ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ಶರಣಗೌಡ ಪಾಟೀಲರ ಗಜಲ್ ಗಳಲ್ಲಿ ಸಾಮರಸ್ಯ ಮಂತ್ರ

ಶರಣಗೌಡ ಪಾಟೀಲರ ಗಜಲ್ ಗಳಲ್ಲಿ ಸಾಮರಸ್ಯ ಮಂತ್ರ

ಎಲ್ಲರಿಗೂ ನಮಸ್ಕಾರಗಳು..

‘ಗಜಲ್’ ಎನ್ನುವ ಶಬ್ದ ಕಿವಿಗೆ ಬೀಳುತ್ತಲೇ ಹೃದಯದ ಬಡಿತ ಜೋರಾಗುತ್ತದೆ. ಅಂಥಹ ಶಕ್ತಿ ಗಜಲ್ ಗೆ ಇದೆ. ಅಂತೆಯೇ ಪ್ರತಿ ಗುರುವಾರ ಒಬ್ಬೊಬ್ಬ ಶಾಯರ್ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ವ್ಯಕ್ತಿ ಪರಿಚಯದೊಂದಿಗೆ ಗಜಲ್ ಲೋಕದಲ್ಲಿ ವಿಹರಿಸುತಿದ್ದರೆ ನನಗೆ ಈ ಸಂಸಾರದ ಅರಿವೆ ಇರುವುದಿಲ್ಲ.‌ ಬನ್ನಿ, ಗಜಲ್ ಪ್ರೇಮಿಗಳೇ; ನಿಮಗೂ ಇದೆ ಅನುಭವ ಆಗುತ್ತದೆ ಎಂದು ಪ್ರಾಮಿಸ್ ಮಾಡುವೆ..!

ನೂರು ತಾರೆಗಳು ಹೊಳೆದರೆ ಏನಾಗುತ್ತದೆ

ನೀನು ಬಂದರೆ ಈ ರಾತ್ರಿ ಸಾರ್ಥಕವಾಗುತ್ತದೆ” 

ಜಾನಿಸರ್ ಅಕ್ತರ್

       ಬಾಳು ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸಬೇಕು. ಯಾರದೋ ತೃಪ್ತಿಗಾಗಿ ಬದುಕು ಕಟ್ಟಿಕೊಳ್ಳುವದು ನೀರ್ವಿರ್ಯವಾಗುತ್ತದೆ. ಈ ಜಗತ್ತಿನಲ್ಲಿ ಒಬ್ಬನೇ ಒಬ್ಬ ಕೆಟ್ಟ ಮನುಷ್ಯ ಹುಟ್ಟಲು, ಹುಟ್ಟಿರಲು ಸಾಧ್ಯವಿಲ್ಲ. ಹುಟ್ಟುವಾಗ ಪ್ರತಿ ಮಗುವೂ ವಿಶ್ವ ಮಾನವನೆ. ಆವಾಗ ಮಗುವಿನ ಮನಸ್ಸು ಸ್ವಚ್ಛ ಹಾಗೂ ಸುಂದರವಾಗಿರುತ್ತದೆ. ಎಲ್ಲೋ ಹುಟ್ಟಿ, ಮತ್ತಿನ್ನೆಲ್ಲೆಲ್ಲೋ ಹರಿದು; ಕೊನೆಗೆಲ್ಲೋ ಹೋಗಿ ಸೇರುವ ನದಿಯಂತೆ ನಮ್ಮ ಬದುಕು. ಹಲವು ಬಾರಿ ಗುರು-ಗುರಿ ಇದ್ದರೂ ಬದುಕು ಕವಲೊಡೆಯುವುದುಂಟು. ಇಲ್ಲಿ ‘ಕವಲು’ ಎನ್ನುವುದು ಸಕಾರಾತ್ಮಕ, ನಕಾರಾತ್ಮಕ ಎರಡನ್ನೂ ದಾಟಿ ಬದಲಾವಣೆ, ಪರಿವರ್ತನೆಯ ದ್ಯೋತಕವಾಗಿದೆ. ನಾವು ಗಂಭೀರವಾದ ಅಹಿತಕರ, ಅತೃಪ್ತಿಯನ್ನು ಅನುಭವಿಸಿದಾಗ ನಮ್ಮ ಕ್ಷಣಗಳು ಅತ್ಯುತ್ತಮವಾದ ಹಾದಿಯನ್ನು ಅರಸಬಲ್ಲವು. ನಮ್ಮ ಅಸ್ವಸ್ಥತೆಯಿಂದ ಪ್ರೇರೇಪಿಸಲ್ಪಟ್ಟ ಕ್ಷಣಗಳಲ್ಲಿ ನಾವು ಹಠದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಈ ನೆಲೆಯಲ್ಲಿ ಗಮನಿಸಿದಾಗ ನರಕದ ದಾರಿಯಲ್ಲಿಯೆ ನಾಕವು ಪ್ರತ್ಯಕ್ಷವಾಗುತ್ತದೆ. ಇಂಥಹ ಅನುಪಮವಾದ ಪರಿಸರದಲ್ಲಿ ಅರಳಿದ ಸಾಹಿತ್ಯವು ಜೀವನ ಶ್ರದ್ಧೆಯನ್ನು ಬಿತ್ತುತ್ತದೆ. ಇದು ಬರಹಗಾರರ ನಡವಳಿಕೆಗು ಮತ್ತು ಅವರ ಸಾಹಿತ್ಯದ ನಡುವೆ ಯಾವುದೇ ವ್ಯತ್ಯಾಸವನ್ನು ಬಯಸುವುದೂ ಇಲ್ಲ, ನಿರೀಕ್ಷಿಸುವುದೂ ಇಲ್ಲ. ಇವೆರಡು ಒಂದಕ್ಕೊಂದು ಪೂರಕವಾಗಿರಬೇಕು. ಬದುಕಿಗೂ, ನಿಲುವಿಗೂ ಏಕಸೂತ್ರತೆ ಇದ್ದಾಗ ಮಾತ್ರ ಅಪರೂಪದ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ. ಇದು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ. ವಿಶೇಷವಾಗಿ ‘ಗಜಲ್’ ಕಾವ್ಯ ಪ್ರಕಾರವು ಮನುಷ್ಯನ ಬದುಕಿನ ದಿಕ್ಸೂಚಿಯಾಗಿದ್ದು, ಹೆಚ್ಚು ಹೆಚ್ಚು ಬರಹಗಾರರನ್ನು ತನ್ನತ್ತ ಸೆಳೆಯುತ್ತಿದೆ. ಅಂತೆಯೇ ಇಂದು ಅಸಂಖ್ಯಾತ ಗಜಲ್ ಕಾರರು ನಮ್ಮೊಂದಿಗೆ ಇದ್ದಾರೆ. ಅವರುಗಳಲ್ಲಿ ಶ್ರೀ ಶರಣಗೌಡ ಪಾಟೀಲ ಜೈನಾಪುರ ಅವರೂ ಒಬ್ಬರು.

      ವೃತ್ತಿಯಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಶ್ರೀ ಶರಣಗೌಡ ಪಾಟೀಲ ಜೈನಾಪುರ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಶ್ರೀ ಈಶ್ವರಪ್ಪಗೌಡ ಮತ್ತು ಶ್ರೀಮತಿ ಕಮಲಮ್ಮ ದಂಪತಿಗಳ ಮಗನಾಗಿ ೧೯೬೯ ರ ಜೂನ್ ೦೧ ರಂದು ಜನಿಸಿದರು. ಎಂ.ಕಾಮ್ ಮತ್ತು ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ಇವರು ತಮ್ಮ ಕಾಲೇಜು ದಿನಗಳಿಂದಲೇ ಸಾಹಿತ್ಯದ ತಂಬೆಲರಿನ ಅನುಭವಕ್ಕೆ ಒಳಗಾಗಿ ಕಥೆ, ಕಾವ್ಯ, ಹನಿಗವನ, ಚುಟುಕು, ವಚನ, ಲೇಖನ, ಗಜಲ್.. ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತ ಸಾರಸ್ವತ ಲೋಕಕ್ಕೆ ‘ಮಾತು ಮೌನದ ಮಧ್ಯೆ’, ‘ಮೌನ ಮಾತಾದಾಗ’, ‘ಅಂತರಂಗದ ಮೃದಂಗ’ ಎಂಬ ಕವನ ಸಂಕಲನಗಳನ್ನು, ‘ಚುಟುಕು ಚಟಾಕಿ’ ಎನ್ನುವ ಚುಟುಕು ಸಂಕಲನ, ‘ಅಪ್ಪ ದಿ ಗ್ರೇಟ್ ಮತ್ತು ಇತರ ಲೇಖನಗಳು’ ಎಂಬ ಸಂಕೀರ್ಣ ಕೃತಿ, ‘ಕಾಮರ್ಸ್ ಡಿಕ್ಷನರಿ-ದಿ ವೇ ಆಫ್ ಲೈಫ್’ ಅನ್ನುವ ಕಲಾಕೃತಿ, ‘ವಚನೋತ್ಸವ’ ಎಂಬ ಆಧುನಿಕ ವಚನಗಳು, ‘ಸಗರನಾಡಿನ ಸಪ್ತ ಶರಣರು’,  ಹಾಗೂ ‘ಭಾವತರಂಗ’ ಎನ್ನುವ ಗಜಲ್ ಸಂಕಲನವನ್ನು ಅರ್ಪಿಸಿದ್ದಾರೆ. ೨೦೦೭ ರಲ್ಲಿ ಜೇವರ್ಗಿಯಲ್ಲಿ ನಿರಂಜನ ಪ್ರಕಾಶವನ್ನು ಸ್ಥಾಪಿಸಿರುವ ಇವರ ಇನ್ನೂ ಕೆಲವು ಹೊತ್ತಿಗೆಗಳು ಪ್ರಕಟಣೆಯ ಹಂತದಲ್ಲಿವೆ. ಇವೆಲ್ಲವೂ ಜೈನಾಪುರ ಅವರ ಬರಹದೆಡಗಿನ ತುಡಿತವನ್ನು ಕೂಗಿ ಹೇಳುತ್ತಿವೆ.

     ಸದಾ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಶ್ರೀ ಶರಣಗೌಡ ಪಾಟೀಲ ಜೈನಾಪುರ ಅವರು ರಂಗಂಪೇಟೆಯ ಬರಹಗಾರರ ಬಳಗದ ಕಾರ್ಯದರ್ಶಿ, ಸುರಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವಲಯ ಅಧ್ಯಕ್ಷರು, ರಂಗಪೇಟೆಯ ಕನ್ನಡ ಸಾಹಿತ್ಯ ಸಂಘದ ಸದಸ್ಯರು, ಮಕ್ಕಳ ಸಾಹಿತ್ಯ ಪರಿಷತ್ತು(ಜೇವರ್ಗಿ) ಉಪಾಧ್ಯಕ್ಷರು… ಇಂಥಹ ಹಲವಾರು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ.. ಅನೇಕ ರೂಪಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ, ಸಲ್ಲಿಸುತ್ತಿದ್ದಾರೆ. ಗುಲಬರ್ಗಾ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರಗೊಂಡಿದ್ದು, ಕವಿಗೋಷ್ಠಿ, ವಚನಗೋಷ್ಠಿ, ಗಜಲ್ ಗೋಷ್ಠಿ, ಉಪನ್ಯಾಸ, ಕಾರ್ಯಾಗಾರ.. ಮುಂತಾದ ಕಡೆಗಳಲೆಲ್ಲ ಶ್ರೀಯುತರು ಭಾಗವಹಿಸಿ ತಮ್ಮ ಸಾಹಿತ್ಯ ಪ್ರೀತಿಯನ್ನು ಅಭಿವ್ಯಕ್ತಿಸಿದ್ದಾರೆ, ಹಂಚಿದ್ದಾರೆ. ಇವರ ಸಾಹಿತ್ಯದ ಹಲವು ರೂಪಗಳು ನಾಡಿನ ನಾನಾ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಇದೆಲ್ಲದರ ಪ್ರತಿಫಲವೆಂಬಂತೆ ಶ್ರೀಯುತರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ಅರಸಿಕೊಂಡು ಹೋಗಿ ಅಲಂಕರಿಸಿವೆ. ನಿಂಗಪ್ಪ ಎನ್ನುವ ಸ್ನಾತಕೋತ್ತರ ವಿದ್ಯಾರ್ಥಿ ‘ಶ್ರೀ ಶರಣಗೌಡ ಪಾಟೀಲ ಬದುಕು-ಬರಹ’ ಎನ್ನುವ ಸಂಪ್ರಬಂಧವನ್ನು ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿಯ ಕನ್ನಡ ವಿಭಾಗಕ್ಕೆ ಸಲ್ಲಿಸಿರುವುದು, ಜೇವರ್ಗಿ ತಾಲ್ಲೂಕಿನಲ್ಲಿ ಜರುಗಿದ ಐದನೇ ತಾಲ್ಲೂಕು ಮಟ್ಟದ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಹಾಗೂ ‘ಶಿಕ್ಷಕ ರತ್ನ’, ‘ಜಿಲ್ಲಾ ಮಟ್ಟದ ಅತ್ಯುತ್ತಮ ಉಪನ್ಯಾಸಕ’, ‘ಸಗರನಾಡಿನ ಕಲಾಬಂಧು’, ‘ಜಿಲ್ಲಾ ಮಟ್ಟದ ಕನ್ನಡ ಕಸ್ತೂರಿ ಪ್ರಶಸ್ತಿ’…. ಮುಂತಾದವುಗಳು ಇವರ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ.

       ಕಾವ್ಯ’ ಎಂದರೇನೆ ಹೃದಯಗಳ ಪಿಸುಮಾತು, ಮನಸುಗಳ ಬೆಸುಗೆ, ಹೃದಯಗಳ ಮಿಲನ. ಇನ್ನೂ ‘ಕಾವ್ಯಗಳ ರಾಣಿ’ಯಾದ ಗಜಲ್ ಅಕ್ಷರಶಃ ಕಾಂತಾ ಸಂಮಿತೆಯ ಅಪರಾವತಾರ. ಮುಟ್ಟಿದರೆ ಮುನಿ ಎನ್ನುವ ಸಸಿಗಿಂತಲೂ ಕೋಮಲ, ಬೆಣ್ಣೆಗಿಂತಲೂ ಮೃದು. ಇಂಥಹ ಗಜಲ್ ಯುವ ಮನಸುಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಗಜಲ್ ಭಾಷೆಯನ್ನು ಒಬ್ಬ ಪ್ರೇಮಿಯ ತರಹ ನೋಡುತ್ತದೆ. ಅಂದರೆ ನಿಷ್ಠೆ ಹಾಗೂ ಅದೇ ವೇಳೆಗೆ ತಾನು ಪ್ರೀತಿಸುವ ವ್ಯಕ್ತಿಯ ಬಗ್ಗೆ ಕೊಂಚ ಅನಾದರ-ಎರಡೂ ಇರುವ ಹಾಗೆ; ಉಪಚಾರ, ಸನ್ಮಾನ ಹಾಗೂ ಅವಿಧೇಯತೆ, ಉಲ್ಲಂಘನೆ ಎರಡೂ ಜೊತೆ ಜೊತೆಗೆ ಇರುವ ಹಾಗೆ. ಅಂತೆಯೇ ಗಜಲ್ ಇಡಿಯಾಗಿ ಶಬ್ದಗಳ ಜೊತೆಗೆ ಒಂದಾಗುತ್ತದೆ. ಈ ಕಾರಣಕ್ಕಾಗಿಯೇ ಹೊಸ ಮಾತನ್ನು, ಹೊಸ ವಿಚಾರವನ್ನು ಗಜಲ್ ಗೋ ಮಾತ್ರ ಆಡಬಲ್ಲ ಎಂದು ಹೇಳಬಹುದು. ಗಜಲ್ ನ ಅನುಭವದಲ್ಲಿ ಒಂದು ನಿಶ್ಚಿತ ಶಕ್ತಿಯಿದೆ. ಈ ದಿಸೆಯಲ್ಲಿ ಗಜಲ್ ಇತರ ಕಲೆಗಳಿಗಿಂತ ವಿಭಿನ್ನ. ಗಜಲ್ ಗೋ ಶರಣಗೌಡ ಪಾಟೀಲ ಜೈನಾಪುರ ಅವರ ಗಜಲ್ ಸಂಕಲನವು ಪ್ರೀತಿ, ಪ್ರೇಮದ ಜೊತೆ ಜೊತೆಗೆ ಸಾಮಾಜಿಕ ವ್ಯವಸ್ಥೆಗೂ ಮುಖಾಮುಖಿಯಾಗಿದೆ. ಜೊತೆಗೆ ಸಾಮಾಜಿಕ, ರಾಜಕೀಯ ವರ್ತಮಾನಗಳಿಗೆ, ಮನಸ್ಸಿನ ಬೇಗುದಿಗಳಿಗೆ, ಹಲವು ಸಂವೇದನೆಗಳಿಗೆ, ಸಂಬಂಧಗಳ ಜಟಾಪಟಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿರುವುದನ್ನು ಗಮನಿಸಬಹುದು. ಪ್ರೀತಿಯ ಆಲಿಂಗನ, ವಿರಹದ ಉರಿ, ಪ್ರೇಮದ ಮುಕ್ತಿ, ಮದುವೆಯ ಬಂಧನ, ಮಿಲನದ ರಸಯಾತ್ರೆ, ಪ್ರಣಯದ ಕಾಮನಬಿಲ್ಲು… ಇವುಗಳ ಕುರಿತು ತುಂಬು ಮೆದುವಾಗಿ ಹೃದಯ ತಟ್ಟುವಂತೆ ಈ ಕೆಳಗಿನ ಷೇರ್ ನಲ್ಲಿ ದಾಖಲಿಸಿದ್ದಾರೆ.

ಕನಸಲ್ಲೂ ಕಾಡುತ್ತಿವೆ ನಿನ್ನಯ ನೆನಪುಗಳು ಹಗಲಿರುಳೆನ್ನದೆ

ಮಾಯದ ಗಾಯವದು ದೇಹವನ್ನೇ ನಂಜಾಗಿಸುತಿದೆ ಗೆಳತಿ

     ಕಾಲ ಸದಾ ಹರಿಯುವ, ಹರಿಯುತ್ತಿರುವ ಪ್ರವಾಹ. ಬದಲಾವಣೆಯೆ ಇದರ ಬೀಜ ಮಂತ್ರ. ಇದು ಸಾಹಿತ್ಯದ ಎಲ್ಲ ಪ್ರಕಾರಗಳಿಗೆ ಅನ್ವಯಿಸುತ್ತದೆ, ಗಜಲ್ ಇದರಿಂದ ಹೊರತಾಗಿಲ್ಲ. ಅಂತೆಯೇ ಇಂದು ಗಜಲ್ ಗಳು ಇಡೀ ಮನುಕುಲದ ವಿಷಯವನ್ನು ಆವಾಹಿಸಿಕೊಂಡಿವೆ. ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಶಾಯರ್ ಶರಣಗೌಡ ಅವರು ನಮ್ಮ ಸಿಸ್ಟಮ್ ಕುರಿತು ತುಂಬಾನೇ ಯೋಚಿಸುತ್ತಾ, ಸಾಮಾಜಿಕ ವ್ಯವಸ್ಥೆಯ ಬದಲಾವಣೆಯನ್ನು ಹಂಬಲಿಸಿರುವುದು ಮನದಟ್ಟಾಗುತ್ತದೆ. ಮೌಲ್ಯಗಳ ಪಲ್ಲಟದಿಂದ ಮನುಕುಲ ಅಧಃಪತನದತ್ತ ಸಾಗುತ್ತಿರುವುದರ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಷೇರ್ ಬದ್ಧತೆಯಿರದ ಮನುಷ್ಯ ಓಲೈಕೆಯ ಬಲೆಯಲ್ಲಿ ಸಿಲುಕಿ ಅನ್ಯಾಯ, ಅತ್ಯಾಚಾರಿಗಳನ್ನೆ ಪ್ರೀತಿಸುತ್ತ ಅವುಗಳೊಂದಿಗೆ ಹೊಂದಿಕೊಂಡು ಬಾಳುತ್ತಿರುವುದನ್ನು ಪ್ರತಿಧ್ವನಿಸುತ್ತಿದೆ.

ಗಾಂಧಿಗಿರಿಯನ್ನು ಇಷ್ಟಪಡುತ್ತಲೇ ಸಹಿಸಿಕೊಂಡಿದ್ದೇವೆ ಗುಂಡಾಗಿರಿಯನ್ನು

ಸತ್ಯ ಅಹಿಂಸೆಗಳನ್ನು ಪ್ರೀತಿಸುತ್ತಲೇ ಪ್ರೋತ್ಸಾಹಿಸಿದ್ದೇವೆ ಗುಂಡಾಗಿರಿಯನ್ನು”

    ಗಜಲ್ ನ ಮೂಲವೇ ಹೃದಯ, ಹೃದಯದಲ್ಲಿ ಚಿಗುರುವ ಪ್ರೀತಿ; ಪ್ರೇಮಿಗಳ ಕನವರಿಕೆ. ಈ ಕಾರಣಕ್ಕಾಗಿಯೇ ಪ್ರತಿಶತ ಗಜಲ್ ಗಳು ಅನುರಾಗದ ಹಾದಿಯಲ್ಲಿ ಸಾಗಿ ಬಂದಿವೆ, ಮುಂದೆಯೂ ಸಾಗಿ ಬರಲಿ. ಈ ದಿಸೆಯಲ್ಲಿ ಸುಖನವರ್ ಶ್ರೀ ಶರಣಗೌಡ ಪಾಟೀಲ ಜೈನಾಪುರ ಅವರು ಗಜಲ್ ದುನಿಯಾದಲ್ಲಿ ಸಕ್ರೀಯವಾಗಿರಲಿ, ಮತ್ತಷ್ಟು ಮೊಗೆದಷ್ಟೂ ಗಜಲ್ ಗಳನ್ನು ಬರೆಯುತ್ತಿರಲಿ ಎಂದು ತುಂಬು ಹೃದಯದಿಂದ ಶುಭ ಕೋರುತ್ತೇನೆ.

ಒಂದು ಕ್ಷಣದಲ್ಲಿ ಯುಗದ ಸಂತಸವನ್ನು ನನಗೆ ಕೇಳಿ

ಎರಡು ದಿನಗಳ ಜೀವನದ ಸಂತಸವನ್ನು ನನಗೆ ಕೇಳಿ”

ಖುಮಾರ್ ಬಾರಾಬಂಕವಿ

ಮನುಷ್ಯನ ಮನಸು ಹಲವು ಏರಿಳಿತಗಳ ಝರಿ. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ನಾಕದಲ್ಲಿ ಅಲೆದಾಡುತ್ತಿರಬೇಕಾದರೆ ದಿನದ ೨೪ ಗಂಟೆಗಳೂ ಕಡಿಮೆ ಅನಿಸುತ್ತವೆ. ಒಲ್ಲದ ಮನಸ್ಸಿನಿಂದಲೇ ಕಾಲದ ಮುಂದೆ ಮಂಡಿಯೂರಿರುವೆ.. ಅನಿವಾರ್ಯವಾಗಿ ಇಂದು ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮುಂದಿನ ಗುರುವಾರ‌ ಮತ್ತೇ ಬರುವೆ..ಹೋಗಿ ಬರಲೆ….!!


-ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top