ಕಥಾ ಸಂಗಾತಿ
ಆದಪ್ಪ ಹೆಂಬಾ ಮಸ್ಕಿ
ವಿಳಾಸವಿಲ್ಲದ ಪತ್ರ
ಅವಳೆಂದರೆ ಅವನಿಗೆ ಪ್ರಾಣ. ಅವನದು ಸದಾ ಅವಳದೇ ಧ್ಯಾನ. ಅವಳದೆಲ್ಲವೂ ಅವನಿಗಿಷ್ಟ. ಅವಳ ನಗು,ಅವಳ ಮೂಗು, ಅವಳ ಕಣ್ಣು, ಅವಳ ನೋಟ, ಅವಳ ಮಾತು, ಅವಳ ಮೌನ, ಕೊನೆಗೆ ಅವಳು ಸಾಕಿದ ಮುದ್ದು ನಾಯಿಮರಿ ಕೂಡ. ಅವಳದಾಗಿದ್ದರೆ ಸಾಕು ಷರತ್ತುಗಳೇ ಇಲ್ಲದೆ ಒಪ್ಪಿಗೆ ಅವನಿಗೆ. ಅವಳೆಂದರೆ ಅವನಿಗೆ ಇಡಿಯಾಗಿ ಇಷ್ಟ. ಅಷ್ಟಕ್ಕೂ ಅವಳು ಅಪ್ರತಿಮ ಸುಂದರಿಯೇ ? ಯಾರೇನೇ ಹೇಳಲಿ ಅವನ ಪಾಲಿಗವಳು ವಿಶ್ವ ಸುಂದರಿಯೇ. ಅವಳ ನಗುವಿನ ಮುಂದೆ ಅವನಿಗೆ ಮೊನಾಲಿಸಾಳ ನಗುವೂ ಸಪ್ಪೆ ಸಪ್ಪೆ. ಅವಳ ಧ್ವನಿ ಕೇಳಲು ಕೋಗಿಲೆಗಳೂ ನಿತ್ಯ ಅವಳ ಬೆಡ್ ರೂಮಿನ ಕಿಟಕಿಗಳ ಮೇಲೆ ಕುಳಿತಿರುತ್ತವಂತೆ. ಅಷ್ಟು ಮಧುರವಂತೆ. ಇನ್ನವಳ ಮೌನದ ಮುಂದೆ ಗಿರಿ ಶಿಖರಗಳೂ ತಲೆಬಾಗುತ್ತವಂತೆ !
ಮಿತಿ ಇರಬೇಕಿತ್ತು.ಆದರೆ ಇಲ್ಲಿಲ್ಲ. ದೊಡ್ಡವರು ಹೇಳುವಂತೆ ಪ್ರೇಮಕ್ಕೆ ಕಣ್ಣಿಲ್ಲ !
ಅಷ್ಟಕ್ಕೂ ಅವಳದು ಅಂಥ ಆಕರ್ಷಕ ನಿಲುವೇನಲ್ಲ, ಬೇಲೂರು ಬಾಲಿಕೆಯಂತಹ ಮೈಮಾಟವೂ ಇಲ್ಲ. ಆದರೂ ಅವನೇಕೆ ಅವಳನ್ನು ಧ್ಯಾನಿಸುತ್ತಿದ್ದಾನೆ ? ಮುಂದುವರಿದು ಅವಳನ್ನೇಕೆ ಪ್ರೇಮಿಸುತ್ತಿದ್ದಾನೆ ? ಯಾಕೆಂದರೆ ಅವನಿಗೆ ಅದ್ಯಾವುದೂ ಬೇಕಿಲ್ಲ. ಬೇಕಿರುವುದು ಅವಳ ನಿಷ್ಕಲ್ಮಶ ನಗು, ಇವನೆಡೆಗಿನ ಅವಳ ಕೋಲ್ಮಿಂಚಿನ ನೋಟ, ನಿನ್ನ ಹತ್ತಿರವೇ ಇರುವೆ ಎನ್ನುವ ಅವಳ ಭಾವ ಇಂಚರ. ಅವಳಿಗೂ ಅಷ್ಟೇ. ಇವನ ಸನಿಹವನ್ನು ಇಷ್ಟ ಪಡುವ ಮನಸು. ಇವನಿಲ್ಲದ ದಿನಗಳೆಂದರೆ ಅವಳಿಗೂ ಕಷ್ಟವೇ. ತುಟಿ ಬಿಚ್ಚಿ ಹೇಳಲಾರಳಷ್ಟೆ. ಊರಿನ ಶಿವಾಲಯ ಇವರ ನಿತ್ಯ ಭೇಟಿಯ ತಾಣ. ಒಂದು ದಿನ ಇವರು ಬರದೇ ಹೋದರೆ ಆ ಶಿವನಿಗೂ ಕಸಿವಿಸಿ. ಸಾಕಷ್ಟು ಪ್ರೇಮಿಗಳನ್ನು ಆ ಶಿವ ನೋಡಿರಬಹುದು. ಆದರೆ ಉಳಿದವರಿಗಿಂತ ಇವರು ತುಂಬಾ ಭಿನ್ನ. ಒಂದು ದಿನವೂ ಮೈ-ಕೈ ತಾಗಿಸಿದವರಲ್ಲ, ಪ್ರೇಮದ ಪಿಸು ಮಾತುಗಳನ್ನೂ ಆಡಿದವರಲ್ಲ. ಇವರೆಂಥ ಪ್ರೇಮಿಗಳಪ್ಪ ಎನ್ನುವಷ್ಟು ದೂರ ದೂರ. ಅಸಲು ಅವರು ಪ್ರೇಮಿಗಳಲ್ಲ ! ಪರಸ್ಪರ ಇಷ್ಟಪಡುವವರು. ಅವನೆಂದರೆ ಇವಳು, ಇವಳೆಂದರೆ ಅವನು ಪ್ರಾಣ ಹೋಗುವಷ್ಟು ಇಷ್ಡ ಪಡುತ್ತಾರೆ ಅಷ್ಟೆ !
ಇವರಿಬ್ಬರು ಸಂಧಿಸುತ್ತಿದ್ದದ್ದು ದಿನದ ಒಂದು ಗಂಟೆ ಮಾತ್ರ. ಶಿವಾಲಯದ ಪ್ರಾಂಗಣದ ಪಕ್ಕದಲ್ಲಿದ್ದ ಕಾಂಕ್ರೀಟ್ ಬೆಂಚೇ ಅವರ ಮಾತಿಗೆ ಜಾಗ. ಆ ತುದಿಗೆ ಅವನು ಈ ತುದಿಗೆ ಅವಳು. ಒಂದಷ್ಟು ಮಾತು, ಒಂದಷ್ಟು ನಗು, ಒಂದಷ್ಟು ಮೌನ. ನಡು ನಡುವೆ ಅವಳ ಕಣ್ಣೋಟದ ಕೋಲ್ಮಿಂಚು. ಕೊನೆಗೊಂದಷ್ಟು ಸಮಾಧಾನ. ಅವಳು ಆಗತಾನೆ ಡಿಗ್ರಿ ಮುಗಿಸಿ ಮನೇಲೇ ಕೆಲಸ ಮಾಡುತ್ತಿದ್ದ ಹುಡುಗಿ. ಇವನು ಸರಕಾರಿ ಕಛೇರಿಯೊಂದರಲ್ಲಿ ಒಂದು ವರ್ಷದಿಂದ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಹುಡುಗ. ಇಬ್ಬರಿಗೂ ಮದುವೆಯಾಗಿಲ್ಲ. ಆದರೆ ಮದುವೆಯಾಗುವ ವಿಚಾರ ಅವರಲ್ಲಿಲ್ಲ. ಇವರದು ಗೆಳತನವಾ ?…. ಅಲ್ಲ. ಪ್ರೇಮಿಗಳಾ ?…. ಅಲ್ಲ ಇವರ ಸಂಬಂಧವನ್ನು ಡಿಫೈನ್ ಮಾಡುವದೇ ಕಷ್ಟ ಎನ್ನುವಂಥ ಸಂಬಂಧ. ನಿತ್ಯ ಸಂಜೆ ಆರು ಗಂಟೆಯಿಂದ ಏಳು ಗಂಟೆಗೆ ಇವರು ಆ ಬೆಂಚಿನ ಮೇಲೆ ಕುಳಿತುಕೊಳ್ಳದಿದ್ದರೆ ಆ ಬೆಂಚೇ ಚಡಪಡಿಸುತ್ತಿತ್ತು. ಅಷ್ಡು ಕರಾರುವಕ್ಕು. ಸಂಬಂಧದಲ್ಲಿ ಅಷ್ಟೇ ನಿಯತ್ತು. ಇವನ ಮನೆಯಲ್ಲಿ ಅಮ್ಮ ಮತ್ತು ಅವನು ಮಾತ್ರ ಇರುವುದು ಅವಳಿಗೆ ಗೊತ್ತು. ಅವಳದು ಎರಡು ತಲೆಮಾರಿನಿಂದಲೂ ಬೇರೆಯಾಗದ ಕೂಡು ಕುಟುಂಬ, ಮನೆ ತುಂಬಾ ಜನ, ಮಕ್ಕಳೂ ಸೇರಿದಂತೆ ನಲವತ್ತೈದು ಜನರಿರುವ ಕುಟುಂಬ ಅವಳದೆಂದು ಅವನಿಗೂ ಗೊತ್ತು. ಆದರೆ ಇವರಿಬ್ಬರ ಸ್ನೇಹ ಆ ಕುಟುಂಬಗಳಲ್ಲಿ ಯಾರಿಗೂ ಗೊತ್ತಿಲ್ಲ. ಅಂದರೆ ಇವರು ಕದ್ದು ಮುಚ್ಚಿ ಸಂಧಿಸುತ್ತಿದ್ದರೇನು ? ಇಲ್ಲ. ಅದರ ಅಗತ್ಯ ಅವರಿಗೆ ಇರಲಿಲ್ಲ..
ಅವತ್ತೂ ಅಷ್ಟೆ ಅವನು ಎಂದಿನಂತೆ ಸರಿಯಾದ ಸಮಯಕ್ಕೆ ಆ ಶಿವಾಲಯಕ್ಕೆ ಹೋದ. ಅದೇ ಬೆಂಚು. ಅವಳು ಬಂದಿರಲಿಲ್ಲ ! ಯಾಕೆ ಎಂದುಕೊಳ್ಳುವಷ್ಟರಲ್ಲಿ ಫೋನ್ ರಿಂಗಣಿಸಿತು. ಅವಳೇ ! “ಹಲೋ ಬಂದಿದೀರಾ?”
“ಹೂಂ…. ನೀವ್ಯಾಕೆ ಬಂದಿಲ್ಲ?”
“ಸ್ವಲ್ಪ ಕೆಲಸ ಇತ್ತು ಅದಕ್ಕೇ ಆಗಲಿಲ್ಲ”
“ಹೌದಾ…..ಸರಿಬಿಡಿ. ನಾಳೆ ಬರತೀರಿ ತಾನೆ ?”
“ಖಂಡಿತ ಬರತೇನೆ”
“ಸರಿ ಸೀ ಯು ಟುಮಾರೋ ದೆನ್”
“ಓಕೆ ಬಾಯ್”
ಮುಗಿಯಿತು ಮಾತುಕತೆ.
ಅವಳಿಲ್ಲದ ಐವತ್ತೈದು ನಿಮಿಷಗಳನ್ನು ಆ ಬೆಂಚಿನ ಮೇಲೆ ಕಳೆಯುವುದು ಹೇಗೆ ? ಕಷ್ಟ ಕಷ್ಟ ಎಂದು ಕೊಂಡ. ಮನೆಗೆ ಹೊರಡಲನುವಾದ. ಆದರೆ ಈ ಬಾರಿ ಮನೆಯ ದಾರಿ ಬದಲಾಯಿಸಿದ. ಸುತ್ತು ಹಾಕಿದರೂ ಪರವಾಯಿಲ್ಲ ಅವಳ ಮನೆ ಮುಂದೆ ಹಾದು ಹೋದರಾಯಿತು ಅಂದು ಕೊಂಡ. ಬೈಕ್ ಏರಿದ. ಅವಳ ಮನೆ ಹತ್ತಿರವಿದ್ದಾಗ ಬೈಕ್ ನ ಸ್ಲೋ ಮಾಡಿದ. ಹಾರ್ನ್ ಹಾಕಿದ. ಅವಳು ಹೊರಗೆ ಬರುವಳೇನೋ ಎಂಬ ತವಕ. ಅವಳು ಬರಲಿಲ್ಲ ಇವನಿಗೆ ಕಾಣಲೂ ಇಲ್ಲ. ಅವನ ಪಾಲಿಗದು ಒಂದು ನಿರಾಸೆಯ ದಿನ…..ಅಷ್ಟೇ. ಮರು ದಿನ ಅವನ ಪಾಲಿಗೆ ಮಾಮೂಲಿನಂತಿರಲಿಲ್ಲ.ಇವತ್ತು ಏನೇನೋ ಕೇಳಿಬಿಡೋಣ ಅಂದುಕೊಂಡ. ನಿರಾಳವಾಗಿದ್ದ. ಸಂಜೆ ಸರಿಯಾಗಿ ಆರು ಗಂಟೆ. ಅದೇ ಬೆಂಚು. ಅವೇ ತುದಿಗಳಲ್ಲಿ ಇಬ್ಬರೂ.ಇವತ್ತು ಅವನದೇ ಮಾತು,
“ಏಳೆಂಟು ತಿಂಗಳಾಯಿತಲ್ವ ? ನಾವು ಈ ರೀತಿ ಬೇಟಿಯಾಗ್ತಿರೋದಕ್ಕೆ ?”
“ಹೌದಾ ಏಳೆಂಟು ತಿಂಗಳಾಯ್ತಾ ? ಗೊತ್ತೇ ಆಗಿಲ್ಲ,” ಎಂದಳವಳು.
“ನನ್ನ ಮೇಲೆ ನಿಮಗೆ ನಂಬಿಕೆ ಇದೆಯಾ?” ಅಂದ
“ಯಾವ ವಿಚಾರಕ್ಕೆ…..?”
“ಇಂಥಾದ್ದೇ ಅಂತಿಲ್ಲ ಟೋಟಲ್ಲಾಗಿ… ನಂಬಿಕೆ ಇದೆಯಾ?”
“ಖಂಡಿತ ಇದೆ. ಈಗ್ಯಾಕೆ ಆ ಮಾತು ,? ” ಅಂದಿತು ಆ ಹುಡುಗಿ.
“ಏನಿಲ್ಲ ನಿಮಗೆ ದೇವಸ್ಥಾನ ಅಂದ್ರೆ ಇಷ್ಟಾನಾ ? ಅದಕ್ಕೇ ನೀವಿಲ್ಲಿಗೆ ಬರ್ತೀರಾ,? “
“ದೇವಸ್ಥಾನ ನೂ ಇಷ್ಟ….. ನೀವೂ ಇಷ್ಟ….. ಯಾಕೆ ಇವತ್ತು ಹೀಗೆ ಮಾತಾಡತಾ ಇದೀರಿ ?”
“ನನಗೂ ಅಷ್ಟೇ ನೀವಂದ್ರೆ ಇಷ್ಟ. ಆದರೆ ನಾನು ಎಲ್ಲರಂತಲ್ಲ. ನಾನು ನಿಮ್ಮನ್ನು ಪ್ರೇಮಿಸುತ್ತೇನೆ…… ಆದರೆ ಮೋಹಿಸುವುದಿಲ್ಲ…. ! ನಿಮ್ಮ ಸನಿಹವನ್ನು ಬಯಸುತ್ತೇನೆ. ಆದರೆ ನಿಮ್ಮನ್ನು ಬಯಸುವುದಿಲ್ಲ. Ours must be true love without any attractions or sexual thoughts. ಏನಂತೀರಿ ?” ಧೃಡವಾಗಿ ನಿರಾಳವಾಗಿ ಹೇಳಿದ.
ಅವಳೂ ಅಷ್ಟೇ ಕೂಲಾಗಿ
“ನನಗೆ ಗೊತ್ತಿತ್ತು” ಅಂದ್ಲು.
“ಅಂದ್ರೆ ನಿಮಗೆ ನನ್ನ ಮೇಲೆ ನಂಬಿಕೆ ಇದೆ ಅನ್ನಿ”
“ಖಂಡಿತ”
“ಹಾಗಾದ್ರೆ ಧರ್ಮಸ್ಥಳ, ಶೃಂಗೇರಿ, ಹೊರನಾಡು ಅಂತ ಮೂರು ದಿನ ಸುತ್ತಿ ಬರೋಣವಾ ? “
“………………..” ಮೌನ.
ಮುಕ್ಕಾಲು ಗಂಟೆಯಾಯ್ತು. ಒಬ್ಬರದೂ ಮಾತಿಲ್ಲ. ಮನೆಗೆ ಹೊರಡುವ ಸಮಯ ಬಂತು.
“ನಾಳೆ ಒಂದು ದಿನ ಟೈಮ್ ಕೊಡಿ. ಮನೇಲಿ ಏನಾದ್ರೂ ಹೇಳ್ತೀನಿ, ನಾಡಿದ್ದು ಹೋಗೋಣ ರೆಡಿ ಇರಿ. ನಿಮ್ಮ ಮೇಲೆ ನನಗೆ ನಂಬಿಕೆ ಇದೆ” ಅಂದು ನಕ್ಕಳವಳು. ಈ ಬಾರಿ ಮಿಂಚು ಅವಳ ಕಂಗಳಿದಲ್ಲ ಅವಳ ಮುಗುಳು ನಗೆಯಿಂದ ಹೊರಹೊಮ್ಮಿತು.
ಅವರಿಬ್ಬರ ಪಯಣವೀಗ ಧರ್ಮಸ್ಥಳದ ಕಡೆಗೆ. ಧರ್ಮಸ್ಥಳ ತಲುಪುವ ಹೊತ್ತಿಗೆ ಮುಂಜಾವಿಗೆ ಮಂಜು ಕವಿದಿತ್ತು. ಬಸ್ಸಿನಿಂದ ಇಳಿದವರೇ ಬಿಸಿ ಬಿಸಿ ಕಾಫೀ ಕುಡಿದರು. ಧರ್ಮಸ್ಥಳದ ಕಾಫೀ ಅಂದರೆ ಅವಳಿಗೆ ತುಂಬಾ ಇಷ್ಟ, ಹೀಗಾಗಿ ಅವನಿಗೂ. ಕಾಫೀ ಕುಡಿದವರೇ ನೇರ “ನೇತ್ರಾವತಿ” ವಸತಿಗೃಹಕ್ಕೆ ಹೋದರು. ಪ್ರತ್ಯೇಕ ವಾಗಿಯೇ ಇರುವ ವಿಶ್ರಾಂತಿ ಕೊಠಡಿಗಳಲ್ಲಿ ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು. ಫ್ರೆಶ್ ಆಗಿ ಇಬ್ಬರೂ ತಯಾರಾಗಿ ಮಂಜುನಾಥನ ದರ್ಶನಕ್ಕೆ ಸರದಿಯಲ್ಲಿ ನಿಂತರು. ಆಷಾಢ ಮಾಸವಾದ್ದರಿಂದಲೋ ಏನೋ ಭಕ್ತರ ಸಂಖ್ಯೆ ತುಂಬಾ ಕಡಿಮೆ ಇತ್ತು. ಧರ್ಮದರ್ಶನ, ವಿಶೇಷ ದರ್ಶನಕ್ಕಿಂತಲೂ ತುಂಬಾ ಸರಳವಾಗಿ ಆಯ್ತು. ಮಂಜುನಾಥನ ದರ್ಶನ ವಾದ ನಂತರ ಅಲ್ಲೇ ಮುಂದೆ ಇರುವ ಮತ್ಸ್ಯಾಗಾರಕ್ಕೆ ಬಂದರು. ಅಕ್ವೇರಿಯಂ ನಲ್ಲಿನ ಬಗೆ ಬಗೆಯ ಮೀನುಗಳನ್ನು ಕಂಡು ಪುಳಕಿತಳಾಗುತ್ತಿದ್ದಳು ಅವಳು. ಅವಳ ಖುಷಿ ಕಂಡು ತೃಪ್ತನಾಗುತ್ತಿದ್ದ ಅವನು. ಅಲ್ಲಿಂದ ಇಡ್ಲಿ ವಡೆ ಮತ್ತೆ ಕಾಫೀ. ಅವತ್ತು ಮದ್ಯಾಹ್ನದವರೆಗೂ ಇಡೀ ಧರ್ಮಸ್ಥಳ ಸುತ್ತಿದರು. ಪ್ರಸಾದವೂ ಆಯ್ತು.
ಅವನು, “ಸರಿ ಮುಂದೆ ಹೊರನಾಡಿಗೆ ಹೋಗೋಣವಾ ?” ಅಂದ.
ಅದಕ್ಕವಳು, “ಬೇಡ ಇವತ್ತು ಇಲ್ಲೇ ಇರೋಣ, ಈ ವಾತಾವರಣ ಬಿಟ್ಟು ಹೋಗೋಕೇ ಮನಸ್ಸೇ ಬರುತ್ತಿಲ್ಲ” ಅಂದ್ಲು. ಮದ್ಯಾಹ್ನ ವಿಶ್ರಾಂತಿಯ ನಂತರ ಸಂಜೆ ಮತ್ತೊಮ್ಮೆ ಎಲೆಕ್ಟ್ರಿಕ್ ದೀಪಗಳಿಂದ ಕಂಗೊಳಿಸುತ್ತಿರುವ ಧರ್ಮಸ್ಥಳದ ಮಾರ್ಕೆಟ್ ಸುತ್ತಾಡಿದರು. ಶಾಪಿಂಗ್ ಮಾಡಿದರು. ರಾತ್ರಿ ಊಟವಾದ ನಂತರ ಮತ್ತೆ ರೂಮಿನತ್ತ ಪಯಣ ! ಒಂದೇ ರೂಮು ! ಹರೆಯದ ಜೋಡಿ ! ಅವನು ನಿರುಮ್ಮಳವಾಗಿದ್ದ ಅವಳು ಧೈರ್ಯವಾಗಿದ್ದಳು. ಒಂದೇ ಕೋಣೆಯಲ್ಲಿ ಎರಡು ಚಾಪೆಗಳ ಮೇಲೆ ಇಬ್ಬರೂ ಮಲಗಿದರು. ಮಧ್ಯೆ ನಂಬಿಕೆ ! ಬೆಳಗಾಯಿತು. ಮತ್ತೊಮ್ಮೆ ನಿತ್ಯ ಕರ್ಮ. ಎರಡನೇ ಬಾರಿಗೆ ಮಂಜುನಾಥ ಸ್ವಾಮಿಯ ದರ್ಶನ. ಅವರ ಪಯಣವೀಗ ಹೊರನಾಡ ಕಡೆಗೆ.
ಹೊರನಾಡು ತಲುಪುವ ಹೊತ್ತಿಗೆ ಮದ್ಯಾಹ್ನದ ಸಮಯವಾಗಿತ್ತು. ಲಗುಬಗೆಯಿಂದ ಅಮ್ಮನ ದರ್ಶನ ಮಾಡಿಕೊಂಡವರೇ ಅನ್ನಪೂರ್ಣೆಯ ಪ್ರಸಾದ ಕ್ಕೆ ಕುಳಿತರು. “ವಾಹ್, ಹೊರನಾಡಿನ ಪ್ರಸಾದದ ರುಚಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ನೋಡಿ” ಎನ್ನತ್ತಾ ಚಪ್ಪರಿಸಿದರು. ಅಲ್ಲೂ ಜೊತೆ ಜೊತೆಯಾಗಿಯೇ ಸುತ್ತಿ, ಡ್ರೈ ಫ್ರೂಟ್ಸ್ ಗಳನ್ನು ಖರೀದಿಸಿದರು. ರಾತ್ರಿ ಮತ್ತೊಮ್ಮೆ ಪ್ರಸಾದ. ರಾತ್ರಿ ದೇವಸ್ಥಾನದ ಪ್ರಾಂಗಣದಲ್ಲೇ ಹಾಸಿದ ಜಮಖಾನೆಯ ಮೇಲೆ, ದಿಂಬಿಗೆ ತಲೆ ಕೊಟ್ಟು ಮಲಗಿದರು. ಯಾರೋ ಒಬ್ಬ ಪುಣ್ಯಾತ್ಮ ದೇವಸ್ಥಾನದ ಕೆಲಸಗಾರನೇ ಇರಬೇಕು ಇವರ ಮೇಲೆ ಬೆಚ್ಚಗಿನ ಚಾದರವನ್ನು ಹೊದಿಸಿ ಹೋದ. ನಿದ್ದೆ ಸುಳಿದದ್ದು ಇವರಿಗೆ ಗೊತ್ತಾಗಲೇ ಇಲ್ಲ. ಮರುದಿನ ಅಮ್ಮನ ದರ್ಶನ ಮತ್ತೊಮ್ಮೆ. ಅಲ್ಲಿಂದ ಸೀದಾ ಇವರ ಪಯಣ ಶೃಂಗೇರಿ ಶಾರದಾಂಬೆಯ ಪದತಲಕ್ಕೆ. ಅಲ್ಲೂ ಅಷ್ಟೇ ಶಾರದಾಂಬೆಯ ದರ್ಶನ, ಸುವಿಹಾರಿಯಂತ ಪಯಣ. ಇಡೀ ಪಯಣದಲ್ಲಿ ಅವರು ಸಾದಾ ಗೆಳೆಯರಂತೆ ಮಾತನಾಡುತ್ತಿದ್ದರೇ ವಿನಃ ಬೇರಾವ ಮಾತುಗಳನ್ನೂ ಆಡುತ್ತಿರಲಿಲ್ಲ. ಅವರ ಮಾತಿನಲ್ಲಿ ಧರ್ಮಸ್ಥಳದ ಶಿಸ್ತು, ಸ್ವಚ್ಛತೆ, ಕಾಫಿಯ ರುಚಿ, ಹೊರನಾಡಿನ ಸೌಂದರ್ಯ, ಆ ಊಟದ ರುಚಿ, ಡ್ರೈ ಫ್ರೂಟ್ಸ್ ಗಳು, ಹೂ ಮಾರುವ ಮುದುಕಿ, ಅವಳ ತಾಪತ್ರಯ, ಇಂಥವೇ ಇರುತ್ತಿದ್ದವೇ ಹೊರತು. ಬೇರೇನೂ ಇರುತ್ತಿರಲಿಲ್ಲ. ಇಡೀ ಪ್ರವಾಸದಲ್ಲಿ ಅವರ ಪರಿಶುದ್ಧ ಪ್ರೇಮದೊಂದಿಗೆ ನಂಬಿಕೆ ಜೊತೆ ಜೊತೆಯಾಗಿಯೇ ಪಯಣಿಸುತ್ತಿತ್ತು.
ಅವರ ಪಯಣವೀಗ ಊರಿನತ್ತ.
ಊರಿಗೆ ಬಂದು ತಲುಪುವಾಗ ನಸುಕಿನ ಆರು ಗಂಟೆಯ ಸಮಯ. ಅವಳ ಚಿಕ್ಕಪ್ಪ ಅವಳನ್ನು ಪಿಕ್ ಅಪ್ ಮಾಡಲು ಬಸ್ ಸ್ಟ್ಯಾಂಡಿಗೆ ಬಂದಿದ್ದ. ಅವಳು ಇವನಿಗೆ ಬಾಯ್ ಕೂಡ ಹೇಳದೇ ಹೋದಳು. ಇವನೂ ಮನೆಗೆ ಹೋದ. ಎಂದಿನಂತೆ ಆಫೀಸೂ ಮುಗಿಯಿತು. ಸಂಜೆ ಆರು ಗಂಟೆಯಾಯಿತು. ಅವನು ಶಿವಾಲಯಕ್ಕೆ ಬಂದ. ಅವಳು ಬರಲಿಲ್ಲ ! ಇವನಿಗೇನೋ ಚಡಪಡಿಕೆ. ನಾನೇನೂ ತಪ್ಪು ಮಾಡಿಲ್ಲವಲ್ಲ ಎನ್ನುವ ನಂಬಿಕೆ. ಸ್ವಲ್ಪ ಕಾಯೋಣ ಬರುತ್ತಾಳೆ ಇಲ್ಲವಾದರೆ ಫೋನಾದರೂ ಮಾಡುತ್ತಾಳೆ. ಎಂದು ಕುಳಿತ ಒಂಟಿಯಾಗಿ. ಹದಿನೈದು ನಿಮಿಷ ಕಾಯ್ದರೂ ಫೋನು ಬರಲಿಲ್ಲ. ತಾಳದಾದ. ತಾನೇ ಫೋನ್ ಮಾಡಿದ ಆ ಕಡೆಯಿಂದ ಸ್ವಿಚ್ಡ್ ಆಫ್!!!!
ಈ ಬಾರಿ ಅವನು ಅವಳ ಮನೆಯ ಮುಂದೆ ಹೋಗುವ ಮನಸ್ಸು ಮಾಡಲಿಲ್ಲ. ಸೀದಾ ಮನೆಗೆ ಹೋದ. “ಉಣ್ಣು ಬಾ…ಪಾ” ಎಂದ ಅಮ್ಮನಿಗೆ ಹಸಿವಿಲ್ಲ ಎಂಬ ಸಬೂಬು ಹೇಳಿ ಹಾಗೇ ಮಲಗಿದ. ನಿದ್ದೆ ಬರಲಿಲ್ಲ. ನಾಳೆ ಸಿಕ್ಕಾಳು ಬಿಡು ಎಂದು ಮನಸಿಗೆ ಸಮಾಧಾನಿಸಿದ ನಂತರವೇ ನಿದ್ದೆ ಸುಳಿಯಿತು. ಅವನು ಮರುದಿನವೂ ಸಮಯಕ್ಕೆ ಸರಿಯಾಗಿ ಶಿವಾಲಯಕ್ಕೆ ಬಂದ. ಅವಳ ಸುಳಿವಿಲ್ಲ. ಅವನ ಚಡಪಡಿಕೆಗೆ ಉತ್ತರ ಸ್ವಿಚ್ಡ್ ಆಫ್ !!! ಎರಡು ದಿನ, ಮೂರು ದಿನ, ನಾಲ್ಕು………. ಒಂದು ವಾರವಾದರೂ ಅವಳ ಸದ್ದಿಲ್ಲ. ಯಾವತ್ತೂ ಸ್ವಚ್ಛ ಮನಸ್ಸಿನಿಂದ ನಿರಾಳವಾಗಿಯೇ ಇರುತ್ತಿದ್ದವನು ಇಂದು ಕೊಂಚ ಅದುರಿಬಿಟ್ಟ. ಅವಳಿಗೇನಾಯಿತೋ ಅನ್ನೋ ಧಾವಂತ. ಈ ಬಾರಿ ಅವರ ಮನೆಗೇ ಹೋಗಿ ವಿಚಾರಿಸೋಣ. ತಪ್ಪು ಮಾಡದವರು ನಾವು ಹೀಗೇಕೆ ಹೆದರಬೇಕು ಅಂದುಕೊಳ್ಳುತ್ತಾ ಬೈಕನ್ನು ಅವರ ಮನೆಯ ಮುಂದೆಯೇ ನಿಲ್ಲಿಸಿದ. ತುಂಬಿದ ಮನೆಯ ಬಾಗಿಲು ಬಂದ್ ಆಗಿತ್ತು. ಹಾಗೂ ಹೀಗೂ ಕಷ್ಟ ಪಟ್ಟು ಅವಳ ಇರುವಿಕೆ ಪತ್ತೆ ಹಚ್ಚಲು ಹೋದವನಿಗೆ ಮತ್ತೊಂದು ಶಾಕ್ ಕಾದಿತ್ತು. ಅವರ ಮನೆಯವರು ಅವಳ ಮದುವೆ ಮಾಡಿ ಅವಳನ್ನು ಗಂಡನ ಮನೆಗೆ ಕಳಿಸಿಬಿಟ್ಟಿದ್ದರು ! ಅವನು ನಿಸ್ತೇಜನಾದ. ವಾರಗಳು ತಿಂಗಳುಗಳಾದವು, ತಿಂಗಳಗಳು ವರುಷಗಳಾದವು… ಅವಳ ಸುಳಿವಿಲ್ಲ. ಇವನ ಮನಸ್ಸಿನಿಂದ ಅವಳು ದೂರವಾಗುತ್ತಲೇ ಇಲ್ಲ. ಅಸಲು ಅವಳು ಮದುವೆಯಾದುದಕೆ ಇವನ ಚಿಂತೆಯಲ್ಲ. In fact ಅವಳ ಮದುವೆ ಅಂತ ಗೊತ್ತಾಗಿದ್ದರೆ ತಾನೇ ನಿಂತು ಮದುವೆ ಮಾಡುತ್ತಿದ್ದ. ಆದರೆ ಏನೂ ಹೇಳಲಿಲ್ಲವಳು. ಯಾಕೆ ? ಉತ್ತರ ಸಿಗದ ಪ್ರಶ್ನೆ. ದಿನ ಕಳೆದಂತೆ ಇವನು ಖಿನ್ನವಾಗುತ್ತಿದ್ದುದನ್ನು ಅಮ್ಮ ಗಮನಿಸಿದಳು. ಅವನಿಗೊಂದು ಮದುವೆ ಮಾಡಿದರೆ ಸರಿ ಹೋದಾನು ಎಂದು ಅವನಿಗೆ ಚೆಂದದ ದಂತದ ಗೊಂಬೆಯಂತಹ ಹುಡುಗಿಯನ್ನು ತಂದು ಮದುವೆ ಮಾಡಿದಳು. ಮದುವೆ ಅವನ ಜೀವನವನ್ನೇ ಬದಲಾಯಿಸಿತು. ಅವಳ ನೆನಪು ಸುಳಿಯಲೇ ಇಲ್ಲ.
ಅವಳ ಅಗಲಿಕೆಗೀಗ ನಾಲ್ಕು ವರುಷಗಳು ತುಂಬಿದವು. ಹೀಗೊಂದು ಸಂಜೆ ತನ್ನ ಪ್ರೀತಿಯ ಹೆಂಡತಿಯನ್ನು ಕರೆದುಕೊಂಡು ಅದೇ ಶಿವಾಲಯಕ್ಕೆ ಹೋದ. ತಮ್ಮ ಹಳೇ ಬೆಂಚನ್ನು ನೋಡಿದ. ಧೂಳಿಡಿದಿದತ್ತು. ಮತ್ತದೇ ನೆನಪುಗಳಿಗೆ ಜೀವ ತುಂಬಿತು. ಅದೇ ಬೆಂಚನ್ನು ವರೆಸಿಕೊಂಡು ಗಂಡ-ಹೆಂಡತಿ ಇಬ್ಬರೂ ಕುಳಿತುಕೊಂಡರು. ಹತ್ತಿರ ಹತ್ತಿರ. ತುಂಬಾ ಹತ್ತಿರ ಹತ್ತಿರ. ಆದರೂ
ಆ ಜಾಗ ಮತ್ತೆ ಹಳೆಯದನ್ನು ನೆನಪಿಸುತ್ತಿದೆ, ಸಾಕಿನ್ನು ಅಲ್ಲಿಂದ ದೂರ ಹೋಗೋಣ ಎಂದು ಎದ್ದು ಹೋದ.
ನೆನಪುಗಳು ಅವನನ್ನೇ ಹಿಂಬಾಲಿಸಿದವು ಅವಳನ್ನು ಮರೆತು ಬಹಳ ದಿನವೇ ಆಗಿತ್ತು. ಯಾಕಾದರೂ ಈ ದೇವಸ್ಥಾನಕ್ಕೆ ಬಂದೆನೋ ಅನಿಸಿತವನಿಗೆ. ತನ್ನನ್ನು ತಾನು ಕಂಟ್ರೋಲ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ. ಮನೆಗೆ ಹೋಗಿ ಒಂದು ಹಾಳೆ ಪೆನ್ನು ತೆಗೆದುಕೊಂಡು ಬರೆಯಲು ಕುಳಿತ. ವಿಳಾಸವೇ ಗೊತ್ತಿಲ್ಲದ ಅವಳಿಗೆ ವಿದಾಯದ ಪತ್ರ….. ಅದು ಹೀಗಿತ್ತು;
“ನನ್ನ ಪ್ರೀತಿಯ…………..
ಈ ಖಾಲಿ ಸ್ಥಳದಲ್ಲಿ ಏನೆಂದು ಬರೆಯಲಿ ? ನೀನು ನನಗೆ ಏನು ? …. ಏನೂ.. ಅಲ್ಲ, ಮನದನ್ನೆಯಾ ?…… ಅಲ್ಲವೇ ಅಲ್ಲ….. ಗೆಳತಿಯಾ ? ……. ಗೊತ್ತಾಗುತ್ತಿಲ್ಲ…… ಹಾಗಾದರೆ ಏನೆಂದು ಕರೆಯಲಿ ನಿನ್ನ ? ಅಸಲು ನನ್ನ ನಿನ್ನ ಸಂಬಂಧವಾದರೂ ಏನು ? ನಾನು ನಿನ್ನ ಸನಿಹವನ್ನು ಬಯಸಿದ್ದವನಷ್ಟೆ. ನಿನ್ನನ್ನಲ್ಲ. ನಾಲ್ಕು ವರ್ಷ ನಾನು ನಿನ್ನನ್ನು ಮರೆತು ಸುಖವಾಗಿದ್ದೆ. ಇಂದೇಕೆ ನೀ ಮತ್ತೆ ಕಾಡುತ್ತಿರುವೆ ? ಸಾಕು ಹೋಗು ನೀ ದೂರ … ಆಚೆ. ನನಗೂ ಸಂಸಾರವಿದೆ. ನೆನಪಾಗಿ ಬಂದು ನನ್ನ ಬದುಕಲ್ಲಿ ಬಿರುಗಾಳಿ ಎಬ್ಬಿಸಬೇಡ. ನನ್ನವಳ ನೋಡು. ಚಿನ್ನದಂಥವಳು. ಇಂದೇಕೆ ನೀನು ನೆನಪಾಗಿ ಕಾಡುತ್ತಿರುವೆ. ನಾನು ಅಂದೂ ನಿನ್ನನು ಮೋಹಿಸಿರಲಿಲ್ಲ, ಇಂದೂ ಕೂಡ. ನಿನ್ನ ನೋಟದ ಕೋಲ್ಮಿಂಚು ನನ್ನೆದೆಯೊಳಗಿದೆ ಬಿಡು . ಅಷ್ಟೇ ಸಾಕು ನೆನಪಾಗಿ ನೀನೆಂದೂ ಬರಬೇಡ. ಕೊನೇ ಮಾತು ನೀ ಎಲ್ಲೇ ಇರು ಸುಖವಾಗಿರು. ಮುಗಿಸಲಾ?” ಅಂತ ಬರೆದಿಟ್ಟ ಪತ್ರವನು ಎಲ್ಲಿಗೆ ಪೋಸ್ಟ್ ಮಾಡುವುದು ? ನಕ್ಕ. ಮನಸ್ಸು ಹಗುರವಾಯಿತು. ಪತ್ರವನ್ನು ಹಾಗೇ ಎದೆಯ ಮೇಲಿಟ್ಟುಕೊಂಡು ಸೋಫಾದ ಮೇಲೆ ಒರಗಿದ. ಬಹುಹೊತ್ತಿನ ನಂತರ ಸುಖವಾದ ನಿದ್ರೆಗೆ ಜಾರಿದ…… ಯಾರೋ ಬಂದು ಎದೆಯ ಮೇಲೆ “ಅಂಕಲ್….ಅಂಕಲ್..” ಎಂದು ತಟ್ಟಿದಾಗಲೇ ಎಚ್ಚರವಾದದ್ದು. ನೋಡಿದರೆ.ಮುದ್ದು ಮುದ್ದಾದ ಮಗು. ಗುಲಾಬಿಯಂಥ ನಗು.
“ಯಾರಪ್ಪ ಪುಟ್ಟಾ ನೀನು ? ಏನ್ ನಿನ್ನ ಹೆಸರು ? ” ಆ ಮಗುವಿನ ತಲೆ ನೇವರಿಸುತ್ತಾ ಕೇಳಿದ.
“ವಿಶಾಲ್” ಅಂತು ಆ ಪುಟಾಣಿ.
“ಅದು ನನ್ನ ಹೆಸ್ರು ಕಣಪ್ಪ. ನಿನ್ನ ಹೆಸರೇನು ?”
“ನನ್ನ ಹೆಸರು ವಿಶಾಲ್ ಅಂಕಲ್”
“ಹೌದಾ ? ಯಾರು ಮಗು ನೀನು ? ಇಲ್ಲಿಗೇಕೆ ಬಂದೆ ?”
“ನಾನು ಮಮ್ಮಿ ಮಗ, ಮಮ್ಮಿನೇ ಕರಕೊಂಡು ಬಂದ್ಲು” ಅನ್ನುತ್ತಾ ಆ ಮಗು ಆ ಕಡೆ ಕೈ ತೋರಿಸಿತು. ಆ ಕಡೆ ನೋಡಿದರೆ ಅವಳು!!!… ಅವನು ನಂಬದಾದ. ದಿಗ್ಗನೇ ಎದ್ದು ನಿಂತುಕೊಂಡ “ನೀವಾ……ಏನಾಗಿತ್ತು ಇಷ್ಟು ವರ್ಷ….ಎಲ್ಲಿದ್ರಿ… ?” ನಡುಗುತ್ತಿದ್ದಾನೆ. ಅವಳು ಮಾತ್ರ ಕೂಲಾಗಿ..”ಪರಿಸ್ಥಿತಿ ಹಾಗಿತ್ತು” ಅಂದಳು. ಮತ್ತೆ ಮೌನ……….. ಅವನ ನಡುಕ ತಹಬಂದಿಗೆ ಬಂತು. ಕಳೆದು ಹೋದ ರತ್ನ ಸಿಕ್ಕಿದ ಸಂಭ್ರಮ. ಆ ಮಗುವಿಗೆ ತನ್ನ ಹೆಸರನ್ನಿಟ್ಟಿದ್ದಾಳೆ ! ಗ್ರೇಟ್ ಅವಳು ಅವಳೇ…. ಎನ್ನುತ್ತಾ ಆ ಮಗುವನ್ನು ಎತ್ತಿಕೊಂಡು
“ನಿಮ್ಮಪ್ಪ ಎಲ್ಲಿ? ” ಅಂತ ಕೇಳಿದ
“ನಮ್ಮಪ್ಪ ದೇವರ ಕಡೆ ಹೋಗಿದಾರೆ” ಅಂತು ಆ ಮಗು ! ಮಗುವನ್ನು ಎತ್ತಿಕೊಂಡ, ಅಪ್ಪಿಕೊಂಡ ಮುತ್ತುಕೊಟ್ಟ. ಅವಳ ಕಂಗಳು ಈ ಬಾರಿ ಹೊಳೆಯುತ್ತಿರಲಿಲ್ಲ, ಜಿನುಗುತ್ತಿದ್ದವು.
ಆದಪ್ಪ ಹೆಂಬಾ ಮಸ್ಕಿ
Nice sir
ಕಥೆ ಚೆನ್ನಾಗಿದೆ. ಎಂತಹ ಗೆಳೆತನ ಎಂದು ಕರೆದರೂ ಗಂಡು ಹೆಣ್ಣಿನ ನಡುವಿನ ಸಂಬಂಧವನ್ನು ವಕ್ರ ದೃಷ್ಟಿಯಿಂದ ನೋಡುವವರೇ ಹೆಚ್ಚು. ಅದರಿಂದ ಹೊರತಾಗುವುದು ಸ್ವಲ್ಪ ಕಷ್ಟದ ಕೆಲಸ