ಕವಿತೆ ಕಾರ್ನರ್

ಯುದ್ದವೆಂದರೆ

ಕು.ಸ.ಮಧುಸೂದನ

ಯುದ್ದವೆಂದರೆ
ಕೋವಿ
ಫಿರಂಗಿಗಳು
ಮದ್ದು ಗುಂಡುಗಳು
ಸೋಲು ಗೆಲುವುಗಳು
ಮಾತ್ರವಲ್ಲ

ಯುದ್ದವೆಂದರೆ
ಅಂಗೈನ ಮದರಂಗಿ ಆರುವ ಮೊದಲೇ
ಹಣೆಕುಂಕುಮ ಅಳಿಸಿಕೊಳ್ಳುವ ಹೆಣ್ಣಗಳು

ಅಪ್ಪನ ತಬ್ಬುವ ಮೊದಲೇ ತಬ್ಬಲಿಯಾಗುವ ಹಸುಗೂಸುಗಳು
ಮಗನ ಮನಿಯಾರ್ಡರಿಗಾಗಿ ಕಾತು ಕೂತ ಮುದಿಜೀವಗಳು.

ಮತ್ತೂ
ಯುದ್ದವೆಂದರೆ
ಇರುವುದೆಲ್ಲವ ನಾಶ ಮಾಡಹೊರಟು
ತಾವೂ ನಾಶವಾಗುವ
ಹಳೆಯ ಆಟ
ಮನುಕುಲದ ಖಳರ ಚಟ!

*********

One thought on “ಕವಿತೆ ಕಾರ್ನರ್”

  1. ನಿಜ ಸರ್ ಯುದ್ಧ ಎಂದರೇ ಬರಿ ಗಡಿಯಲ್ಲಿ ನಡೆಯುವ ಆಟವಲ್ಲ. ಅದು ನಂಬಿದ ಜೀವಗಳ ಉಸಿರಾಟ. ನಿಮ್ಮ ಕವಿತೆ ಅರ್ಥಗರ್ಭಿತ ವಾಗಿದೆ. ತಮಗೆ ಅಭಿನಂದನೆಗಳು.

Leave a Reply