ಕಾವ್ಯಯಾನ

ಇರಲಿ ನನದೊಂದು ಪ್ರೇಮ

Pink and White Flowers on White Wall

ಮೂಗಪ್ಪ ಗಾಳೇರ

ಆಕಾಶದಲ್ಲಿ ತೇಲುವ
ಮೋಡಗಳಿಗಿಲ್ಲದ ಜಾತಿ
ಹಸುಗೂಸಿನಿಂದ
ಮುದಿ ರೋಗಿಗೆ ಶಕ್ತಿ ನೀಡುವ ಹಾಲಿಗಿಲ್ಲದ ಧರ್ಮ
ಹಸಿ ಗೂಸಾದ ನಿನಗೆ
ಜಾತಿ ಧರ್ಮದ ವಿಷ ತುಂಬಿದವರಾರು………..

ಕಡಲ ದಂಡೆಯಲ್ಲಿ
ಕಂಗಳ ಕಟ್ಟೆ ಹೊಡೆದು
ನಾ ಕವಿತೆ ಹೇಳುವಾಗ
ಜಾತಿಯ ಲೆಕ್ಕವಿಲ್ಲದೆ ಅಪ್ಪಿಕೊಂಡ ನಮ್ಮ ಪ್ರೀತಿಗೆ
ಜಾತಿ ಎಂಬ ರಗಳೆ ಬಿಟ್ಟವರಾರು……..

ಮಧುರ ಪ್ರೇಮದ
ಇಬ್ಬನಿಯ ಸ್ವರ್ಗದಲ್ಲಿ
ಪ್ರಪಂಚದ ಕಲ್ಪನೆಯ ಮರೆತು
ಕನಸುಗಳ ಬೆನ್ನೇರಿ ಹೊರಟ
ನಮ್ಮಿಬ್ಬರ ಹಾದಿಗೆ
ಜಾತಿಯ ಮುಳ್ಳಸೆದವರಾರು…….

ಹನ್ನೆರಡನೇ ಶತಮಾನದಲ್ಲಿ
ಜಾತಿಯ ವಿಷ ನುಂಗಿ
ಪ್ರೀತಿಯ ಹೂವು ಅರಳಿಸಿದ ಬಸವಣ್ಣ
ಕುಲದ ನೆಲೆಯ ಬಲ್ಲೆಯ ಎಂದು
ಮನುಕುಲದ ಅರ್ಥ ಉಣಬಡಿಸಿದ ಕನಕರೇ
ಅರ್ಥವಾಗಲಿಲ್ಲ ವಲ್ಲ ನಮ್ಮ ಹಿರಿ ಜೀವಿಗಳಿಗೆ

ಇನ್ನೆಲ್ಲಿ ಮುಗ್ಧ ಪ್ರೇಮ……..
ಇನ್ನೆಲ್ಲಿ ಮಧುರ ಪ್ರೀತಿ………
ಬರೀ ಕಪಟ ತುಂಬಿದ
ಈ ನಾಟಕದಲ್ಲಿ……….
ನಂದೊಂದು ದಿಟವಾದ ಪ್ರೇಮ
ಇರಲಿ ನಿನ್ನ ಮನದ ತುಂಬಾ…………

**************

Leave a Reply

Back To Top