ಲಂಗರು ಹಾಕಿದ ಹಡಗು
ವಿಜಯಶ್ರೀ ಹಾಲಾಡಿ
ಕಾಡಿಗೆ ಕಪ್ಪಿನ ಕತ್ತಲಲ್ಲಿ
ಅವಳು ಬಿರಬಿರನೆ
ಸಂಚರಿಸುತ್ತಿದ್ದಳು
ಮಸಿ ಇರುಳಿನ ಹಾಗೆ
ಚೆಲ್ಲಿಕೊಂಡ ಕೂದಲ
ಕಡಲು ತೂರಾಡುತ್ತಿದ್ದವು
ಕಂಪಿಸಿದ ಎಲೆಎಲೆ
ಮಣ್ಣ ಕಣ ಕಣ
ಉದುರುತ್ತಿದ್ದ ಧೂಳುಮಳೆ
ಅಲ್ಲೇ ಯಥಾಸ್ಥಿತಿಯಲ್ಲೇ
ಗಾಬರಿಬಿದ್ದು ಸ್ತಬ್ಧವಾದವು
ಕಾಲ್ಗೆಜ್ಜೆಯ ರಿಂಗಣಕ್ಕೆ
ಕಪ್ಪೆ ಕೀಟ ರಾತ್ರಿ
ಸಡಗರಿಸಿ ಪುಳಕವಾದವು ..
ನದೀ ತೀರದಲ್ಲಿ ಮರ
ಗಿಡ. ತಂಗಾಳಿಯೊಂದಿಗೆ
ಘಲ್ ಘಲ್ ಸಪ್ಪಳ
-ವಾಲಿಸಿದ ಗೂಬೆಯೊಂದು
ಬಂಡೆಯಾಚೆ ಸರಿದು
ಕ್ಷಣದಲ್ಲಿ ಮರೆಯಾಯಿತು
ಅದರ ಮಿದು ಕಂದಮ್ಮ
-ಗಳು ತೋಳದಿಂಬೊಳಗೆ
ಹುದುಗಿ ಕೂತು ಕಣ್ಣಗಲಿಸಿದವು!
ಅವಳ ನೀಳ ಬೆರಳುಗಳಲ್ಲಿ
ಮಿಂಚುಹುಳದ ಕಂದೀಲು
ತೂಗಾಡುತ್ತಿತ್ತು ….
ಚಂದಿರನಾದರೂ ತುಸು
ಬಾಗಿ ಜೇನುಮರಳಿಗೆ
ಮುತ್ತಿಟ್ಟು ದಾರಿ
ತೋರುತ್ತ ಅನುಸರಿಸುತ್ತಿದ್ದ.
ಹೂ ಪಕಳೆಯಂತಾ
ತನ್ನ ಗೋಧಿ ಪಾದವ
ತುಸುವೇ ನದಿ ನೀರಿಗೆ
ಸೋಕಿಸಿ ಮಂದಹಾಸ
-ದಲ್ಲಿ ಮಿಂದು ಸುಯ್ದಳು
ತೊಯ್ಯುವ ಉಡುಪು ಲೆಕ್ಕಿಸದೆ
ಕಚಗುಳಿ ಇಡುವ ಮೀನು
-ಮರಿಗಳ ಸ್ಪರ್ಶಕ್ಕೆ
ತೆರೆಯುತ್ತ ಇಳಿದಳು
ಕೊರೆವ ನದಿಗಿಳಿದಳು ….
ರೊಯ್ಯರೊಯ್ಯನೆ ಬೀಸು
ಹೆಜ್ಜೆಯ ಸುಖಿಸುತ್ತ
ನೀರ ಮೇಲೆ ಕಾಲೂರಿ
ಲೀಲಾಜಾಲ – ಜಾಲ
ದೊಳಗೆ ನಡೆದೇಬಿಟ್ಟಳು
ತೀರದಿಂದ ತೀರದಾಚೆ
ಗಾಳಿಯಲೆ ಎಣಿಸುತ್ತ
ಲಂಗರು ಹಾಕಿದ ಹಡಗೊಂದು
ಬೆಚ್ಚಿ ಪಟಪಟನೆ
ರೆಕ್ಕೆಬಡಿದು ಸುಮ್ಮನಾಯಿತು
ಚುಕ್ಕಿಬೆಳಕು ಸುರಿದಿದ್ದ
ಕಂದೀಲು ಅಗೋ ….
ಚೂರು ಚೂರೇ ದಿಗಂತ
-ದಲ್ಲಿ ಮಾಯವಾಯಿತು ..!
********************************