ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಶಿಲಾಕುಲ ವಲಸೆ
ಶಿಲಾಕುಲ ವಲಸೆ : ಕಾದಂಬರಿ
ಲೇಖಕರು ; ಡಾ ಕೆ ಎನ್ ಗಣೇಶಯ್ಯ
ಪ್ರಕಾಶಕರು : ಅಂಕಿತಾ ಪ್ರಕಾಶನ
ಪ್ರಥಮ ಮುದ್ರಣ ಮಾರ್ಚ್ ೨೦೧೪
ನಾಲ್ಕನೆಯ ಮುದ್ರಣ : ೨೦೧೭
ಶಿಲಾಕುಲ ವಲಸೆ : ಕಾದಂಬರಿ
ಲೇಖಕರು ; ಡಾ ಕೆ ಎನ್ ಗಣೇಶಯ್ಯ
ಪ್ರಕಾಶಕರು : ಅಂಕಿತಾ ಪ್ರಕಾಶನ
ಪ್ರಥಮ ಮುದ್ರಣ ಮಾರ್ಚ್ ೨೦೧೪
ನಾಲ್ಕನೆಯ ಮುದ್ರಣ : ೨೦೧೭
ಕನ್ನಡದ ಡಾನ್ ಬ್ರೌನ್ ಎಂದೇ ಹೆಸರಾದ ಡಾಕ್ಟರ್ ಕೆ ಎನ್ ಗಣೇಶಯ್ಯ ಅವರು ವೃತ್ತಿಯಲ್ಲಿ ಕೃಷಿ ವಿಜ್ಞಾನಿ . ಪರಿಸರ ಮತ್ತು ಜೀವ ವೈವಿಧ್ಯತೆಯ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಹಾಗೂ ಹಲವು ವಿಜ್ಞಾನ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ .
ಇತಿಹಾಸದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ಮೂಲಕ ಜಗತ್ತಿನ ವಿಜ್ಞಾನಿಗಳಲ್ಲಿ ಚಿರಪರಿಚಿತರಾಗಿದ್ದಾರೆ ಹಾಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನ ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ . ಜೀವ ಸಂಪದ ಎಂಬ ಹೆಸರಿನಲ್ಲಿ ಭಾರತ ಸರ್ಕಾರದ ಸಹಯೋಗದೊಂದಿಗೆ ಭಾರತದ ಸಸ್ಯ ಪ್ರಾಣಿ ಅಣುಜೀವಿಗಳು ಹಾಗೂ ಸಮುದ್ರದ ಜೀವ ಸಂಪತ್ತು ಇದನ್ನು ಕುರಿತು ಇವರು ರೂಪಿಸಿದ ಸಿಡಿಗಳು ಪ್ರಪಂಚದಾದ್ಯಂತ ವಿಜ್ಞಾನಿಗಳ ಗಮನ ಸೆಳೆದಿದೆ . ಜರ್ಮನಿ ತೈವಾನ್ ಮುಂತಾದ ಕಡೆ ವಿಜಿಟಿಂಗ್ ಪ್ರೊಫೆಸರಾಗಿ ಕಾರ್ಯನಿರ್ವಹಿಸಿದ್ದಾರೆ . ಇದರ ವೈಜ್ಞಾನಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಫೆಲೋಶಿಪ್ ಗೌರವವೂ ಲಭಿಸಿದೆ . ಬನ್ನೇರುಘಟ್ಟದಲ್ಲಿ ಚಿಟ್ಟೆ ಉದ್ಯಾನವನ ಸ್ಥಾಪನೆಯಲ್ಲಿ ಗಣೇಶಯ್ಯನವರ ಕೊಡುಗೆ ಗಮನಾರ್ಹ.
ಕನ್ನಡದಲ್ಲೇ ಹೊಸ ಶೈಲಿ ಎನಿಸಿದ ವೈಜ್ಞಾನಿಕ ಹಾಗೂ ಐತಿಹಾಸಿಕ ಆಧಾರಗಳುಳ್ಳ ಫಿಕ್ಷನ್ ಸಾಲಿನಲ್ಲಿ ಬರುವ ಸಾಹಿತ್ಯ ಇವರದೇ ಒಂದು ವಿಶಿಷ್ಟ ಕೊಡುಗೆ . ಅನೇಕ ವಾಸ್ತವಿಕ ಚಾರಿತ್ರಿಕ ಘಟನೆಗಳನ್ನಾಧರಿಸಿ ತುಸು ಕಲ್ಪನೆ ಕುತೂಹಲ ಬೆರೆಸಿ ಸರಳ ಭಾಷಾ ಶೈಲಿಯಲ್ಲಿ ಬರೆಯುವುದು ಇವರ ಸಾಹಿತ್ಯದ ವಿಶೇಷ . ಇವರ ಕಥೆ ಕಾದಂಬರಿಗಳು ಪ್ರಸಿದ್ಧ ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಬಂದು ಇವರ ಅಭಿಮಾನೀ ಓದುಗ ವರ್ಗ ಸೃಷ್ಟಿಯಾಗಿದೆ .ಕನಕ ಮುಸುಕು ಕರಿಸಿರಿಯಾನ ಕಪಿಲಿಪಿಸಾರ 7ರೊಟ್ಟಿಗಳು ಮೂಕ ಧಾತು ಶಿಲಾಕುಲ ವಲಸೆ ಬಳ್ಳಿಕಾಳ ಬೆಳ್ಳಿ ರಕ್ತಸಿಕ್ತ ರತ್ನ ಇವು ಇವರ ಕಾದಂಬರಿಗಳು .ಶಾಲಭಂಜಿಕೆ ಪದ್ಮಪಾಣಿ ನೇಹಲ ಸಿಗೀರಿಯ ಕಲ್ದವಸಿ ಮಿಹಿರಾಕುಲ ಪೆರಿನಿ ತಾಂಡವ ಆರ್ಯ ವೀರ್ಯ ಇವು ಕಥಾ ಸಂಕಲನಗಳು. ಭಿನ್ನ ಬಿಂಬ, ಭಿನ್ನ ನೋಟ ವಿಚಾರಣ, ತಾರುಮಾರು ಇವು ಲೇಖನ ಸಂಗ್ರಹಗಳು. ಕನಕ ಮುಸುಕು ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪುರಸ್ಕಾರ ೨೦೦೮ ರಲ್ಲಿ ದೊರೆತಿದೆ. ಶಾಲಭಂಜಿಕೆ ಪದ್ಮಪಾಣಿ ಧರ್ಮಸ್ತಂಭ ಕಿತ್ತೂರ ನಿರಂಜನಿ ಮತ್ತು ಸಿಗೀರಿಯ ಕತೆಗಳು ನಾಟಕಗಳಾಗಿ ಪ್ರದರ್ಶಿಸಲ್ಪಟ್ಟಿವೆ .
ಒಂದೆಡೆ ಗಣೇಶಯ್ಯ ಅವರೇ ಹೇಳಿಕೊಂಡಂತೆ ಡ್ಯಾನ್ ಬ್ರೌನ್ ಇವರಿಗೆ ಸ್ಫೂರ್ತಿಯಂತೆ. ಡಾನ್ ಬ್ರೌನ್ ಅವರ ಡಾ ವಿನ್ಸಿ ಕೋಡ್, ಏಂಜಲ್ಸ್&ಡೆಮನ್ಸ್ ಮುಂತಾದ ಕಾದಂಬರಿಗಳಲ್ಲಿ ವ್ಯಾಟಿಕನ್ ಚರ್ಚಿನ ವಿವಿಧ ಅಂಶಗಳ ಮೇಲೆ ಕಥೆ ಸಾಗುತ್ತದೆ. ಹಾಗೆಯೇ ಇವರು ಒಂದೊಂದು ಕಾದಂಬರಿಯಲ್ಲಿ ಒಂದೊಂದೇ ಅಂಶಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಆ ಬುನಾದಿಯ ಮೇಲೆ ರೋಚಕತೆಯ ವಾಸ್ತವದ ಕಟ್ಟಡ ಏರಿಸುತ್ತಾ ಕಥೆಯನ್ನು ಮುಂದುವರೆಸುತ್ತಾರೆ . ಉದಾಹರಣೆಗೆ ಕರಿಸಿರಿಯಾನ ಜಲ್ಲಿ ವಿಜಯನಗರ ಸಾಮ್ರಾಜ್ಯದ ಕಳೆದುಹೋದ ಸಂಪತ್ತಿನ ಬಗ್ಗೆ ಹೇಳಿದರೆ ಕಪಿಲಿಪಿಸಾರದಲ್ಲಿ ಸಂಜೀವಿನಿ ಸಸ್ಯದ ಬಗ್ಗೆ ಬರೆಯುತ್ತಾರೆ .
ಗಣೇಶಯ್ಯನವರ ಕಾದಂಬರಿಗಳ ಮುಖ್ಯ ಆಕರ್ಷಣೆ ಪತ್ತೇದಾರಿ ಕಾದಂಬರಿಗಳಲ್ಲಿನಂತಹ ಥ್ರಿಲ್ಲಿಂಗ್ .ಎರಡನೆಯದು ಆಧಾರ ಸಮೇತ ಇತಿಹಾಸದ ನಿರೂಪಣೆ. ಇತಿಹಾಸದ ಪುಸ್ತಕಗಳನ್ನು ಓದಲು ಎಲ್ಲರಿಗೂ ಆಗುವುದೂ ಇಲ್ಲ ಮತ್ತು ಕುತೂಹಲಕಾರಿಯಾಗಿ ಓದಿಸಿಕೊಂಡೂ ಹೋಗುವುದಿಲ್ಲ. ಆದರೆ ಇಲ್ಲಿ ಕಥೆಯ ಎಳೆ ಅದರೊಡನೆ ಬೆರೆತು ಪಾತ್ರಗಳ ಮೂಲಕ ಇತಿಹಾಸದ ಸಂಗತಿಗಳ ಪರಿಚಯ ಮಾಡಿಸಿ ವಿವರಗಳನ್ನು ನೀಡುತ್ತಾರೆ. ಕಥೆಯ ಓಟಕ್ಕೆ ಈ ವಿವರಗಳು ಅವಶ್ಯವಾದ್ದರಿಂದ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತದೆ. ಸೂಕ್ತ ಚಿತ್ರಗಳು, ಫೋಟೋಗಳು, ಒಗಟು ಸಂದೇಶಗಳು ಸಹ ತಲೆಗೆ ಕೆಲಸ ಕೊಡುತ್ತದೆ .cryptic ಮಾದರಿಯ ಸಂದೇಶಗಳು ಮತ್ತು ಗುಪ್ತ ಕುರುಹುಗಳು ಸಂದೇಶಗಳನ್ನು ಬಿಡಿಸುವ ವಿಧಾನಗಳು ಬುದ್ಧಿಗೆ ಕಸರತ್ತನ್ನೂ ಕೊಟ್ಟು 1ರೀತಿ ನಾವು ಕಥೆಯೊಳಗೆ ಪಾತ್ರಧಾರಿಗಳೇ ಏನೋ ಎನಿಸುವಂತಹ ಥ್ರಿಲ್ ಬರುತ್ತದೆ . ಸಾಮಾನ್ಯ ಇಂಗ್ಲಿಷ್ ಕಾದಂಬರಿಗಳಲ್ಲಿ ಈ ರೀತಿ ಇತ್ತು .ಅದಕ್ಕೆ ಪ್ರತ್ಯೇಕ ಓದುಗ ವರ್ಗ ಸೃಷ್ಟಿಯಾಗಿತ್ತು .
ರಾಬಿನ್ ಕುಕ್ ಅವರ ವೈದ್ಯಕೀಯ ಥ್ರಿಲ್ಲರ್ ಗಳು
ಮೊದಲೇ ಹೇಳಿದಂತೆ ಡಾನ್ ಬ್ರೌನ್ ಅವರ ವ್ಯಾಟಿಕನ್ ಚರ್ಚ್ ಸುತ್ತಲಿನ ಕಥೆಗಳು ಇತ್ಯಾದಿ. ಭಾರತದ ಇತಿಹಾಸವನ್ನು ಕನ್ನಡದ ಸಿಹಿ ನುಡಿಗಳಲ್ಲಿ ಆ ಸೊಬಗು ರೋಚಕತೆಯನ್ನು ಕನ್ನಡದ ಓದುಗರಿಗೆ ಗಣೇಶಯ್ಯ ಅವರು ಉಣಬಡಿಸುತ್ತಿದ್ದಾರೆ . ಇದು ನಿಜಕ್ಕೂ ಖುಷಿಯ ಸಂಗತಿ.
ಸ್ವಾತಂತ್ರ ಕ್ಕೆ ಸ್ವಲ್ಪ ಮುನ್ನ ಭಾರತದ ಸಂಪತ್ತುಗಳನ್ನು ದೊಡ್ಡದೊಡ್ಡ ವ್ಯಾಗನ್ ಗಳಲ್ಲಿ ಬ್ರಿಟಿಷರು ಸೂರೆಮಾಡಿ ಕೊಂಡೊಯ್ಯುತ್ತಿರುವಾಗ 1ಪೆಟ್ಟಿಗೆ ಅದಲು ಬದಲಾದ ಸಂದರ್ಭ . ಅತ್ಯಂತ ರಹಸ್ಯ ಮಾಹಿತಿ ಇದ್ದ ಆ ಡಾಕ್ಯುಮೆಂಟ್ ಯಾರಿಗೆ ಬೇಕಿತ್ತು ?
ಮತ್ತೆ ಎಷ್ಟೋ ವರ್ಷಗಳ ನಂತರ ಎಡಕಲ್ಲು ಗುಡ್ಡದ ಮೇಲೆ ಕೊಡಗಿನ ಪ್ರೊಫೆಸರ್ ಒಬ್ಬರ ಕೊಲೆ. ಅದೇ ವ್ಯಕ್ತಿಯ ಬಳಿ ಶಿಷ್ಯೆಯಾಗಿದ್ದ ದೇವರ ಹುಟ್ಟು ಬೆಳವಣಿಗೆಯ ಬಗ್ಗೆ ಪಿಎಚ್ ಡಿ ಪ್ರಬಂಧ ತಯಾರಿಸುತ್ತಿದ್ದ ಸಂಗೀತ ಎಂಬ ಯುವತಿಗೆ ಬೆದರಿಕೆಯ ಕರೆಗಳು .
ಎ ಎಸ್ ಐ ನ ಡೆಪ್ಯುಟಿ ಅಧೀಕ್ಷಕಳಾದ ಪೂಜಾಳಿಗೆ ಬಂದ ಮೇಲ್ ಯಾವುದು ? ಅವರ ಸಂಸ್ಥೆಯಿಂದ ನಡೆಯುತ್ತಿದ್ದ ಉತ್ಖನನದಲ್ಲಿ ದೊರೆತ ಅಪೂರ್ವ ಮಾಹಿತಿ ಏನು?
ಪೂಜಾಳ ಅಸಿಸ್ಟೆಂಟ್ ಆದ ರಕ್ಷಿತಾಳಿಗೆ ಮತ್ತೊಬ್ಬ ಸಹೋದ್ಯೋಗಿ ಮಹಾದೇವ್ ಬಗ್ಗೆ ತಿಳಿದ ವಿಚಾರಗಳೇನು ಅದನ್ನು ಅವಳಿಗೆ ತಿಳಿಸುವವರು ಯಾರು ?
ಚೀನಾದ ಮೂಲಭೂತವಾದಿ ಗುಂಪುಗಳಿಗೂ ಬ್ರಿಟಿಷ್ ಗೂಢಚಾರ ಸಂಸ್ಥೆಗಳಿಗೂ ಭಾರತದ ಈ ಎಲ್ಲ ವಿದ್ಯಮಾನಗಳ ಮೇಲೆ ಅಪರಿಮಿತ ಆಸಕ್ತಿ ಏಕೆ ?ಅದಕ್ಕಾಗಿ ಕೈಗೊಳ್ಳುವ ಕಾರ್ಯಗಳೇನು?
ಈ ಎಲ್ಲಾ ಘಟನೆಗಳಿಗೂ ಒಂದಕ್ಕೊಂದು ಸಂಬಂಧ ಕಲ್ಪಿಸಿ ವಿಭಿನ್ನ ಘಟನಾವಳಿಗಳ ಸರಮಾಲೆಯನ್ನೇ ಪೋಣಿಸುತ್ತ ಕಡೆಗೆ 1 ಕ್ಲೈಮ್ಯಾಕ್ಸ್ ಹಂತಕ್ಕೆ ತಂದು ನಿಲ್ಲಿಸುವುದು ಗಣೇಶಯ್ಯ ಅವರ ಕಾದಂಬರಿಗಳ ತಂತ್ರ . ಇಲ್ಲಿಯೂ ಅದೇ ನಡೆದಿದೆ .ಕೆಲವು ಕಾದಂಬರಿಗಳಲ್ಲಿ ಸೂಕ್ತ ಅಂತ್ಯ ಕಾಣಿಸದೆ ಓದುಗರ ಊಹೆಗೆ ಬಿಟ್ಟದ್ದೂ ಉಂಟು.ಘಟನೆಗಳು ಒಂದಕ್ಕೊಂದು ಹೊಸದುಕೊಂಡು ಕಥೆ ಮುಂದುವರೆಸುವುದರಲ್ಲಿ ಇವರ ನೈಪುಣ್ಯ ತೋರುತ್ತದೆ. ಮುಂದೇನಾಗುತ್ತದೋ ಎಂಬ ಕಾತರ ಕಳವಳ ಎದೆಬಡಿತವನ್ನು ಹೆಚ್ಚಿಸುತ್ತದೆ . ಅದರೊಟ್ಟಿಗೆ ಈ ಹಿಂದಿನ ಇತಿಹಾಸದ ಬಗ್ಗೆ ಜ್ಞಾನವೂ ಹೆಚ್ಚಾಗುತ್ತಾ ಹೋಗುತ್ತದೆ. ಇದೆಲ್ಲಾ ಹೇಗಾಗುತ್ತದೆ ಎಂದು ತಿಳಿಯಲು ನೀವು ಖಂಡಿತ ಕಥೆಯನ್ನೇ ಓದಬೇಕು .
ಸೂಕ್ಷ್ಮವಾಗಿ ಕಥೆಯ ಹಂದರ ಹೇಳುವುದಾದರೆ ಕುಲದ ಬಗ್ಗೆ ಹಾಗೂ ದೇವರ ಕಲ್ಪನೆ ಪರಿಕಲ್ಪನೆ ಹುಟ್ಟು ಬೆಳವಣಿಗೆಗಳ ಸುತ್ತ ಕಥೆ ಸಾಗುತ್ತಾ ಹೋಗುತ್ತದೆ . ಮುಂಚೆ ಆರ್ಯರು ಭಾರತಕ್ಕೆ ಬೇರೆ ಕಡೆಯಿಂದ ಬಂದವರು ದ್ರಾವಿಡರು ಇಲ್ಲಿಯೇ ಇದ್ದವರು ಹಾಗೂ ಆರ್ಯ ದ್ರಾವಿಡರ ಮಧ್ಯದ ಸಂಘರ್ಷ ದ್ವೇಷ ಇವುಗಳ ಬಗ್ಗೆ ನಮಗೆ
ತಿಳಿದಿದೆ. ಈ ವಿಷಯದ ಮೂಲ ಬುನಾದಿಯನ್ನೇ ಅಲ್ಲಾಡಿಸುವಂತಹ ಕೌತುಕಕಾರಿ ಅಂಶಗಳು ಇಲ್ಲಿ ಕಂಡುಬರುತ್ತದೆ . ಆರ್ಯರು ಇಲ್ಲಿಗೆ ವಲಸೆ ಬಂದ ಯೂರೋಪಿಯನ್ನರಲ್ಲ
ಎಂಬ ಅಂಶವನ್ನು ಹಲವಾರು ಸೂಕ್ತ ಆಧಾರಗಳ ಮೂಲಕ ಪ್ರತಿಪಾದಿಸಲ್ಪಡುತ್ತದೆ.ಆರ್ಯ ರಕ್ತ ಆರ್ಯ ವಂಶ ಪರಿಕಲ್ಪನೆಯಲ್ಲಿ ಹಿಟ್ಲರ್ ನಡೆಸಿದ ಮಾರಣಹೋಮ ಇನ್ನೂ ಮನಸ್ಸಿನಿಂದ ಮಾಸಿಲ್ಲ. ಆದರೆ ಆರ್ಯರು ಭಾರತದಿಂದ ವಲಸೆ ಹೋದ 1ತಂಡ ಎಂಬುದನ್ನು ಇಲ್ಲಿ ಚೆನ್ನಾಗಿ ನಿರೂಪಿಸಿದ್ದಾರೆ . ಹಾಗೆಯೇ ವಿಭಿನ್ನ ದೇವರುಗಳು ಧರ್ಮಗಳು ಅವುಗಳನ್ನು ಆಳುವ ವರ್ಗ ತನಗೆ ಬೇಕಾದ ಹಾಗೆ ಹೇಗೆ ತಿರುಚುತ್ತದೆ ಹೇಗೆ ಉಪಯೋಗಿಸಿಕೊಳ್ಳುತ್ತದೆ ಎಂಬ ಅಂಶ ದಂಗುಬಡಿಸುತ್ತದೆ . ಪ್ರತಿಯೊಂದಕ್ಕೂ ಸೂಕ್ತ ಆಧಾರಗಳನ್ನು ಗ್ರಂಥಗಳನ್ನು ಪಾತ್ರಧಾರಿಗಳ ಬಾಯಿಂದಲೇ ಹೇಳಿಸುತ್ತಾರೆ ಹೋಗುವುದರಿಂದ ಇದು ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ ಎಂದು ಎಲ್ಲೂ ಅನ್ನಿಸದೆ ಸ್ವಾರಸ್ಯಕರವಾಗಿ ಸಾಗುತ್ತಾ ಹೋಗುವುದು ನಿಜಕ್ಕೂ ತುಂಬಾ ಶ್ಲಾಘನೀಯ ಅಂಶ. ಕೆಲವೊಮ್ಮೆ ಈ ಸ್ವಗತಗಳು ಅಥವಾ ಲೆಕ್ಚರುಗಳು ತೀರಾ ವಾಚ್ಯವೆನಿಸುವ ಕತೆಯ ಓಘವನ್ನು ಕೆಡಿಸಿ ಬಿಡುವ 1ಸಾಧ್ಯತೆಯೂ ಇದ್ದು ಅದನ್ನು ಲೇಖಕರು ತುಂಬ ಸಮರ್ಥವಾಗಿ ನಿವಾರಿಸಿದ್ದಾರೆ. ಅತೀವ ಧರ್ಮಾಂಧತೆಯಲ್ಲಿ ನಡೆಯುವ ದಾರಣ ಕೃತ್ಯಗಳು ಇತಿಹಾಸದ ಪುಟಗಳ ಮೇಲೆ ಬಳಿದ ಮಸಿ . ಇತ್ತೀಚೆಗಿನ ಕೆಲವು ವಿದ್ಯಮಾನಗಳು ಇದನ್ನೇ ಹೇಳುತ್ತವೆ. ಧರ್ಮ ಪ್ರಚಾರದ ಹೆಸರಿನಲ್ಲಿ ಹೂಡುವ ಷಡ್ಯಂತ್ರಗಳು ಶತಶತಮಾನಗಳಿಂದಲೂ ನಡೆದುಬಂದಿವೆ.
ಗುಪ್ತ ಸಂಕೇತಗಳು ಒಗಟುಗಳು ಸಂದೇಶಗಳನ್ನು ಬಿಡಿಸುವ ಪರಿ ಎಲ್ಲವೂ ಖುಷಿ ಕೊಡುತ್ತದೆ . ಮತ್ತೂ ಹೆಚ್ಚು ಹೇಳಿದರೆ ಕಥೆ ಓದುವ ನಿಮ್ಮ ಕುತೂಹಲಕ್ಕೆ ನಾನೇ ಅಡ್ಡಿ ಬಂದಂತಾಗುತ್ತದೆ. ಹಾಗಾಗಿ ಇಲ್ಲಿಯೇ ನಿಲ್ಲಿಸುವೆ.
ಚರಿತ್ರೆಯ ಪುಟ ಪುಟಗಳಲ್ಲಿ ಅಡಗಿರುವ ನಿಗೂಢ ರಹಸ್ಯಗಳನ್ನು ತಿಳಿಸುತ್ತಾ ಹೋಗುವ ಈ ಕಾದಂಬರಿ ಪಂಡಿತ ಪಾಮರರಿಬ್ಬರಿಗೂ ಆಪ್ಯಾಯ ಎನಿಸುವಂತಹುದು.ಹಾಗೆಂದು ಲೀಲಾಜಾಲವಾಗಿ ಓದಿ ಮುಗಿಸುವಂತಹದ್ದೂ ಅಲ್ಲ. ಓದಿ ಅರ್ಥೈಸಿಕೊಂಡು ಕೆಲವೊಮ್ಮೆ ಮತ್ತೆ ಹಿಂದಿನ ಪುಟಗಳಿಗೆ ಹೋಗಿ ಮತ್ತೆ ಮುಂದೆ ಬರಬೇಕಾದಂತಹ ತಲೆಗೆ ಮಿದುಳಿಗೆ ಕೆಲಸ ಕೊಡುವಂತಹುದೂ ಹೌದು.
ವೈಶಿಷ್ಟಪೂರ್ಣ ಬರಹಗಳಿಂದ ಹೆಸರಾದ ಈ ಕಾದಂಬರಿ ಗಾರರಿಂದ ಮತ್ತಷ್ಟು ಮಗದಷ್ಟು ಕಾದಂಬರಿಗಳು ಹೊರಬಂದು ಕನ್ನಡ ಸಾಹಿತ್ಯ ಪ್ರಿಯರ ಮನತಣಿಸಲಿ ಎಂಬ ಆಶಯದೊಂದಿಗೆ.
————————
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು