ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ಸಮನ್ವಯದ ಸಮ್ಮಿಲನ ಜಾತ್ರೆ

ಚಿಕ್ಕವಳಿರುವಾಗ ನನ್ನಪ್ಪ ತನ್ನ ಹೆಗಲ ಮೇಲೆ ಕುಳ್ಳಿಸಿಕೊಂಡು ಜಾತ್ರೆಯ ನೂಕು ನುಗ್ಗಿಲಿನಲ್ಲಿ ಜೋಪಾನವಾಗಿ ಮೆರವಣಿಗೆ ಮಾಡುವಾಗ ಅದೆಂತಹ ಖುಷಿ.ಕೈಹಿಡಿದು ಹೊರಟ ನನ್ನ ಸಹಪಾಠಿಗಳೆಲ್ಲ ಆಶ್ಚರ್ಯದಿಂದ ನೋಡುವಾಗ‌ ಅದರ ಮಜವೇ ಬೇರೆ.ಜಾತ್ರೆಯ ದೇವಿಯರನ್ನು ಎದುರು ಬದುರಾಗಿ ಸ್ಪಷ್ಟವಾಗಿ ನೋಡುವ ಕಂಗಳಿಗೆ ಹಬ್ಬ.ಬಾಲ್ಯದ ಸಡಗರ ಅಪ್ಪನ ತಲೆಗೂದಲು, ಕತ್ತನ್ನು ಬಲವಾಗಿ ಹಿಡಿದುಕೊಂಡು ಅಲ್ಲಿ ಕುಣಿವವವರನ್ನು ಕಂಡು ಭಯಪಟ್ಟಿದ್ದು,ಅಪ್ಪ ಏನಿಲ್ಲ ಅದು ಹೆದರಬಾರದು ನೋಡು ದೇವಿಯರನ್ನು ಹೊತ್ತು ತಿರುಗುವ ಭಕ್ತರನ್ನು ಕೈಮುಗಿಯೆಂದು ಪುಟ್ಟ ಕೈಗಳಿಗೆ ನಮನ ಕಲಿಸಿದಾಗ ನಾನು ಮಂತ್ರ ಮುಗ್ಧೆ.ದೇವಿ ಜಾತ್ರೆಯಲ್ಲಿ ನನಗೆ‌ಬೇಕಾದ್ದನ್ನು ಅಪ್ಪ ಕೊಡಿಸಲಿ ಎಂದು ಬೇಡಿಕೊಳ್ಳುತ್ತಿದ್ದೆ. ಜನಜಂಗುಳಿಯಲ್ಲಿ ಬಿಸಿಬಿಸಿ ಜಿಲೇಲಿ,ಬೆಂಡು ಬೆತ್ತಾಸ್,ಚುಮ್ಮರ್ರಿ,ಖಾರ ಕೊಡಿಸಿದಾಗ ಖುಷಿಯೋ ಖುಷಿ.ಕೈಗೆರಡು ಬಣ್ಣಬಣ್ಣದ ಪ್ಲಾಸ್ಟಿಕ್ ಬಳೆಗಳು,ಪುಗ್ಗಿ, ಫೀಪಿ,ಇದಿಷ್ಟೇ. ಅಷ್ಟಕ್ಕೇ ಬದುಕು ಸಾರ್ಥಕವಾಗಿತ್ತು. ಆಗಿನ,ಈಗಿನ ಜಾತ್ರೆಗಳು ಬಾಲ್ಯ,ಹರೆಯ, ಮುಪ್ಪಿನಂತೆ,ಜಾತ್ರೆಗಳು ಮೂಲತಃ ಜಾತ್ಯತೀತ. ಎಲ್ಲಾ ಜಾತಿ ಧರ್ಮದವರೂ ಇಲ್ಲಿ ಪಾಲ್ಗೊಳ್ಳುತ್ತಾರೆ. ಪಾಲ್ಗೊಂಡು ‘ಇದು ನನ್ನ ಸಮಾಜ, ಇವರೆಲ್ಲ ನನ್ನವರು’ ಎಂಬ ಧನ್ಯತೆ ಅನುಭವಿಸುವುದಕ್ಕಾಗಿಯೇ ಅವು ಇರುವುದು.ಎಲ್ಲರ ಸಹಾಯ,ಸಹಕಾರ ಸಹಯೋಗಗಳಿಂದಲೇ ಅವು ಸಾಧ್ಯ. ಉತ್ತರ ಕರ್ನಾಟದಲ್ಲಿ ಸಾಮಾನ್ಯವಾಗಿ ಮಹಾ ಪುರುಷರ ನೆನಪಿನ ಜಾತ್ರೆಗಳು ನಡೆದರೆ, ದಕ್ಷಿಣ ಕರ್ನಾಟಕದಲ್ಲಿ ದೇವರ ಗುಡಿಗಳ ರಥೋತ್ಸವ ನಡೆಯುತ್ತದೆ.ದೇವರ ಜಾತ್ರೆಗಳು, ಗ್ರಾಮಗಳ ಒಂದು ಪ್ರಮುಖ ಪರಂಪರೆ. ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಜಾತ್ರೆ ಎಂದು ಪರಿಗಣಿಸಲಾಗುತ್ತದೆಜಾತ್ರೆ ಎಂದರೆ ಅದು ಬದುಕಿನ ಜಂಜಾಟಗಳ ನಡುವಿನ ಸಂಭ್ರಮ. ದೈನಂದಿನ ಕಾಯಕದ ಬ್ಲಾಕ್-ಎಂಡ್-ವೈಟ್ ಬದುಕಿಗೆ ಕಲರ್ -ಫುಲ್ ಕನಸುಗಳನ್ನು ಹೊತ್ತು ತರುವ ರಾಯಭಾರಿ. ನಮ್ಮದೇ ಊರನ್ನು ಹೊಸ-ಹೊಸ ರೂಪದಲ್ಲಿ ನಮಗೆ ದರ್ಶಿಸುವ ಸಂದರ್ಭಕ್ಕೆ ಸಾಕ್ಷಿಯಾಗುವ ಸದವಕಾಶ ಈ ಜಾತ್ರೆ. ನಿರಾಭರಣ ಸುಂದರಿಯಾದ ನಮ್ಮ ಊರು ಜಾತ್ರೆಯಂದು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಇನಿಯನ ಬರುವಿಕೆಗೆ ಕಾಯುತ್ತಿರುವಂತೆ ಭಾಸವಾಗುತ್ತದೆ.ಖುಷಿಯೋ ಖುಷಿ.

ಪ್ರತಿ ಮನೆ ಹಾಗೂ ಅಂಗಡಿಗಳು ದೀಪಾಲಂಕೃತಗೊಂಡು ಇರುಳಿನ ನಿಶೆಗೆ ಸಡ್ಡು ಹೊಡೆದು ಬಣ್ಣ-ಬಣ್ಣದ ಬೆಳಕಿನಲ್ಲಿ ಮಿಂದು ಬಣ್ಣದ ಬೆಳಕಿನ ಹನಿಗಳನ್ನು ತೊಟ್ಟಿಕ್ಕುತ್ತ ನಿಂತಂತಿರುತ್ತದೆ. ರಸ್ತೆಬದಿಯ ಮರಗಳು ನಿಯಾನ್ ಬಲ್ಬ್’ಗಳ ಮಾಲೆಯನ್ನು ಧರಿಸಿ ತಾವೇನು ಕಡಿಮೆ ಸುಂದರಿಯರಲ್ಲ ಎಂದು ಬೀಗುತ್ತಿರುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳಗುವ ಟ್ಯೂಬ್ ಲೈಟ್ ಗಳು ಜಾತ್ರೆಯ ಸಲುವಾಗಿ ಸರ್ವಾಲಂಕೃತವಾಗಿ ಆಗಮಿಸುವ ಭಕ್ತಾದಿಗಳ ಉಡುಪಿನ ಬೆರಗನ್ನು ಇನ್ನಷ್ಟು ಹೆಚ್ಚಿಸುವಂತಿರುತ್ತದೆ. ರಥಬೀದಿ ಸಮೀಪಿಸುತ್ತಿದ್ದಂತೆ ನಮ್ಮನ್ನು ಸ್ವಾಗತಿಸುವ ಬೆಳಕಿನ ಕಮಾನುಗಳ ಕಾಮನಬಿಲ್ಲನ್ನು ನೆನಪಿಸುತ್ತದೆ. ಜಾತ್ರೆ ಪೇಟೆಯಲ್ಲಿ ರಾತ್ರಿಯ ಸುತ್ತಾಟವೇ ಒಂದು ಸುಂದರ ಅನುಭವ. ವಿದ್ಯುದ್ದೀಪಗಳ ಮಂಟಪದ ನಡುವೆ ಸುತ್ತಾಡುವಾಗ ನಾವೆಲ್ಲೋ ನಕ್ಷತ್ರಗಳ ಲೋಕದಲ್ಲಿ ಸಂಚರಿಸುತ್ತಿದ್ದೇವೇನೋ ಅನಿಸುತ್ತದೆ.

ದೇವಸ್ಥಾನಗಳ ಜಾತ್ರೆಗಳು ಈಗ ವಿದ್ಯುದ್ದೀಪಗಳಿಂದ ಹೆಚ್ಚು ಬೆಳಗುವಂಥವೂ, ಹಲವು ವಿಧದ ವಾದ್ಯ ಚರ್ಮ ವಾದ್ಯಗಳ ಶಬ್ದಗಳಿಂದ ಹೆಚ್ಚು ಮೊರೆಯುವಂಥವೂ ಆಗಿಬಿಟ್ಟಿವೆ. ಜನ ಇವನ್ನೆಲ್ಲ ಸಂಭ್ರಮದ ಒಂದು ಭಾಗವೆಂಬಂತೆ ಸ್ವೀಕರಿಸಿಬಿಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚಾಗುವಂತೆ ಊರ ಮುಂದಾಳುಗಳು ಪ್ರಯತ್ನಿಸುತ್ತಾರೆ. ದೂರದ ಊರುಗಳಿಂದ ಮುಖವಾಡಧಾರಿಗಳ ಕುಣಿತದ ತಂಡ, ಕೀಲು ಕುದುರೆ, ಕರಗ, ಡೊಳ್ಳು ಕುಣಿತ, ವೇಷಗಳನ್ನು ಕರೆದು ತರುತ್ತಾರೆ.‘ಜನ ಮರುಳೋ? ಜಾತ್ರೆ ಮರುಳೋ?’ ಎಂಬ ಗಾದೆ ಮಾತಿನಂತೆ ಚಿತ್ರ-ವಿಚಿತ್ರವಾದ ಆಟಿಕೆ ಸಾಮಾನುಗಳು,ಬಟ್ಟೆ ಮಳಿಗೆಗಳು, ಪ್ಲಾಸ್ಟಿಕ್ ಹೂಕುಂಡಗಳು,ಆರ್ಟಿಫಿಶಿಯಲ್ ಹೂ ಮಾಲೆಗಳು, ಬಾಗಿಲಿನ ತೋರಣಗಳು, ಬ್ಯಾಗ್ ಗಳು, ಪರ್ಸ್ ಗಳು, ಸೋಫಾ ಕುಶನ್ ಗಳು, ಟಿ-ಶರ್ಟ್ ಗಳು, ಚಪ್ಪಲಿ ಅಂಗಡಿಗಳು, ಕೀ-ಬಂಚ್ ಗಳು, ಹೀಗೆ ಜನರನ್ನು ಮರುಳು ಮಾಡುವ ಜಾತ್ರೆಯ ಮರುಳಿಗೆ ಬೆಂಬಲಿಸುವ ಅಂಗಡಿಗಳು ಹಲವು.ಹಿಂದಿನ ಕಾಲದ ಉತ್ಸವಗಳು ಹೇಗಿದ್ದಿರಬಹುದೆಂದು ಇವತ್ತು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.ಮುಖ್ಯವಾಗಿ ಎಣ್ಣೆ ದೀಪಗಳಿಂದ ಮತ್ತು ಹಿತಮಿತವಾದ ವಾದ್ಯಗಳಿಂದ ಜಾತ್ರೆಗಳು ಹೆಚ್ಚು ಹಿತ.ದೇವಸ್ಥಾನಗಳ ಜಾತ್ರೆಗಳ ಮುನ್ನಾ ದಿನ ಅಥವಾ ಕೆಲವು ದಿನಗಳ ಹಿಂದೆ ಧ್ವಜಾರೋಹಣ ಎಂಬ ಕಾರ್ಯಕ್ರಮವಿರುತ್ತದೆ. ತುಳುವಿನಲ್ಲಿ ಇದನ್ನು ‘ಕೊಡಿ’ ಏರಿಸುವುದು ಎಂದು ಹೇಳುತ್ತಾರೆ. ದೇವಸ್ಥಾನದ ಎದುರಿನ ಧ್ವಜಸ್ತಂಭಕ್ಕೆ ದೇವಸ್ಥಾನದ ಧ್ವಜವನ್ನು ಮಂಗಲ ವಸ್ತುಗಳೊಂದಿಗೆ ಏರಿಸುವುದರೊಂದಿಗೆ ಉತ್ಸವ ಪ್ರಾರಂಭವಾಗುತ್ತದೆ. ಇದಾದ ನಂತರ ಊರಿನವರು ಊರು ಬಿಟ್ಟು ಹೋಗುವಂತಿಲ್ಲ.

ಜಾತ್ರೆ ಮತ್ತು ಉತ್ಸವಗಳು ನವೋದಯ ವರ್ಷದ ಚಕ್ರವನ್ನು ಮುರಿದ ವಿಶೇಷ ಘಟನೆಗಳಾಗಿವೆ. ಜಾತ್ರೆಯು ಮೂಲಭೂತವಾಗಿ ಒಂದು ಆರ್ಥಿಕ ಘಟನೆಯಾಗಿತ್ತು-ದೊಡ್ಡ ಬಹುದಿನದ ಮಾರುಕಟ್ಟೆ. ಹಬ್ಬ, ಇದಕ್ಕೆ ವಿರುದ್ಧವಾಗಿ, ರಜಾದಿನ ಅಥವಾ ಇತರ ವಿಶೇಷ ಸಂದರ್ಭವನ್ನು ಆಚರಿಸಲಾಗುತ್ತದೆ. ಜಾತ್ರೆಗಳು ಮತ್ತು ಉತ್ಸವಗಳು ನವೋದಯ ಜೀವನವನ್ನು ಮಸಾಲೆಯುಕ್ತಗೊಳಿಸಿದವು ಮಾತ್ರವಲ್ಲದೆ ವಿವಿಧ ಪ್ರದೇಶಗಳು ಮತ್ತು ಸಾಮಾಜಿಕ ವರ್ಗಗಳ ಜನರಿಗೆ ಸಂವಹನ ನಡೆಸಲು ಅವಕಾಶವನ್ನು ನೀಡಿತು.

ಜಾತ್ರೆಗಳು ಅಥವಾ ಮೇಳಗಳು,ಒಂದು ವಿಶಿಷ್ಟವಾದ ಜಾತ್ರೆಯು ಪಟ್ಟಣದ ಸಾಪ್ತಾಹಿಕ ಬಯಲು ಮಾರುಕಟ್ಟೆಯ ಬೆಳವಣಿಗೆಯಾಗಿದೆ. ವರ್ಷಕ್ಕೊಮ್ಮೆ, ಸ್ಥಳೀಯ ಸಂತರ ಹಬ್ಬದ ಆಚರಣೆಯ ಸಮಯದಲ್ಲಿ, ಪಟ್ಟಣವು ಈ ಮಾರುಕಟ್ಟೆಯನ್ನು ಬಹುದಿನದ ಕಾರ್ಯಕ್ರಮವಾಗಿ ವಿಸ್ತರಿಸಿತು. ಇಂತಹ ಸಣ್ಣ ಜಾತ್ರೆಗಳಿಗೆ ಊರ ಹೊರಗಿನ ಯಾರಿಗೂ ಪ್ರಾಮುಖ್ಯತೆ ಇರಲಿಲ್ಲ.ಕೆಲವು ಮೇಳಗಳು ಹೆಚ್ಚು ಪ್ರಮುಖ ಘಟನೆಗಳಾದವು, ಇದು ಪ್ರದೇಶ ಅಥವಾ ರಾಷ್ಟ್ರದಾದ್ಯಂತ ಖರೀದಿದಾರರು ಮತ್ತು ಮಾರಾಟಗಾರರನ್ನು ಆಕರ್ಷಿಸಿತು.ಕೆಲವೊಮ್ಮೆ ವಿದೇಶಗಳಿಂದಲೂ.ಉದಾಹರಣೆಗೆ, ಫ್ಲೆಮಿಶ್* ವ್ಯಾಪಾರಿಗಳು ತಮ್ಮ ಸರಕುಗಳನ್ನು ಸೇಂಟ್ ಐವ್ಸ್ ಮತ್ತು ಇಂಗ್ಲಿಷ್ ಮೇಳಗಳಿಗೆ ತಂದರು. ಈಶಾನ್ಯ ಫ್ರಾನ್ಸ್‌ನ ಕೆಲವು ಪಟ್ಟಣಗಳಲ್ಲಿ ಮಾತ್ರ ನಿಜವಾದ ಅಂತರರಾಷ್ಟ್ರೀಯ ಮೇಳಗಳು ನಡೆಯುತ್ತಿದ್ದವು. ಅಲ್ಲಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್‌ನ ವ್ಯಾಪಾರಿಗಳು ಮೆಡಿಟರೇನಿಯನ್ ಮತ್ತು ಸಮೀಪದ ಪೂರ್ವದಿಂದ ಇಟಾಲಿಯನ್ ವ್ಯಾಪಾರಿಗಳ ಸರಕುಗಳಿಗೆ ಬಟ್ಟೆಯನ್ನು ವ್ಯಾಪಾರ ಮಾಡಿದರು. 1400 ರ ಮೊದಲು ಇವು ವಿವಿಧ ನಾಣ್ಯಗಳು ಮತ್ತು ಕರೆನ್ಸಿಗಳನ್ನು ವಿನಿಮಯ ಮಾಡಿಕೊಳ್ಳುವ ಏಕೈಕ ಮೇಳಗಳಾಗಿವೆ.

ನಮ್ಮೂರಿನ ಜಾತ್ರಾ ವೈಭವ ಗ್ರಾಮದೇವಿಯರದು.ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಅದ್ಧೂರಿ,ವೈಭವ ಹಾಗೂ ಆಕರ್ಷಣೆಯ ಜಾತ್ರೆ. ಸಾಂಸ್ಕೃತಿಕ ಹಿನ್ನಲೆಯಲ್ಲಿ ನೀತಿನಿಯಮಗಳಡಿಯಲ್ಲಿ ಲಕ್ಷಾಂತರ ಜನರ ಜೀವನೋಪಾಯದ ಮೇಳವೆಂದರೆ ತಪ್ಪಾಗದು. ಕೆಲವು ಊರುಗಳಲ್ಲಿ ಜಾತ್ರೆಗಳ ಸಂದರ್ಭದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇವುಗಳಲ್ಲಿ ಸ್ಥಳೀಯ ಹವ್ಯಾಸಿಗಳಿಂದ ನಾಟಕ, ಸಂಗೀತ ಕಚೇರಿಗಳು, ನೃತ್ಯ, ಯಕ್ಷಗಾನ ಮುಂತಾದವುಗಳು ಸೇರಿರುತ್ತವೆ. ಮನರಂಜನೆ ಎಂಬ ನೆಲೆಯಲ್ಲಿ ಮಾತ್ರ ಇವು ನಡೆಯುತ್ತವೆ ಹೊರತು ಹೆಚ್ಚಿನ ಉದ್ದೇಶವೇನೂ ಇದ್ದಂತಿಲ್ಲ.ಜಾತ್ರೆಗಳ ಮಹತ್ವವನ್ನು ನಮ್ಮ ಜನ ತಮ್ಮ ಅರಿವಿಲ್ಲದೆಯೂ ತಿಳಿದುಕೊಂಡಿದ್ದಾರೆ. ಅವುಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಆಯಾಯ ಊರಿನ ಮುಂದಾಳುಗಳೇ ಚಿಂತಿಸಿದರೆ ಒಳ್ಳೆಯದು.ಹೀಗೆ ನಿತ್ಯವೂ ನಮ್ಮ ಆಗು-ಹೋಗುಗಳಲ್ಲಿ ನಮ್ಮ ಜೊತೆ ಇರುವ ನಮ್ಮದೇ ಊರನ್ನು, ನಮ್ಮದೇ ಬೀದಿಯನ್ನು, ನಮ್ಮದೇ ಜನರನ್ನು ಹೊಸ ಲೋಕದಲ್ಲಿ ಹೊಸ ಅವತಾರದಲ್ಲಿ ಕಾಣುತ್ತಿದ್ದೇವೇನೋ ಎಂಬ ಭ್ರಮೆಯ ಬೆರಗನ್ನು ಉಂಟುಮಾಡುವ ಜಾತ್ರೆಗೆ ನಾನು ಋಣಿ.ಬದಲಾದ ‌ವಾತಾವರಣಕ್ಕೆ,ನವೀಕರಣದ ಆಮಂತ್ರಣ.ನಮ್ಮೂರ ಬೀದಿಗಳು ಝಗಮಗ. ಇರುವ ನೋವುಗಳಿಗೆ ಬಣ್ಣ ಬಳಿದು ನಲಿವಿನ ಕ್ಷಣಗಳಂತೆ ಬಿಂಬಿಸಿ ಬದುಕನ್ನು ಸಂಭ್ರಮಿಸಲು ಅವಕಾಶ ಮಾಡುವ ಜಾತ್ರೆಯನ್ನು ಎಲ್ಲರೂ ಮನಸಾರೆ ಆನಂದಿಸೋಣ. ಪ್ರಸ್ತುತತೆಯಲ್ಲಿ ನವೀನತೆಯನ್ನು ದರ್ಶಿಸುವ ಈ ಸಂಭ್ರಮಕ್ಕೆ ತಪ್ಪದೇ ಸಾಕ್ಷಿಯಾಗೋಣ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

5 thoughts on “

  1. ಜಾತ್ರೆಗಳು ಊರಿಗೆ ಹಬ್ಬತರುವ ವಾತಾವರಣ ಸೃಷ್ಟಿಯಾದಂತೆ.ತುಂಬಾ ಸುಂದರ ಹಾಗೂ ಅರ್ಥಗರ್ಭಿತ ಲೇಖನ….ಜಾತ್ರೆಯ ಮಹತ್ವ ಚೆನ್ನಾಗಿ ಅಭಿವ್ಯಕ್ತ ಪಡಿಸಿದ್ದಾರೆ.

  2. ಅತೀ ಸುಂದರ ಸುಲಲಿತ ಲೇಖನ.ಜಾತ್ರಗೆ ಹೋಗದೇ ಇದ್ದರೂ ಹೋದ ಅನುಭವ ತಮ್ಮ ಈ ಮುತ್ತಿನ ಬರವಣಿಗೆ ಕೊಡುತ್ತದೆ.

  3. ಬಾಲ್ಯದವ ಸವಿ ನೆನಪಿನೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಜಾತ್ರೆಯ ಮಹತ್ವ ಸುಂದರವಾಗಿ ಮೂಡಿಬಂದಿದೆ….

  4. ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಜಾತ್ರೆಯ ಸಂಭ್ರಮ ದ ಹಿಂದಿನ.. ಕಾರಣ ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಿಯಾ….ಗೆಳತಿ ಅದ್ಭುತ ಬರಹ

  5. ಉತ್ತಮ ಲೇಖನ, ಮಾಹಿತಿ ಚೆನ್ನಾಗಿದೆ.

Leave a Reply

Back To Top