ಕಾವ್ಯ ಸಂಗಾತಿ
ಕಡಲೆಂಬ ಬಾಳಚಿತ್ತಾರ
ಅಭಿಜ್ಞಾ ಪಿ.ಎಮ್.ಗೌಡ
ನಿಜ ನಾ ತುಂಬ ಹೆದರಿರುವೆ
ಈ ಕಡಲೆಂಬ ಬಾಳಯಾನದಲಿ
ತಮಾಷೆಯಲ್ಲ
ಬಡಿದಪ್ಪಳಿಸೊ ಅಲೆಗಳಾರ್ಭಟಗಳಂತೆ
ನೋವು ನಲಿವುಗಳು
ಚಿಮ್ಮುವ ಜ್ವಾಲಾಮುಖಿ ಕಿಡಿಗಳಂತೆ
ವ್ಯಂಗ್ಯನುಡಿಗಳು
ಧುಮ್ಮಿಕ್ಕುವ ಹಾಲ್ಧಾರೆಯಂತೆ
ಸವಾಲುಗಳ ಸಾಲು
ಒಮ್ಮಿಂದೊಮ್ಮೆಲೆ ಪ್ರತ್ಯಕ್ಷ
ಕೆಲವೊಮ್ಮೆ ಪರೋಕ್ಷ…
ಚಿಂತಿಸಿ ಮಂಥಿಸಿ ಹೈರಾಣಾಗುವ
ಮನಸುಗಳು ಬೇಡುತಿವೆ ಏಕಾಂತ
ಕಾರಣ…..
ಈ ಕಡಲೊಳಗೆ
ಈಜಿದೆಂತೆಲ್ಲ ದೈತ್ಯ ಜಲಚರಗಳೆ…!
ಜೊತೆಯಲಿದ್ದೆ ವ್ಯಂಗ್ಯವಾಡೊ
ಜಲಚರಗಳ ಸಂಭಾಳಿಸಲೋ
ಹುಬ್ಬಿಸಿ ಅಟ್ಟಕೇರಿಸಿ
ಪಾತಾಳಕೆ ತಳ್ಳುವವರ ನೆನೆಯಲೊ
ಅಥವ
ಸಾಂಗತ್ಯದ ಕೊಂಡಿ ಕಳಚಿ ಹೋದ
ಬಂಧಗಳ ಹುಡುಕಲೋ.?
ಉರಿಯುತಿರೊ
ಅಗ್ನಿಯಂತಾಗಿದೆ ಬಾಳು
ಬೇಯುತಿರೊ ಅನ್ನದಂತಾಗಿದೆ ಮಾಳು…
ಕೋಪ ರೋಷ ದ್ರೋಹಗಳ
ಸುಡಲೆತ್ನಿಸುತಿರೊ ಈ ಮನಸು
ಉಳಿಪೆಟ್ಟು ತಿಂದು
ಕಲ್ಲಲ್ಲಿ ಅರಳಿದ ಶಿಲೆಯಂತೆ
ಪುಟಿದೇಳುತಿದೆ ಕ್ಷಣಕ್ಷಣ…
ಕಡಲೊಳಗಿನ
ಮುತ್ತು ರತ್ನ ಹವಳಗಳೆಲ್ಲ
ಒಮ್ಮೊಮ್ಮೆ ಝಣಝಣ
ಕಾಂಚಾಣದಂತೆ ಉಳ್ಳವರ ಪಾಲು..
ಹಸಿವೆಂಬ ಭೀಕರ ಪ್ರಪಾತದೊಳಗೆ
ಬಿದ್ದವರು, ಬೀಳುತಿರುವವರೆಷ್ಟೋ
ಹೇಳತೀರದ ಗೋಳು…
ಅಗೋ.!ಕಡಲ ತೀರದಿ ಮಲಗಿಹೆ ಚಾಚಿ
ಹಸಿರುಡುಗೆಯಲಿ ಈ ಪಾಚಿ
ರುಧಿರವೆಂಬ ಬೆವರನಿಯ ಸುರಿಸಿ
ದುಡಿದು ದಣಿವ ರೈತನಂತೆ…
ಬೆನ್ನಿಗಂಟಿರೊ ದೇಹವೊತ್ತು
ಒಮ್ಮೊಮ್ಮೆ ವರಣದೇವನಿಗೆ
ನಿನ್ನ ಕೃಪೆ ತೋರೆಂದು ಬೇಡುವ ಪರಿ
ಅತಿವೃಷ್ಟಿಯಿಂದಾಗಿ
ಕೆಲವೊಮ್ಮೆ ವರಣದೇವನಿಗೆ
ನಿನ್ನಾಗಮನ ನಿಲ್ಲಿಸೆಂದು ಕೇಳುವ ಪರಿ
ಅಬ್ಬಬ್ಬಾ.! ಇದೆಂತಹ ವಿಪರ್ಯಾಸ…
ಆಂತರ್ಯದ ಆರ್ತನಾದ
ಅಳುವಿನ ಕಡಲಲಿ ಮುಳುಗಿಸಿ
ಮಾರ್ದನಿಸುತಿದೆ
ನೊಂದು ಬೆಂದು ಬೆಂಡಾದ ಮನಸು..!
ಏರಿಳಿತಗಳ ಗಡಣ
ದುಃಖ ದುಮ್ಮಾನಗಳ ತೋರಣ
ತಿಳಿಯಬೇಕಿದೆ ಏನೆಂದು ಎಲ್ಲರಿಗೂ…