ಚಳಿ ಮತ್ತು ಅಗ್ಗಿಷ್ಠಿಕೆ
ಮಳೆಗಾಲದ ಒಂದು ಸಂಜೆ
ಕಪ್ಪುಗಟ್ಟಿದ್ದ ಹಡಗಿನಂತ ಮೋಡಗಳು
ಸ್ಪೋಟಗೊಂಡು ಸುರಿದ ಜಡಿ ಮಳೆಗೆ
ಸಿಕಿ ತೊಯ್ದು ತೊಪ್ಪೆಯಾದವಳ ಬಟ್ಟೆ ಒಣಗಿಸಲು
ನನ್ನ ಪುಟ್ಟ ಹಿತ್ತಲಿತ್ತು
ಗಡಗಡ ನಡುಗಿಸುವ ಚಳಿಗೆ
ಅಗ್ಗಿಷ್ಠಿಕೆಯಾಗಿ ನಾನಿದ್ದೆ.
ಮಳೆ ಸುರಿದು ಸರಿದು ಹೋಯಿತು
ಹಿಂಬಾಲಿಸಿಕೊಂಡು ಬಂದ ಬಿಸಿಲು
ಬಂದ ಮಳೆಯ ಮರೆಸಿತು
ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲ
ಮಳೆಯಾಗಲಿಲ್ಲ
ಬಿಸಿಲ ಝಳಕ್ಕೆ ಬರಬಿದ್ದ ಊರಿಗವಳೆಂದೂ ಬರಲೇ ಇಲ್ಲ
ಮತ್ತೀಗ ಅಲ್ಲಿ ಮಳೆಯಾಗುತ್ತಿರ ಬಹುದು
ಅವಳಲ್ಲಿ ನೆನೆಯುತ್ತಲೂ ಇರಬಹುದು
ಆ ಊರಲ್ಲೂ ಹಿತ್ತಲುಗಳಿವೆ
ಜೊತೆಗೆ ಅಗ್ಗಿಷ್ಠಿಕೆಗಳೂ!
********
ಕು.ಸ.ಮಧುಸೂದನ
ಕು.ಸ.ಮಧುಸೂದನ