ಚಂದ ಕಣೆ ನೀನು
ಅವ್ಯಕ್ತ
ಕಣ್ಣಿನಲ್ಲೇ ಅರ್ಥವಾಗಿಯೂ ಆಗದಂತೆ
ಆಡುವ ಮಾತುಗಳ ಸವಿ ಚೆಂದ..
ತುಟಿಯಂಚಿನಲಿ ಹಿಡಿದಿಟ್ಟಿರುವ ಒಲವಿನ
ರಸಗವಳದ ಕೆನ್ನೀರ ಪರಿ ಚೆಂದ..
ಕೇಳಿಯೂ ಕೇಳದಂತೆ ಆಡುವ
ಹೆಜ್ಜೆ ಗೆಜ್ಜೆಗಳ ನಲಿವು ಚೆಂದ,.
ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ…
ಸೊಂಟದ ಬಳುಕಿನಲ್ಲಿ ಲೋಕವನ್ನೇ
ಆಡಿಸುತ ತಾನೇ ಆಡುವ ಪರಿ ಚೆಂದ..
ಏರಿಳಿತಗಳ ಲೆಕ್ಕವಿಡದೆ ,ರಸಿಕತೆಯ ಸವಿಯುಣಿಸಿ
ನಾನಲ್ಲ ನನ್ನದಲ್ಲ ಎಂಬ ಸುಳ್ಳೇ ಚೆಂದ..
ಪ್ರೀತಿಯ ತುಂತುರು ಮಳೆಯಲಿ ನೀರಾಗಿ
ಸಮುದ್ರದಾಳದ ಮುತ್ತಾಗ ಬಯಕೆಯೇ ಚೆಂದ…
ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ…
ಮೋಹದ ಮಿಶ್ರಪಾಕದಲಿ ಶೀತಲದುರಿಯ
ಮೋಸ ಬೀಸಿರುವ ಸಾತ್ವಿಕತೆಯೇ ಚೆಂದ..
ಪ್ರೇಮಾಂಕುರಕೆ ಅಂಕುಶ ಹಾಕಿದಂತೆ ಮಾಡಿ
ಶಿಲೆಯ ಮಿಡಿತವ ಕದರುವುದೇ ಚೆಂದ..
ಕಾಮಾಂಕುಷಗಳ ಹೂವು ಎಳೆಯಂತೆ ಹಿಡಿದು ಸರಿಸಿ
ಗಾಳಿ ಸೋಕದಂತೆ ತೇಲಿಯ ಹೋಗುವ ಗರಿಯೇ ಚೆಂದ
ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ…
ನಿಂದಿಸಲಿ, ಛೇಡಿಸಲಿ, ನಗಲಿ ಯಾರೇನೇ ಹೇಳಲಿ ಇರಲಿ ಬಿಡು, ಅಷ್ಟೇ..
XX ವರ್ಣತಂತು ಇರುವ ಸಾಮಾನ್ಯ ಜೀವಿಯೆಂದರೆ ಇರಲಿ ಬಿಡು, ಅಷ್ಟೇ..
ಕಾಲ್ಗೆಜ್ಜೆ ಕೈಬಳೆ ಬೊಟ್ಟು ಸೀರೆ ಹಳೆಕಾಲ ಎಂದರೆ ಇರಲಿ ಬಿಡು, ಅಷ್ಟೇ..
ಬಿಗಿದ ಬಟ್ಟೆ ಎತ್ತರದ ಸ್ಯಾಂಡಲ್ ದಾರಿತಪ್ಪಿದಳೆಂದರೆ ಇರಲಿ ಬಿಡು, ಅಷ್ಟೇ..
ಮೋಹಗಾರ್ತಿ ಮೋಜುಗಾರ್ತಿ ಜಂಬಗಾರ್ತಿ ಎಂದರೆ ಇರಲಿ ಬಿಡು, ಅಷ್ಟೇ..
ಅಮ್ಮ ಅಕ್ಕ ತಂಗಿ ಮಗಳು ಅಜ್ಜಿ ಗೆಳತಿ ಒಡತಿ ಪ್ರೇಯಸಿ ಮನದರಸಿ ಎಲ್ಲಾ ನೀನೆ….
ನಿನ್ನೊಳಗಿನ ಭಾವ ಅದರ ಮರ್ಮ ಆರಿತವಳು ನೀನೊಬ್ಬಳೇ ಸಖಿ…
ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ…
***********************************