ವರ್ಷದ ಮೊದಲ ಹಬ್ಬ
ಕೆ.ವಿ.ವಾಸು
ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು
ದೇಶಾದ್ಯಾಂತ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಸಡಗರ ಹಾಗೂ ಸಂಭ್ರಮದಿಂದ
ಆಚರಿಸಲಾಗುತ್ತದೆ. ಇದನ್ನು ಸುಗ್ಗಿ ಹಬ್ಬ; ಪೊಂಗಲ್ ಮುಂತಾದ ನಾಮವಿಶೇಷಗಳಿಂದ ಕರೆಯಲಾಗುತ್ತದೆ. ವರ್ಷವಿಡಿ ರೈತರು ಬೆಳೆದ ಬೆಳೆಯನ್ನು ಗುಡ್ಡೆ ಹಾಕಿ ರೈತಾಪಿ ವರ್ಗ ಸಂಭ್ರಮಿಸಿದರೆ; ವನಿತೆಯರು ಮನೆ ಮನೆಗೆ ಎಳ್ಳು;
ಬೀರುವ ಮೂಲಕ ಸಂಕ್ರಾತಿಗೆ ಕಳೆ ಕಟ್ಟುತ್ತಾರೆ. ಪುಟ್ಟ ಮಕ್ಕಳಂತೂ ಕಬ್ಬು ಜಗಿಯುತ್ತಾ ಹೊಸ ಬಟ್ಟೆಗಳೊಡನೆ ಸಂಭ್ರಮಿಸುವ ಮಧುರ ಕ್ಷಣಗಳ
ಬಗ್ಗೆ ಎಷ್ಟು ಹೇಳಿದರೂ ಸಾಲದು. ಎಳ್ಳು ತಿಂದು
ಒಳ್ಳೆಯ ಮಾತನಾಡಿ ಎಂಬ ಘೋಷ ವಾಕ್ಯ ಕೂಡ
ಸಂಕ್ರಾತಿಯ ಸಂಭ್ರಮವನ್ನು ಹೆಚ್ಚಿಸುತ್ತದೆ. ಸಿಹಿ ಹಾಗೂ ಕಾರ ಪೊಂಗಲ್ ಕೂಡ ಸಂಕ್ರಾತಿಯ ಮತ್ತೊಂದು ವಿಶೇಷವೆನ್ನಬಹುದು.
ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ
ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ ಸಂಕ್ರಾಂತಿ ಹಬ್ಬದಂದು ಉತ್ತರಾಯಣ ಪುಣ್ಯಕಾಲ
ಸಂಭವಿಸುತ್ತದೆ. ಕುರುಕ್ಷೇತ್ರ ಯುದ್ದದಲ್ಲಿ ಅರ್ಜುನನ ಬಾಣಗಳಿಂದ ಜರ್ಜರಿತರಾದ ಬೀಷ್ಮ ಪಿತಾಮಹ; ಇಚ್ಛಾ ಮರಣಿಯಾಗಿದ್ದರಿಂದ ತಮ್ಮ ದೇಹ ತ್ಯಾಗಕ್ಕೆ ಉತ್ತರಾಯಣ ಪುಣ್ಯಕಾಲದವರೆಗೆ ಕಾದಿದ್ದರು. ಈ ದಿವದ ತುಂಬಾ ಪ್ರಶಸ್ತವಾದ ಹಾಗೂ ಪುಣ್ಯ ದಿನವಾಗಿದ್ದು ಅಂದು ಮರಣ ಹೊಂದುವವರಿಗೆ ಮರುಹುಟ್ಟು ಇಲ್ಲವೆಂಬ ಧಾರ್ಮಿಕ ನಂಬಿಕೆ ನಮ್ಮದಾಗಿದೆ.
ಪ್ರತಿ ವರ್ಷ ಬರುವ ಹಲವಾರು ಹಬ್ಬಗಳು ನಮ್ಮ ಭವ್ಯ ಸಂಸ್ಕತಿ ಹಾಗೂ ಪರಂಪರೆಯ ಬಗ್ಗೆ ನಮ್ಮನ್ನು ಎಚ್ಚರಿಸುತ್ತಲೇ ಬರುತ್ತಿವೆ. ಆದ್ದರಿಂದ ಪ್ರತಿಯೊಂದು ಹಬ್ಬವೂ ನಮ್ಮ ಆತ್ಮ ವಿಮರ್ಶೆಗೆ
ಅವಕಾಶ ಒದಗಿಸುತ್ತದೆ. ಹಬ್ಬದ ದಿನಗಳಲ್ಲಿ
ತಿಂದುಂಡು ಸಂಭ್ರಮಿಸುವುದರ ಜೊತೆಗೆ ನಮ್ಮ
ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಕೂಡ
ಗಮನ ಹರಿಸುವುದು ಒಳ್ಳೆಯದು. ಇಂತಹ ಮಹತ್ವದ ಹಾಗೂ ಪುಣ್ಯಕರವಾದ ಈ ದಿನ
ನಿಮ್ಮ ಬದುಕನ್ನು ಚೈತನ್ಯಪೂರ್ಣವಾಗಿಸಲೆಂದು
ಹಾರೈಸುತ್ತೇನೆ.