ಧಿಕ್ಕಾರವಿರಲಿ
ಗೌರಿ.ಚಂದ್ರಕೇಸರಿ
ನೇಣಿನ ಕುಣಿಕೆಯ ನೆನೆದು
ಝಲ್ಲನೆ ಬೆವರುವ ನೀವು
ಎರಡು ಕ್ಷಣದ ನೋವಿಗೆ
ಕೊರಳೊಡ್ಡಲಾರದ ರಣ ಹೇಡಿಗಳು
ಅರಳಿ ನಿಂತು ನಸು ನಗುವ ಹೂವನ್ನು
ಹೊಸಕಿ ಹಾಕುವಾಗಿನ ಭಂಡತನ
ಯಾರದೋ ಮನೆಯ ನಂದಾ ದೀಪವ
ನಂದಿಸಿ ಗಹ ಗಹಿಸಿ ನಕ್ಕು ನಲಿದ
ನಿಮ್ಮ ಗುಂಡಿಗೆಯ ಕುದಿ ರಕ್ತ
ಗಲ್ಲು ನೆನೆದು ಗಡ್ಡೆ ಕಟ್ಟಿತೆ?
ಹೆಣ್ಣಿನಲ್ಲಿ ತಾಯ ತಂಗಿಯರ ಕಾಣದ
ನೀವು ಹುಣ್ಣೊಳಗಿನ ಹುಳುಗಳು
ಯಾರದೋ ತೋಟದ ಸುಮಗಳನು
ಹೊಸಕಿ ಹಾಕಿ ಅಟ್ಟಹಾಸದ ಮೀಸೆಯ
ಹುರಿಗೊಳಿಸುವ ನೀವೆಂದರೆ
ಕೊರಳಿಗೆ ಬೀಳುವ ಹಗ್ಗಕ್ಕೂ ಹೇಸಿಗೆ
ನಿಮ್ಮ ಸಾವಿನ ದಿನವನ್ನು ನೆನೆ ನೆನೆದು
ಸುರಿಸುವ ನಿಮ್ಮವರ ಕಣ್ಣೀರಿಗೆ,
ನೇಣು ಬೇಡವೆಂಬ ಅವರ ಕೂಗಿಗೆ
ಹೆಣ್ಣು ಹೆತ್ತವರದೊಂದು ಧಿಕ್ಕಾರವಿರಲಿ
*******