ಮಹಿಳಾದಿನದ ವಿಶೇಷ

ಮಹಿಳಾ ಸಾಹಿತ್ಯ ಅಂದು ಇಂದು

Image result for images of anupamaniranjana

ಸುಜಾತಾ ರವೀಶ್

ಮಹಿಳಾ ಸಾಹಿತ್ಯ ಅಂದು ಇಂದು

ಕವಿ ಮಹಾಲಿಂಗರು ಹೇಳುತ್ತಾರೆ “ಸುಲಿದ ಬಾಳೆಯ ಹಣ್ಣಿನಂದದ ಕಳೆದ ಸಿಗುರಿನ ಕಬ್ಬಿನಂದದ ಅಳಿದ ಉಷ್ಣದ ಹಾಲಿನಂದದ ಕನ್ನಡ ಸಾಹಿತ್ಯ”ಎಂದು. ನಿಜ ಮಧುರಕ್ಕೆ ಮಧುರವೂ ಸವಿಗೆ ಸವಿಯೂ ಆದ ನಮ್ಮ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕಡೆಗಣಿಸುವಂತಹದ್ದಲ್ಲ. ಪ್ರಚಲಿತವಿದ್ದ ಸ್ತ್ರೀಯರ ಸ್ಥಾನಮಾನ ನೆಲೆ ಬೆಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಈ ಪಾಲು ಕಡಿಮೆಯೇ.

ಮಹಿಳಾ ಸಾಹಿತ್ಯವನ್ನು ಕಾಲಘಟ್ಟದ ಮಾಪನದಲ್ಲಿಟ್ಟು ಅಳೆದು ನೋಡುವಾಗ ಈ ರೀತಿ ವಿಂಗಡಿಸಬಹುದು
೧. ವೇದಕಾಲದಲ್ಲಿ ಮಹಿಳಾ ಸಾಹಿತ್ಯ
೨. ಜಾನಪದ ಸಾಹಿತ್ಯ
೩. ರಾಜಾಸ್ಥಾನಗಳಲ್ಲಿ ಕನ್ನಡ ಕವಿಯತ್ರಿಯರು
೪. ಜೈನ ಸಾಹಿತ್ಯ
೫. ವಚನ ಸಾಹಿತ್ಯ
೬. ದಾಸ ಸಾಹಿತ್ಯ
೭. ಹತ್ತೊಂಬತ್ತನೇ ಶತಮಾನದ ಸ್ತ್ರೀ ಸಾಹಿತ್ಯ
೮. ದಲಿತ ಬಂಡಾಯ ಸಾಹಿತ್ಯ
೯. ಇಪ್ಪತ್ತನೇ ಶತಮಾನದ ಮಹಿಳಾ ಸಾಹಿತ್ಯ
೧೦. ಪ್ರಸಕ್ತ ಅಂತರ್ಜಾಲ ಸಾಹಿತ್ಯ

ವೇದ ಕಾಲದಲ್ಲಿ ಮಹಿಳಾ ಸಾಹಿತ್ಯ


ಮಹಿಳೆಯರಿಗೆ ಉಪನಯನದ ಅರ್ಹತೆಯೂ ಇದ್ದಂತಹ ವೇದ ಕಾಲದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಅವಕಾಶಗಳಿದ್ದವೆಂದು ತಿಳಿದುಬರುತ್ತದೆ. ಗಾರ್ಗಿ ಮೈತ್ರೇಯಿಯರಂತಹ ಪ್ರಕಾಂಡ ಪಂಡಿತರು ಸ್ವತಃ ಯಾಜ್ಞವಲ್ಕರಂತಹ ಜ್ಞಾನಿಗಳ ಮೆಚ್ಚುಗೆ ಗಳಿಸಿದ್ದರು. ಕನ್ನಡ ಸಾಹಿತ್ಯಕ್ಕೆ ನೇರ ಸಂಬಂಧವಿರದಿದ್ದರೂ ಈ ಸಂಸ್ಕೃತ ಮಹಿಳಾ ವಾಗ್ಮಿಗಳೇ ಇಂದಿನ ಸ್ತ್ರೀಯರಿಗೆ ಮೊದಲ ಪಂಕ್ತಿ ಹಾಕಿ ಕೊಟ್ಟವರೆಂದು ನೆನಪಿನಲ್ಲಿಡ ತಕ್ಕಂತಹ ಅಂಶ.

ಜಾನಪದ ಸಾಹಿತ್ಯ


ಕನ್ನಡ ಜಾನಪದ ಸಾಹಿತ್ಯವಂತೂ ಸ್ತ್ರೀಯರದ್ದೇ ಏಕಸ್ವಾಮ್ಯತೆ ಅನ್ನಬಹುದು. ಬೀಸುವ ಕಲ್ಲಿನ ಪದಗಳು, ಸಂಪ್ರದಾಯದ ಹಾಡುಗಳು, ಲಾಲಿ ಜೋಗುಳದ ಹಾಡುಗಳು ,ಆರತಿ ಹಾಡುಗಳು, ವ್ರತಗಳ ಹಾಡುಗಳು ಒಂದೇ ಎರಡೇ? ಈ ವಿಫುಲ ಜನಪದ ಸಾಹಿತ್ಯ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಂತಹವು ಸಂಗ್ರಹಿತವಾಗದೆ ಅಚ್ಚಾಗದೆ ಕಾಲನ ದಾಳಿಯಲ್ಲಿ ಎಷ್ಟೋ ನಾಶವಾಗಿದೆ .ಲೇಖಕಿಯರ ಹೆಸರಿರದ ಸಮೃದ್ಧ ಜಾನಪದ ಸಂಪತ್ತು ನಮ್ಮದು. ಯಶೋದಾ ಬಾಯಿ ಅವರ ಸೀತಾ ಪರಿತ್ಯಾಗ ರುಕ್ಮಿಣಿ ಕಲ್ಯಾಣ ಚಂದ್ರಾವಳಿ ,ಭಾಗೀರಥಮ್ಮ ಅವರ ಜನಪದ ಛಂದಸ್ಸಿನ ಕೀರ್ತನ ರಾಮಾಯಣ ಇದೇ ಮುಂತಾದವು ಸದ್ಯಕ್ಕೆ ಲಭ್ಯ ಸಂಗ್ರಹಿತ ಕೃತಿಗಳಲ್ಲಿ ಮುಖ್ಯವಾದವು.

ಜಾನಪದ ಕಾವ್ಯದಲ್ಲಿ ಗಂಡಿನ ದಬ್ಬಾಳಿಕೆಯನ್ನು ಬರೀ ಸಹಿಸಿಕೊಳ್ಳದೆ ಅದರ ವಿರುದ್ಧ ದನಿ ಎತ್ತಿರುವುದು ಸ್ತ್ರೀ ಜನಮಾನಸದಲ್ಲಿ ವ್ಯವಸ್ಥೆಯ ಅಸಮಾನತೆಯ ವಿರುದ್ಧದ ಆಕ್ರೋಶ ಸಣ್ಣಗೆ ಹೊಗೆಯಾಡುವುದು ಗಮನಿಸಬಹುದು.

ರಾಜಾ ಆಸ್ಥಾನಗಳಲ್ಲಿ ಕನ್ನಡ ಕವಿಯತ್ರಿಯರು

ಶಾತವಾಹನರ ಕಾಲದಲ್ಲಿ ಇಮ್ಮಡಿ ಪುಲಿಕೇಶಿಯ ರಾಣಿ ವಿಜಯ ಮಹಾದೇವಿ (ವಿಜ್ಜಿಕೆ) ಕೌಮುದಿ ಮಹೋತ್ಸವ ಎಂಬ ಕಾವ್ಯವನ್ನು ರಚಿಸಿದ್ದಳು .ವಿಜಯನಗರದ ಸುವರ್ಣ ಯುಗದಲ್ಲಿ ಕೃಷ್ಣದೇವರಾಯರ ಪಟ್ಟದರಸಿ ತಿರುಮಲಾಂಬ ತನ್ನ ಪತಿಯ ಎರಡನೆಯ ಮದುವೆಯ ವಿಷಯವನ್ನು ಆಧರಿಸಿ ವರದಾಂಬಿಕಾ ಪರಿಣಯ ಎಂಬ ಕೃತಿಯನ್ನು ರಚಿಸಿದ್ದು ಗಂಗಾದೇವಿ ಎಂಬ ಕವಿಯತ್ರಿಯಿಂದ ವೀರ ಕಂಪಣರಾಯ ಚರಿತ ಎಂಬ ಗ್ರಂಥ ರಚಿಸಲ್ಪಟ್ಟಿತು. ಮೈಸೂರು ಅರಸರ ಕಾಲದಲ್ಲಿ ದೊಡ್ಡ ಕೃಷ್ಣರಾಜ ಒಡೆಯರ ರಾಣಿ ಚೆಲುವಾಂಬಯವರು ನಂದಿ ಕಲ್ಯಾಣ ಎಂಬ ಗ್ರಂಥವನ್ನು, ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಸಂಚಿಯ ಹೊನ್ನಮ್ಮ ಹದಿಬದೆಯ ಧರ್ಮ ,ಶೃಂಗಾರಮ್ಮ ಪದ್ಮಿನಿ ಕಲ್ಯಾಣವನ್ನು ರಚಿಸಿದರು. ಈ ಕಾಲದ ರಾಜಾಶ್ರಯದ ವನಿತೆಯರು ಧಾರ್ಮಿಕ ಆಧ್ಯಾತ್ಮದ ಬಗ್ಗೆ ಬರೆದರೆ ಹೊರತು ವ್ಯವಸ್ಥೆಗೆ ವಿರೋಧವಾಗಿಲ್ಲ. ಪುರುಷನ ಜೊತೆ ಸಮಾನತೆಗೆ ಧ್ವನಿ ಗೂಡಿಸಿಲ್ಲ. ಏನಿದ್ದರೂ ಅವರದ್ದು ತಣ್ಣಗಿನ ಮೆಲುದನಿಯ ಪ್ರತಿರೋಧ .

ಜೈನ ಸಾಹಿತ್ಯ

ಜೈನ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಸ್ತ್ರೀ ಸಮಾನತೆ ಹಾಗೂ ಪ್ರಾಮುಖ್ಯತೆ ಎತ್ತಿ ಕಾಣುವ ಅಂಶವಾದರೂ ಜೈನ ಕವಿಯತ್ರಿಯರು ಬೆರಳೆಣಿಕೆಯಷ್ಟು ಮಾತ್ರ. ಅತ್ತಿಮಬ್ಬೆ ಕಾವ್ಯ ರಚನೆಗೆ ಸಹಕಾರ ಕೊಟ್ಟು ದಾನ ಚಿಂತಾಮಣಿ ಎನಿಸಿದಳು. ಅದೇ ಕಾಲದ ಕಂತಿ ಕನ್ನಡದ ಪ್ರಥಮ ಕವಿಯತ್ರಿ ಅಭಿನವ ವಾಗ್ದೇವಿ ಆದಿಕವೀಶ್ವರಿ ಎಂದೆಲ್ಲ ಬಿರುದಾಂಕಿತಳಾಗಿ ಕಂತಿ ಹಂಪನ ಸಮಸ್ಯೆಗಳು ಎಂಬ ಕೃತಿ ರಚಿಸಿದ್ದಾಳೆ.
ಈ ಕಾಲದ ಕವಿಯತ್ರಿಯರು ಅಷ್ಟೇ ವ್ಯವಸ್ಥೆಗೆ ಹೊಂದಿ ನಡೆದರೆ ವಿನಃ ವಿರುದ್ಧ ಧ್ವನಿ ಎತ್ತಲಿಲ್ಲ ಎನ್ನುವುದು ಪರಿಗಣಿಸಬೇಕಾದ ಅಂಶ.

ವಚನ ಸಾಹಿತ್ಯ (೧೨ ನೇ ಶತಮಾನ)

ವಚನ ಸಾಹಿತ್ಯದ ಯುಗವನ್ನು ಕನ್ನಡ ಮಹಿಳಾ ಸಾಹಿತ್ಯದ ಸುವರ್ಣಯುಗ ಎನ್ನಬಹುದು. ಸಾಮಾಜಿಕ ಅನಿಷ್ಟ ವ್ಯವಸ್ಥೆಗಳ ವಿರುದ್ಧ ಸ್ತ್ರೀ ಬಂಡಾಯದ ಕಿಡಿ ಕೆದರಿದ್ದು ಆಗಲೇ .ಅಕ್ಕಮಹಾದೇವಿ ಅಕ್ಕಮ್ಮ ರೆಮ್ಮವ್ವೆ ಗಂಗಮ್ಮ ಲಕ್ಷಮ್ಮ ಇವುಗಳನ್ನು ಸ್ತ್ರೀ ಸಮಾನತೆಯ ಕೂಗಿನ ಪ್ರವಾದಿಗಳೆಂದರೆ ತಪ್ಪಾಗಲಾರದು .ಇನ್ನು ದಲಿತ ಕವಿಯತ್ರಿಯರು ಬಂಡಾಯದ ಕಹಳೆ ಊದಿದವರಲ್ಲಿ ಪ್ರಮುಖರೆಂದರೆ ಸೂಳೆ ಸಂಕವ್ವೆ ಹೊಲತಿ ಗುಡ್ಡವ್ವೆ, ಉರಿಲಿಂಗಪೆದ್ದಿಯ ಪತ್ನಿ ಕಾಳವ್ವೆ ,ಕುಂಬಾರ ಕೇತಲಾದೇವಿ ಲಕ್ಕವ್ವ ಇವರುಗಳು ಮುಖ್ಯರು .
ವಚನ ಸಾಹಿತ್ಯ ಕಾಲ ಸ್ತ್ರೀ ಶೋಷಣೆಯತ್ತ ಬರಿ ಬರವಣಿಗೆಯಲ್ಲಿ ಮಾತ್ರವಲ್ಲದೆ ಆಚರಣೆಯಲ್ಲೂ ಧ್ವನಿ ಎತ್ತಿ ಬದಲಾವಣೆಗೆ ನಾಂದಿ ಹಾಡಿತ್ತು .
ಒಂದು ಸಾಮಾಜಿಕ ಕ್ರಾಂತಿಯತ್ತ ನಡೆದಿದ್ದ ವಚನ ಸಾಹಿತ್ಯದ ಹರಿವು ಕಲ್ಯಾಣ ಕ್ರಾಂತಿಯ ದಮನದೊಂದಿಗೆ ಅವಸಾನ ಹೊಂದಿ ಸ್ತ್ರೀವಾದ ಮತ್ತೆ ಮಾಯವಾದದ್ದು ಒಂದು ಸಾಮಾಜಿಕ ದುರಂತವಷ್ಟೇ ಅಲ್ಲದೇ ಮಹಿಳಾ ಸಾಹಿತ್ಯಕ್ಕೆ ತುಂಬಲಾರದ ನಷ್ಟವೆಂದರೆ ಅತಿಶಯೋಕ್ತಿಯಾಗಲಾರದು.

ದಾಸ ಸಾಹಿತ್ಯ

ದಾಸ ಸಾಹಿತ್ಯವೆಂದರೆ ಸಾಮಾನ್ಯ ಪುರುಷರಿಂದ ರಚನೆಯಾದ್ದದು ಎಂದುಕೊಳ್ಳುತ್ತೇವೆ ಆದರೆ ಸ್ತ್ರೀಯರ ಕೊಡುಗೆಯೂ ದಾಸ ಸಾಹಿತ್ಯಕ್ಕೆ ಸಂದಿದೆ. ಇಲ್ಲಿಯೂ ಸಹ ಸಂಗ್ರಹಿತವಾಗದೆ ಹೋದದ್ದು ಬಹಳಷ್ಟಿರಬಹುದು.. ಇವರಲ್ಲಿ ಪ್ರಮುಖರೆಂದರೆ ಚಿತ್ರದುರ್ಗದ ಅಂಬಾಬಾಯಿ ಗೋಪಾಲಕೃಷ್ಣ ವಿಠಲ ಅಂಕಿತ ನಾಮದಲ್ಲಿ ದ್ವಿಪದಿ ಛಂದಸ್ಸಿನಲ್ಲಿ ರಾಮಾಯಣ ರಚಿಸಿದ್ದಾರೆ. ಗಂಗಲಿಯ ಅವ್ವ , ಹರಪನಹಳ್ಳಿ ಭೀಮವ್ವ ನಾಡಿಗರ ಶಾಂತಾಬಾಯಿ ತುಳಸಾಬಾಯಿ ಹೆಳವನಕಟ್ಟೆ ಗಿರಿಯಮ್ಮ (ಇವರ ರಚನೆಗಳು ಚಂದ್ರಹಾಸ ಕತೆ ಸೀತಾ ಕಲ್ಯಾಣ ಉದ್ದಾಲಕ ಕಥೆ ಬ್ರಹ್ಮ ಕೊರವಂಜಿ ಮುಂತಾದ ಹಾಡು ಹಬ್ಬಗಳು)

ವಿಧವೆಯರೇ ಹೆಚ್ಚಾಗಿ ಈ ದಾಸ ಸಾಹಿತ್ಯ ರಚನೆಗೆ ಮುಂದಾಗಿದ್ದು ಬರೀ ಆಧ್ಯಾತ್ಮಿಕದ ಕಡೆಗೆ ಒಲವು ಹೆಚ್ಚಾಗಿ ಕಂಡು ಬರುತ್ತದೆ.

೧೯ನೇ ಶತಮಾನದ ಸ್ತ್ರೀ ಸಾಹಿತ್ಯ

ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯಾನಂತರದ ಕಾಲಮಾನ ಘಟ್ಟದಲ್ಲಿ ಸ್ತ್ರೀ ಸ್ವಾತಂತ್ರ್ಯದ ಹೊಸ ರೂಪು ರೇಷೆಗಳು ಮೂಡಿ ಸಾಮಾಜಿಕವಾಗಿ ಸಾಹಿತ್ಯ ರಚನೆಯು ಆರಂಭವಾಯಿತು. ಪತ್ರಿಕೆಗಳಲ್ಲಿ ಸ್ತ್ರೀಯರಿಂದ ಲೇಖನ ಪ್ರಬಂಧ ಕಥೆಗಳು ಪ್ರಕಟವಾಗಿರುವುದು ಮುಖ್ಯ ಅಂಶ. ಶಾಂತಾಬಾಯಿ ನೀಲಗಾರ ಅವರ ಉತ್ತಮ ಗೃಹಿಣಿ ಕನ್ನಡದ ಮೊದಲ ಮಹಿಳಾ ಕಾದಂಬರಿ ಎಂದು ಗುರುತಿಸಲಾಗಿದೆ. ತಿರುಮಲೆ ರಾಜಮ್ಮ ತಿರುಮಲಾಂಬಾ ಬೆಳಗೆರೆ ಜಾನಕಮ್ಮ ಕೊಡಗಿನ ಗೌರಮ್ಮ ಆರ್ ಕಲ್ಯಾಣಮ್ಮ ಜಯದೇವಿ ತಾಯಿ ಲಿಗಾಡೆ ಮುಂತಾದವರು ಈ ಅವಧಿಯ ಪ್ರಮುಖ ಲೇಖಕಿಯರು.

ಪ್ರಚಲಿತ ಸ್ತ್ರೀ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳು ಮುಂತಾದವುಗಳ ವಿರುದ್ಧ ದನಿ ಎತ್ತಿರುವುದು ಈ ಕಾಲದ ಲೇಖಕಿಯರ ವೈಶಿಷ್ಟ್ಯ .

ದಲಿತ ಬಂಡಾಯ ಸಾಹಿತ್ಯ

ನಂತರದ ದಿನಗಳಲ್ಲಿ ಅಸ್ತಿತ್ವ ಕಂಡುಕೊಂಡ ದಲಿತ ಹಾಗೂ ಬಂಡಾಯ ಸಾಹಿತ್ಯದಲ್ಲಿ ಪುರುಷರಂತೆ ಸ್ತ್ರೀಯರ ಕೊಡುಗೆಯೂ ಅಪಾರ ಗೀತಾ ನಾಗಭೂಷಣ, ಬಿಟಿ ಲಲಿತಾ ನಾಯಕ್, ವೈದೇಹಿ ,ಅನುಪಮ ನಿರಂಜನ್ ಸಾರಾ ಅಬೂಬಕ್ಕರ್ ಇನ್ನೂ ಮುಂತಾದ ಅನೇಕ ಲೇಖಕಿಯರು ಈ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಕೆಲವರು .
ಅಸ್ಪೃಶ್ಯತೆ ಸ್ತ್ರೀ ಶೋಷಣೆ ಬೆತ್ತಲೆ ಸೇವೆ ಮೊದಲಾದ ಸ್ತ್ರೀ ಸಂಬಂಧಿ ಹಾಗೂ ದಲಿತ ಸಂಬಂಧಿ ಸಮಸ್ಯೆಗಳಂತ ಜ್ವಲಂತ ಸಮಸ್ಯೆಗಳ ವಿರುದ್ಧ ಮಾತನಾಡಿ ಸುಧಾರಣೆಗೆ ಮುಂದಾದದ್ದು ವಿಶೇಷ .

೨೦ನೇ ಶತಮಾನದ ಮಹಿಳಾ ಸಾಹಿತ್ಯ

ಇದು ಸಹ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೇರು ಕಾಲವೆನ್ನಬಹುದು .ಸಣ್ಣಕಥೆ ಕಾದಂಬರಿಗಳ ಹೊಳೆಯೇ ಹರಿದು ಹೊಸ ಓದುಗರನ್ನು ಓದಿನ ಅಲೆಯನ್ನು ಸೃಷ್ಟಿಸಿತ್ತು. ತ್ರಿವೇಣಿ, ಉಷಾ ನವರತ್ನರಾಂ, ಎಂಕೆ ಇಂದಿರಾ, ಸಾಯಿಸುತೆ ,ಎಚ್ ಜಿ ರಾಧಾದೇವಿ ಅವರ ಕಾದಂಬರಿಗಳು ಹೊಸ ಸಂಚಲನವನ್ನೇ ಸೃಷ್ಟಿಸಿ ಕನ್ನಡ ಪ್ರೀತಿಗೆ ಕಾರಣವಾದವು .ಪ್ರತಿಭಾ ನಂದಕುಮಾರ್ ಹೇಮಾ ಪಟ್ಟಣಶೆಟ್ಟಿ ಮಾಲತಿ ಸವಿತಾ ನಾಗಭೂಷಣ ಮುಕ್ತಾಯಕ್ಕ ಸುನಂದಮ್ಮ ಮುಂತಾದವರು ಈ ಕಾಲದ ಹೆಸರಿಸಬೇಕಾದ ಲೇಖಕಿಯರ ಪಟ್ಟಿಗೆ ಸೇರುತ್ತಾರೆ .
ಸಾಮಾಜಿಕವಾಗಿ ಆಗುತ್ತಿದ್ದ ಬದಲಾವಣೆಗಳು ಹಾಗೂ ಶೋಷಣೆಯು ಇನ್ನೊಂದು ರೂಪದಲ್ಲಿ ಮುಂದುವರಿದ ದ್ದನ್ನು ಎತ್ತಿ ಹೇಳುವ ಪ್ರಯತ್ನ ಈ ಕಾಲದಲ್ಲಾಯಿತು.

ಪ್ರಸಕ್ತ ಅಂತರ್ಜಾಲ ಸಾಹಿತ್ಯ

ಇಂದಿನ ಯುಗದ ಮುಖ್ಯ ಆಕರ್ಷಣೆ ಸಾಮಾಜಿಕ ಜಾಲ ತಾಣಗಳು. ಇವು ಬರಹಗಾರರ ಒಂದು ದೊಡ್ಡ ಪಡೆಯನ್ನೆ ಕಟ್ಟಿದೆ ಬೆಳೆಸುತ್ತಿದೆ .ಒಂದು ಸೀಮಿತ ಓದುಗರ ವರ್ಗವೇ ಹುಟ್ಟಿದೆ .ವಾಟ್ಸಾಪ್ ಫೇಸ್ ಬುಕ್ ನಲ್ಲಿನ ಸಾಹಿತ್ಯಿಕ ಗುಂಪುಗಳು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ರೀತಿಯ ಸೇವೆಯನ್ನು ಸಲ್ಲಿಸುತ್ತಿದೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದುಗರ ಜೊತೆ ಸಂಭವಿಸಬಹುದಾದಂಥ ಚಿನ್ನದಂತಹ ಅವಕಾಶ ಕೊಡುವ ಈ ಸಾಹಿತ್ಯ ಪ್ರವರ್ಗ ಪ್ರಸಕ್ತ ಜನಪ್ರಿಯವಾಗಿರುವ ಮಾಧ್ಯಮ ಅದರದೇ ಆದಂತಹ ಕೆಲವು ಅಡೆತಡೆ ಇತಿಮಿತಿಗಳಿದ್ದರೂ ವೃತ್ತಿ ಗೃಹಕೃತ್ಯಗಳ ನಡುವೆ ಕಿಂಚಿತ್ತಾದರೂ ಬರೆಯುವ ಓದುವ ಹವ್ಯಾಸಕ್ಕೆ ನೀರೆರೆಯುತ್ತಿವೆ ಎಂದರೆ ತಪ್ಪಲ್ಲ .

೧೯೬೯ರಲ್ಲಿ ಸ್ಥಾಪಿತವಾದ ಶ್ರೀಮತಿ ಸರೋಜಿನಿ ಮಹಿಷಿ ಯವರನ್ನು ಪ್ರಥಮ ಅಧ್ಯಕ್ಷರನ್ನಾಗಿ ಮಾಡಿ ಸಮ್ಮೇಳನ ನಡೆಸಿದ ಕರ್ನಾಟಕ ಲೇಖಕಿಯರ ಸಂಘದ ಕಾಣಿಕೆಯೂ ಈ ನಿಟ್ಟಿನಲ್ಲಿ ಸ್ಮರಣಾರ್ಹ. ಶ್ರೀಮತಿ ಚಿ .ನಾ ಮಂಗಳ ಅವರ ಕಾಲೇಜಿನಲ್ಲಿ ೧೯೮೬ ರಿಂದ ಮಹಿಳಾ ಅಧ್ಯಯನ ಎಂಬ ಕೋರ್ಸ್ ಪ್ರಾರಂಭ ಮಾಡಿದ್ದು ಮಹಿಳಾ ಸಾಹಿತ್ಯದಲ್ಲಿನ ಮೈಲಿಗಲ್ಲು. ಮಹಿಳೆಯರ ಬದುಕಿನ ವಿವಿಧ ಬರಹ ಕುರಿತು ಮಹಿಳೆಯರೇ ರಚಿಸಿರುವ ಇಪ್ಪತ್ತ್ಮೂರು ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ೧೯೭೫ರಲ್ಲಿ ಪ್ರಕಟವಾದವು. ಇದು ಸಹ ಮಹಿಳೆಯರಲ್ಲಿ ಬರೆಯುವ ಆಸಕ್ತಿಗೆ ನೀರೆರೆದವು .

ಇಷ್ಟೆಲ್ಲಾ ಆದರೂ ಕನ್ನಡ ಮಹಿಳಾ ಸಾಹಿತ್ಯದಲ್ಲಿ ಸ್ತ್ರೀ ತನ್ನ ಅಸ್ತಿತ್ವದ ಛಾಪನ್ನು ಮೂಡಿಸಿ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾಳೆಯೇ ಎಂದರೆ ಇಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗುತ್ತದೆ .ಗಟ್ಟಿ ಅಧ್ಯಯನ ನಡೆಸಿ ಮೇರು ಕೃತಿಗಳನ್ನು ರಚಿಸುವಲ್ಲಿ ಮಹಿಳೆಯರು ಮುಂದಾಗಿಲ್ಲ. ಅದಕ್ಕೆ ಅವರದೇ ಆದ ಇತಿಮಿತಿಗಳ ರಬಹುದು .ಇರಲಿ ಅದು ಬೇರೆಯ ವಿಚಾರ.
ಇಂದಿನ ಕಾಲದಲ್ಲಿ ಸ್ತ್ರೀ ಪುರುಷರಿಗೆ ಸಮಾನ ಅವಕಾಶವಿರುವ ಸಂದರ್ಭದಲ್ಲಿ ಸಮಾನತೆಗೆ ಹೊಡೆದಾಡುವ ಬೇಡುವ ಸಂದರ್ಭಗಳಿಲ್ಲ ಆದರೂ ಅಭೀಷ್ಟ ರೀತಿಯಲ್ಲಿ ಮಹಿಳಾ ಸಾಹಿತಿಗಳು ಮುಂದೆ ಬಂದಿಲ್ಲ ಬೇರೆಲ್ಲ ರಂಗದಲ್ಲೂ ಬೆಳವಣಿಗೆ ಹೊಂದಿರುವ ಸ್ತ್ರೀ ತನ್ನ ಅನುಭವ ಸಾರವನ್ನು ಬರವಣಿಗೆಯಲ್ಲಿ ಹಿಡಿದಿಡುವ ಸಮರ್ಥ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಅಲ್ಲೊಂದು ಇಲ್ಲೊಂದು ಸುಧಾ ಮೂರ್ತಿ ಅವರಂತಹ ಉದಾಹರಣೆ ಹೊರತುಪಡಿಸಿ.

ಒಟ್ಟಿನಲ್ಲಿ ಹೇಳಬೇಕೆಂದರೆ ಮಹಿಳಾ ಸಾಹಿತ್ಯ ಪ್ರಗತಿಯತ್ತ ಸಾಗುತ್ತಿದ್ದರೂ ಸಂಖ್ಯಾತ್ಮಕವಾಗಿ ವೃದ್ಧಿ ಹೊಂದಿದ್ದರೂ ಗುಣಾತ್ಮಕ ಹಾಗೂ ವಿಶೇಷ ಹರಿವುಗಳ ಅಭಿವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕಿದೆ .ಭಿಡೆ ಬಿಟ್ಟು ಬರೆಯುವ ಮನೋಭಾವ ಹೆಚ್ಚಿಸಿಕೊಳ್ಳಬೇಕಾಗಿದೆ. ಸಾಮಾಜಿಕವಾಗಿ ಹೊಂದಿದಂತಹ ಸಮಾನತೆ ಗೆಲುವು ಅವಕಾಶಗಳನ್ನು ಸಾಹಿತ್ಯಿಕವಾಗಿಯೂ ಪ್ರಾತಿನಿಧಿ ಸಬೇಕಾಗಿದೆ.

ಕನ್ನಡಕ್ಕೆ ಬಂದ ಎಂಟೂ ಜ್ಞಾನಪೀಠ ಪ್ರಶಸ್ತಿಗಳೂ ಮಹನೀಯರಿಗೇ. ಮುಂದಾದರೂ ಕನ್ನಡ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಲ್ಲಾ ಬರಲಿ ಎಂದು ಆಶಿಸೋಣ ಅಲ್ಲವೇ ?

*******

Leave a Reply

Back To Top