ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಮೈದುನ ಮಗನಾಗಬಲ್ಲನೇ?

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಎಲ್ಲ ಸಂಬಂಧಗಳಿಗೂ  ಒಂದು ದೈವಿಕ ಚೌಕಟ್ಟು ಬೆಸುಗೆ ಇರುತ್ತದೆ. ಒಡಹುಟ್ಟಿದ ಅಕ್ಕನಿಗೆ ತಾಯಿಯ ಸ್ಥಾನವಾದರೆ ಅಣ್ಣನಿಗೆ ತಂದೆಯ ಸ್ಥಾನಮಾನ  ನೀಡಿ  ಗೌರವಿಸುವ ಅತಿಥಿಯಾದರೆ ಹೊರಗಿನಿಂದ ಬಂದ ಭಾವನಿಗೆ ತಂದೆಯ ಸ್ಥಾನ ಹಾಗೂ ಅಣ್ಣನ ಹೆಂಡತಿ ಅತ್ತಿಗೆ ತಾಯಿಯ ಗೌರವ.

ಮೊದಲಿಗೆ ಈ ಕ್ರಮ ಅಥವಾ ಪದ್ಧತಿಯ ಮೂಲ ಬೇರು ಹುಡುಕಿದರೆ …..ಮೊದಲೆಲ್ಲಾ ಮನೆಯ ತುಂಬಾ ಮಕ್ಕಳು ಹಾಗೂ ಬಹಳ ಬೇಗ ಮದುವೆ ಮಾಡುವ ಸಂಪ್ರದಾಯವಿತ್ತು.  .ಇದರಿಂದ ಎಷ್ಟೋ ವೇಳೆ ಅಮ್ಮಮಗಳು ಅತ್ತೆಸೊಸೆ ಜತೆಜತೆಯಲ್ಲೇ ಬಸುರಿ ಬಾಣಂತಿ  ಆಗಿರುತ್ತಿದ್ದ ವ್ಯವಸ್ಥೆ ಅತ್ಯಂತ ಸಹಜ ಎನಿಸುತ್ತಿತ್ತು . ಅಂತಹ ಸಮಯದಲ್ಲಿ ಬಂದ ಸೊಸೆ ಅಂದರೆ ಅತ್ತಿಗೆ ತನ್ನ ಮಕ್ಕಳ ಜೊತೆಯವರೇ ಆದ ಮೈದುನಂದಿರನ್ನು ನಾದಿನಿಯರನ್ನು ತಾಯಿಯಂತೆಯೇ ಕಾಣುವುದು ಮಾಮೂಲಿನ ವಿಷಯವಾಗಿತ್ತು . ಅಲ್ಲದೆ ರೂಢಿಗತವಾಗಿ ಹೀಗೆ ತಾಯಿಯ ವಾತ್ಸಲ್ಯ ಅನ್ನುವಂಥ ಅನುಬಂಧ ಬೆಳೆದಾಗ ಮುಂದೆ ಮಾತ್ಸರ್ಯ ಈರ್ಷೆಗಳಿಂದ ಸಂಸಾರ ಒಡೆಯುವ ಪ್ರಮೇಯವೇ ಬರುತ್ತಿರಲಿಲ್ಲ . “ಹುಟ್ಟುತ್ತಾ ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು”ಎಂದು ಗಾದೆಮಾತೇ ಇದ್ದಾಗ ಈ ರೀತಿಯ ಮಾತೃ ತನಯರ ಸಂಬಂಧ  ಸ್ವಲ್ಪವಾದರೂ ಈ ಕಹಿಯನ್ನು ಮರೆಸುತ್ತಿದ್ದವು.  ನಮ್ಮ ಹಳೆಯ ಕನ್ನಡ ಚಲನಚಿತ್ರಗಳಲ್ಲಿ ಇಂತಹ ಆದರ್ಶ ಅತ್ತಿಗೆ ಮೈದುನಂದಿರ ತಾಯಿ ಮಕ್ಕಳ ಸಂಬಂಧಗಳ ವೈಭವೀಕರಣವನ್ನು ನೋಡಬಹುದು.  ಅಲ್ಲದೆ “ಅಣ್ಣ ನಮ್ಮವನಾದರೂ ಅತ್ತಿಗೆ ನಮ್ಮವಳೇ”ಎಂಬ ಜನಜನಿತ ನಾಣ್ಣುಡಿಯ

ವಿಷ ಅನುಭವವನ್ನು   ಬಹಳ ಮಟ್ಟಿಗೆ ಕಡಿಮೆ ಮಾಡುತ್ತಿದ್ದವು. ತುಂಬಿದ ಮನೆಗಳು ಒಡೆಯದೆ ಹಾಗೆಯೇ ಮುಂದುವರಿಯಲು ಈ ರೀತಿಯ ಅನುಬಂಧಗಳು ವಿಶ್ವಾಸವನ್ನು ಹೆಚ್ಚು ಗಟ್ಟಿಗೊಳಿಸುತ್ತಿದ್ದವು . ಎಷ್ಟೋ ಕಡೆಗಳಲ್ಲಿ ವಯಸ್ಸಿನ ತಾರತಮ್ಯ ತಾಯಿ ಮಕ್ಕಳಷ್ಟೇ ಇರದಿದ್ದರೂ ಬಾಂಧವ್ಯದ ಘನತೆಗೆ ಸ್ವಲ್ಪವೂ ಕುಂದಾಗುತ್ತಿರಲಿಲ್ಲ .ಇಷ್ಟೆಲ್ಲ ಹೇಳಿದರೂ ಕಡೆಯಲ್ಲಿ ಆಸ್ತಿ ಹಂಚಿಕೆ ಮುಂತಾದ ವಿಷಯಗಳಲ್ಲಿ ಮನಸ್ತಾಪ ಬಂದು ಬೇರಾಗುತ್ತಿದ್ದ ಸಂದರ್ಭಗಳೇನೂ ಕಡಿಮೆ ಇರುತ್ತಿರಲಿಲ್ಲ 

ಇಂದಿನ ಕಾಲದಲ್ಲಿ ನೋಡುವುದಾದರೆ ಅಣ್ಣತಮ್ಮಂದಿರ ವಯಸ್ಸಿನ ಅಂತರ ಅಷ್ಟೇನೂ ಇರುವುದಿಲ್ಲ.  ಎಷ್ಟೋ ವೇಳೆ ಅತ್ತಿಗೆ ಮೈದುನನರು  ಸಮವಯಸ್ಕರೇ ಆಗಿರುವುದೂ ಉಂಟು . ಹಿಂದಿನಂತೆ ತುಂಬು ಕುಟುಂಬಗಳ ಪರಿಪಾಠ ಇಲ್ಲದಿದ್ದರೂ ಮೈದುನನ ಮದುವೆಯಾಗುವವರೆಗೂ  ಅತ್ತಿಗೆ ಮೈದುನ ಒಂದೇ ಸೂರಿನಡಿ ಇರಬೇಕಾಗುತ್ತದೆ ಬಹುತೇಕ ಸಂದರ್ಭಗಳಲ್ಲಿ . ಇಲ್ಲಿಯೂ ಅಷ್ಟೆ ತಾಯಿ ಮಕ್ಕಳ ವಾತ್ಸಲ್ಯ ಅನ್ನುವುದು ಸ್ವಲ್ಪ ಕ್ಲೀಷೆ ಎನಿಸಿದರೂ ಅಂತರ್ಗತ ಭಾವ ಅದೇ ಇರುತ್ತದೆ.  ಆದರೆ ಹೆಚ್ಚಿನಂಶ ಒಳ್ಳೆಯ ಸ್ನೇಹ ಸಂಬಂಧವನ್ನು ಹೊಂದಿರುವುದು ಈಗಿನ ಟ್ರೆಂಡ್ .  

ಇತ್ತೀಚೆಗಿನ ಎಷ್ಟೋ ಕುಟುಂಬಗಳಲ್ಲಿ ಅಣ್ಣ ತಮ್ಮ ಅತ್ತಿಗೆ  ಸ್ನೇಹಿತರ ಒಳ್ಳೆಯ ತಂಡವಾಗಿ

ರೂಪುಗೊಂಡಿರುತ್ತಾರೆ . ಒಂದೇ ವಯಸ್ಸಿನವರಾದ್ದರಿಂದ ಸಂಧರ್ಭಗಳ ಅರ್ಥಮಾಡಿಕೊಳ್ಳುವಿಕೆ  ತಂದೆ ತಾಯಿ ಗಳಿಗಿಂತ ಹೆಚ್ಚಿರುತ್ತದೆ . ಎಷ್ಟೋ ಮೈದುನರ  ಪ್ರೇಮ ಪ್ರಕರಣಗಳಿಗೆ ಅರ್ಜಿ ಅಪ್ಪ ಅಮ್ಮಂದಿರಿಗೆ ಅತ್ತಿಗೆಯ ಮೂಲಕವೇ ಆಗುತ್ತಲೂ ಇರುತ್ತದೆ.  ಹೆಚ್ಚಿನಂಶ 2 ಮಕ್ಕಳು ಮಾತ್ರ ಇರುವ ಕುಟುಂಬಗಳಲ್ಲಿ ಆಸ್ತಿ ವ್ಯಾಜ್ಯಗಳು ತಲೆದೋರುವ ಸಾಧ್ಯತೆ ಇಲ್ಲದಿರುವುದರಿಂದ ಜಗಳ ಮನಸ್ತಾಪಗಳು ಸಹ ಕಡಿಮೆಯೇ . ಹಾಗಾಗಿ ಒಳ್ಳೆಯ ಬಾಂಧವ್ಯ ಬೆಳವಣಿಗೆಗೆ ಮುಂದುವರಿಕೆಗೆ ತೊಂದರೆ ಇರುವುದಿಲ್ಲ . ಆದ್ದರಿಂದ ಇಂದಿನ ಕಾಲದಲ್ಲಿ ಅತ್ತಿಗೆ ಮೈದುನ ಒಳ್ಳೆಯ ಫ್ರೆಂಡ್ಸ್ ಎಂದರೆ ಹೆಚ್ಚು ಸೂಕ್ತ .

ಸಂಬಂಧಗಳ ಮಧ್ಯದ ಹೆಸರು ಯಾವುದಾದರೂ ಇರಲಿ ಬೆಸುಗೆ ಗಟ್ಟಿಯಾಗಿರಬೇಕು ಪರಸ್ಪರ ಪ್ರೀತಿ ಗೌರವ

ನಿರಂತರವಾಗಿರಬೇಕು. ಬಾಂಧವ್ಯಗಳ ಉಳಿಸಿಕೊಂಡು ಇಷ್ಟರಲ್ಲಿ ಎಲ್ಲರ ಕೊಡುಗೆ ಬೇಕೇ ಬೇಕು .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top