ನಾನೇಕೆ ಲಂಕೇಶರನ್ನು ಓದುತ್ತೇನೆ
ಧನಂಜಯ್ ಎನ್
ಲಂಕೇಶರೇ ನಾನೇಕೆ ನಿಮ್ಮನ್ನು ಓದುತ್ತೇನೆ..?
ಈ ರೀತಿಯ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡರೂ ಅಂತಹ ಆಶ್ಚರ್ಯವೇನೂ ಇಲ್ಲ.
ತೇಜಸ್ವಿಯಿಂದ ಶುರುವಾದ ನನ್ನ ಮೊದಲ ಓದು ಕುವೆಂಪು , ಕಾರಂತರನ್ನು ಬಳಸಿ, ಭೈರಪ್ಪನವರ ತನಕವೂ ಬಂದು ನಿಂತಿತ್ತು.
ಇವರೆಲ್ಲರ ಮಧ್ಯೆ ನಿಮ್ಮ ಹೆಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೋಗಿತ್ತಾದರೂ, ಹಲವು ಟೀಕೆ ಟಿಪ್ಪಣಿಗಳ ನಡುವೆ ‘ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದೆ.
ಭೈರಪ್ಪನವರ ” ಕವಲು ” ಕಾದಂಬರಿ ಓದಿದ ತರುವಾಯ, ಕನಿಷ್ಠ 20 ರಿಂದ 30 ದಿನಗಳ ವರೆಗಾದರೂ ಯಾವ ಹೆಂಗಸರನ್ನು ಕಂಡರೂ ಹೆದರುತ್ತಿದ್ದೆ, ಹೆಂಗಸರಿಗಿರುವ ಅವಕಾಶಗಳೆಲ್ಲಾ ಗಂಡಸರನ್ನು ತುಳಿಯಲೆಂದೇ ಇರುವ ಅಸ್ತ್ರಗಳು ಎಂದು ನಂಬಿಕೊಂಡು ಬೇರೆ ದಾರಿ ಇಲ್ಲದೆ, ಗಂಡೆಂಬ ದರ್ಪವನ್ನು ಹೇಗಾದರೂ ಪ್ರದರ್ಶನ ಮಾಡಬೇಕು ಎಂದು ಹಠ ತೊಟ್ಟಿದ್ದೆ.
ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಅನ್ನಭಾಗ್ಯ ಯೋಜನೆ ತಂದಾಗ , ” ಬಡವರಿಗೆ ಅನ್ನ ಕೊಟ್ಟು ಸೋಂಬೇರಿಗಳನ್ನಾಗಿ ಮಾಡುತ್ತಿದ್ದೀರಿ ” ಎಂದು ಹೇಳಿಕೆ ಕೊಟ್ಟ ಭೈರಪ್ಪನವರ ಮಾತನ್ನ ಕೇಳಿ, ಇದೇ ಸತ್ಯ ಎಂದು ನಂಬಿ ಮಾನವೀಯತೆಯನ್ನು ಮರೆತು ವಾದಕ್ಕೆ ಇಳಿಯುವ ಅರೆಬುದ್ಧಿವಂತರನ್ನು ಎದುರುಗೊಳ್ಳುವವರೆಗೂ…. ನನಗೆ ಈ ಸಾಹಿತಿಗಳ ಮಹತ್ವ ಏನು , ಅವರ ಆಲೋಚನೆಗಳು ಸಮಾಜದ ಮೇಲೆ ಎಂತಹಾ ಪರಿಣಾಮವನ್ನು ಬೀರುತ್ತಿದೆ ಎನ್ನುವ ಸಂಪೂರ್ಣ ಚಿತ್ರಣ ತಲೆಗೆ ಬಂದಿರಲಿಲ್ಲ.
ಇಂಥಹಾ ಅಸಹ್ಯ ಸಾಹಿತಿಗಳು ಮತ್ತು ಅವರು ಮಾಡುವ ರಾಜಕೀಯಗಳ ಮತ್ತದರ ಸಾಧ್ಯತೆಗಳ ಮುಂದೆ ನಿಮ್ಮ ಗಟ್ಟಿ ಸಾಹಿತ್ಯ ವಿಭಿನ್ನವಾಗಿ ನಿಂತಿದೆ.
ಕವಿತೆಗಳಲ್ಲಿ ಬರಿಯ ಕಾಮ, ಮೋಹ, ಮಂಚದ ಸುತ್ತ ಸುತ್ತುತ್ತಾ ಹೆಣ್ಣನ್ನು/ಗಂಡನ್ನು, ರಂಜಿಸುವುದೇ ಕವಿತೆಯ ಉದ್ದೇಶ ಎಂದು ತಿಳಿದ ಸೋ ಕಾಲ್ಡ್ ಕವಿಗಳ ಕವಿತಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ, ನಿಮ್ಮ ನೀಲು ಕಾವ್ಯದ ನಾಲ್ಕೆ ನಾಲ್ಕು ಸಾಲುಗಳನ್ನ ಯಾರದೋ ಮೊಬೈಲಿನಲ್ಲಿ ಕಂಡಾಗ, ಇದೇನು ಹೀಗೆ ಎಂದು ಉಬ್ಬೇರಿಸಿ ಅಮಾಯಕನಂತೆ ಕಣ್ಣು ಬಿಟ್ಟ ನೆನಪು ನನಗೀಗಲೂ ಇದೆ.
ಅಲ್ಲಿಂದಲೇ ನನ್ನ ನೋಟ ನಿಮ್ಮ ವಿಭಿನ್ನ ಬರಹಗಳೆಡೆಗೆ ತಿರುಗಿದ್ದು ಎಂದು ಹೇಳಬಹುದು.
ಸ್ಟೆಲ್ಲಾ ಎಂಬ ಹುಡುಗಿಯ ರಂಗರೂಪವನ್ನ ಬೆಂಗಳೂರಿನ ಕಲಾಗ್ರಾಮದಲ್ಲಿ ನೋಡುತ್ತಿದ್ದಾಗ , ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬ ಪ್ರೇಕ್ಷಕ, ಇದೇನು ನಾಟಕವೋ ಅಥವಾ ದೊಂಬರಾಟವೋ,,, ಅದೇನು ಪಾತ್ರಗಳು ತಂದಿದಾರಪ್ಪ ಇವ್ರು ?? ಅರೆ ಥತ್ ಎಂದು ಉಗುಳು ನುಂಗಿಕೊಂಡು ಬೈಗುಳ ಪೂರ್ಣವಾಗುವ ಮುನ್ನವೇ ,,, ಯಾರು ಬರೆದದ್ದು ಈ ನಾಟಕ ? ಎಂದು ಕೇಳಿದ್ದ.
ಲಂಕೇಶ್, ಪಿ ಲಂಕೇಶ್ ಬರೆದದ್ದು ಎಂದು ನನ್ನ ಉತ್ತರ ಕೇಳಿದ ತಕ್ಷಣ ,
ಓಹ್ ಆ ಮಹಾನುಭಾವನೋ,,, ಅವನಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ !!!
ಎಂದು ಗೊಣಗುತ್ತಲೇ ಅರ್ಧ ನಾಟಕ ಬಿಟ್ಟು ಹೋದ.
ಆ ವ್ಯಕ್ತಿಯನ್ನು ನೋಡಿ, ನಿಮ್ಮ ಬರಹದ ಪರಿಣಾಮ ಎಂಥಾದ್ದು ಎನ್ನುವ ಅಂದಾಜು ಸಿಕ್ಕಿದ್ದು.
ಅಲ್ಲಿ ನಾಟಕದಲ್ಲಿ, ಅಸಹಾಯಕ ಹೆಣ್ಣು ಮಗಳನ್ನ ನಾವೇ ಕಟ್ಟಿಕೊಂಡ ಸಮಾಜ ಹೇಗೆಲ್ಲಾ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಾ, ವಿವರಣೆಗಾಗಿ ಅಲ್ಲಿಯತನಕ ಕಾಮದಿಂದಲೂ ಮೋಹದಿಂದಲೂ ಕಾಣುತ್ತಿದ್ದ ಪ್ರೇಯಸಿಯನ್ನ ಸಮಾಜದ ಮುಂದೆ ತನ್ನ ಸಂಗಾತಿ ಎಂದು ಹೇಳಿಕೊಳ್ಳಲು ಹಿಂಜರಿಯುವ ಯುವಕ ಆ ಕ್ಷಣದ ಪಾಲಾಯನಕ್ಕೆ ಈಕೆ ನನ್ನ ಸೋದರಿ ಇದ್ದಂತೆ ಎಂದು ಹೇಳಿಬಿಡುವ ಗಂಡಸಿನ ಲಜ್ಜೆಗೆಟ್ಟ ಬುದ್ಧಿಯನ್ನು ನೀವು ತೋರಿಸಿದ್ದಕ್ಕೊ ಏನೋ, ಬಹುಶಃ ಆ ಸಹ ಪ್ರೇಕ್ಷಕಕನ ಗಂಡು ಬುದ್ದಿ ಕುಪಿತಗೊಂಡಿರಬೇಕು.
ಇದಕ್ಕೂ ಮುಂಚೆ ಮಲೆಗಳಲ್ಲಿ ಮದುಮಗಳು ನಾಟಕ ನೋಡುವಾಗ ಈ ಥರದ ಪ್ರತಿಕ್ರಿಯೆಗಳನ್ನ ಕಂಡಿದ್ದೆ, ಕೇಳಿದ್ದೆ.
ಪ್ರತಿಕ್ರಿಯೆಗಳು ಧನಾತ್ಮಕವೋ ಋಣಾತ್ಮಕವೋ, ಒಟ್ಟಿನಲ್ಲಿ ಕೃತಿ ಎದುರುಗೊಂಡಾಗ ಒಂದು ಧ್ವನಿ ಹುಟ್ಟುತ್ತದೆ ಎಂದರೆ, ಆ ಕೃತಿಯ ನಿರೂಪಕ ಗೆದ್ದಿದ್ದಾನೆ ಎಂದು ಅರ್ಥವಲ್ಲವೇ.
ಈಗಿನ ಅಸಹ್ಯ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ ಭಯವಾಗುತ್ತಿದೆ.
ಮೊನ್ನೆ ಮೊನ್ನೆ, ಪ್ರಭುತ್ವವನ್ನು ಪ್ರಶ್ನಿಸಿ ರೂಪಕವಾಗಿ ಕಟ್ಟಿದ್ದ ಪದ್ಯವನ್ನು ಬರೆದು ವಾಚಿಸಿದ್ದಕ್ಕೆ ಸಿರಾಜ್ ಬಿಸರಳ್ಳಿ ಎಂಬ ಕವಿಯನ್ನು ಅರೆಸ್ಟ್ ಮಾಡಿದ್ದರಂತೆ.
ಈ ಅಭಿವ್ಯಕ್ತಿ ಸ್ವತಂತ್ರ ಕಿತ್ತುಕೊಂಡ ಪ್ರಕ್ರಿಯೆಯನ್ನ ನಮ್ಮ ಮೀಡಿಯಾ ಬಾಂಧವರಿಂದ ಹಿಡಿದು, ಟ್ರೋಲ್ ಮಾಡುವ ಸಣ್ಣ ಪುಟ್ಟ ಚಿಲ್ಲರೆಗಳೂ ಸಹ ಸಂಭ್ರಮಿಸಿದ್ದರು.
ಇಂಥಹ ಸಿರಾಜ್ ಬಿಸರಳ್ಳಿ ಯವರು ನಿಮ್ಮ್ ಲಂಕೇಶ್ ಪತ್ರಿಕೆಯಲ್ಲಿ ಪ್ರತಿ ದಿನ ಹುಟ್ಟುತ್ತಿದ್ದರು ಎಂದು ಕೇಳಿದಾಗ, ರೋಮಾಂಚನವಾಗುವುದಿಲ್ಲವೇ…!!!
ಕನ್ನಡ ಹೋರಾಟಗಳು ಅಂಧಕಾರದ ರೂಪ ಪಡೆದ ಸಮಯದಲ್ಲಿ, ನಿಮ್ಮ ಲಂಕೇಶ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದ ಕನ್ನಡ ಪರ ಹೋರಾಟಗಾರರು ನಿಮ್ಮನ್ನು ಹಿಡಿದು ಥಳಿಸಿದ್ದರಂತೆ.
ಆದರೆ ಅದಾವಕ್ಕೂ ಎದೆಗುಂದದೆ ಮುಂದಿನ ದಿನವೂ ನಿಮ್ಮ ಬರಹದ ಹೋರಾಟ ಕಮ್ಮಿಯಾಗದೇ ಉಳಿದದ್ದನ್ನು ಕಂಡು ಅವರೇ ಸುಮ್ಮನಾದರಂತೆ.
ಪ್ರಶಸ್ತಿಗಳಿಗೆ ಹಾತೊರೆದು ಸಮಯಸಾಧನೆಯಲ್ಲಿ ಮುಳುಗಿರುವ ನಮ್ಮ ಈ ಕಾಲದ ಹೊಸ ಸಾಹಿತಿಗಳನ್ನ ಕಂಡಾಗ , ನಿಮ್ಮ ನೇರ ನಿಷ್ಟುರವಾದ ಆ ಮಾತುಗಳೆಲ್ಲಾ ನೆನಪಿನಲ್ಲಿ ಉಳಿಯುತ್ತಿವೆ.
ಮನೆ ಬಾಗಿಲಿಗೆ ಬಂದ ಪ್ರಶಸ್ತಿಯನ್ನು ಹಿಂದೆ ಕಳುಸಿದ ತೇಜಸ್ವಿಯಂಥವರು ನಿಮ್ಮೊಡನೆ ಉತ್ತಮ ಸ್ನೇಹವನ್ನು ಹೊಂದಿದ್ದರು, ಎಂದಾಗಲಂತೂ…. ನಿಮ್ಮಗಳ ಆ ಒಗ್ಗಟ್ಟಿನ ಕಾಲದ ಮುಂದೆ ನಮ್ಮ ಕಾಲ ತೀರಾ ಸಪ್ಪೆ ಎನಿಸುತ್ತಿದೆ.
ಅಧಿಕಾರವಿಲ್ಲದೆ ಏನೂ ಮಾಡಲಾಗುವುದಿಲ್ಲ, ಎಂದು ನಿಮ್ಮ ಕಾಲದ ಸಾಹಿತಿಗಳು ಆಗಲೇ ತಿಳಿದಿದ್ದರು ಅಲ್ಲವೇ.. ???
ವಿರುದ್ಧ ಅಭಿಪ್ರಾಯ ಹೊಂದಿದ ಸಂಘ ಪರಿವಾರದ ಪರವಾಗಿ ನಿಂತು ಸೋತು ಸುಣ್ಣವಾಗಿದ್ದ ಅಡಿಗರನ್ನ ಸಂತೈಸುತ್ತಲೇ , ಲೋಹಿಯಾ ತತ್ವಗಳನ್ನು ಒಪ್ಪಿಕೊಂಡು ಒಂದು ಸ್ವಂತ ಕರ್ನಾಟಕದ ಬಲಕ್ಕಾಗಿ ಸಾಹಿತ್ಯ ಲೋಕದಿಂದ ರಾಜಕೀಯ ಕ್ಷೇತ್ರದ ಕಡೆ ಅಲೋಚಿಸಿದ್ದ ನಿಮ್ಮ ಕರ್ನಾಟಕ ಪರ್ಯಟನೆ, ರಾಜಕೀಯವಾಗಿ ಸಾಹಿತಿಗಳು ಎಷ್ಟು ಮುಖ್ಯ ಎಂಬುದಾಗಿ ನಮಗೆಲ್ಲಾ ಮಾದರಿಯಾಗಿದೆ.
ದೃಶ್ಯ ಮಾಧ್ಯಮ ಬೀರುವ ಪ್ರಭಾವವನ್ನು ಸೂಕ್ಷ್ಮವಾಗಿ ಅರಿತಿದ್ದ ನೀವು, ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅಲ್ಲದೇ, ಯಶಸ್ಸನ್ನು ಪಡೆದ ಬಗೆಗೆ ಏನು ತಾನೇ ಹೇಳಲಿ… ???
ಟೀಕಿಸಿದರೆ ಸಾಲದು ಮಾಡಿ ತೋರಿಸಿ ಎಂದು ಫಟಾಪತ್ ಕಾಲೆಳೆಯುವ ಜನರ ಬಾಯನ್ನ ನಿಮ್ಮ ಪ್ರಯತ್ನಗಳು ಉತ್ತರ ನೀಡಿ ಮುಚ್ಚಿಸಿದ ಗೆಲುವಿಗೆ ನಾನೆಂದಿಗೂ ಅಭಿಮಾನಿಯಾಗಿಯೇ ಉಳಿಯುತ್ತೇನೆ.
ಲಂಕೇಶರೇ …. ನಿಮ್ಮನ್ನು ನಾನೇಕೆ ಓದುತ್ತೇನೆ ಎಂಬುದು, ಇಂಥಹ ಮತ್ತಷ್ಟು ಕಾರಣಗಳಿಗೆ ಮುಂದುವರಿಯುತ್ತಲೇ ಇದೆ.
**************************