ರಾಜೇಶ್ವರಿ ಬೋಗಯ್ಯ
ಜಾಣ ಜಾಣೆಯರೆ ,
ಎನ್ನುತ್ತಾ ದಿಕ್ಕು ,ದೆಸೆಯಿಲ್ಲದೆ ಓದುವುದಕ್ಕೂ ,ಬರೆಯುವುದಕ್ಕೂ ಒಂದು ಗುರಿ ಇಲ್ಲದೆ ಸಿಕ್ಕಿದ್ದೇ ಓದುತ್ತಾ ಅಲೆಯುತ್ತಿದ್ದ ಅತ್ರಪ್ತ ಬ್ಯೂಟಿಫುಲ್ ಮನಸ್ಸುಗಳನ್ನು ಸೆಳೆದು ಕೂರಿಸಿದ್ದೇ ನಮ್ಮ ಜಾಣರಲ್ಲಿ ಜಾಣರು ಲಂಕೇಶರು.
ಲಂಕೇಶರನ್ನು ನಾನ್ಯಾಕೆ ಓದಬೇಕು ? ಅಥವಾ ನಾನೇಕೆ ಲಂಕೇಶರನ್ನು ಓದುತ್ತೇನೆ ?
ಎರಡೂ ಪ್ರಶ್ನೆಗಳು ಬೇರೆ ಬೇರೆ ಅನ್ನಿಸಿದರೂ ಉತ್ತರ ಮಾತ್ರ ಒಂದೇ.
ಲಂಕೇಶರನ್ನಲ್ಲದೆ ಇನ್ಯಾರನ್ನು ಓದಬೇಕು ? ಇದು ನನ್ನ ಮರು ಪ್ರಶ್ನೆ.
ಲಂಕೇಶರಿಗಿಂತ ಮೊದಲು ಯಾರ್ ಯಾರನ್ನೋ ಓದಿ ,ಅರಿವೆಗೆಟ್ಟು ,ಬುದ್ದಿಗೆಟ್ಟು ಅವರು ಬರೆದದ್ದೇ ನಿಜವೆಂದು ನಂಬಿ ಅವುಗಳನ್ನೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಾಗಿತ್ತು.
ಕುಳಿತು ತೂಕಡಿಸುವಾಗ ಕತ್ತು ಬಲಪಕ್ಕಕ್ಕೇ ವಾಲುವಂತೆ ,ನಾನೂ ಆ ಕಡೆಯೇ ವಾಲುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಬಲಕ್ಕೆ ವಾಲಿದ್ದ ಕತ್ತನ್ನು ಸರಿಯಾಗಿಸಿ ಎಚ್ಚರಗೊಳ್ಳುವಂತೆ ಮಾಡಿದವರು ಲಂಕೇಶರು.ಆಗ ಎಚ್ಚರಗೊಂಡ ಮಿದುಳು ಮತ್ತೆ ತೂಕಡಿಸಲಿಲ್ಲ.
ಗಿಡವಾಗಿದ್ದಾಗಲೇ ಬಗ್ಗಿಸಬೇಕು ಎಂಬಂತೆ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲೇ ಎಚ್ಚರಗೊಳ್ಳಬೇಕೆಂದರೆ ಲಂಕೇಶರನ್ನು ಓದಬೇಕು. ಆ ವಿಶ್ವವಿದ್ಯಾಲಯದಲ್ಲಿ ಏನುಂಟು , ಏನಿಲ್ಲ ?
ಸಾಣೆ ಹಿಡಿಯುವ ಚಕ್ರಕ್ಕೆ ಸಿಕ್ಕಿದ ಏನೇ ಆಗಲಿ ಹೊಳೆಯುವಂತೆ ತನ್ನ ತನ್ನ ಮಡಿಲಿಗೆ ಬಂದು ಬೀಳುವ ಎಲ್ಲರನ್ನೂ ತನ್ನ ಅರಿವಿನ ಸ್ನಾನ ಮಾಡಿಸಿ ಹೊಳೆಹೊಳೆಯುವಂತೆ ಮಾಡುವ ಶಕ್ತಿ ಲಂಕೇಶರ ಬರವಣಿಗೆಯಲ್ಲಿತ್ತು.
ಏನುಂಟು , ಏನಿರಲಿಲ್ಲ ಲಂಕೇಶರಲ್ಲಿ. ಪೂಜಿಸಲು ಹರಿವಾಣದಲ್ಲಿರುವ ಎಲ್ಲಾ ಹಣ್ಣುಗಳಿರುವಂತೆ ಅವರ ಅರಿವಿನ ಹರಿವಾಣದಲ್ಲಿ ಇಲ್ಲದಿರುವ ವಿಷಯಗಳೇ ಇರಲಿಲ್ಲಿ. ಸಣ್ಣ ಹುಡುಗರಿಂದ ಹಿಡಿದು ವಯೋವೃದ್ಧರಿಗೂ ಏನಾದರೊಂದು ತಿಳುವಳಿಕೆ ನೀಡುವ ಪ್ರತಿಯೊಂದು ಹಾಳೆಯೂ ಬೆಲೆಬಾಳುವಂತಾದ್ದು.
ಏನಾದರೊಂದು ಸಂದೇಶ ಇರುತ್ತಿದ್ದ ನೀಲು ,ಇರುತ್ತಿದ್ದ ಎಂಟತ್ತು ಪದಗಳಲ್ಲೇ ಓದುಗರಲ್ಲಿ ಕಚಗುಳಿ ಮೂಡಿಸುವ ,ಗಾಢ ಚಂತನೆಗಚ್ಚುವ ,ಅಬ್ಬಾ ನಮಗ್ಯಾಕೆ ಇದೆಲ್ಲಾ ಕಾಣಿಸುವುದಿಲ್ಲ ಎಂದೆನ್ನಿಸುವಂತೆ ಕಾಡಿಸುತ್ತಿದ್ದ ನೀಲು ಇವತ್ತಿಗೂ ಎಲ್ಲರ ಡಾರ್ಲಿಂಗ್.
ಇನ್ನು ಮರೆಯುವ ಮುನ್ನ ,
ನನ್ನ ಅಚ್ಚುಮೆಚ್ಚಿನದು.ಯಾಕೆಂದರೆ ಅದರಲ್ಲಿ ಲಂಕೇಶರ ವೈಯಕ್ತಿಕ ಬರಹ ಸಾಕಷ್ಟು ಇರುತ್ತಿದ್ದರಿಂದ.
ಯಾವೊಂದು ಚಿತ್ರ ನಟರ ವಿಷಯಕ್ಕಾಗಿ ಅತ್ಯಂತ ಕುತೂಹಲದಿಂದ ಪೇಪರ್ ಮತ್ತು ಮ್ಯಾಗಜಿನ್ಗಳನ್ನು ಓದುತ್ತಿದ್ದೆವೋ ಹಾಗೆಯೇ ಲಂಕೇಶರ ,
ಆ ವಾರದಲ್ಲಿ ಆಫೀಸಿಗೆ ಬಂದವರ ,ಹೋದವರ ,ಬೈದವರ ,ಸಣ್ಣತನವ ಕಂಡುಹಿಡಿದಿದ್ದರ , ಇಸ್ಪೀಟ್ ಆಡಿದ್ದರ ,ಕುಡಿದಿದ್ದರ ,ರೇಸಿಗೆ ಹೋಗಿ ದುಡ್ಡು ಕಳೆದಿದ್ದರಾ , ಹಾಗೇ ದುಡ್ಡಿನ ಬಗ್ಗೆ ಎಚ್ಚರವಿರಲಿ ಎಂದು ಹೇಳಿದ್ದರ , ಮುನಿಸಿಕೊಂಡಿದ್ದರ ,ನಕ್ಕರಾ ,ಬರೆದರಾ ಎಂಬ ಎಲ್ಲಾದರ ವಿವರಗಳು ಅಲ್ಲಿರುತ್ತಿದ್ದರಿಂದ ,ಅದನ್ನೆಲ್ಲ ಓದಿ ಆತ್ಮ ತ್ರಪ್ತಿಗೊಳ್ಳುತ್ತಿತ್ತು.ಹಾಗೇ ಅವರನ್ನು ಅನುಕರಿಸಿ ಒಳಗೊಳಗೇ ಹೆಮ್ಮೆ ಪಡುತ್ತಿದ್ದುದೂ ಉಂಟು.
ಇನ್ನು ರಾಜಕೀಯವೋ ,
ಅವರ ರಕ್ತದಲ್ಲೇ ಸದಾ ಹರಿದಾಡುತ್ತಾ ಬಿಸಿಯಾಗಿಸುತ್ತಿದ್ದ ವಿಷಯವಾಗಿತ್ತು.ಅವರ ತೀಕ್ಷ್ಣ ಬರವಣಿಗೆಯಿಂದಲೇ ಕರ್ನಾಟಕ ರಾಜಕೀಯ ಏನೆಲ್ಲಾ ತಿರುವು ಪಡೆದಿತ್ತೆಂಬುದು ಎಲ್ಲರಿಗೂ ತಿಳಿದಿದೆ.ಎಲ್ಲಾ ಮಂತ್ರಿ,ಕಂತ್ರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಗಡಗಡ ನಡುಗಿಸಿದ್ದರಲ್ಲ.ಭ್ರಷ್ಟರು ಲಂಚಮುಟ್ಟುವಾಗ ದೇವರನ್ನು ನೆನೆಯದೆ (ದೇವರು ಯಾವಾಗ ಹೇಗೆ ಕಾಪಾಡುತ್ತಿದ್ದನೋ ಗೊತ್ತಿಲ್ಲ ) ಲಂಕೇಶರನ್ನು ನೆನೆದು ಹೆದರುತ್ತಿದ್ದರಲ್ಲ.ಚಾಟಿ ಏಟಿನಂತಿರುತ್ತಿದ್ದ ಅವರ ಬರಹಗಳಿಂದಲೇ ಚುರುಕು ಮುಟ್ಟಿಸಿಕೊಂಡು ಸುಮಾರಾಗಿ ಕೆಲಸ ಮಾಡಿದವರಿದ್ದಾರೆ.ಲಂಕೇಶರೆಂದರೆ ಕನಸಲ್ಲೂ ಬೆಚ್ಚಿಬೀಳುತ್ತ , ಅವರು ತೀರಿದಾಗ ಬೆಳಿಗ್ಗೆದ್ದು ಹಾಲು ಕುಡಿದವರಿದ್ದಾರೆ.ಒಬ್ಬ ಲೇಖಕನೆಂದರೆ ಹಾಗೇ ಇರಬೇಕಲ್ಲವೇ .ತಿದ್ದುತ್ತಾ ,ತೀಡುತ್ತಾ ,ಚಾಟಿಬೀಸುತ್ತಾ , ಕರ್ನಾಟಕದ ಜನರಿಗೆ ಒಂದಷ್ಟು ವರ್ಷಗಳ ಕಾಲ ನೆಮ್ಮದಿ ಕಾಣಿಸಿದ ಲಂಕೇಶ್ ಅವರು ಈಗ ಇರಬೇಕಿತ್ತು.
ಈಗ ಇಡೀ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯ , ದೌರ್ಜನ್ಯ ನೋಡಿ ಏನೇನು ಬರೆಯುತ್ತಿದ್ದರೋ , ಹೇಗೆಲ್ಲಾ ಎಚ್ಚರಿಸುತ್ತಿದ್ದರೋ , ಎಷ್ಟೆಲ್ಲಾ ಸಿಡುಕುತ್ತಿದ್ದರೋ , ಜೊತೆಯಲ್ಲಿ ಬೀದಿಗಿಳಿಯುತ್ತಿದ್ದರೋ ,ಕಣ್ಣೊರೆಸಿ ಸಮಾಧಾನ ಮಾಡುತ್ತಿದ್ದರೋ…
ಸಿನಿಮಾದ ಮೋಹವನ್ನು ಮೀರಿದವರಾರಿದ್ದಾರೆ.ತಮ್ಮ ಬಿಡುವಿರದ ಸಮಯದಲ್ಲೂ ಸಿನಿಮಾದ ಮಾಯಾಲೋಕದೊಳಗೆ ಹೊಕ್ಕು ,ನಟಿಸಿ , ಸಾಹಿತ್ಯ ರಚಿಸಿ, ನಿರ್ದೇಶಿಸಿ,ಏನೂ ಪೆಟ್ಟುತಿನ್ನದೆ ಈಚೆಬಂದವರು ಲಂಕೇಶ್ ಅವರು.ಅದರಲ್ಲಿರುವ ಕಷ್ಟ, ನಷ್ಟ ಸಣ್ಣತನ ,ಮೋಹ ಎಲ್ಲವನ್ನೂ ವಿವರಿಸಿ ಬರೆದು ಹಾಗೇ ಎಚ್ಚರಿಕೆಯನ್ನೂ ಕೊಟ್ಟರು.ಸಿನಿಮಾ ಎಂದರೆ ಸಿನಿಕತನವೇ ಎಂದು ವಿವರಿಸಿದರು .ಯಾರನ್ನೂ ಬಿಡದ ಸಿನಿಮಾ ಮೋಹ ,ಯಾಕೆ ಬಿಡಬೇಕೆಂದು ಕೇಳಿದರು.ನಾವಂದುಕೊಂಡಿರುವ ಸಿನಿಮಾ ಎಂದರೆ ರಂಗು,ರಂಗಿನ ಲೋಕ ಎನ್ನುವ ಮಿಥ್ಯವನ್ನು ತೆಗೆದರು.ರಂಗೂ ಇದೆ ಆದರೆ ಮಂಗನಾಗಬೇಡಿ ಎಂದು ಹೇಳುತ್ತಲೇ , ದೇಶ ವಿದೇಶದ ನಟನಟಿಯರನ್ನು ಕರೆತಂದು ಪರಿಚಯಿಸಿದರು.ಕತೆಗಳನ್ನು ಹೇಳಿ ಹೇಗೆ ಅದರೊಳಗೆ ಹೊಕ್ಕುವುದು , ಚಕಿತಗೊಳ್ಳುವುದು ಮುಂತಾದವನ್ನು ಬರೆದು ಚಲನಚಿತ್ರ ಪ್ರಿಯರಿಗೆ ಸಮಾಧಾನ ನೀಡಿದರು.ಬರೆದಿದ್ದ ಕಾಲಂಗಳೆಲ್ಲ ಸೇರಿ ಒಂದು ಪುಸ್ತಕದ ಸಂಗ್ರಹವಾಗಿದೆ ಈ ನರಕ ,ಈ ಪುಲಕ ಎಂದು.ಯಾವುದೂ ಬರೀ ಒಣಬರಹವಾಗಿರದೆ ರಸಭರಿತವಾಗಿ ,ಕೊಂಕು ,ಗಿಂಕು ಸೇರಿಸಿ ಚಪ್ಪರಿಸಿ ಓದುವಂತಿರುತ್ತಿತ್ತು.ಸಿನಿಮಾದ ಓದು ಓದಿದ ಮೇಲೆ ಒಂದು ಮಧುರವಾದ ರೋಮಾಂಚನ ,ಕಚಗುಳಿಯ ಸವಿಯಿಲ್ಲದೆ ಇರದೇ ಇರಲಿಲ್ಲ.
ಸಿನಿಮಾದವರ ಜೀವನ ಶೈಲಿಯ ಬಗ್ಗೆ ಹೇಳುತ್ತಾ ಒಂದು ಕಡೆ ಬರೆಯುತ್ತಾ ,
ಹಿಂದಿ ನಟಿಯರಾದ ,ಅಕ್ಕ ತಂಗಿಯರಾದ ತನುಜಾ ಮತ್ತು ನೂತನ್ , ಅವರಿಬ್ಬರೂ ಹೇಗೆ ವಿಭಿನ್ನ ಎಂದು ,
ನೂತನ್ ಅವರು ಬಹಳ ಮಡಿವಂತಿಕೆಯಿಂದ ಬದುಕಿದ್ದು ,ಬಹಳ ಬೇಗ ಸಾವನ್ನಪ್ಪಿದ್ದು ,ಆದರೆ ತನುಜಾರು ಜೀವನದ ಎಲ್ಲಾ ಜೀವಂತಿಕೆಯನ್ನು ,ಚಂದದ ಕ್ಷಣಗಳನ್ನು ಅನುಭವಿಸಿ ಈಗಲೂ ಎಷ್ಟು ಲವಲವಿಕೆಯಿಂದಿದ್ದಾರೆ ಎಂದಿದ್ದಾರೆ.
ಎಂತಹ ಗೂಢಾರ್ಥ ಇದೆ ಇದರಲ್ಲಿ.
ಯುವಜನರು ನಟನಟಿಯರನ್ನು ಆರಾಧಿಸುವುದನ್ನು ಬಿಟ್ಟು ಲಂಕೇಶರನ್ನು ಆರಾಧಿಸಲಿ, ಆಗ ನೋಡಲಿ ಅವರಲ್ಲಾಗುವ ಬದಲಾವಣೆ.
ಬದುಕುವ ದಾರಿ ಸಿಗದೇನು ಅಲ್ಲಿ ? ಒಂದು ಆದರ್ಶ ರೂಪುಗೊಳ್ಳದಿದ್ದರೆ ಕೇಳಿ ಅಲ್ಲಿ ?ಸಿನಿಕತನದಿಂದ ಹೊರಬರದಿದ್ದರೆ ನೋಡಿ.
ಮೋಹಿಸುವುದಿದ್ದರೆ ಲಂಕೇಶರನ್ನೇ ಮೋಹಿಸಲಿ, ನಂತರ ಅವರೇ ಒಂದು ರೂಪಕವಾಗುವುದಿಲ್ಲವೇನು ಪರೀಕ್ಷಿಸಲಿ !!
ಯಾರೊಬ್ಬರ ಮೇಲಾದರೂ ಹುಚ್ಚು ಬೆಳೆಸಿಕೊಳ್ಳುವುದಿದ್ದರೆ ಲಂಕೇಶರ ಪುಸ್ತಕದ ಮೇಲೆ ಬೆಳೆಸಿಕೊಳ್ಳಲಿ.ರೂಪಾಂತರಗೊಳ್ಳಲಿ.
ನಂದಿ ನೋಡದವರು ಹಂದಿಗೆ ಸಮವಂತೆ ಎನ್ನುವಂತೆ ,
ಲಂಕೇಶ್ರನ್ನು ಓದದವರು …..
ಏನು ಹೇಳುವುದು ಅವರ ದುರಾದೃಷ್ಟಕ್ಕೆ…
ಈಗಿನ ವಿದ್ಯಾರ್ಥಿಗಳೋ, ಹೊಸದಾಗಿ ಓದುವುದಕ್ಕೆ ಸಾಹಿತಿಯನ್ನು ಹುಡುಕುತ್ತಿರುವವರೋ ಸುಮ್ಮನೆ ಲಂಕೇಶರನ್ನು ಹಿಡಿಯಲಿ ,ಆ ಹಿಡಿದ ಬೆರಳನ್ನು ತನ್ನ ಮುಷ್ಟಿಯಲ್ಲಿ ಇಟ್ಟು ಬೆಚ್ಚಿಗಿನ ಅನುಭವವನ್ನು ನೀಡುವುದು ಲಂಕೇಶರ ಮಮತಾಮಯಿ ಬರವಣಿಗೆಯಲ್ಲಿದೆ.
ಅವರ ಕಾದಂಬರಿ ಮುಸ್ಸಂಜೆ ಕಥಾ ಪ್ರಸಂಗದಲ್ಲಿ ಬರುವ ಆಣೆಬಡ್ಡಿ ರಂಗಮ್ಮನ ಪಾತ್ರ ಎಷ್ಟು ಜೀವನ್ಮುಖಿಯದ್ದು.ಆಕೆ ಎಲ್ಲಾ ಸೋಗಲಾಡಿಗಳ ಒಳಹೊಕ್ಕು ಹಿಂದೂ ಮುಂದೂ ನೋಡದೆ ಮುಖವಾಡ ಕಳಚುವ ರೀತಿ ಇದೆಯಲ್ಲ …
ಅದರಲ್ಲೂ ಮೇಟ್ರ ಎಂದು ಕೂಗಿ ಅವರಿಗೆ ಬೈಯ್ಯುವುದು ,ಅಣಕಿಸುವುದು ,ಮಾಡಿದರೆ ಮೇಷ್ಟ್ರು ಎಂದರೆ ದೇವರೆಂದೇ ಭಾವಿಸಿರುವ , ಭಯಭಕ್ತಿಯ ಭಾವ ಉದಯಿಸುವವರನ್ನು ,ಪೂಜಿಸುವಂತವರಿಗೂ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ನಾವೂ ಅಲ್ಲಿಂದ ಕಾಲು ಕೀಳಬೇಕೆನಿಸುವಂತೆ ಕಟ್ಟಿದ್ದಾರೆ.
ನಾಗರಹಾವು ಕಥೆಯ ಮೇಷ್ಟೇ ಎಂದು ಹೇಳಿ ಅವರನ್ನು ಉಪ್ಪರಿಗೆಯ ಮೇಲೆ ಕೂರಿಸಿದ್ದನ್ನೂ ನೋಡಿದಾಗ ,ಅವೆರಡೂ ಪಾತ್ರಗಳು ಹೇಗೆ ವಿರುದ್ಧವಾದ ಪಾತ್ರ ಪೋಷಣೆಯಿದ್ದರೂ ಮನಸ್ಸಿನಲ್ಲುಳಿಯುತ್ತವೆ.
ಆಣೆಬಡ್ಡಿ ರಂಗಮ್ಮನಂತ ಹೆಣ್ಣು ಮಗಳು ಕೊನೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ತೀರಾ ಅನಿರೀಕ್ಷಿತ.ಆದರೆ ಬಹಳ ಅವಶ್ಯ.ಊರಿನ ಜನರನ್ನು ಎದುರಿಸಿ ನಿಂತ ರೀತಿ ….
ನಾವೆಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯುವಂತಾದ್ದು.ಈಗಿನ ಪ್ರತಿ ಊರಿಗೂ , ಒಂದೊಂದು ಮನೆಯಲ್ಲೂ ಇರಬೇಕಾಗಿರುವ ಸುಂದರ ಮನಸ್ಸು.
ಎಲ್ಲಿ ನೋಡಿದರಲ್ಲಿ ಮಿತಿ ಮೀರಿ ನಡೆಯುತ್ತಿರುವ ದೌರ್ಜನ್ಯ ,ಮೋಸ , ಅಂತರ್ಜಾತೀಯ ಮದುವೆಗಳ ನಂತರದ ಕೊಲೆಗಳಿಗೆ ಉತ್ತರವೆಂಬಂತಿದೆ.
ಹಾಗೆಯೇ ಅಕ್ಕ ಕಾದಂಬರಿಯಲ್ಲಿ ಅನಾಥ ಅಕ್ಕತಮ್ಮನ ಅನುಬಂಧ ಹೇಗಿರುತ್ತದೆ ಎಂಬುದನ್ನು ಕರುಳು ಕಿವುಚುವಂತೆ ಬರೆದಿದ್ದಾರೆ.ಒಬ್ಬರಿಗೊಬ್ಬರು ಹೇಗೆ ಆತುಕೊಂಡು , ಆವರಿಸಿಕೊಂಡು ಬೈದುಕೊಂಡು ,ತಳಮಳಿಸಿಕೊಂಡು ,ಹಂಬಲಿಸಿಕೊಂಡು …..
ಅಬ್ಬಾ ಬಡವರಾದರೇನು ಭಾವನೆಗಳಿಗೆ ಬಡತನವೇ ?
ಪುಸ್ತಕದ ಕೊನೆಯಲ್ಲಿ ಬರೀತಾರೆ , ಸುತ್ತಲಿನ ಪ್ರಪಂಚವನ್ನು ಹಾಗೇ ನೋಡಿದರೆ ಎಲ್ಲವೂ ಕಾಣುವುದು.ಅದನ್ನೆಲ್ಲಾ ಗ್ರಹಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು.
ದಾರಿಹೋಕ ನೋಡುವ, ಚಿಂತಿಸುವ ,ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ದರೆ ಅವನಿಗೆ ಒಂದಲ್ಲ ಒಂದು ದಿನ ಈ ಅಕ್ಕ ತಮ್ಮ ಸಿಗುತ್ತಾರೆ.ಕ್ಯಾತನ ಹಟ್ಟಿ ,ಅವನ ಅಕ್ಕ , ಅವರಿಬ್ಬರನ್ನು ಸುತ್ತುವರಿದ ರಾಜಕೀಯ ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ…
ರಾಜಕೀಯ ಹೇಗೆ ಒಂದಕ್ಕೊಂದು ತಕ್ಕೆ ಹಾಕಿ ಬದುಕನ್ನು ಛಿದ್ರ ಮಾಡುತ್ತದೆ ಎಂದು ಬಹಳ ಸಂಕ್ಷಿಪ್ತವಾಗಿ ಹೆಣೆದಿದ್ದಾರೆ.
ಮೇಲಿನೆರಡು ಉದಾಹರಣೆಗಳೇ ಸಾಕು ಜಗತ್ತಿನ ಅತೀ ಹೆಚ್ಚು ಬಾಧಿಸಲ್ಪಡುತ್ತಿರುವ ಸಮಸ್ಯೆಗಳ ಆಳಹೊಕ್ಕು ನೋಡುವುದಕ್ಕೆ ಮತ್ತು ಪರಿಹಾರವಿದೆ ಎಂದು ಹೇಳುವುದಕ್ಕೆ.ಒಂದು ಒಳಕಣ್ಣನ್ನು ಯಾವಾಗಲೂ ತೆರೆದಿಟ್ಟುಕೊಂಡಿರಿ ಎಂದು ,ಮನಸ್ಸಿನಾಳದಿಂದ ಮಿಡಿಯಿರಿ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
ಅಯ್ಯೋ ಅವರು ಈಗ ಇರಬೇಕಿತ್ತು ಎಂದು ಹಳಹಳಿಸುವುದು ಬಹುಶಃ ಲಂಕೇಶ್ ಎಂಬ ಸಾಹಿತಿಯೊಬ್ಬರಿಗೆ ಮಾತ್ರವೇ ಇರಬಹುದು.ಈಗಲಂತೂ ಅವರ ಕೊರತೆ ಬಹುವಾಗಿ ಕಾಡಿಸುತ್ತಿದೆ.ಈ ದುಷ್ಟ ಜಗತ್ತಿನಲ್ಲಿ ನಡೆಯುತ್ತಿರುವ ಕ್ರೌರ್ಯ ನೋಡಿ ಏನೇನೆಲ್ಲಾ ಬರೆಯುತ್ತಿದ್ದರೋ , ಹೇಗೆಲ್ಲಾ ಧೈರ್ಯ ತುಂಬುತ್ತಿದ್ದರೋ.ತೂಕಡಿಸುವವರು ಎಚ್ಚರಗೊಳ್ಳುವಂತೆ ಮಾಡುತ್ತಿದ್ದರೋ.
ಇದುವರೆಗೂ ಲಂಕೇಶರನ್ನು ಓದದವರು ಒಮ್ಮೆ ಓದಲಿ ,ಮುಂದೆ ಬರೆಯಬೇಕೆಂದುಕೊಂಡವರು ವಾಸ್ತವವಾಗಿ ಬರೆಯುವುದು ಹೇಗೆಂಬುದನ್ನು ತಿಳಿಯಲಿ.
ಇಷ್ಟಕ್ಕೇ ಮುಗಿಯದು ಲಂಕೇಶರ ದೈತ್ಯಾಕಾರದ ಫ್ರತಿಭೆಯ ಅವಲೋಕನ.ಹೇಳಲು ಇನ್ನೂ ನೂರಾರು ವಿಷಯಗಳಿವೆ. ಆದರೆ ನನಗೆ ದಕ್ಕಿರುವುದು ಇಷ್ಟು.
ಅವರು ನಮ್ಮನ್ನು ಪೊರೆದ ರೀತಿ ,ಎಚ್ಚರಗೊಳಿಸಿದ ವೇಳೆ ,ತಿದ್ದಿದ ಪರಿ …
ಒಂದು ತಂದೆ ,ಗೆಳೆಯ ,ಅಧ್ಯಾಪಕ ,ಪ್ರೇಮಿ ,ಎಲ್ಲಾ ಪಾತ್ರವನ್ನೂ ಜವಾಬ್ದಾರಿಯಿಂದ ನಿರ್ವಹಿಸಿ ಹೆಮ್ಮೆಯಿಂದ ನಿರ್ಗಮಿಸಿದರು.
ಒಂದು ವಿಧದಲ್ಲಿ ದಂತಕಥೆಯಾಗಿದ್ದ ಲಂಕೇಶರನ್ನು ನೆನೆದರೆ ಅವರ ಜೀವಿತ ಕಾಲದಲ್ಲೇ ನಾನೂ ಇದ್ದೆನಾ ಎಂದು ರೋಮಾಂಚನಗೊಳ್ಳುವೆ.ಬಹುಶಃ ಈಗಿನ ಜನಾಂಗ ಅದರ ರೋಚಕತೆಯನ್ನನುಭವಿಸದೆ ಬಹಳ ನಷ್ಟವನ್ನುಭವಿಸಿದ್ದಾರೆ.ಬದುಕಿದ್ದಾಗ ದಂತಕಥೆಯಾಗಿದ್ದ ಲಂಕೇಶರು ಈಗ ಪ್ರತಿಪುಟದಲ್ಲೂ ,ಒಂದೊಂದು ಓದಿನಲ್ಲೂ ಜೀವಂತವಿದ್ದಾರೆ.ಮನೆಯ ಎಲ್ಲಾ ಕೋಣೆಗಳಲ್ಲೂ ಒಂದೊಂದು ಅವರ ಪುಸ್ತಕವನ್ನಿಟ್ಟು ಐದು ನಿಮಿಷ ಸಮಯ ಸಿಕ್ಕಿದರೂ ಸಾಕು ,ನಾಲ್ಕು ಹಾಳೆ ಓದಿದರೂ ಸಾಕು ಅಲ್ಲೇನೋ ತಿಳುವಳಿಕೆ ,ಒಂದು ಸಮಾಧಾನ ಸಿಕ್ಕಿರುತ್ತದೆ.
ಯಾವ ಲೇಖಕ ಎಲ್ಲಾ ರಂಗದಲ್ಲೂ ಕೈ ಆಡಿಸಿದ್ದಾರೆ ?
ಬರೆದ ಒಂದೊಂದು ಪದವೂ ಪ್ರಾಮಾಣಿಕವಾಗಿ ಬರೆದದ್ದರಿಂದಲೇ ,ಆತಂಕವಾದಾಗ ಈಗಲೂ ದಿನಕ್ಕೊಮ್ಮೆ ಯಾದರೂ ಲಂಕೇಶ್ ಕೈಗೆ ಬರಲೇಬೇಕು.
ಮಾರ್ಚ್ ಎಂಟು ,
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಂಕೇಶ್ ಅವರ ಹುಟ್ಟಿದ ದಿನ ಒಂದೇ ಆದದ್ದು ಕಾಕತಾಳೀಯವೇ ಇರಬಹುದು.ಆದರೆ ಒಂದಕ್ಕೊಂದು ಪೂರಕವಾಗಿ ಬೆಸೆದಿದೆ.
ಮಹಿಳೆಯರ ಶಕ್ತಿಯ ಬಗ್ಗೆ ಅವರಿಗಿದ್ದ ನಂಬಿಕೆಯನ್ನು ಯಾವ ಮಹಿಳೆಯೂ ಹುಸಿಗೊಳಿಸಲಿಲ್ಲ.
ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಮೇಲೆ ಯಾವ ಮಹಿಳೆಯೂ ಬೆನ್ನು ತಿರುಗಿಸಿ ಹೋಗಿದ್ದಿಲ್ಲ. ಮಹಿಳೆಯರನ್ನು ಹುರುಪು ಗೊಳಿಸಿದ ರೀತಿಯಿಂದ ಎಲ್ಲಾ ಮಹಿಳೆಯರು ಲಂಕೇಶ್ ಪತ್ರಿಕೆ ಎಂಬ ನಿರಂತರ ಇಪ್ಪತ್ತೈದು ವರ್ಷಗಳ ಕಾಲ ನಡೆದ ಜಾತ್ರೆಯಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡರು.
ಅದರಲ್ಲೂ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ಲಂಕೇಶ್ ಅವರ ವಿಶೇಷ ಪ್ರೀತಿಗೆ ಕಾರಣರಾಗಿ ಎಷ್ಟೆಲ್ಲಾ ಅದ್ಭುತ ಕಥೆಗಳನ್ನು ಬರೆದ ಸಾರಾ ಅಬೂಬಕ್ಕರ್ ಅವರನ್ನು ಯಾವ ಓದುಗರೂ ಮರೆಯಲು ಸಾಧ್ಯವಿಲ್ಲ.ಅವರ ಧರ್ಮದವರಿಂದಲೇ ಬಹಿಕ್ಷಾರದ ಬೆದರಿಕೆ , ನಿರಂತರ ಅವಹೇಳನಕಾರಿ ಮಾತುಗಳು ಬಂದಾಗಲೂ ಈಗಲೂ ಗಟ್ಟಿಯಾಗಿ ತನ್ನ ನಿಲುವನ್ನು ಪ್ರಕಟಿಸುತ್ತಿದ್ದಾರೆ.
ನಾವೆಲ್ಲ ಹಿಂದೆ ಸಾಮಾಜಿಕ ,ಪ್ರಣಯ , ಪತ್ತೇದಾರಿ ಕಾದಂಬರಿಗಳಲ್ಲೇ ಮುಳುಗೇಳುತ್ತಿದ್ದ ಸಮಯದಲ್ಲಿ ಮುಸ್ಲಿಂ ಸಮುದಾಯದ ಕಥೆ ಮತ್ತು ಅವರಲ್ಲಿರುವ ನಾನಾ ತರಹದ ,ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರದ ಪ್ರಪಂಚಕ್ಕೆ ಎಳೆದೊಯ್ದರು.ಆ ಮೂಲಕ ಆ ಧರ್ಮದವರ ಬಗ್ಗೆ ಒಂದೇ ಅಭಿಪ್ರಾಯ ಹೊಂದಿ ಅಸಡ್ಡೆ ಬೆಳೆಸಿಕೊಂಡಿದ್ದ ನಮ್ಮನ್ನೆಲ್ಲ ಬದಲಿಸಿದ್ದು ಅವರ ಕಥೆಗಳು.ಈಗಲೂ ಸಾರಾ ಅವರೆಂದರೆ ಒಂದು ಹೆಮ್ಮೆ ಮತ್ತು ಲಂಕೇಶರು ಒಂದು ತಾಯಹ್ರದಯದವರು.
ನಿಮ್ಮ ಹುಟ್ಟಿದ ದಿನಕ್ಕೆ ,
ಈಗ ನಾನೂ ಕೂಡ ,ನಾನೂ ಗೌರಿ ಆದ್ದರಿಂದ ಪ್ರೀತಿಯಿಂದ ಮಿಯಾವ್.