ಪ್ರಸ್ತುತ

‘ಜಾಲ’ತಾಣ

ಸ್ಮಿತಾ ರಾಘವೇಂದ್ರ

ಹೆಸರೇ ಹೇಳುವಂತೆ ಇದೊಂದು “ಜಾಲ” ಮತ್ತೆ ನಾವೆಲ್ಲ ಅಲ್ಲಿ “ತಾಣ” ಪಡೆದವರು
ಜಾಲದೊಳಗೆ ಸಿಲುಕಿಕೊಂಡ ಕೀಟದಂತಾಗಿದ್ದೇವೆ..
ಆದರೂ ನಾವಿಲ್ಲಿ ತಂಗಿದ್ದೇವೇ ತಂಗುತ್ತೇವೆ ಇಂದೂ ಮುಂದೂ
ಸದಾ ತಂಗಲೇ ಬೇಕಾದ ಜಾಲದಲ್ಲಿ ಒಂದಿಷ್ಟು ಜಾಗೃತೆಯೂ ಮುಖ್ಯ ಅಂಶವಾಗುತ್ತದೆ.
ಹೌದು..
ಸಾಮಾಜಿಕ ಜಾಲತಾಣವು ಸಂಬಂಧಗಳನ್ನು ಕಸಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಎಂಬುದು ಜನ ಜನಿತವಾದ ಮಾತು ಮತ್ತು ಸತ್ಯದ ಮಾತುಕೂಡಾ..
ಯಾಕೆ!? ಎಂದು ಸ್ವಲ್ಪವೇ ಸ್ವಲ್ಪ ವಿಚಾರಮಾಡುವದಕ್ಕೂ ನಮಗಿಂದು ಸಮಯವಿಲ್ಲ..
ಯಾಕೆಂದರೆ ನಮ್ಮ ಅಳಿದುಳಿದ ಸಮಯವನ್ನು ಜಾಲತಾಣ ನುಂಗಿಹಾಕಿದೆ.
ಚಕ್ರವ್ಯೂಹದಲಿ ಸಿಕ್ಕಿಕೊಂಡ ಅಭಿಮನ್ಯುವಿನಂತಾಗಿದ್ದೇವೆ.
ಯಾಕೆ ಎಂದು ಯೋಚಿಸಿದರೆ ಹಲವಾರು ವಿಷಯಗಳು ಅನಾವರಣವಾಗುತ್ತಲೇ ಹೋಗುತ್ತದೆ.
ಈ ಜಾಲತಾಣ ನಮ್ಮ ವಯಕ್ತಿಕ ವಿಷಯಗಳಿಗೆ, ಸಂಬಧಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ನಿರಂತರವಾಗಿ ಹೆಚ್ಚು ಸಮಯಗಳಕಾಲ ಜಾಲತಾಣದಲ್ಲಿ ತೊಡಗುವುದು ಸ್ಥಿರ ಸಂಬಂಧಗಳಿಗೆ ಅಂದರೆ ಅಣ್ಣ- ತಮ್ಮ, ಗಂಡ- ಹೆಂಡತಿ, ಅಪ್ಪ -ಅಮ್ಮ, ಅಕ್ಕ -ತಂಗಿ, ಹೀಗೇ ಹಲವು ಸಬಂಧಗಳಿಗೆ ಸಮಸ್ಯೆಯನ್ನು ಉಂಟುಮಾಡುತ್ತಿದೆ.ಅವರೊಂದಿಗಿನ ಸಂವಹನ ಕಡಿಮೆಯಾಗುತ್ತಿದೆ.
ಬೇಕಾದ,ಮತ್ತು ಬೇಡದ ಎಲ್ಲ ಸಂಗತಿಗಳೂ ಇಲ್ಲಿ ಅಡಕವಾಗಿರುವಕಾರಣ,ಹೆಚ್ಚು ಹೆಚ್ಚು ಸಮಯ ಜಾಲತಾಣದಲ್ಲಿ ಮುಳುಗುವದರಿಂದ ಅವಶ್ಯಕತೆ ಗಿಂತ ಹೆಚ್ಚು ವಿಷಯ ಸಂಗ್ರಹಣೆ ಹವ್ಯಾಸವಾಗಿ ಹೋಗುತ್ತದೆ.
ಬಿಟ್ಟೆನೆಂದರೂ ಬಿಡದ ಮಾಯೆ ಇದು.

ಸಂಬಂಧಗಳ ಮೂಲಭೂತ ಅಂಶ ನಂಬಿಕೆ.
ಜಾಲತಾಣದ ಕಾರಣದಿಂದ ನಂಬಿಕೆ ಎನ್ನುವದು ಗೋಡೆಯ ತುದಿಯಲ್ಲಿ ಇಟ್ಟ ತಕ್ಕಡಿಯಂತಾಗಿದೆ

ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕ ಅಭಿಪ್ರಾಯಗಳು ಮತ್ತು ಮಾಹಿತಿ ಹಂಚಿಕೆ ಹೆಚ್ಚು ದುರ್ಬಲವಾಗಿರುತ್ತದೆ. ಅದು ಯಾವಕಾರಣಕ್ಕೂ ಸೇಪ್ ಕೂಡ ಅಲ್ಲ. ನಮ್ಮ ಇಡೀ ವ್ಯಕ್ತಿತ್ವವನ್ನೇ ಸೆರೆಹಿಡಿದು ಅಳೆದು ತೂಗಿಬಿಡುತ್ತದೆ ಈ ಜಾಲತಾಣ
ಈಗೀಗ ಹ್ಯಾಕರ್‌ಗಳ ಹಾವಳಿಯಿಂದಾಗಿ ನಮ್ಮ ಎಲ್ಲಾ ಮಾಹಿತಿಗಳು ಸೋರಿಕೆಯಾಗುವ ಸಂಭವವು ಜಾಸ್ತಿಯಾಗಿರುತ್ತದೆ ಮತ್ತು ಮೊಬೈಲ್‌ನಲ್ಲಿ ನಾವು ಬ್ರೌಸ್ ಮಾಡುವಾಗ ಕೊಡುವ ನಮ್ಮ ಮಾಹಿತಿಗಳೇ ಆಗಲಿ, ಫೋಟೋಗಳೇ ಅಗಲಿ ದುರ್ಬಳಕೆಯಾಗುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಅಲ್ಲದೇ ನಮ್ಮ ಮೊಬೈಲ್‌ಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಕದಿಯುವಂತ ಇತರ ಸ್ವಾಫ್ಟವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಯಾವುದಕ್ಕೂ ಮೊಬೈಲ್‌ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿರುವುದು ತೀರಾ ಸೂಕ್ತ.
ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಾ ಬೇಡದ ನೊವುಗಳಿಗೆ ದುರ್ಘಟನೆಗಳಿಗೆ ನಾವೇ ಎಡೆಮಾಡಿಕೊಳ್ಳುತ್ತಿದ್ದೇವೆ..

We all went to Goa with the family”
ಅಂತ ಯುವತಿಯೊಬ್ಬಳು ಕುಟುಂಬದ ಜೊತೆಗಿನ ಫೋಟೋ ಶೇರ್ ಮಾಡಿದ್ದಳು ಅದನ್ನು ನೋಡಿದ ಯಾರೊ ಒಬ್ಬ ಅಸಾಮಿ ತಿರುಗಿ ಬರುವದರೊಳಗೆ ಮನೆ ದರೋಡೆಮಾಡಿ ಹೋಗಿದ್ದ.
ಎಲ್ಲೇ ಹೋದರೂ ಏನೇ ತಿಂದರೂ ಎಲ್ಲವನ್ನೂ ಜಾಲತಾಣದಲ್ಲಿ ಅಪ್ಡೇಟ್ ಮಾಡುವ ನಾವು ಎಷ್ಟು ಅಜಾರೂಕರಾಗುತ್ತಿದ್ದೇವೆ.
ಅವಶ್ಯಕತೆಗಿಂತ ಹೆಚ್ಚಾಗಿ ಬಳಸಿದಾಗಲೇ ಇವೆಲ್ಲ ಅವಾಂತರಗಳು ಆಗೋದು.

” ಯಾರಾದರೂ ಏನನ್ನಾದರೂ ಹಂಚಿಕೊಂಡಾಗ ಫೋಟೋಗಳನ್ನು ಲೈಕ್‌ ಮಾಡಿದಾಗ ನಂತರ, ಅವರು ಯಾರು , ಎಲ್ಲಿಂದ, ಎಂಬಿತ್ಯಾದಿ ವಯಕ್ತಿಕ ಚಾಟ್‌ ನಡೆಯುತ್ತದೆ. ಅದು ಅಲ್ಲಿಗೇ ಮುಗಿಯದೇ ಇನ್ಬಾಕ್ಸನಲ್ಲಿ ಇಣುಕಿ ಸಂಪರ್ಕ ಸಾಧಿಸಲು ಹಾತೊರೆಯುತ್ತಾರೆ.
ಸಹಜ ಮಾತಾದರೆ ಎಲ್ಲವೂ ಓಕೆ ಕೆಲವರಿರುತ್ತಾರೆ ಜೊಲ್ಲು ಪಂಡಿತರು, ಅಂತವರು ಹಿಂದೆ ಮುಂದೆ ನೋಡುವದಿಲ್ಲ ನೀನು ನನಗೆ ಬಹಳ ಇಷ್ಟ, ಸಕತ್ ಆಗಿ ಕಣ್ತೀಯಾ, ನಾನು ನಿನ್ನ ಲವ್ ಮಾಡ್ತೀನಿ, ಅಂತೆಲ್ಲ ಒಂದೇ ಸಮನೇ ಮಾತೊಗೆದು ಬಿಡುತ್ತಾರೆ..
ಅದರ ವಿವರಣೆ ಕೇಳುವ ಸಂಯಮ ಇಲ್ಲದ ಸಂಬಂಧಗಳಿಗೆ ಇಷ್ಟು ಸಾಕಲ್ಲವಾ? ಅದೆಷ್ಟೋ ಸುಂದರ ಸಂಬಂಧಗಳು ಸಂಸಾರಗಳು ಇದರಿಂದ ಘಾಸಿಗೊಳಗಾಗಿರುವದು ಎಲ್ಲರಿಗೂ ತಿಳಿದ ವಿಚಾರ. ತಪ್ಪುಗಳೇ ನಮ್ಮಿಂದ ಘಟಿಸಬೇಕೆಂದೇನೂ ಇಲ್ಲ. ಬಳಕೆಯ ಅಜ್ಙಾನದಿಂದಲೇ ಹೆಚ್ಚು ತೊಂದರೆಗಳು ಆಗುವದು.

ಹಳ್ಳಿಗಳಲ್ಲಿ ಹೆಚ್ಚೆಚ್ಚು ಘಟನೆಗಳು ಹೇಗೆ ಜರುಗುತ್ತವೆ ಗೊತ್ತಾ?!ಸ್ವಲ್ಪ ವಯಸ್ಸಾದವರು, ಹೆಣ್ಮಕ್ಕಳು,ಪ್ರಪಂಚಕ್ಕೆ ತೆರೆದುಕೊಳ್ಳದ ಹಲವು ಮನಸುಗಳು ಇರುತ್ತವೆ. ಅವರು ಯಾವತ್ತೂ ಜಗತ್ತೇ ನಮ್ಮ ಕೈಯೊಳಗೆ ಎಂಬ ಮಾಯೆಯನ್ನು
ಕೈಯಲ್ಲಿ ಹಿಡಿದು ನೋಡುರುವದಿಲ್ಲ.
ಏನೋ ಸಮಯ ಕಳೆಯಲಿ ಎಂದೋ ಎಲ್ಲರ ಹತ್ತಿರವೂ ಇದೆ ಎಂದೋ ಒಂದು ಹೊಸ ಮೊಬೈಲ್ ಕೈಗೆ ಬಂದಿರುತ್ತದೆ..
ಅದರ ತಂತ್ರಜ್ಞಾನದ ಅರಿವಿನ ಕೊರತೆ ಸಾಕಷ್ಟು ಇರುವಕಾರಣ,ಯಾರೋ ಒಬ್ಬರು ಪೇಸ್ಬುಕ್ ವಾಟ್ಸಪ್ ಅಕೌಂಟ್ ಒಂದನ್ನು ಮಾಡಿಕೊಟ್ಟು ಬಿಡುತ್ತಾರೆ. ಅದರ ಉಪಯೋಗದ ಬಗ್ಗೆ ಮಾಹಿತಿ ನೀಡುವದಿಲ್ಲ.
ಜಾಲತಾಣವೆಂದರೆ ಹಂಚಿಕೊಳ್ಳುವದು ಅಂತಷ್ಟೇ ಅವರಿಗೆ ತಿಳಿದಿರುವ ವಿಚಾರ..

ಶೆರ್ ಮಾಡಲು ಹೋಗಿ ಟ್ಯಾಗ್ ಮಾಡುವದು..ಕಂಡಿದ್ದಕ್ಕೆಲ್ಲ ಕಮೆಂಟ್ ಮಾಡುವದು.
ಎಲ್ಲರೊಂದಿಗೆ ಸಂವಹನ ನಡೆಸುವದು.
ಎಲ್ಲರೂ ಮಾಡಿದಂತೆಯೇ ತಾವೂ ಮಾಡಬೇಕೆಂಬ ತುಡಿತಕ್ಕೆ ಬೀಳುತ್ತಾರೆ.
ಇವುಗಳಿಂದ
ಅವರಿಗೆ ಅರಿಯದಂತೆ ಎದುರಿಗಿನ ವ್ಯಕ್ತಿ ಇಂತವರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುತ್ತಾನೆ.
ಕ್ರಮೇಣ ಇವರೇ ಅರಿಯದ ಜಾಲದೊಳಗೆ ಬಿದ್ದು ಒದ್ದಾಡುತ್ತಾರೆ..
ನಿಭಾಯುಸುವ ಜಾಣತನವಿಲ್ಲದೇ ಸಂಸಾರವನ್ನು ತೊರೆದು ಹೋಗುವದು,ಆತ್ಮಹತ್ಯೆ ಮಾಡಿಕೊಳ್ಳುವದು, ಇಂತಹ ಕಠಿಣ ನಿರ್ಧಾರಕ್ಕೆ ಬರುತ್ತಾರೆ..
ಇಡೀ ಸಂಸಾರದ ನೆಮ್ಮದಿಯೇ ನಾಶವಾಗುವ ಹಂತಕ್ಕೆ ಒಂದು ಮುಗ್ಧ ಸಂಸಾರವೊಂದು ಬಂದು ನಿಲ್ಲುತ್ತದೆ. ಇದಕ್ಕೆಲ್ಲ ತಿಳುವಳಿಕೆಯ ಕೊರತೆಯೇ ಕಾರಣ.
ಕೆಲವರು ಗೊತ್ತಿದ್ದು ಇನ್ನು ಕೆಲವರು ಗೊತ್ತಿಲ್ಲದೇ
ಹಗಲು ಕಂಡ ಬಾವಿಗೆ ರಾತ್ರಿ ಬಂದು ಬೀಳುತ್ತಿದ್ದಾರೆ..

ಕಣ್ಣಿಗೆ ಕಾಣದ ಎಂದೂ ನೋಡದ ಸ್ನೇಹಿತರಿಗೆ ಹುಟ್ಟಿದ ದಿನದ ಶುಭಾಶಯ ತಪ್ಪದೇ ಕೋರುವ ನಾವು, ಮನೆಯೊಳಗಿನ ಸಂಬಂಧ ಮರೆತೇ ಬಿಡುತ್ತೇವೆ.
ಅತಿಯಾದ ಸಾಮಾಜಿಕ ಜಾಲತಾಣವು ನಮ್ಮ ಸ್ವಭಾವವನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾತೇ ಮರೆತುಹೋಗಿದೆ. ಒಬ್ಬರೇ ನಗುವ ಹುಚ್ಚರಂತಾಗಿದ್ದೇವೆ..
ಕಿವಿಯೊಳಗಿನ ಇಯರ್ ಪೋನ್ ಯಾರು ಕಿವುಡರು ಎನ್ನುವದು ತಿಳಿಯದಾಗಿದೆ.
ಸೋಶಿಯಲ್‌ ಮಿಡಿಯಾ ಬಳಕೆಯಿಂದ ತಮ್ಮನ್ನು ತಾವು ಸ್ವಭಾವದಲ್ಲಿ ಹೇಗೆ ನಿಯಂತ್ರಿಸಿಕೊಳ್ಳಬೇಕು ಎಂದು ಎಚ್ಚರವಹಿಸಿಕೊಳ್ಳಬೇಕಾದುದು ಸದ್ಯದ ತುರ್ತಿನ ಪರಿಸ್ಥಿತಿ.
ಕೇವಲ ಜಾಲತಾಣದಲ್ಲಿಯೇ ಎಲ್ಲವನ್ನೂ ಸೃಷ್ಟಿಸಿ ಕೊಳ್ಳುವ ಹಂಬಲ ಹಪಾಹಪಿತನ ತೋರುತ್ತಿದ್ದೇವೆ.
ಈ ಗ್ಯಾಜೆಟ್ ಲೋಕ ಎಲ್ಲವನ್ನೂ ಕೊಡಲು ಎಂದಿಗೂ ಸಾದ್ಯವಿಲ್ಲ.

ಮದರ್ಸ ಡೇ ಪೋಷ್ಟ ಹಾಕಲು ಒಬ್ಬಾತ ಅಮ್ಮನ ಪೋಟೋ ಹುಡುಕುತ್ತಿದ್ದ ಅವನ ಹತ್ತಿರ ಒಂದೇ ಒಂದು ಫೋಟೋ ಕೂಡ ಇರಲಿಲ್ಲ.
ಅಮ್ಮ ಅನಾಥಾಶ್ರಮದಲ್ಲಿ ಇದ್ದಳು.
ಏನಂತ ಹೇಳೋದು ಈ ನಡತೆಗೆ??!
ನಮ್ಮೊಳಗಿನ ಸಂಬಂಧಗಳನ್ನು ಮರೆತು ಇನ್ನೆಲ್ಲೋ ಆಪ್ತತೆಯನ್ನು ಹುಡುಕುತ್ತೇವೆ..
ಮುಖಕ್ಕೆ ಮುಖತೀಡಿಕೊಂಡು ಹಾಕುವ ಪೋಟೊಗಳೆಲ್ಲ ರಾತ್ರಿ ಮುಖತಿರುಗುಸಿ ಮಲಗುತ್ತವೆ ಎನ್ನುವದು ಅರಿವಾಗಬೇಕಿದೆ.
ತೋರಿಕೆಯ,ಪ್ರದರ್ಶನದ ಬದುಕು ಪರಿತಪ್ಪಿಸುವತ್ತ ಸಾಗುತ್ತಿದೆ.

ಮಕ್ಕಳಿಗೆ ಹೇಳಬೇಕಾದ ದೊಡ್ಡವರೇ ಮೊಬೈಲ್ ಎಂಬ ಲೋಕದಲ್ಲಿ ಮುಳುಗಿ ಹೋಗಿದ್ದಾರೆ..
ತಂದೆ ತಾಯಿಯರೇ ಮಗು ನಮ್ಮ ಮೊಬೈಲ್ ಅನ್ನು ಪದೇ ತೆಗೆದುಕೊಳ್ಳುತ್ತದೆ ನಮಗೆ ಸಿಗುವದೇ ಇಲ್ಲ ಎಂದು,ಅವರಿಗಾಗಿಯೇ ಬೇರೆ ಮೊಬೈಲ್ ಕೊಡಿಸುವಷ್ಟು ಬುದ್ಧಿವಂತರಾಗಿದ್ದಾರೆ.
ಕೇವಲ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಜಾಲತಾಣಗಳು ಅಷ್ಟೇ ಅಹಿತಕರ ಎಂದು ಅರಿವಾಗಬೇಕಿದೆ. ಎಲ್ಲ ಅರಿತ ದೊಡ್ಡವರೇ ಮೊಬೈಲ್ ಎಂಬ ಮಾಯೆಯ ದಾಸರಾದರೆ ಚಿಕ್ಕಮಕ್ಕಳು ಆಗದೇ ಇರುತ್ತಾರೆಯೇ..
ಎಲ್ಲಿ ನೋಡಿದರೂ ಮಕ್ಕಳನ್ನು ಮೊಬೈಲ್ ಇಂದ ದೂರವಿಡಿ ಎಂಬ ಮಾತು ಕೇಳಿಬರುತ್ತದೆ.
ಕೇವಲ ಹೇಳುವದರಿಂದ ಮಕ್ಕಳು ಕಲಿಯಲಾರು ನಮ್ಮ ನಡೆಯನ್ನು ಅನುಸರಿಸುತ್ತಾರೆ.

, ರಸ್ತೆಬದಿಯಲ್ಲಿ ಭಿಕ್ಷೆ ಬೇಡುವವರು,ಅಂಗವಿಕಲರು,ಅಪಘಾತಕ್ಕೆ ಒಳಗಾದವರು,ಇಂತಹ ಹತ್ತು ಹಲವು ಫೋಟೋ ಗಳನ್ನು ನೋಡಿ ಮರುಗುವ ಕಣ್ಣೀರ ದಾರೆಯೇ ಇಮೊಜಿಗಳಲ್ಲಿ ಉಕ್ಕಿಸುವ ನಾವು.
ನಿಜವಾಗಿ ಇಂತವರು ನಮ್ಮ ಎದುರು ಬಂದಾಗ ಕಂಡೂ ಕಾಣದಂತೆ ಹೋಗುತ್ತೇವೆ.
ಇಲ್ಲ ಮತ್ತೊಂದು ಫೋಟೋವನ್ನು ತೆಗೆದು ಹಂಚಿ ಲೈಕು ಕಮೆಂಟ್ ಗಿಟ್ಟಿಸಿಕೊಳ್ಳುವತ್ತ ಚಿತ್ತ ಹರಿಸುತ್ತೇವೆ.
ಎಷ್ಟೊಂದು ಕಠಿಣ ಅಜಾಗರೂಕ ಬುದ್ಧಿಹೀನರಾಗುತ್ತಿದ್ದೇವೆ ನಾವುಗಳು.

ಒಮ್ಮೆ ಚಿಂತನೆ ಮಾಡಿ ಮೊಬೈಲ್ ಕೆಳಗಿಟ್ಟು ಪ್ರಪಂಚ ನೋಡಿ. ಸಾಕಷ್ಟು ಸಂಗತಿಗಳು ನಮ್ಮ ಕಣ್ಣು ತೆರೆಸುತ್ತವೆ.
ತೀರಾ ವಯಕ್ತಿಕ ಬದುಕಿನ ಒಳಮನೆಗೆ ಮೊಬೈಲ್ ಎಂಬ ಮಾಯೆ ತನ್ನ ಆಟಾಟೋಪ ಮೆರೆಯದಂತೆ ಜಾಗ್ರತೆ ವಹಿಸುವದು ಇಂದಿನ ದಿನಗಳಲ್ಲಿ ತುಂಬಾ ಅವಶ್ಯ.ಸಂಬಂಧಗಳು ಮುರಿಯುತ್ತಿರುವದೇ ಮೊಬೈಲ್ ಗಳಿಂದ.

ತಲೆ ತಗ್ಗಿಸಿ ನನ್ನ ನೋಡು, ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ” ಎಂದು ಪುಸ್ತಕ ಹೇಳಿದರೆ, “ತಲೆ ತಗ್ಗಿಸಿ ನನ್ನ ನೋಡು, ಮತ್ತೆ ತಲೆ ಎತ್ತದಂತೆ ಮಾಡುತ್ತೇನೆ” ಎಂದು ಮೊಬೈಲ್ ಹೇಳಿತಂತೆ. ಈ ಎಲ್ಲಾ ಮಾತುಗಳು ನಮಗೆ ನಗುತರಿಸುತ್ತದೆ ಎನ್ನುವುದು ಎಷ್ಟು ಸತ್ಯವೋ ಇದೇ ನಿಜವಾದ ವಾಸ್ತವ ಸತ್ಯ ಎನ್ನುವುದು ಈಗಲಾದರೂ ನಾವು ಒಪ್ಪಿ ಕೊಳ್ಳದೇ ಹೋದರೆ ನಾವು ತೆಗೆದ ಗುಂಡಿಯಲ್ಲಿ ನಾವು ಬೀಳುವದಲ್ಲದೇ ನಮ್ಮ ಎಲ್ಲ ಸಂಬಂಧಗಳನ್ನು ಎಳೆದು ಮಣ್ಣು ಮುಚ್ಚಲೇಬೇಕಾಗುತ್ತದೆ.
ಅದರ ಬದಲು ಹೀಗೂ ಮಾಡಿನೋಡಬಹುದು.

*ಇಂತಿಷ್ಟು ಸಮಯ ಅಂತ ನಿಗದಿ ಮಾಡಿಕೊಂಡು ಆ ಸಮಯದಲ್ಲಿ ಮಾತ್ರ ಜಾಲತಾಣ ತರೆಯಿರಿ

*ಗಂಡ ಹೆಂಡತಿಯ ನಡುವೆ ಪಾಸ್ವರ್ಡಿನ ಬೀಗದ ಕೀಲಿ ಇಬ್ಬರಲ್ಲಿಯೂ ಇರಲಿ.

*ಮಲಗುವ ಮನೆಗೆ ಮೊಬೈಲ್ ಒಯ್ಯಬೇಡಿ
*ಬೆಳಿಗ್ಗೆ ಏಳುತ್ತಲೇ ಜಾಲತಾಣದ ಒಳಹೊಕ್ಕುವದನ್ನು ನಿಷೇಧಿಸಿ.
*ಮನೆಯವರು ಮಾತನಾಡುವಾಗ ಮೊಬೈಲ್ ಮುಟ್ಟಬೇಡಿಮೊಬೈಲ್ ಗೆ ಮೀಸಲಿಟ್ಟ ಸಮಯವನ್ನು ಪ್ರೀತಿ ಪಾತ್ರರಿಗೊಂದಿಷ್ಟು ಅವಷ್ಯವಾಗಿ ಕೊಡಿ.
*ಮಕ್ಕಳ ಎದುರು ಮೊಬೈಲ್ ಹಿಡಿಯಲೇಬೇಡಿ.
*ಆಗಾಗ ಡಾಟಾ ಹಾಕಿಸುವದನ್ನೇ ನಿಲ್ಲಿಸಿ ಉಳಿತಾಯದ ಜೊತೆಗೆ, ನೆಮ್ಮದಿ ಮತ್ತು ಬೇರೆ ವಿಚಾರಗಳಿಗೆ ತರೆದುಕೊಳ್ಳಲು ಸಮಯವೂ ಸಿಗುತ್ತದೆ.ಅಲ್ಲವೇ!?

***********

Leave a Reply

Back To Top