ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಪ್ರೇಮವಿವಾಹದಲ್ಲಿ ಹೊಂದಾಣಿಕೆ

ವಿವಾಹವೆಂದರೇನೇ ಹೊಂದಾಣಿಕೆ. ಅದರಲ್ಲೂ ವಿಶೇಷವಾಗಿ ಇದೇನಪ್ಪಾ ಪ್ರೇಮ ವಿವಾಹದಲ್ಲಿ ಹೊಂದಾಣಿಕೆ ಅಂತೀರಾ? ಹೌದು…ಪ್ರೇಮವಿವಾಹದಲ್ಲಿ ಸಮಸ್ಯೆಗಳಿಗೆ
ನಾನಾ ಮುಖಗಳು ನಾನಾ ಆಯಾಮಗಳು. ಗಂಡ ಹೆಂಡಿರ ನಡುವಣ ಮಾನಸಿಕ ಹೊಂದಾಣಿಕೆಗಳು ಮತ್ತೆ ಮನೆಯ ಜನರ ಜೊತೆಗೆ ಒಡನಾಟದ ಸಮಸ್ಯೆಗಳು ಸಮಾಜದ ದೃಷ್ಟಿಕೋನ ಮತ್ತು ಭಾವನೆಗಳು ಇವೆಲ್ಲವುಗಳನ್ನು ಎದುರಿಸಬೇಕಾಗುತ್ತದೆ . ಹೆತ್ತವರ ಅಸಮಾಧಾನದ ಬೆಂಕಿಯಂತೂ ಹೊಗೆಯಾಡುತ್ತಲೇ ಇರುತ್ತದೆ. ಹುಟ್ಟಿದಾಗಿನಿಂದ ಇದ್ದ ಪರಿಸರ ನಂಬಿಕೆ ಆಚರಣೆಗಳಲ್ಲಿ ಗುರುತರ ಬದಲಾವಣೆಗಳು ಬಂದಪ್ಪಳಿಸಿ ಎಲ್ಲವೂ ಬುಡಮೇಲಾಗುವಂತಹ ಅಸ್ಥಿರತೆಯುೂ ಉಂಟಾಗುತ್ತದೆ . ಅಂತಹ ಸಮಯದಲ್ಲಿ ಸಂಗಾತಿಯ ಸಹಕಾರ ಅತಿ ಮುಖ್ಯ . ಇವೆಲ್ಲವುಗಳನ್ನು ಎದುರುನೋಡಿ ಮಾನಸಿಕವಾಗಿ ತಯಾರಾಗಿಯೇ ಇದ್ದರೂ ಸಹಿತ ಸಂಧರ್ಭದ ನಿರ್ವಹಣೆಯ ಸಮಯ ಬಂದಾಗ ಖಂಡಿತ ಅಧೀರರಾಗುವುದು ಸಹಜ . ಒಟ್ಟಿಗೆ ಕೂಡು ಕುಟುಂಬದಲ್ಲಿಯೇ ಇರಬೇಕಾದಂತಹ ಪರಿಸ್ಥಿತಿ ಬಂದರಂತೂ ಬೇರೆಯ ಮಣ್ಣಿನಲ್ಲಿ ತೆಗೆದು ನೆಟ್ಟ ಸಸಿಯ ಪರಿಸ್ಥಿತಿಯೇ ಸೈ .

ಒಂದೇ ಧರ್ಮದಲ್ಲಿನ ಬೇರೆ ಬೇರೆ ಜಾತಿಯಲ್ಲಿ ಮದುವೆಯಾದರೂ ಸಹ ಆಹಾರ ಪದ್ಧತಿ ಆಚರಣೆಯಲ್ಲಿನ ಭಿನ್ನತೆಗಳು ಸ್ವಲ್ಪಮಟ್ಟಿಗೆ ಎದುರಾಗುತ್ತವೆ .ಆದರೆ ಮನೆಯವರೆಲ್ಲರ ಸಹಕಾರ ತಮ್ಮೊಳಗೆ ಅವಳೂ ಒಬ್ಬಳು ಎಂದು ಸ್ವೀಕರಿಸುವ ಮನೋಭಾವವಿದ್ದಾಗ ಅಂತಹ ದೊಡ್ಡ ಸಮಸ್ಯೆಯಾಗುವುದಿಲ್ಲ .ಆದರೆ ಅಲ್ಲಿಯೂ ಸಹ ತಮ್ಮದೇ ಜಾತಿ ಜನಾಂಗದವಳಲ್ಲ ಎಂದು ತಿಳಿದಾಗ ಬಂದ ಸೊಸೆ ಎರಡನೇ ದರ್ಜೆಯ ಪ್ರಜೆಯಾಗಿ ಬಿಡುತ್ತಾಳೆ . ಎಷ್ಟೋ ಸಲ ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುವ ಪ್ರಸಂಗಗಳೂ ಇವೆ. ಆರ್ಥಿಕವಾಗಿ ಬೆಂಬಲವಿಲ್ಲದೆ ತವರಿನವರ ಬೆಂಬಲವೂ ಇಲ್ಲದಂತಹ ಹೆಣ್ಣುಮಕ್ಕಳ ಸ್ಥಿತಿ ತುಂಬಾ ದಯನೀಯವಾದ ಶೋಚನೀಯವಾದ ಪ್ರಸಂಗಗಳನ್ನು ಕಂಡಿದ್ದೇನೆ . ಪತಿಯು ಅರ್ಥಮಾಡಿಕೊಂಡು ಸಹಕಾರ ಕೊಟ್ಟಾಗ ಮನೆಯವರ ಮನಸ್ಸು ಬದಲಿಸಲು ಪ್ರಯತ್ನಿಸಿ ಆಗದಿದ್ದ ಸಂದರ್ಭದಲ್ಲಿ ಬೇರೆಯಾಗಿಯೇ ಇದ್ದಾಗ ಪರವಾಗಿಲ್ಲ . ಆದರೆ ಪ್ರೀತಿಸುವಾಗ ಇದ್ದ ಮೃದು ಭಾವನೆಗಳು ಮದುವೆಯಾದ ಮೇಲೆ ಮಾಯವಾಗುವ ಸಂದರ್ಭಗಳೇ ಹೆಚ್ಚು ಅಲ್ಲದೆ ಹೆಣ್ಣು ಗಂಡಿನ ಮನೆಯಲ್ಲಿ ಹೊಂದಿ ಬಾಳಬೇಕು ಎಂಬುದು ಪ್ರಚಲಿತ ನಿಯಮ ಹಾಗಾಗಿ ಅವಳೇ ಅನುಭವಿಸಲಿ ಸಹಿಸಲಿ ಎಂಬ ಧೋರಣೆಯ ಪುರುಷರೇ ಹೆಚ್ಚು . ಒಂದು ಸಮಯದಲ್ಲಿ ಮನೆಯವರಿಗಿಂತ ಪ್ರೀತಿ ಹೆಚ್ಚು ಎಂದು ಅನಿಸಬಹುದಾದರೂ ಮುಂದಿನ ದಿನಗಳಲ್ಲಿ ಮನೆಯವರನ್ನು ಎದುರು ಹಾಕಿಕೊಳ್ಳುವ ಅಪಾಯಕ್ಕೆ ಸಿಲುಕದೆ ತಟಸ್ಥರಾಗಿರುವಂತಹ ಪತಿ ಸಿಕ್ಕಿದರಂತೂ ಮದುವೆಯಾಗಿ ಬಂದ ಹೆಣ್ಣಿನ ಬಾಳು ಗೋಳೇ ಸರಿ . ಎಷ್ಟೋ ಹೆಣ್ಣುಮಕ್ಕಳು ಈ ಅಗ್ನಿದಿವ್ಯವನ್ನು ತಮ್ಮ ಸಹನೆ ತಾಳ್ಮೆಗಳಿಂದ ಗೆದ್ದು ಮನೆತನದಲ್ಲಿ ಒಂದಾಗಿ ಸಫಲತೆ ಹೊಂದಿದ್ದಾರೆ . ಆದರೆ ಎಲ್ಲರೂ ಅಷ್ಟೇ ಅದೃಷ್ಟಶಾಲಿಗಳೂ ಆಗಿರುವುದಿಲ್ಲ. ಕೆಲವೊಮ್ಮೆ ಇವಳೂ ಇರಲಿ ನಮ್ಮ ಸಮಾಧಾನಕ್ಕೆ ಬೇರೆಯವಳನ್ನು ಮದುವೆಯಾಗೆಂದು ಇವಳ ಸ್ಥಾನಕ್ಕೇ ಸಂಚಕಾರ ತಂದ ಮನೆತನಗಳೂ ಉಂಟು. ಗಂಡನ ಎದುರಿಗೆ ಒಂದು ಹಿಂದೆಯೇ ಬೇರೆ ನಡವಳಿಕೆ ತೋರಿಸಿ ಮೂಗುಬ್ಬಸ ತರಿಸುವಂತಹ ಸಂಬಂಧಿಗಳು ಇರುತ್ತಾರೆ . ಹಿರಿಯರು ನೋಡಿದ ಮದುವೆಗಳಲ್ಲಾದರೆ ಕಷ್ಟ ಸುಖ ಹೇಳಿಕೊಳ್ಳುವುದಕ್ಕೆ ಅಪ್ಪ ಅಮ್ಮ ಇರುತ್ತಾರೆ. ಇಲ್ಲಿ ಹೇಳಿಕೊಳ್ಳಲು ಆಗದೆ ಅನುಭವಿಸಲೂ ಆಗದೆ ಎಷ್ಟೋ ವೇಳೆ ಆತ್ಮಹತ್ಯೆಯ ಮೊರೆ ಹೊಕ್ಕ ಹೆಣ್ಣುಮಕ್ಕಳು ಉದಾಹರಣೆಗಳೂ ಇದೆ.
ಎಲ್ಲಾ ಪ್ರೇಮ ವಿವಾಹಗಳು ಹೀಗೆ ಎಂದು ಹೇಳಲಾಗದಿದ್ದರೂ ಬಹುತೇಕ ಪ್ರೇಮಿಸಿ ಮದುವೆಯಾದ ಹೆಣ್ಣುಮಕ್ಕಳ ಪಾಡು ಇದು. ಪಡುವ ಕಷ್ಟಗಳ ಸ್ತರಗಳು ವಿಧಾನಗಳು ಬೇರೆ ರೀತಿಯೇ ಇರಬಹುದಾದರೂ ಹೊರಗಿನಿಂದ ಬಂದ ಹೆಣ್ಣುಮಕ್ಕಳ ವಿಷಯದಲ್ಲಿ ಅತ್ತೆಯ ಮನೆಯವರು ತಳೆಯುವ ಕಠೋರ ಧೋರಣೆಗಳು ಪ್ರೇಮಿಸಿ ಮದುವೆಯಾಗಿ ಬಂದ ಸೊಸೆಯರ ವಿಷಯದಲ್ಲಿ ಮತ್ತಷ್ಟು ಹೆಚ್ಚು .

ಆದರೆ ಇದೆಲ್ಲವನ್ನು ಎದುರಿಸಿ ಮೆಟ್ಟಿ ನಿಲ್ಲುವ ಪರಿಹರಿಸಿಕೊಳ್ಳುವ ಜಾಣ್ಮೆ ಧೀಶಕ್ತಿಯನ್ನು ಪ್ರೀತಿ ಅವರಿಗೆ ಕೊಟ್ಟಿರುತ್ತದೆ. ಹಾಗಾಗಿಯೇ ಪ್ರಪಂಚದಲ್ಲಿ ಪ್ರೀತಿಸಿ ಮದುವೆಯಾಗುವ ವರ ಸಂಖ್ಯೆ ಹೆಚ್ಚು ಅನ್ನಿಸುತ್ತೆ .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top