ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ವೃದ್ಧಾಶ್ರಮ

ಅಂದು ಯಾವುದೋ ಸಾಹಿತ್ಯಕ ಸಮಾರಂಭಕ್ಕೆ ಸಬಾಂಗಣ ಬೇಕೆಂದು ಹುಡುಕುತ್ತಾ ಆ ವೃದ್ಧಾಶ್ರಮದ ಕ್ಯಾಂಪಸ್ ಹೊಕ್ಕೆವು.  ಎಕರೆಗಟ್ಟಲೆ ಪ್ರದೇಶದ ಸುಂದರ ಹಸಿರು ತುಂಬಿದ ವಾತಾವರಣದಲ್ಲಿ  ಅಲ್ಲಲ್ಲಿ ವೈಭವಯುತ ಕಾಟೇಜ್.  ಅವರದೇ ಸ್ವಂತ ಸಭಾಂಗಣ, ಚಿಕ್ಕ ಆಸ್ಪತ್ರೆ, ವ್ಯಾಯಾಮಕ್ಕೆ ಜಿಮ್, ನಡಿಗೆಗಾಗಿ ದಾರಿ  ಯಾವುದೋ ಪಂಚತಾರ ಹೋಟೆಲ್ ಹೊಕ್ಕ ಅನುಭವ.

ಮತ್ತೊಂದು ದೃಶ್ಯ : 3 ಮಹಡಿಗಳ ಕಟ್ಟಡ ಅಟ್ಯಾಚ್ಡ್ ಬಾತ್ ರೂಂ ಸೌಲಭ್ಯವುಳ್ಳ ಕಾರಿಡಾರ್ ನುದ್ದಕ್ಕೂ ರೂಮುಗಳು, ಸಭಾಂಗಣ ರೆಸಿಡೆನ್ಶಿಯಲ್ ವೈದ್ಯರು, ಡೈನಿಂಗ್ ಹಾಲ್ ಒಟ್ಟಿನಲ್ಲಿ 1 ಹಾಸ್ಟೆಲ್ ಇದ್ದಂತೆ . ಇದೂ  ಒಂದು ವೃದ್ಧಾಶ್ರಮ.

ಇನ್ನೊಂದು ದೃಶ್ಯ : ದೊಡ್ಡ ಹಾಲ್ ನಲ್ಲಿ ಉದ್ದಕ್ಕೆ ಒಂದೊಂದು ಮಂಚ . ಅಲ್ಲೆ ಬಟ್ಟೆ ಇಟ್ಟುಕೊಳ್ಳಲು ಕಪಾಟು. 1ಛತ್ರದಲ್ಲಿನ ಹಾಗೆ ಬಾತ್ ರೂಂಗಳು, ಊಟದ ಹಾಲ್, ಟಿಪಿಕಲ್ ವೃದ್ಧಾಶ್ರಮ. 

 ಅವರವರ ಜೇಬಿಗೆ ತಕ್ಕಂತಹ ಸೌಲಭ್ಯ.  ಕಾಸಿಗೆ ತಕ್ಕ ಕಜ್ಜಾಯ.  ನಿಜ ನಾನು ಹೇಳುತ್ತಿರುವುದು ವೃದ್ಧಾಶ್ರಮಗಳ ಬಗ್ಗೆಯೇ….. ಈ ಶತಮಾನದ ಹೊಸ ಸಾಮಾಜಿಕ ಪದ್ಧತಿ ಅಭ್ಯಾಸ ಪಿಡುಗು ಏನಾದರೂ ಅನ್ನಿ . ನವನಾಗರಿಕತೆಯ ಬಳುವಳಿ; ನಶಿಸುತ್ತಿರುವ ಮಾನವೀಯ ಮೌಲ್ಯಗಳ ಜೀವಂತ ಜ್ವಲಂತ ಸಾಕ್ಷಿ .

೨೦೨೦ ರಲ್ಲಿ ನಡೆಸಿದ 1 ಸಮೀಕ್ಷೆಯ ಪ್ರಕಾರ ಭಾರತದಲ್ಲಿ ೭೨೮ ವೃದ್ಧಾಶ್ರಮಗಳು ಇವೆಯಂತೆ. ಅದರಲ್ಲಿ  ೩೨೫ ಉಚಿತವಾಗಿ ಸೇವೆ ಕೊಡುವಂತಹವು. ೯೫ ಹಣ ಪಾವತಿಸಿ ಇರುವಂತಹವು ಮತ್ತು ೧೧೬   ಎರಡೂ ರೀತಿಯ ಸೌಲಭ್ಯಗಳನ್ನೊಳಗೊಂಡವು.   ಇದರಿಂದಲೇ ಭಾರತದಲ್ಲಿ ನಾಯಿಕೊಡೆಯಂತೆ ವೃದ್ಧಾಶ್ರಮಗಳ ಸಂಖ್ಯೆಯಲ್ಲಿನ ಬೆಳವಣಿಗೆಯನ್ನು ಅರಿಯಬಹುದು. ಪಾಶ್ಚಾತ್ಯ ಸಂಸ್ಕೃತಿಯ ಒಳಿತುಗಳನ್ನು ಅಳವಡಿಸಿಕೊಳ್ಳದಿದ್ದರೂ,  ಅವರಲ್ಲಿನ ಅನಿಷ್ಟ ಗಳಲ್ಲೊಂದಾದ ಇದನ್ನು ನಮ್ಮದಾಗಿಸಿಕೊಳ್ಳುತ್ತಾ ಹೋಗುತ್ತಿರುವ ಸಮಾಜದ ಅವನತಿಯ ದಾರಿಯ ಹೆಗ್ಗುರುತು . 

೨೦೧೧ರ ಜನಗಣತಿಯ ಪ್ರಕಾರ ಅರುವತ್ತರ ವಯೋಮಾನದ ದಾಟಿದವರ ಜನಸಂಖ್ಯೆ ಸುಮಾರು  ೧೦೩ ಮಿಲಿಯನ್ ಅಂದರೆ ಜನಸಂಖ್ಯೆಯ ಶೇಕಡ ೮.೬ ರಷ್ಟು.  ಭಾರತೀಯ ಸಂಸ್ಕೃತಿ ಕುಟುಂಬ ವ್ಯವಸ್ಥೆಗೆ ಪ್ರಸಿದ್ಧಿಯಾಗಿದ್ದು ಬಂಧ ಸಂಬಂಧ ಅನುಬಂಧಗಳ ಔನ್ನತ್ಯವನ್ನು ಔಚಿತ್ಯವನ್ನು ಅರಿತು ಗೌರವಿಸುವ ಸಂಪ್ರದಾಯ ನಮ್ಮದು.  ಹಿಂದಿನ ಕೂಡು ಕುಟುಂಬಗಳಲ್ಲಿ ಮನೆಯ ಹಿರಿಯರು ಮಾತ್ರವಲ್ಲದೆ ಬಾದರಾಯಣ ಸಂಬಂಧದ ನೋಡಿಕೊಳ್ಳುವವರಿರದ ಹಿರಿಯ ಜೀವಗಳನ್ನೂ ಮನೆಯಲ್ಲಿಟ್ಟುಕೊಳ್ಳುತ್ತಿದ್ದ ಪದ್ದತಿ ಇತ್ತು.  “ಮನೆಗೊಂದು ಮುದಿಗೊರಡು, ಒಲೆಗೊಂದು ವದೆಗೊರಡು” ಎಂಬುದು ಜನಜನಿತ ನಾಣ್ಣುಡಿ. ಸೌದೆ ಒಲೆಯನ್ನು ಹೊತ್ತಿಸುವಾಗ ಒಂದು ಭದ್ರವಾದ ತುಂಡನ್ನು ಆಧಾರವಾಗಿರಿಸಿ ಅದರ ಮೇಲೆ ಚಿಕ್ಕಪುಟ್ಟ ಸೌದೆಗಳನ್ನಿರಿಸಿ ಕೂರಿಸುವುದು ವಾಡಿಕೆ.  ಆ ಬುನಾದಿಯಲ್ಲಿ ಸೌದೆಗಳು ಅತ್ತಿತ್ತ ಉರುಳಿ ಹೋಗದೆ ಉರಿ ಸ್ಥಿರವಾಗಿರುತ್ತಿತ್ತು . ಅಂತೆಯೇ,  ಅನುಭವದಲ್ಲಿ ನುರಿತ ವಯಸ್ಸಾದ ಅಜ್ಜ ಅಜ್ಜಿ ಮನೆಯಲ್ಲಿದ್ದರೆ ಉಳಿದವರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿತ್ತು

ಹಾಗಾಗಿ ಆಗಿನಿಂದಲೂ ಹಿರಿಯರನ್ನು ಗೌರವಿಸುವ ಪರಿಪಾಠದಲ್ಲಿ ವೃದ್ಧಾಶ್ರಮ ಎಂಬುದು ಕಲ್ಪನೆ ಕನಸುಗಳಲ್ಲೂ ಊಹಿಸಲೂ ಸಾಧ್ಯವಿರಲಿಲ್ಲ .

ಹಾಗಾದರೆ ಇಂದಿನ ಈ ಪರಿಸ್ಥಿತಿಗೆ ಕಾರಣವೇನು ಎಂದು ವಿಶ್ಲೇಷಿಸುತ್ತಾ ಹೊರಟಾಗ

೧. ಹೆಚ್ಚುತ್ತಿರುವ ನಗರಗಳ ಕಡೆಗೆ ವಲಸೆ:

ಮುಂಚೆಲ್ಲಾ ಕುಲ ಕಸುಬು ವ್ಯಾಪಾರ  ವ್ಯವಸಾಯ ಎಂದು ಹುಟ್ಟೂರಲ್ಲೇ ಇರುವ ಸಂಧರ್ಭದಲ್ಲಿ ಹೊಂದಾಣಿಕೆಯಿಂದ ಇರುವ ಕಡೆಯೇ ಇರುತ್ತಿದ್ದರು. ಮನೆಯ ಮುಖ್ಯಸ್ಥನ ಕೈಲೆ ಅಧಿಕಾರವು ಇರುತ್ತಿತ್ತು. ಹಾಗಾದಾಗ ಬೇರೆ ಕಡೆ ವಾಸಿಸುವ ಸಂಧರ್ಭ ಬರುತ್ತಿರಲಿಲ್ಲ.  ಈಗ ವಿದ್ಯಾಭ್ಯಾಸ ಉದ್ಯೋಗದ ನಿಮಿತ್ತ ನಗರಗಳಲ್ಲೆ ವಾಸಿಸುವ ಸಂಧರ್ಭಗಳು,  ಆರ್ಥಿಕವಾಗಿ ತಂದೆತಾಯಿಯರನ್ನು ಅವಲಂಬಿಸದ ಉದ್ಯೋಗ, ಇವು ಪರಸ್ಪರ ಅವಲಂಬನೆಯ ಅನಿವಾರ್ಯತೆಯನ್ನು ತಪ್ಪಿಸಿವೆ.  “ಕಾಲಾಯಾತಸ್ಮೈನಮಃ”  ಎಂಬಂತೆ ತಮ್ಮ ಸ್ವಾತಂತ್ರ ಸ್ವೇಚ್ಛೆಗೆ ಅಡ್ಡಿ ಎಂತಲೋ ಸ್ಥಳಾವಕಾಶ ಮತ್ತು ಆರ್ಥಿಕ ಅಡಚಣೆಗಳೋ ಪೋಷಕರನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತಿದೆ . ಅಲ್ಲದೆ ತಮಗೆ ಅಭ್ಯಾಸವಿಲ್ಲದ ಪದ್ದತಿಯ ಜೀವನ ಹಿರಿಯರನ್ನು ಹೊಂದಿಕೊಳ್ಳಲಾಗದಂತೆ ಇಂತಹ ಪರಿಸ್ಥಿತಿಗೆ ತಳ್ಳುತ್ತದೆ. 

೨.ಕುಸಿಯುತ್ತಿರುವ ನೈತಿಕ ಮೌಲ್ಯಗಳು :

ತಂದೆ ತಾಯಿ ತಮ್ಮ ಜವಾಬ್ದಾರಿ ಎಂಬ ಗುರುತರ ಮೂಲ ಭಾವನೆಯೇ ನಶಿಸಿಹೋಗುತ್ತಿದೆ.  ತಾನು ಎಂಬ ಸ್ವಾರ್ಥ ಮಾತ್ರ ಅಲ್ಲಿ ತಾಂಡವವಾಡುತ್ತಾ ತಮಗಾಗಿ ಬೆವರಲ್ಲ ರಕ್ತ ಸುರಿಸಿದ ತಂದೆತಾಯಿಗಳ ಅವಗಣನೆಯಾಗುತ್ತಿದೆ. ತಮ್ಮನ್ನು ಬೆಳೆಸಿದ್ದು ಅವರ ಕರ್ತವ್ಯ ಎಂಬ ಸೋಗಲಾಡಿತನದ ಹಕ್ಕು ತೋರುವ ಯುವಜನತೆ ತಾವು ಅವರ ಯೋಗಕ್ಷೇಮ ನೋಡಿಕೊಳ್ಳಬೇಕೆನ್ನುವ ಕರ್ತವ್ಯವನ್ನು ಮಾತ್ರ ಮರೆಯುತ್ತಿದ್ದಾರೆ

೩.ನ್ಯೂಕ್ಲಿಯರ್ ಕುಟುಂಬ ನ್ಯಾನೋ ಕುಟುಂಬಗಳು ಅದೆಷ್ಟು ಪ್ರಚಲಿತವಾಗಿದೆ ಎಂದರೆ ಕೂಡುಕುಟುಂಬಗಳು ಅಲ್ಲೋ ಇಲ್ಲೋ ಒಂದೊಂದು ಅಥವಾ ತೆರೆಯ ಮೇಲೆ ನೋಡಿ ಆನಂದಿಸಲು ಮಾತ್ರ ಎಂಬಂತಾಗಿದೆ.

೪. ಕೆಲವೊಂದು ಅನಿವಾರ್ಯ ಪ್ರಸಂಗಗಳು ಇಬ್ಬರೂ ಹೊರಗೆ ಹೋಗಿ ದುಡಿಯುವ ಬೇರೆ ಯಾವುದೋ ಊರು ದೇಶದಲ್ಲಿ ನೆಲೆಸಿರುವಾಗ ಪೋಷಕರಿಗೆ ಅಲ್ಲಿ ಹೋಗಲು ಸಾಧ್ಯ ಆಗದಿರಬಹುದು ಕೆಲವು ಕುಟುಂಬಗಳಲ್ಲಿ ಪರಸ್ಪರ ಹೊಂದಾಣಿಕೆ ಇರದೆ ದಿನನಿತ್ಯದ ವಿರಸ ಪ್ರಸಂಗಗಳಲ್ಲಿ ಬೇಯುವ ಬದಲು ದೂರವಿರುವುದೇ ಕ್ಷೇಮ ಎಂದು ಎನಿಸಬಹುದು.

ಒಟ್ಟಿನಲ್ಲಿ ಮುಖ್ಯ ಮನಸ್ಸು ಇರಬೇಕು ಹೊಂದಾಣಿಕೆ ಸಹನೆ ಎರಡೂ ಕಡೆಗಳಿಂದಲೂ ಇರಬೇಕು ಹಾಗಾಗದಾಗ ನಿತ್ಯ ಸಾಯುವ ಬದಲು ದೂರವಿದ್ದು ಕನಿಷ್ಠ ಪ್ರೀತಿ  ಉಳಿಸಿಕೊಳ್ಳುವ ಎನಿಸಿಬಿಡುತ್ತದೆ .

ಸಾಮಾಜಿಕ ವ್ಯವಸ್ಥೆಯಲ್ಲಿ ಅಜ್ಜಿ ತಾತ ನೀಡುವ ಜೀವನಪ್ರಜ್ಞೆ ಪಾಠ ಚಿಕ್ಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮದೇ ತಪ್ಪು ಉದಾಹರಣೆಗಳ ಮೂಲಕ, ಅಂದರೆ  ತಮ್ಮ ತಂದೆ ತಾಯಿಯರನ್ನು ದೂರವಿಡುವ ಮೂಲಕ ಮುಂದೆ ತಮ್ಮದೇ ಮಕ್ಕಳು ತಮ್ಮನ್ನು ದೂರವಿರಿಸುವ ಪಾಠವನ್ನು ಕಲಿಸುತ್ತಿದ್ದಾರೆ ಎಂದರೆ ಅದು ಅತಿಶಯೋಕ್ತಿ ಯೇನಲ್ಲ. ಇಂಗ್ಲಿಷಿನ ನಾಣ್ಣುಡಿಯೊಂದರ ಪ್ರಕಾರ

Those who respect the elderly pave their own road towards success.

ಅಂದರೆ ಹಿರಿಯರನ್ನು ಗೌರವಿಸುವುದರ ಮೂಲಕ ಯಶಸ್ಸಿನ ಹಾದಿಯನ್ನು ಕಂಡುಕೊಳ್ಳಬಹುದು ಎಂದು .

ಸರಿ ಒಟ್ಟಿಗೆ ಬಾಳಲು ಸಾಧ್ಯವಿಲ್ಲ!  ವೃದ್ಧ ಜೋಡಿಗಳಿಗೆ ತಮ್ಮದೇ ಸಂಪಾದನೆ ಮನೆ ಇದ್ದರೆ ಕೈಲಾಗುವ ತನಕ ಇರಬಹುದು.  ಅದೂ ಇಲ್ಲದೆ ಒಮ್ಮೆಲೆ ಬೀದಿಗೆ ಬಿದ್ದಂತಾದರೆ?  ಆಗ ಉಚಿತ ವೃದ್ಧಾಶ್ರಮಗಳು ಇವರಿಗೆ ದೊರೆಯುವ ಆಸರೆ .

ಎಷ್ಟೋ ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳು ಮಾನವೀಯತೆಯ ದೃಷ್ಟಿಯಿಂದ ಹಲವಾರು ಜೀವಗಳಿಗೆ ಬಾಳ ಮುಸ್ಸಂಜೆಯಲ್ಲಿ ಆಧಾರವಾಗಿ ಜೀವನದ ಕಡೆಯ ದಿನಗಳಲ್ಲಿ ಒಂದಿಷ್ಟು ನೆಮ್ಮದಿ ನೀಡಿದೆ .

ಇನ್ನು ನಿಯಮಿತ ಆದಾಯವಿದ್ದು ತಾವೇ ಸ್ವತಂತ್ರವಾಗಿ ಇರಲಾರದೆ ಹೋಗುವ ಪರಿಸ್ಥಿತಿಯಲ್ಲಿ ಹಣ ಪಾವತಿಸಿ ಉಳಿಯುವ ಅದೆಷ್ಟೋ ಮುಸ್ಸಂಜೆ ಮನೆಗಳಿವೆ . ನಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡು ಇರಬಹುದು.  ಪರದೇಶಗಳಲ್ಲಿ ಮಕ್ಕಳು ನೆಲೆಸಿರುವಾಗ ಅಥವಾ ಮಕ್ಕಳಿಲ್ಲದ ಎಷ್ಟೋ ದಂಪತಿಗಳು ಅಥವಾ ಒಂಟಿ ಜೀವಿಗಳು ಈಗ ಆಯ್ಕೆ ಮಾಡಿಕೊಳ್ಳುತ್ತಿರುವುದು ಇಂತಹ ವೃದ್ಧಾಶ್ರಮಗಳನ್ನೇ.  Accept the inevitable ಎಂಬಂತೆ ಹೊಂದಿಕೆಯ ಹೊಂದಾಣಿಕೆಯ ಗೌರವಯುತ ಜೀವನಕ್ಕೆ ಇವು ಸಹಕಾರಿ. ದೂರವಿದ್ದು ಸೌಹಾರ್ದಯುತ ಸಂಬಂಧಗಳನ್ನು ಕಾಯ್ದುಕೊಳ್ಳಬಹುದು ಒಟ್ಟಿಗಿದ್ದು ದಿನವೂ ಕಾದಾಡಿ ಸಂಬಂಧ ಮುರಿದುಕೊಳ್ಳುವ ಬದಲು .

ನಮ್ಮ ಸಂಸ್ಕೃತಿಯಲ್ಲಿ ಜೀವನವನ್ನು 4 ಆಶ್ರಮಗಳಲ್ಲಿ ವಿಂಗಡಿಸಿದ್ದಾರೆ .ಬ್ರಹ್ಮಚರ್ಯ ಗೃಹಸ್ಥ ವಾನಪ್ರಸ್ಥ ಮತ್ತು ಸನ್ಯಾಸ. ಈಗ ಸನ್ಯಾಸಾಶ್ರಮದ ಪರಿಕಲ್ಪನೆ ಇಲ್ಲ. ಆದರೆ ಜೀವನದ ಮುಸ್ಸಂಜೆಯ ವಾನಪ್ರಸ್ಥದಲ್ಲಿ ಹಿಂದಿನವರು ಎಲ್ಲಾ ಬಂಧನಗಳನ್ನು ತೊರೆದು ಕಾಡಿಗೆ ಹೋಗುತ್ತಿದ್ದರು. ಇಂದಿನ ಪರಿಸ್ಥಿತಿಗೆ ತಕ್ಕಂತೆ ವೃದ್ಧಾಶ್ರಮಕ್ಕೆ ಹೋದರೆ ಆಯಿತು. ಹಾಗೆಂದು ನಾನು ವೃದ್ಧಾಶ್ರಮಗಳನ್ನೇನೂ ಸಮರ್ಥಿಸುತ್ತಿಲ್ಲ . ಅದು ಕಟ್ಟಕಡೆಯ ಆಯ್ಕೆ. ಕುಟುಂಬದಲ್ಲಿ ಎಲ್ಲಾ ಒಟ್ಟಿಗಿರುವ ಆ ಸುಂದರ ಸಂದರ್ಭಗಳೇ ಸೊಗಸು.  ಎಲ್ಲಾ ತಲೆಮಾರಿನ ವರು ಇರುವ ಕುಟುಂಬವೊಂದು ವೃಕ್ಷದಂತೆ. “ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಇದು ಸಾರ್ವಕಾಲಿಕ ಸತ್ಯ. ಆದರೆ ವಿಧಿಯೇ ಇಲ್ಲ ಎಂದಾಗ  “ಬಪ್ಪುದು ತಪ್ಪದು” ಎಂದು ನಿಜಸ್ಥಿತಿಯನ್ನು ಒಪ್ಪಿಕೊಂಡು ಡಿವಿಜಿಯವರ ಕಗ್ಗದ ಈ ನುಡಿ ಅಳವಡಿಸಿಕೊಳ್ಳಬಹುದಲ್ಲವೇ

ಉಣುವುದುಡುವುದು ಪಡುವುದಾಡುವುದು ಮಾಡುವುದು

ಋಣಗಳೆಲ್ಲವು ಪೂರ್ವಸಂಚಿತಾಂಶಗಳು ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ

ಗೊಣಗಾಟವಳಿಸುವುದೆ _ಮಂಕುತಿಮ್ಮ 

ಹಾಗಾಗಿಯೇ ಅನಿವಾರ್ಯವೆಂದಾಗ ವೃದ್ಧಾಶ್ರಮವನ್ನು “ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ” ಎಂದು ಆಪ್ಯಾಯತೆ ಅಕ್ಕರೆಯಿಂದ ಅಪ್ಪಿಕೊಂಡರೆ ಮನದ ಕಹಿ ಋಣಾತ್ಮಕತೆ ತೊಲಗಿ ಧನಾತ್ಮಕತೆ ಮೂಡುತ್ತದೆ. ಸಮವಯಸ್ಸಿನ ಸಮಾನ ಮನಸ್ಕರ ಸಹವಾಸ ಸಂಜೀವಿನಿಯಂತೆ ಕೆಲಸ ಮಾಡುತ್ತದೆ . ಉತ್ತಮ ಹಾಗೂ ತತ್ ಕ್ಷಣದ ವೈದ್ಯಕೀಯ ಸೌಲಭ್ಯ ಮತ್ತೊಂದು ಬೋನಸ್. “ಎಲ್ಲರೊಳಗೊಂದಾಗು ಮಂಕುತಿಮ್ಮ” ಎಂಬ ತತ್ವ ಅಳವಡಿಸಿಕೊಂಡರೆ ಜೀವನ  ಅರ್ಥಪೂರ್ಣವಾಗಿ ಕಳೆದು ಬಾಳಿನ ಸಾರ್ಥಕತೆ ಕಂಡುಕೊಳ್ಳಬಹುದಾಗಿದೆ .ಕಾಲದ ಪಯಣದಲ್ಲಿ ಕಾಣುವ ಹೊಸ ದೃಶ್ಯ ಎಂದು ಮುನ್ನಡೆಯುತ್ತಿದ್ದರೆ ಬಾಳು ಸುಖವಹುದು ಸೃಷ್ಟಿ ಸೊಗಮಿಹುದು ಅಲ್ಲವೇ ?

ಹಾಗೆಯೇ ಬರೀ ವಿದ್ಯಾಭ್ಯಾಸ, ಡಿಗ್ರಿ ಗಳಿಕೆ ಹಣ ಸಂಪಾದನೆಯಷ್ಟೇ ಜೀವನದ ಸಾಫಲ್ಯ ಎಂದು ಅದರ ಹಿಂದೆ ಕಣ್ಣುಕಟ್ಟಿ ಓಡುವ ಅಭ್ಯಾಸವನ್ನು ಬಿಟ್ಟು ಜೀವನದ ಮೌಲ್ಯ, ಮಾನವೀಯತೆ ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಕಡೆ ಗೌರವ ಇವುಗಳನ್ನು ನಮ್ಮ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಬೇರೂರಿಸಿದರೆ ಈ ಅಭಿಶಾಪವನ್ನು ಮುಂದಿನ ದಿನಗಳಲ್ಲಾದರೂ ಖಂಡಿತ ನಿವಾರಿಸಬಹುದು . ಆ ನಿಟ್ಟಿನಲ್ಲಿ ನಮ್ಮ ನಡೆನುಡಿಗಳಿರಲಿ .


ಸುಜಾತಾ ರವೀಶ್ .

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಪ್ರಕಟಣೆಗಾಗಿ ಸಂಪಾದಕರಿಗೆ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top