ಸ್ಪಟಿಕವಾಗಬೇಕಿದೆ
ಮೂಗಪ್ಪ ಗಾಳೇರ
ಹಕ್ಕಿಗಳಿಗೆ ಗೂಡ ಕಟ್ಟಲು
ಯಾವ ಮರದ ಅನುಮತಿ ಬೇಕಿಲ್ಲ
ಇರುವೆಗಳು ಸಾಲಾಗಿ ನಡೆಯಲು
ಯಾವ ಅಭಿಯಂತರರ ನೀಲಿನಕ್ಷೆ ಬೇಕಿಲ್ಲ
ಹಾಗಂತ ಈ ಹೃದಯವೇನು
ಬಿಟ್ಟಿ ಬಿದ್ದಿಲ್ಲ
ನಿನ್ನಿಷ್ಟ ಬಂದಾಗೆ ಬಂದು
ಹೋದಾಗೆ ಹೋಗಲು……….
ಶಾಂತ ಸಾಗರದಲ್ಲಿ
ತೇಲುವ ನಾವೆಯಂತೆ ಈ ಹೃದಯ
ಮೊದಲು ದಡ ಸೇರಬೇಕೋ
ಇಲ್ಲೇ ಇದ್ದು ಸಾಗರದ ಸವಿ ಸವಿಯಬೇಕೋ…….
ಎದೆಯೊಳಗೆ ನೂರೆಂಟು ತಳಮಳ
ಏಕಾಂತದಲ್ಲಿ ಇದ್ದರು
ನಿನ್ನದೇ ಪ್ರೀತಿಯ ಪರಿಮಳ
ಮತ್ತೆ ಮತ್ತೆ ಹೃದಯದ ಕೋಣೆಯಲ್ಲಿ
ನಿನ್ನದೇ ಸಡಗರ……..
ಹೆತ್ತುಹೊತ್ತ ಜೀವಗಳಿಗೆಲ್ಲಾ
ನನ್ನ ಏಕಾಂತದ ಅರಿವಾಗಿದೆ
ಹಣತೆ ಹಚ್ಚಬೇಕಿದೆ ನನ್ನಲ್ಲಿ ನೀನು
ಹಾಗೆ ಹಚ್ಚಿದ ಹಣತೆ
ಪಸರಬೇಕಿದೆ;
ಗಡಿ ಇಲ್ಲದ ವಿಶ್ವದ
ಬೀದಿಯಂಗಳದಲ್ಲಿ……….
ಒಳ ಕೋಣೆಗಳನ್ನೆಲ್ಲಾ ಚದುರಿ
ಸ್ಪಟಿಕ ವಾಗಬೇಕಿದೆ;
ಜಾತಿ ಧರ್ಮ ಮೀರಿದ
ಹೆದ್ದಾರಿ ಪಯಣದಲ್ಲಿ……….
*********