ವ್ಯಾಲಂಟೈನ್ ವಿಶೇಷ
ಅಭಿಜ್ಞಾ ಪಿ ಎಮ್ ಗೌಡ
ಪ್ರೇಮಿಗಳ ದಿನಾಚರಣೆಯನ್ನು ನಮ್ಮದೆ ಪ್ರೀತಿಯ ದಿನವಾಗಿ ಆಚರಿಸೋಣ ಬನ್ನಿ….
ಇತ್ತೀಚೆಗಂತು ಸಂಸ್ಕೃತಿ ,ಸಂಸ್ಕಾರದ ನೆಲೆವೀಡಾದ ನಮ್ಮ ಭಾರತದೆಲ್ಲೆಡೆ ಫೆಬ್ರವರಿ 14 ಯಂದು ‘ವ್ಯಾಲೆಂಟೈನ್ ಡೇ’ ಎಂಬ ಹೆಸರಿನಲ್ಲಿ ಪ್ರೇಮಿಗಳ ದಿನವನ್ನಾಗಿ ಆಚರಿಸುವ ಪದ್ಧತಿ ವರ್ಷ ವರ್ಷ ಹೆಚ್ಚಾಗುತಿದೆ.ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ದೇಶದಿಂದ ಪಾಶ್ಚಾತ್ಯರ ಈ ಅಂಧಾನುಕರಣೆಯ ಪ್ರಭಾವ ಹೆಣ್ಣು ಗಂಡೆನ್ನದೆ ಅದೆಷ್ಟೋ ಹದಿಹರೆಯದ ಯುವಕ ಯುವತಿಯರಲ್ಲಿ ಅನೈತಿಕತೆ ಮತ್ತು ಸ್ವಚ್ಛಾಚಾರ ಹೆಚ್ಚಾಗಿ ಅನೇಕ ಅಪಘಾತಗಳು ಉಂಟಾಗುತ್ತಿವೆ ಜೊತೆಗೆ ಕೆಟ್ಟ ದಾರಿಗೆ ಇಳಿಯುತ್ತಿರುವವರೆ ಹೆಚ್ಚಾಗುತ್ತಿದ್ದಾರೆ.ಈ ಆಚರಣೆಯಿಂದಾಗಿ ಹಲವು ದುರ್ಘಟನೆಗಳು ಅನಾಹುತಗಳಿಂದಾಗಿ ಎಷ್ಟೊ ಯುವಕ ಯುವತಿಯರು ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತಿದ್ದಾರೆ.ಅಷ್ಟೆ ಅಲ್ಲಾ ದುಶ್ಚಟಗಳಿಗೆ ಹೆಣ್ಣು ,ಗಂಡು ಇಬ್ಬರೂ ಕೂಡ ದಾಸರಾಗಿ ತಮ್ಮ ತನವನ್ನು ಮಾರಿಕೊಳ್ಳುತ್ತಿರುವುದು ತುಂಬ ಖೇದನೀಯವಾಗಿದೆ. ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ ಯುವತಿಯರು ಮದ್ಯಪಾನ, ಧೂಮಪಾನ ಮಾಡುವುದು, ಡ್ರಗ್ ಮಾಫಿಯಾದಂತಹ ಕೃತ್ಯಗಳಿಗೆ ಬಲಿಯಾಗುತ್ತಿರುವುದು ,ಅನುಚಿತ ವರ್ತನೆಗಳು, ಘಟನೆಗಳ ಪ್ರಮಾಣ ಸಾಕಷ್ಟು ಹೆಚ್ಚಳವಾಗುತ್ತಿವೆ. ಅಷ್ಟೇ ಅಲ್ಲದೇ ಈ ದಿನದ ಸಮಿಕ್ಷೆಯ ಪ್ರಕಾರ ಗರ್ಭನಿರೋಧಕ ವಸ್ತುಗಳ ಮಾರಾಟ ಅಧಿಕವಾಗುತ್ತಿರುವುದು ಹಾಗು ಸುರಕ್ಷಿತವಲ್ಲದ ಲೈಂಗಿಕತೆಯಿಂದಾಗಿ ಅದೆಷ್ಟೊ ಯುವತಿಯರು ಅನೈತಿಕ ಸಂಬಂಧಗಳಿಂದಾಗಿ ಗರ್ಭಧರಿಸುತ್ತಿರುವ ಹಾಗು ಈ ಮೂಲಕ ತಮ್ಮ ಪ್ರಾಣಕಳೆದುಕೊಳ್ಳುತ್ತಿರುವ ಪ್ರಕರಣಗಳು ಅತ್ಯಧಿಕವಾಗುತ್ತಿವೆ…
ಅಷ್ಟೆ ಅಲ್ಲ ಪ್ರಸ್ತುತ ಜಗತ್ತಿನಲ್ಲಿ ಎಲ್ಲಾ ಪ್ರೀತಿಗಳಿಗಿಂತಲೂ ಪ್ರೇಮಿಗಳ ಪ್ರೀತಿಯು ಹೆಚ್ಚು ಮಹತ್ವ ಪಡೆದಿದೆ.ಆದರೆ ನಾವು ವ್ಯಕ್ತಪಡಿಸುವ ಪ್ರೀತಿಯ ಅನುರಾಗ ವಿಭಿನ್ನವಾಗಿದೆ. ಫೆಬ್ರವರಿ ೧೪ ರ ಪ್ರೇಮಿಗಳ ದಿನಾಚರಣೆಯೆಂಬುದು ಇತ್ತೀಚೆಗೆ ಪಾರ್ಥೇನಿಯಂ ಗಿಡದಂತೆ ವಿಶ್ವದ ನಾನಾ ದೇಶಗಳಲ್ಲಿ ಅತೀ ವೇಗವಾಗಿ ಹರಡುತ್ತಿರುವ ಒಂದು ವೈರಸ್ ಎಂದರೆ ತಪ್ಪಾಗಲಾರದು.!ಪ್ರೀತಿ ಎಂಬ ಪದಕೆ ಅದರದ್ದೆ ಆದ ಅತ್ಯುದ್ಭುತ ಶಕ್ತಿಯಿದೆ ಅರ್ಥವೂ ಇದೆ. ಪ್ರೀತಿ ದ್ವೇಷದ್ದಾದರೆ ಬದುಕು ದೂರ ದೂರ. ಅದೇ ಪ್ರೀತಿ ಆತ್ಮೀಯತೆಯಿಂದ ಕೂಡಿದ್ದರೆ ಬಾಳು ಸಂಭ್ರಮ.ಪ್ರೀತಿಯ ಆಚರಣೆಯ ಹೆಸರಲ್ಲಿ ಅದನ್ನು ಅದರ ವೈಶಿಷ್ಟ್ಯತೆ ವಿನೂತನ ಚರಿತೆಯನ್ನು ಹಾಳು ಮಾಡುತ್ತಿದ್ದಾರೆ.
ಪ್ರೀತಿ ಕೇವಲ ಪ್ರೇಮಿಗಳ ಮನಸ್ಸಲ್ಲಿ ಹುಟ್ಟುವುದಲ್ಲ ಪ್ರತಿಯೊಂದು ಜೀವಸಂಕುಲದ ಅಣು ಅಣುವಿನಲೂ ಅದರ ಛಾಯೆ ಇದ್ದೆ ಇರುವುದು.ಆಂತರ್ಯದಲಿ ಅಂಕುರಿಸುತಿಹುದು ಸುಂದರ ಹೂವಿನ ಪಕಳೆಗಳಂತೆ .ಹೇಳದೆ ಕೇಳದೆ ಪ್ರತಿಯೊಬ್ಬರಲ್ಲೂ ಆವರಿಸಿರುವ ಅದ್ಭುತ ಜೀವಭಾವದ ಕ್ರಿಯೆ.ಇದಕೆ ಯಾವುದೆ ಜಾತಿಗೀತಿಯ ಮಡಿವಂತಿಕೆಯಿಲ್ಲ. ಯಾವ ಧರ್ಮದವರಾಗಿರಲಿ ಯಾವ ಜಾತಿಯವರಾಗಿರಲಿ ಮೇಲು, ಕೀಳು ,ಬಡವ, ಶ್ರೀಮಂತನೆಂಬ ತಾರತಮ್ಯವಿಲ್ಲದೆ ಕರೆಯದೆ ಬರುವ ಬಂಧುವಿನಂತೆ ಎಲ್ಲರಲ್ಲೂ ಮೇಳೈಸುವುದು. ಪ್ರತಿಯೊಂದು ಜೀವಿಯಲ್ಲೂ ತನ್ನದೆ ಆದ ಲವಲವಿಕೆಯಿಂದ ನಳನಳಿಸುತಿರುವ ಶುದ್ಧ ಸುಂದರ ,ಸುಮಧುರ ,ಕೋಮಲತೆಯ ಪ್ರತಿಬಿಂಬವೀ ಪ್ರೀತಿ.ಇಂತಹ ಪ್ರೀತಿಗೊಂದು ಆಚರಣೆ ಮಾಡಲು ಒಂದು ದಿನ ಬೇಕೆ.? ನನ್ನದೊಂದು ಪ್ರಶ್ನೆ.ಪ್ರೀತಿಯೆಂಬ ಭಾವ ನಮ್ಮೊಳಗೆ ಸದಾ ಮನೆಮಾಡಿ ನೆಲೆಸಿರುವಾಗ ಅದರ ಆಚರಣೆಯ ಅವಶ್ಯಕತೆಯಾಗಲಿ ಅಥವ ಅನಿವಾರ್ಯವಾಗಲಿ ಬೇಡವೆನ್ನಿಸುತಿದೆ. ಅನುಕರಣೆ ಮಾಡೋಣ ಆದರೆ ಒಳ್ಳೆಯದನ್ನ ಮಾತ್ರ ಮಾಡೋಣ.ಪಾಶ್ಚಮಾತ್ಯ ಸಂಸ್ಕೃತಿಗಳಿಗೆ ಕಟ್ಟಿ ಬೀಳುವುದು ಅದೆಷ್ಟರ ಮಟ್ಟಿಗೆ ಸರಿ ಅಲ್ವ ಸ್ನೇಹಿತರೇ.? ನಮಗೆ ನಮ್ಮದೆ ಆದ ಸಂಸ್ಕೃತಿ ಸಂಪ್ರದಾಯಗಳಿವೆ. ಸಂಸ್ಕಾರಗಳ ತವರೂರು ನಮ್ಮೀ ಭರತಭೂಮಿ.ಹಾಗಾಗಿ ನಮ್ಮತನ ನಮ್ಮ ದೇಶದ ಸಂಸ್ಕೃತಿಯನ್ನ ಆರಾಧಿಸಿ, ಬೆಳೆಸಿ, ಗೌರವಿಸೋಣ.
ಮನಸ್ಸು ಮನಸ್ಸುಗಳ ಮಿಲನವೆ ಪ್ರೀತಿ ಅಂತ ಹೇಳ್ತಿವಿ ,ಆದ್ರೆ ಇದು ಪ್ರೀತಿಸುವ ಪ್ರೇಮಿಗಳ ಬಂಧ ಅನುಬಂಧದ ಸಂವಿಧಾನ ಸುಮಧುರ.ಇಂತಹ ಪ್ರೀತಿಯ ಪರಾಕಾಷ್ಟೆಯ ಪ್ರತಿಸ್ಥಾಪನೆ ಇಂದೆ ಆಗಬೇಕೆ.? ಪ್ರೀತಿಯೆಂದರೆ ಕೇವಲ ಜೀವನ/ಬಾಳ ಸಂಗಾತಿಯ ಸಾಂಗತ್ಯವಷ್ಟೆ ಅಲ್ಲ. ತಂದೆ ,ತಾಯಿಯ ಪ್ರೀತಿ. ಒಡಹುಟ್ಟಿದವರ ಪ್ರೀತಿ ˌಕುಟುಂಬದವರ ಪ್ರೀತಿ, ನೂರಾರು ತರದ ಪ್ರೀತಿಗಳಿವೆ. ಈ ಪ್ರೀತಿ ದಿನದ ಆಚರಣೆಯಲ್ಲಿ ಈ ಎಲ್ಲ ಪ್ರೀತಿಯ ಪರಿಚಯಾತ್ಮಕ ಮುಖಗಳು ಅನಾವರಣವಾಗುವುದೇ ಇಲ್ಲ.ಆದ್ದರಿಂದ ಈ ಪ್ರೇಮಿಗಳ ದಿನವನ್ನು ಹೀಗೂ ಆಚರಿಸಬಹುದು ಅಲ್ಲವೇ.?
ನನ್ನ ಪ್ರಕಾರ ಪ್ರೇಮಿಗಳ ದಿನದ ಆಚರಣೆಯನ್ನು ನಮ್ಮದೆ ಪ್ರೀತಿಯ ದಿನವಾಗಿ ಖಂಡಿತ ಆಚರಿಸಬಹುದು.ಹುಡುಕಿದರೆ ಪ್ರೀತಿ ಯಾವ ಮೂಲೆಯಲ್ಲಿಲ್ಲ ಹೇಳಿ.? ಪ್ರೀತಿಯೆಂಬುದು ಮನುಷ್ಯನಿಂದಿಡಿದು ಸೂಕ್ಷ್ಮಾನುಸೂಕ್ಷ್ಮ ಜೀವಿಗಳಲ್ಲೂ ಸಹ ತನ್ನದೆ ಆದ ಭಾವದೊಂದಿಗೆ ಪ್ರತಿಬಿಂಬಿತಗೊಳ್ಳುತ್ತಿರುತದೆ.
* ಬನ್ನೀ ಅನಾಥಾಶ್ರಮಕ್ಕೆ ಭೇಟಿನೀಡೋಣ ಅಂದು ಅವರೊಂದಿಗೆ ಮನಸೋ ಇಚ್ಛೆ ಕೂಡಿ ನಲಿಯೋಣ ಅವರಲ್ಲಿರುವ ಅನಾಥವೆಂಬ ಪ್ರಜ್ಞೆಯ ತೊಲಗಿಸೋಣ. ಪ್ರತಿಯೊಬ್ಬರಿಗೂ ಒಂದೊಂದು ಗುಲಾಬಿ ಕೊಟ್ಟು ನಮ್ಮ ಪ್ರೀತಿಯಧಾರೆ ಎರೆಯೋಣ.ಸಹೋದರತೆ ಮೆರೆಯೋಣ ನೊಂದು ,ಬೆಂದು ಬಳಲಿರುವ ಮನಗಳಿಗೆ ಸಾಂತ್ವನ ಹೇಳುತ ಪ್ರೀತಿಯ ಹಂಚಿ ಮಾನವೀಯತೆಯ ಶಾಂತ ಸ್ವಭಾವ ಮೆರೆಯೋಣ. ಹೀಗೆ ಮಾಡಿದರೆ ಪ್ರೀತಿಸುವ ಎರಡು ಮನಗಳು ಸುಖ ಶಾಂತಿ ನೆಮ್ಮದಿಯೊಂದಿಗೆ ಬಾಳಲಾರರೆ.?
* ಬನ್ನೀ ವೃದ್ಧಾಶ್ರಮಗಳಿಗೆ ಭೇಟಿನೀಡಿ ಅದೆಷ್ಟೋ ಮಕ್ಕಳಿಂದ ದೂರವಿರುವ ,ನೊಂದು ಕಣ್ಣೀರು ಹಾಕುತಿರುವ ಆ ಹಿರಿಯಜೀವಗಳಿಗೆ ಜೀವನ್ಮುಕ್ತ ಆಸರೆಯ ನೆರವು ನೀಡುತ್ತ ಪ್ರೀತಿ ಹಂಚಿ ಮಕ್ಕಳ ಒಲವು, ನಲಿವುಗಳಿಗೆ ಸಾಕ್ಷಿಯಾಗಿ ಬೆರೆಯೋಣ. ಪ್ರೀತಿಯ ಆಳಅಗಲದ ವಿಶಿಷ್ಟ್ಯತೆಯ ಹಿರಿಮೆ ಮೆರೆಯುತ್ತ ಆ ವೃದ್ಧರೊಂದಿಗೆ ಕೆಲವು ಕ್ಷಣಗಳಾದರು ಮಕ್ಕಳಂತೆ ಕಾಲ ಕಳೆದು ಅವರಿಗೆ ಮಕ್ಕಳ ಪ್ರೀತಿಯ ಧಾರೆಯೆರೆದರೆ ನೊಂದ ಮನಗಳಿಗೆಷ್ಟು ಖುಷಿ.!ಈ ಮೂಲಕ ಪ್ರೇಮಿಗಳ ದಿನದ ಮಹತ್ವವನ್ನು ಸಾರ್ಥ್ಯೈಕ್ಯಗೊಳಿಸೋಣ.
* ವಿಶೇಷಚೇತನರ ಬಳಗಕೆ ತೆರಳೋಣ ಆ ಮುಗ್ದ ಮನಗಳೊಂದಿಗೆ ಹಾಡಿ ನಲಿಯೋಣ ಪ್ರೀತಿಯ ಕೊರತೆಯಲಿ ಕೊರಗಿ ಸಣ್ಣಾಗಿ ಬಾಡುವ ಮನಗಳಿಗೆ ಸ್ಫೂರ್ತಿಯೆಂಬ ಪ್ರೀತಿಯ ಜೀವಜಲವ ಹರಿಸೋಣ.ವಿಶೇಷಚೇತನವುಳ್ಳ ಮಕ್ಕಳೊಂದಿಗೆ ನಾವು ಕೂಡ ಅವರಂತೆಯೆ ಇದ್ದು ಬೆರೆಯೋಣ. ಅವರಿಗೆ ನಮ್ಮ ಕರುಣೆಯಾಗಲಿ, ಅನುಕಂಪವಾಗಲಿ ಬೇಡ ನಾವೆಲ್ಲ ಅವರಿಗೆ ಪ್ರೀತಿಯೆಂಬ ಛಲ ,ಆತ್ಮವಿಶ್ವಾಸ ˌಆತ್ಮಸ್ಥೈರ್ಯವನ್ನು ತುಂಬುತ್ತ ಪ್ರೀತಿಯನ್ನು ನೀಡಿ ,ನಗುನಗುತಲೆ ನಲಿಸೋಣ. ನೊಂದ ಜೀವಗಳಿಗೆ ಹೊಂಬೆಳಕಿನ ಆಶಾಕಿರಣವಾಗೋಣ. ಮುಗ್ದಮನಸ್ಸುಗಳನ್ನು ಅರಳಿಸುತ್ತ ಈ ದಿನದ ಕ್ಷಣವನ್ನೆಲ್ಲ ಮಕ್ಕಳೊಂದಿಗೆ ಕಳೆದು ಅವರು ಸಂತಸವಾಗಿರಲು ನಾವೆಲ್ಲ ಕಾರಣೀಕರ್ತರಾಗೋಣ.
* ಹಸಿರಸಿರಿ ಮೆರೆಸುತ್ತ ಪ್ರೀತಿಯಿಂದ ಗಿಡಗಳಂಚಿ ನೆಡುವಂತೆ ಸಹಕರಿಸೋಣ ಬನ್ನೀ ಈ ದಿನದ ಜ್ಞಾಪಕಾರ್ಥವಾಗಿ ನಾವೆಲ್ಲ
ಗಿಡಗಳನ್ನು ನೆಟ್ಟು ಕಾಂಕ್ರಿಟ್ ನಗರಗಳ ಬೆಳವಣಿಗೆ ಅದರ ದುಷ್ಪರಿಣಾಮಗಳ ಬಗೆ ತಿಳಿಸೋಣ. ಹಸಿರ ಸಿರಿ ದೇವಿ ವಸುಂಧರೆಯ ಉಳಿಸಿ ಬೆಳೆಸುವ ಮಹತ್ವದ ಕೈಂಕರ್ಯ ಕೈಗೊಳ್ಳೋಣ.ಕಾಡು ಉಳಿಸುವ ನಾಡು ಬೆಳೆಸುವ ಗುರಿ ಹೊಂದೋಣ. ಜೀವ ಜಗತ್ತಿಗೆ ಒಳಿತು ಮಾಡುವ ಮಹತ್ಕಾರ್ಯಗಳ ಮಹಿಮೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಮಾನವನ ಸ್ವಾರ್ಥತೆಯ ಬಗೆ ಹೇಳುತ್ತ ಜೀವಜಗತ್ತನ್ನು ಉಳಿಸುವ ಕಾರ್ಯ ಮಾಡೋಣ.ಓ ಪ್ರೇಮಿಗಳೆ ಒಮ್ಮೆ ಯೋಚಿಸಿ ಆಲೋಚಿಸಿ ಇಂತ ಕಾರ್ಯಗಳಲ್ಲಿ ನಮ್ಮ ಪ್ರೀತಿಯನ್ನು ಆತ್ಮಾರ್ಪಣೆ ಮಾಡಿಕೊಳ್ಳೋಣ. ಪ್ರೀತಿಯನ್ನು ಸಮರ್ಪಣ ಮನೋಭಾವದಿಂದ ಹಂಚುತ್ತ ಅದರ ಧಾರಣೆಯೊಂದಿಗೆ ಧೋರಣೆಗಳನ್ನು ಬಿತ್ತೋಣ ಈ ದಿನಕ್ಕೆ ಸ್ಫೂರ್ತಿಯಾಗೋಣ.
* ಕೈಲಾಗದವರಿಗೆ ನಿರ್ಗತಿಕರಿಗೆ ಭಿಕ್ಷುಕರಿಗೆ ನೆರವು ನೀಡುತ ಅವರ ಬಾಳಿಗೆ ದಿವ್ಯತೆ ನವ ಬೆಳಕ ಹರಿಸೋಣ. ಪ್ರೀತಿಯನ್ನು ಪ್ರೀತಿಯಿಂದ ಸಮರ್ಪಣೆ ಮಾಡಿಕೊಳ್ಳೊಣ.ಪ್ರೀತಿಯೆಂಬ ನಿಷ್ಕಲ್ಮಶ ಭಾವಕೆ ಚ್ಯುತಿ ಬರದಂತೆ ಅದರ ಪರಾಕಾಷ್ಟೆ ಮೆರೆಯೋಣ. ಬನ್ನೀ ಪ್ರೀತಿಯಿಂದಲೆ ರಕ್ತದಾನ ಮಾಡೋಣ.ಸಾಯುವ ದೇಹಗಳನ್ನು ಉಳಿಸೋಣ.ಒಟ್ಟಿನಲ್ಲಿ ಈ ದಿನವನ್ನು ನಮ್ಮದೆ ಆದ ವಿಶಿಷ್ಟ ವಿನೂತನ ಮಾದರಿಯಲ್ಲಿ ಪ್ರೀತಿಯ ದಿನವನ್ನಾಗಿ ಖಂಡಿತ ಆಚರಿಸಬಹುದು. ಆಚರಿಸೋಣ ಬನ್ನೀ.ಪಾಶ್ಚಮಾತ್ಯ ಸಂಸ್ಕೃತಿಗಳ ಅನುಕರಣೆ ಬೇಡ ನಾವು ನಮ್ಮದೆ ವಿನೂತನ ವಿಧಾನವನ್ನು ಎಲ್ಲರಿಗೂ ಅನುಕೂಲವಾಗುವಂತೆ ಆಚರಿಸುತ್ತ ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಆಚರಿಸುತ್ತ ನಾವೆಲ್ಲರೂ ಮಾದರಿಯಾಗೋಣ.
ಖಂಡಿತ ನಮ್ಮದೆ ರೀತಿಯಲ್ಲಿ ಪ್ರೀತಿಯ ದಿನವನ್ನಾಗಿ ಆಚರಿಸಬಹುದು.ಏಕೆಂದರೆ ಪ್ರೀತಿಯೆಂಬುದು ಒಂದು ಅವರ್ಣೀಯವಾದ ಅದ್ಭುತ ಅನುಭವ.ಅನನ್ಯತೆಯೊಳಗಿನ ದಿವ್ಯಾಮೃತದ ಅನುಭೂತಿ ಸಾಕ್ಷಾತ್ಕಾರದ ಮಹಾಮೇರು.ಇದೊಂದು ಮೌಲ್ಯತೆಯ ಆಗರವೂ ಹೌದು ,ನಿಷ್ಪಕ್ಷಪಾತದ ಧೋರಣೆ ಪ್ರಾಮಾಣಿಕತೆ, ಸತ್ಯಾಸತ್ಯತೆ ,ಕೋಮಲತೆ, ಮಧುರ ಪ್ರೇಮ, ಸ್ನೇಹ ,ವಿಶ್ವಾಸ ,ವಾತ್ಸಲ್ಯ, ಭಕ್ತಿ, ವಿನೇಯತೆ ,ವಿಧೇಯತೆ ,ಸೌಜನ್ಯತೆ, ಸೌಹಾರ್ದತೆ, ಗೌರವಾಧರಗಳು ತುಂಬಿತುಳುಕುತಿವೆ.ಪ್ರೀತಿಯೆಂಬುದು ಪರಿಪಕ್ವತೆಯಿಂದ ಕೂಡಿದಾಗ ಮಾತ್ರ ಸಹನೆ, ತ್ಯಾಗ, ಕ್ಷಮಾಗುಣಗಳ ಮಹಾಪೂರವೆ ಆಗುತ್ತಿರುವುದು.ಎಲ್ಲಿ ಭಯ ಆತಂಕ ಹಿಂಜರಿಕೆ ವೈರತ್ವ ಸಂಕುಚಿತ ಭಾವನೆ ಹೊಟ್ಟೆಕಿಚ್ಚು ಸ್ವಾರ್ಥವಿರುವುದೋ ಅಲ್ಲಿ ಪ್ರೀತಿಯ ಏರಿಳಿತ ಏದುಸಿರುವಿರುವುದು. ಮಾಡುವ ಕಾರ್ಯಗಳಲ್ಲಿ ಆಸಕ್ತಿ ,ಏಕಾಗ್ರತೆ ಇಲ್ಲದೆ ಮನೋಇಚ್ಛೆಯಂತೆ ನಡೆದರೆ ಅನಾಹುತಗಳಿಗೆ ದಾರಿಯಾಗುವುದು .ಹಾಗಾಗಿ ಪ್ರೀತಿಯನ್ನು ಪ್ರೀತಿಯಿಂದ ಗೆಲ್ಲಬೇಕು.
ಇದೊಂದು ಮಾನವೀಯತೆಯ ಕಣಜ. ಆದ್ದರಿಂದ ಪ್ರೀತಿಯನ್ನು ನಮ್ಮದೆ ಆದ ರೀತಿಯಲ್ಲಿ ಆಚರಿಸಿಕೊಳ್ಳಬಹುದು.
ಅಂತರಂಗ ಬಹಿರಂಗಳಲ್ಲಿ ಪ್ರೀತಿಯ ಪಾರುಪತ್ಯ ಅಮೋಘವಾದುದ್ದು. ಪ್ರೀತಿಗೆ ತಳಹದಿಯಾಗಿ ಸ್ನೇಹವಿದ್ದರಷ್ಟೆ ಎಂತ ಪ್ರೇಮಿಗಳು ಕೂಡ ಗಟ್ಟಿತನದಿಂದ ನೆಮ್ಮದಿಯಿಂದಿರುವರು. ಈ ದಿನದ ವಿಶೇಷತೆಯ ಮೆರೆಯಲು ಎಷ್ಟೋ ಯುವ ಪ್ರೇಮಿಗಳು ತಮ್ಮ ಜೀವವನ್ನೆ ಕಳೆದುಕೊಳ್ಳುತಿರುವ ಪ್ರಸಂಗಗಳು ಬೆಳಕಿಗೆ ಬಂದಿವೆ.ಪ್ರಜ್ಞಾವಂತ ಯುವಕ, ಯುವತಿಯರು ಇಂತಹ ವಿಷಯಗಳಲ್ಲಿ ಮುಕ್ತವಾಗಿ ಚರ್ಚಿಸಿ ತಮ್ಮಿಬ್ಬರ ಮನಗಳನ್ನು ಹದಗೊಳಿಸಬೇಕು. ಸೂಕ್ಷ್ಮತೆಯ ಅರಿವು ಹೊಂದಿರಬೇಕು.ಇಂತಹ ದಿನಾಚರಣೆಗಳಂತು ಯುವ ಪ್ರೇಮಿಗಳನ್ನು ಅಡ್ಡದಾರಿಗೆ ಎಳೆಯುತಿವೆ. ಎಷ್ಟೋ ಪ್ರೇಮಿಗಳು ಮನೆಬಿಟ್ಟು ಅಪ್ಪ ,ಅಮ್ಮನಿಗೆ ಮೋಸ ಮಾಡಿ ಹೋಗುವರು.ಮತ್ತಷ್ಟು ಪ್ರೇಮಿಗಳು ಇಂದೆ ಮದುವೆಯಾಗುವ ಇಂಗಿತಗಳನ್ನು ವ್ಯಕ್ತಪಡಿಸುವರು. ಮಗದಷ್ಟು ಪ್ರೇಮಿಗಳು ಪ್ರೀತಿಯ ವೈಪಲ್ಯತೆಯಿಂದ ನಾನಾ ವಿಧಾನಗಳನ್ನು ಅನುಸರಿಸಿ ಸಾವಿಗೆ ಶರಣಾಗುತ್ತಿರುವರು ಇವೆಲ್ಲಾ ಬೇಕಾ.? ಇಂತಹ ಹೇಡಿ ,ಅಸಹ್ಯತನದ ಅಂಜುಬೂರಿಕೆಯ ಪ್ರಯತ್ನಗಳ ಅಟ್ಟಹಾಸ ತಾರಕಕ್ಕೇರುತ್ತಿರುವುದು ವಿಪರ್ಯಾಸ. ಇದೊಂದು ಫ್ಯಾಷನ್ ಆಗಿ ಮಾರ್ಪಾಡಾಗುತ್ತಿದೆ ಇಂತಹ ಆಚರಣೆಗಳಿಗೆ ನನ್ನೊಂದು ಧಿಕ್ಕಾರ.
ಅದಕ್ಕಾಗಿಯೆ ನಾ ಹೇಳಿದ್ದು “ಮನಸ್ಸಿದ್ದರೆ ಮಾರ್ಗ” ಈ ಪ್ರೇಮಿಗಳ ದಿನವನ್ನು ನಮ್ಮದೆ ಆದ ಪ್ರೀತಿಯ ದಿನವನ್ನಾಗಿ ಖಂಡಿತ ಆಚರಿಸಬಹುದು.ಪ್ರಜ್ಞಾವಂತ ಯುವಕ ಯುವತಿಯರೇ ಅರೆಕ್ಷಣದ ಮೋಹವೆಂಬ ಸುಳಿಗೆ ಸಿಲುಕದೆ ಪವಿತ್ರವಾದ ಪ್ರೀತಿಯ ಬಂಧಕ್ಕೆ ಮಸಿ ಬಳಿಯಬೇಡಿ.ಪ್ರೀತಿಯೆಂಬುದು ನಿತ್ಯನವ್ಯತೆಯ ಹರ್ಷದೊನಲ ತಥ್ಯದಿವ್ಯಸಾರ. ಬನ್ನಿ ಈ ದಿನ ಎಲ್ಲರೊಂದಿಗೂ ಮುಕ್ತತೆಯೊಂದಿಗೆ ಉಣಿಸಿ, ತಣಿಸಿ ,ನಲಿಸಿ ,ನಗಿಸೋಣ. ನಂಬಿಕೆಯೆಂಬ ನಾಜೂಕಿನ ನೀಳದೆಲೆಯಲಿ ನಳನಳಿಸುವ ಈ ಪ್ರೀತಿಯೆಂಬ ಅಲೆಯೊಂದಿಗೆ ಸಾಗೋಣ.
ಆಧುನಿಕತೆಗೆ ಮಾರು ಹೋಗದಿರಿ. ನಮ್ಮತನವ ಮಾರಿಕೊಳ್ಳದಿರಿ.
ಮನಃಸಾಕ್ಷಿಯ ನೇರನುಡಿಗೆ ಈ ಪ್ರೀತಿಯೆಂಬುದು
ದರ್ಪಣವಿದ್ದಂತೆ.ಪ್ರೀತಿಯೆಂಬುದು ಜೀವನಕ್ಕೆ ಹೊಣೆಗಾರಿಕೆಯಾಗ ಬೇಕೇ ಹೊರತು, ಹೆಣಗಾಡುವಂತೆ ಪ್ರೀತಿಸಿ ಅಲೆದಾಡಬಾರದು.
ಭೂಮಿಯಲ್ಲಿಟ್ಟಿರುವ ಸಕಲಜೀವಗಳಲ್ಲೂ ಪ್ರೀತಿಯೆಂಬ ಜೀವಾಣುವಿದೆ.ಆಗಂತ ಸ್ವೇಚ್ಛಾಚಾರದ ಪ್ರೀತಿ ಸಲ್ಲದು.ನಂಬಿಕೆಯ ಪ್ರೀತಿಯಲ್ಲಿ ಕೊನೆಯವರೆಗೂ ಒಬ್ಬರಿಗೊಬ್ಬರು ಸೋಲುತ್ತ ಒಬ್ಬರಿಗೊಬ್ಬರು ಜೀವಭಾವಗಳನ್ನು ಗೆಲ್ಲುತ್ತ ,ಸ್ಫೂರ್ತಿಯ ಸೆಲೆಗಳಾಗಿ, ಜಗದ ಕಣ್ಮಣಿಗಳಾಗಿ ಬಾಳಿರಿ.ಪ್ರೇಮಿಗಳ ದಿನ ಪ್ರತಿವರ್ಷವು ಬರುತ್ತದೆ. ಅದರಲ್ಲಿ ಹೋದ ಮಾನಾಪಮಾನಗಳು ನೆಮ್ಮದಿಗೆ ಕೊಳ್ಳಿ ಇಟ್ಟಂತಾಗುವುದು. “ಹೆಣ್ಣಾಗಲಿ ಗಂಡಾಗಲಿ ಪ್ರೀತಿಸಿದವರು ಸಿಕ್ಕರೆ ಅರಿತು ಬಾಳಬೇಕು. ಸಿಗದೆ ಹೋದರೆ ಮರೆತು ಬಾಳಬೇಕು.” ಇದುವೆ ಜೀವನ. ಜೊತೆಗಿರುವ ಪ್ರತಿಕ್ಷಣವು ಜೋಪಾನ ಮಾಡುತ್ತ ನಂಬಿ ಬಂದ ಜೀವಕೆ ಒಲವಿನಾಸರೆಯ ಅನುರಾಗದ ಬಾಂಧವ್ಯ ನೀಡಬೇಕು.
ಅದಕ್ಕಾಗಿಯೆ ಇಂತಹ ಪವಿತ್ರ ಪ್ರೀತಿಯು ನಮ್ಮದೆ ಆದ ಪ್ರೀತಿಯ ದಿನದ ಆಚರಣೆಯಲ್ಲಿ ಅನಾವರಣಗೊಂಡಂತೆ ಈ ಪ್ರೀತಿಯ ನೆಲೆ ಸೆಲೆಗಳು ಭದ್ರವಾಗುವವು. ಪ್ರೀತಿಯೆಂಬ ಜ್ಯೋತಿಗೆ ಸದಾ ಸವಿನುಡಿಯಂತ ಎಣ್ಣೆಯನ್ನು ಹಾಕುತ್ತ ಪೋಸಿಸೋಣ. ನಾವು ನಮ್ಮದೆ ನಾವಿನ್ಯತೆಯ ವಿಧಾನದೊಳು ಪ್ರತಿಯೊಬ್ಬರಿಗೂ ಮಾದರಿಯಾಗುತ್ತ ಈ ದಿನದ ಸಾರ್ಥಕತೆ ಮೆರೆಯೋಣ.
ಪ್ರೀತಿಯ ಕುರಿತು ಅದೇಷ್ಟು ಸೂಕ್ಷ್ಮವಾಗಿ ತಮ್ಮತನದ ಪರಿಮಳ ಹರುವಿದಿರ, ಸಾಂಗತ್ಯವಷ್ಟೇ ಪ್ರೀತಿಯಲ್ಲ, ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂಬ ತಮ್ಮಯ ಬರಹದ ತಿರುಳು ಸಾರ್ವಕಾಲಿಕ ಸತ್ಯ, ಪ್ರೀತಿಯ ಅನುರಾಗ ಹಣ ಅಂತಸ್ಥು ನೋಡಿ ಹುಟ್ಟವಂತದ್ದು ಪ್ರೀತಿಯಲ್ಲ ವ್ಯಾಮೋಹ ಎಂಬುದು ಬಹು ನಾಜುಕಾಗಿ ನಿರುಪಿಸಿದ್ದಿರ ಯಾರ ಮನಸಿಗೂ ಧಕ್ಕೆಯಾಗದಂತೆ , ಇದು ಬರಹಗಾನಲ್ಲಿ ಇರಬೇಕಾದ ಅತ್ಯಂತ ಉತ್ಕೃಷ್ಟ ಜಾಣ್ಮೆ ನೈಪುಣ್ಯ ತಮ್ಮಲ್ಲಿ ಕಂಡು ತುಂಬಾ ಖುಷಿಯಾಯಿತು, ಇದಕಿಂಲೂ ಹೆಚ್ಚಿನದು ಅಭಿವ್ಯಕ್ತಿ ಪಡಿಸಲಾಗಲ್ಲ , ತುಂಬಾ ಖುಷಿಯಾಯಿತು , ಯುವಕರಿಗೆ ದಾರಿ ದೀಪವಾಗಿದೆ ಬರಹ, ಶುಭವಾಗಲಿ ಶುಭಾಶಯಗಳು ಮೇಡಂ