಟಿ ಲೆಕ್ಕ..!
ಕೊನೆಗೆ ಒಂದೊಂದು
ರೊಟ್ಟಿಗೇಕೆ ಅನುಭವಿಸುತ್ತಾಳೆ
ಮಕ್ಕಳಿಂದ ನೂರೆಂಟು ದುಃಖ…!!

ವೃದ್ಧಾಶ್ರಮಗಳ ಬಳುವಳಿ ಅಥವಾ ಮುಪ್ಪಿನ ಕಾಲದ ತಂದೆ ತಾಯಿಗಳ ಇವತ್ತಿನ ಪರಿಸ್ಥಿತಿಯನ್ನು ಇಷ್ಟು ತೀವ್ರವಾಗಿ ನೋಡುತ್ತಲೇ ಪ್ರಶ್ನೆ ಕೇಳುವ ಮೂಲಕ ಒಂದು ಹನಿ ಸಾವಿರ ದನಿಗಳಲ್ಲಿ ಪ್ರತಿ ಫಲವಾಗುತ್ತಾ ಇವರು ಸಮಾಜ ಮುಖಿ ಕವಿಯಾಗಿ ಕಾಣುತ್ತಾರೆ

ಕವಿಯೊಬ್ಬ ರೂಪ ಗೊಳ್ಳುವುದು ಹೀಗೆ ಅಲ್ಲವಾ ತಾನು ನೋಡಿದ ಕಂಡು ಕೊಂಡ ತತ್ಯ ಗಳ ಹೇಳುತ್ತಲೇ ತನ್ನ ವೈಯಕ್ತಿಕ ಜೀವನವನ್ನು ಪ್ರೀತಿ ವಿರಹ, ನೋವು,ಹಾಸ್ಯ ಮತ್ತೂ ಸಂಸಾರದ ಅನುಭವಗಳನ್ನು ಲವಲವಿಕೆಯಿಂದ ಬರೆದು ಕೊಳ್ಳುತ್ತಾ ಮತ್ತಷ್ಟು ತೆರೆದು ಕೊಳ್ಳುತ್ತಾನೆ.ಇಲ್ಲಿ ಕೂಡ ಹೊನ್ನಪ್ಪನವರು ಯಶಸ್ಸು ಕಂಡಿದ್ದಾರೆ ಉದಾಹರಣೆಗೆ ಈ ಹನಿಗವನಗಳ ಗಮನಿಸಿ….

ಗುಟ್ಟು

ಸಹಿಸುವುದನ್ನು
ಕಲಿತರೆ ಸಾಕು ಹೆಂಡತಿ…!
ಅಗತ್ಯವೇ ಬೀಳುವುದಿಲ್ಲ
ಗಂಡನಿಗೆ “ಹೆಂಡ “ಅತಿ..!

ಕಿಡಿ

ನನ್ನುಸಿರ
ಪೂರ್ಣತೆಗೆ
ನಿನ್ನುಸಿರು ಬೆಸೆಯುವುದು
ನಿತ್ಯದ ರೂಢಿ…!
ಆದರೀಗ ಅದಕೂ
ಯಾರೋ ಹೇಳಿದ್ದಾರೆ
ಕ್ಯಾತೆ ತೆಗೆಯಲು
ಇಲ್ಲ ಸಲ್ಲದ ಚಾಡಿ…!!

ಇನ್ನು ಈ ಸಂಕಲನಕ್ಕೆ ಸೃಜನಶೀಲ ಬರಹಗಾರರು, ಛಾಯಾಚಿತ್ರಗಾರರು ಆದ ನಾಮ ದೇವ ಕಾಗದಗಾರರ ಚಿತ್ರಗಳು ನಿಮ್ಮನ್ನು ಅಲ್ಲಲ್ಲಿ ತಡೆದು ನಿಲ್ಲಿಸಿ ಚಿಂತನೆಗೂ ತಳ್ಳುತ್ತವೆ. ಈ ಕೃತಿಗೆ ಮುನ್ನುಡಿ ಬರೆದ ಶ್ರೀ ಯುತ
ಡಾ / ಗುರುಮೂರ್ತಿ ಯರಗಂಬಳಿ ಮಠ ಅವರ ಮಾತುಗಳು ಹೊನ್ನಪ್ಪನವರ ಬರವಣಿಗೆಗೆ ಪೋಷಕವಾಗಿರುವಂತೆ ಕಂಡು ಬಂದಿವೆ.ಅಲ್ಲಿ ತುಸು ಅತಿಶಯ ಅನ್ನಿಸಿದರೂ ನಿರಾಕರಿಸಿ ಸಾರಾಸಗಟಾಗಿ ತಳ್ಳುವಂತದ್ದು ಏನೂ ಇಲ್ಲಾ.ಅವರ ಹಾರೈಕೆ ಈಡೇರಲಿ ಎನ್ನುವ ಆಶಯ ನನ್ನದು ಕೂಡ.ಇನ್ನು ಬೆನ್ನುಡಿ ಬರೆದಿರುವ ಹಿರಿಯ ಸಾಹಿತಿಗಳಾದ ಶ್ರೀ ಯುತ ಎ.ಎ.ದರ್ಗಾ ರವರು ಹೇಳಿರುವಂತೆ “ವಾಸ್ತವಿಕತೆಯನ್ನು ಮಾರ್ಮಿಕವಾಗಿ ಹೇಳುವ ಕೃತಿ” ಅನ್ನುವ ಈ ವ್ಯಾಖ್ಯಾನ ಕೂಡ ಸಮಂಜಸವಾಗಿಯೇ ಇದೆ ಎನ್ನಿಸಿತು.
ಇನ್ನೂ ಇಡೀ ಸಂಕಲನ ಓದಿದಾಗ ಅವರು ಇನ್ನಷ್ಟು ಭಾಷೆಯನ್ನು ದುಡಿಸಿ ಕೊಳ್ಳು ಬಹುದಿತ್ತು ಅನ್ನಿಸಿತು ಅಲ್ಲದೇ ಹೇಳುವುದನ್ನು ಇನ್ನೂ ನೇರ ಹೇಳಲಿಕ್ಕು ಅವಕಾಶ ಇದ್ದಾಗಲೂ ಅದನ್ನು ಮಾಡುವಲ್ಲಿ ಬರೆಯುವಲ್ಲಿ ಹಿಂದೇಟು ಹಾಕಿರುವುದು ಗಮನಿಸಬಹುದು.ಈ ಎಲ್ಲ ಅಳುಕು ಅಂಜಿಕೆ ಬಿಟ್ಟು ನಿರ್ಭಿಡಿಯಾಗಿ ಬರೆದರೆ ಖಂಡಿತ ಇನ್ನಷ್ಟು ಓದುಗರಿಗೆ ರುಚಿಸಬಹುದು.ಇಂತಹ ಹಾದಿಗೆ ಕಾಲ ಮುಂದೆ ಉತ್ತರಿಸಲಿದೆ.ಅವರ ಬರವಣಿಗೆಯನ್ನು ಕಾಲದೊಂದಿಗೆ ಕಾಯಬೇಕು ನಾವು ಅಷ್ಟೇ.ಅವರಿಗೆ ಮತ್ತೊಮ್ಮೆ ಶುಭ ಕೋರುತ್ತಾ…


ದೇವರಾಜ್ ಹುಣಸಿಕಟ್ಟೆ

One thought on ““ನಂಜಿಲ್ಲದ ಉಸಿರು “

  1. ಧನ್ಯವಾದಗಳು ಹುಣಸಿಕಟ್ಟಿ ಸರ್
    ಹಾಗೂ ಪ್ರಕಟಿಸಿದ ಸಂಪಾದಕ ಬಳಗಕ್ಕೆ…

Leave a Reply

Back To Top