ಅಡುಗೆ ಮನೆಯೆಂದರೆ
ಸ್ಮಿತಾ ರಾಘವೇಂದ್ರ
ಅಡುಗೆ ಮನೆಯೆಂದರೆ
ಯುದ್ಧಕ್ಕೆ ಮೊದಲು ಎಲ್ಲವೂ ಶಾಂತವೇ
ಯುದ್ದ ಮುಗಿದ ಮೆಲೂ…
ಅನಿವಾರ್ಯ ಮತ್ತು ಅವಶ್ಯಕತೆ-
ಸಂಭವಿಸುವ ಮುಂಚಿನ ಸಮಜಾಯಿಶಿ.
ಅಣಿಗೊಳ್ಳಲು ಹೆಚ್ಚಿನ ತಯಾರಿ ಏನಿಲ್ಲ
ಅತ್ತಿಂದಿತ್ತ ತಿರುಗಾಡುತ್ತಲೇ
ಮಾತು ಒಗೆದಂತೆ-
-ಅಣಿಮಾಡುವ ರಣರಂಗ.
ನುಗ್ಗೆಕಾಯಿ ಸಪೂರ ದಂತವರು,
ಹೊಟ್ಟೆ ಭಾರದ ದೊಣ್ಣ ಮೆಣಸಿನಂತವರು
ಕೆಂಪು ಗಲ್ಲದ ಟೊಮೆಟೊ ಅಂತವರು,
ಸೊಪ್ಪಿನಂತೆ ಉದ್ದ ಕೂದಲಿನವರು,
ನಾ ನಾ ವಿಧದ ಸೈನಿಕರ ಗುಂಪು,
ರಾಜನ ಆಗಮನವನ್ನೇ ಎದುರು ನೋಡುತ್ತ..
ಯಾರು ಮೊದಲು ಮಡಿಯಬಹುದು!?
ಇಂದು ನಿನ್ನದೇ ಪಾಳಿ
ಮೂಲೆಯಲ್ಲಿ ಕೂತ ಈರುಳ್ಳಿ.
ಬಿಡುವೆನೇ ಕಣ್ಣ ಹನಿ ಉದುರಿಸದೇ
ಸಣ್ಣ ಹೊಟ್ಟೆ ಉರಿ-
ಇವಳು ಇಷ್ಟಾದರೂ ಘಟ್ಟಿ;
ಅಡಗಿ ಕೂತವರನ್ನೆಲ್ಲ ಎಳೆದು ತಂದು
ಸಿಪ್ಪೆ ಸುಲಿದು.
ಕಚ ಕಚನೇ ಕೊಚ್ಚಿ ಬೇಯಿಸಿ
ಬಾಡಿಸಿ, ಉಪ್ಪು ಹುಳಿ ಖಾರ,
ಉರಿ ಉರಿ ಕೂಗಿದರೂ ಬಿಡದ ಘೋರ
ಹಳೆಯ ದ್ವೇಶವೆಲ್ಲ ತೀರಿಸಿಕೊಂಡ ಹಗುರ
ಅಮರಿಕೊಂಡ ಅಸಹಾಯಕತೆಯ ಅಸಹನೆ
ಕೊಡವಿಕೊಂಡ ನಿರಾಳ
ಎಲ್ಲ ಮುಗಿದ ಮೇಲೂ ಏನೂ ಆಗದಂತೆ
ಕಣ್ತುದಿಯ ಹನಿಯೊಂದು ಇಂಗಿದಂತೆ
ಅಗಲ ನಗೆಯಲಿ ಎಲ್ಲವೂ ಖಾಲಿ ಖಾಲಿ
ಕುರುಹೂ ಇಲ್ಲದ ರಣರಂಗದಲಿ
ಖಿಲ ಕಿಲನೇ ನಗುವ ಅವಳ ಖಯಾಲಿ..
******
ರಸಂ ಸವಿದಾಗೆ ಆಯ್ತು ನಿಮ್ಮ ಕವಿತೆ