ಹೆಣ್ಣಿನ ದುಡಿಮೆ
ಮೂಲ:ಮಾಯಾ ಏಂಜೆಲೋ
ಕನ್ನಡಕ್ಕೆ ಡಾ.ಗೋವಿಂದ ಹೆಗಡೆ
ನನಗೆ ಮಕ್ಕಳ ಕಾಳಜಿ ಮಾಡಲಿದೆ
ಅರಿವೆಗಳನ್ನು ಒಗೆಯಲಿದೆ
ನೆಲ ಸಾರಿಸುವುದು
ಆಹಾರ ಖರೀದಿಸುವುದು
ಕೋಳಿಯನ್ನು ಹುರಿಯುವುದು
ಮಗುವನ್ನು ಚೊಕ್ಕ ಮಾಡುವುದು
ಬಂದವರಿಗೆ ಊಟ ನೀಡಬೇಕಿದೆ
ತೋಟದ ಕಳೆ ತೆಗೆಯಬೇಕಿದೆ
ಅಂಗಿಗಳಿಗೆ ಇಸ್ತ್ರಿ ಮಾಡಲಿದೆ
ಪುಟಾಣಿಗಳಿಗೆ ಬಟ್ಟೆ ತೊಡಿಸಲಿದೆ
ಕಬ್ಬು ಕತ್ತರಿಸಲಿಕ್ಕಿದೆ
ಈ ಗುಡಿಸಲನ್ನು ಶುಚಿಗೊಳಿಸಲಿದೆ
ರೋಗಿಗಳ ಉಪಚರಿಸಲಿದೆ
ಹತ್ತಿಯನ್ನು ಬಿಡಿಸುವುದಿದೆ
ಬೆಳಗು ನನ್ನಮೇಲೆ, ಬಿಸಿಲೇ
ಸುರಿ ನನ್ನ ಮೇಲೆ, ಮಳೆಯೇ
ಮೃದುವಾಗಿ ಇಳಿ, ಇಬ್ಬನಿಯೇ
ನನ್ನ ಹಣೆಯನ್ನು ತಂಪಾಗಿಸು- ಮತ್ತೆ
ಬಿರುಗಾಳಿ, ನನ್ನ ಇಲ್ಲಿಂದ ಹಾರಿಸು
ನಿನ್ನ ಜೋರಾದ ಅಲೆಯಲ್ಲಿ
ನಾನು ಬಾನುದ್ದ ತೇಲುವಂತಾಗಲಿ
ಮತ್ತೆ ವಿರಮಿಸುವವರೆಗೆ
ಹಿಮದ ತುಣುಕುಗಳೇ, ಮೆತ್ತಗೆ ಬೀಳಿರಿ
ನನ್ನನ್ನು ಮುಚ್ಚಿ- ಬಿಳಿಯ
ತಣ್ಣಗಿನ ಮಂಜಿನ ಚುಂಬನಗಳಿಂದ, ಈ ರಾತ್ರಿ
ನಾನು ಮಲಗುವಂತಾಗಲಿ
ನೇಸರ, ಮಳೆ, ಬಾಗಿದ ಆಗಸ
ಬೆಟ್ಟ ಕಡಲು ಎಲೆ ಶಿಲೆ
ತಾರೆಗಳ ಮಿನುಗು ಚಂದಿರನ ಹೊಳಪು
ನಿಮ್ಮನ್ನು ಮಾತ್ರ ನಾನು ‘ನನ್ನವ’ರೆನ್ನಬಹುದು
*********
ತುಂಬಾ ಚೆನ್ನಾಗಿದೆ