ವಿರಹಿಣಿ
ವಿಜಯಶ್ರೀ ಹಾಲಾಡಿ
(ಸುಮ್ನೇ ಹೀಗೊಂದು ಝಲಕ್)
ಯಾರೋ ಕವಿ ಬರೆದ
ವಿರಹಿಣಿಯ ಚಿತ್ರಣ
ಕಾದು ಕಾದು ಕಾಲುಬೆರಳು
ಸಪೂರ ಆಗಿ ಕಾಲುಂಗುರ
ಕಳೆದುಹೋದ ಕತೆ ..
ಅಬ್ಬ
ಎಷ್ಟೂಂತ ಕಾಯುವುದು
ಮೊನ್ನೆಯಿಂದ ಇದ್ದೇನೆ
ಇಲ್ಲೇ ಆನ್ ಲೈನಲ್ಲೇ….
ಮಧ್ಯರಾತ್ರಿಯ ಕೊನೆಗೆ
ಐದು ನಿಮಿಷ
ತೂಕಡಿಸಿದಾಗಲೂ ಸುಪ್ತ
ಮನಸ್ಸಿನ ಎಚ್ಚರ
ಹೃದಯ ಹಿಂಡಿದಂತೆ
ನರನರಗಳೆಲ್ಲ ಹೊಸೆದಂತೆ
ರಿಂಗ್ ಟೋನೇ ಕರೆದಂತೆ …
ಎಲ್ಲಿ ಹೋದ ಇವನು
ಮರೆತನೇ ಮೊಬೈಲ್-
ಕಳಕೊಂಡನೇ -ನೆಟ್ವರ್ಕ್
ಇಲ್ಲದ ಕಾಡುಗಳಲ್ಲಿ
ಅಲೆಯುತ್ತಿರುವನೇ
ಈ ನನ್ನವನು …
ಅಥವ ಇನ್ನವಳ್ಯಾರೋ
ಶ್! ಹುಚ್ಚಿ ಹಾಗೇನಿರಲ್ಲ. !
‘ಇವಳೇನು ಇಲ್ಲೇ
ಬೀಡುಬಿಟ್ಟಿದ್ದಾಳೆಂದು’
ಗೆಳೆಯ ಗೆಳತಿಯರೆಲ್ಲ
Hii. ಎಂದರು
ಅಣಕಿಸಿ ನಕ್ಕರು
ಕಣ್ಣುಹೊಡೆದರು
ಛೆ
ನನ್ನ ವಿರಹವ
ನದಿಯಂತೆ ಬೆಳೆಸುತ್ತಲೇ
ಆಫ್ ಲೈನಾದರು ….
ಸಿಟ್ಟಿಗೆ ಮೊಬೈಲ್ ಕುಕ್ಕಿ
ಜೋಡಿಸಿಟ್ಟ ಪುಸ್ತಕ
ಬಟ್ಟೆಗಳನೆಲ್ಲ ನೆಲಕ್ಕೆ
ಅಪ್ಪಳಿಸಿದ್ದಾಯಿತು
ಸಂದೇಶಗಳ ಶಬ್ದಕ್ಕೆ
ಓಡೋಡಿ ಬಂದು
ಹೊಸ್ತಿಲಿಗೆ ಕಾಲೆಡವಿ
ಮಂಡಿ ತರಚಿದ್ದಾಯಿತು
ಹೋಗೆಲೋ ಹುಚ್ಚ
ಕತ್ತೆ ಕೋತಿ ಕರಡಿ
ಎಂದೆಲ್ಲ ಅವನಿಗೂ
ಟೈಪಿಸಿ ಬಯ್ದದ್ದಾಯಿತು
ಪ್ರೀತಿಮಾತೂ ಹೇಳಿದ್ದಾಯಿತು
ಭಯದಿಂದಲೇ ಕಾಲ್ ಮಾಡಿ
ಸ್ವಿಚ್ ಆಫ್ ನಾಟ್ ರೀಚೇಬಲ್
ಉಲಿಗಳಿಗೆ
ದನಿತೆಗೆದು ಅತ್ತದ್ದಾಯಿತು …
ನಾಳೆಯಾದರೂ ಸಿಗುವನೆಂದು
ಓಹ್
ನೆಟ್ ಪ್ಯಾಕ್ ಮುಗಿಯುವುದೆಂದು
ಪೇಟೆಗೆ ಹೋಗಿಬರುವೆ
ತಡೆಯಿರೆಂದು …
ಥೋ ! ಈಗಿನ್ನೂ
ಹಾಲುಬೆಳದಿಂಗಳು
ಬೆಳಗಿನ ಜಾವದ ೩ !
**********
ಇಷ್ಟವಾಯಿತು.