ಕಾವ್ಯಯಾನ

ಹೋರಾಟ

multicolored abstract painting

ಪ್ಯಾರಿ ಸುತ

ದೈತ್ಯಶಹರ ರಾಜಬೀದಿಯೊಳಗೆ ಹೋರಾಟ
ಮುಚ್ಚುಮರೆಯಲಿ ಜಮಾಯಿಸಿ ಇಟ್ಟ ಕಲ್ಲುಗಳತೂರಾಟ
ಎತ್ತರದಲ್ಲಿ ಜೋತುಬಿದ್ದ ಮೈಕಿನಲ್ಲಿ
ರಕ್ತಕುದಿಸುವ ಘೋಷಣೆಗಳ ಕೂಗಾಟ
ಕಪ್ಪುನೀಲಿಶಾಯಿ,ರಕ್ತದಿಂದ ಬರೆಯಲ್ಪಟ್ಟ
ರಟ್ಟು,ತಗಡು,ಬಿಳಿಬಟ್ಟೆಗಳ ಹಾರಾಟ
ಗುಂಪುಗಳ ಮಧ್ಯಸಿಕ್ಕು ಕಾರು,ಬೈಕು,ಬಸ್ಸು
ಲಾರಿ, ರೀಕ್ಷಾಗಳ ಚೀರಾಟ
ಹಳ್ಳಿಕೇರಿಗಳಿಂದ ಸಂತೆಬಜಾರಿಗೆ ಬಂದವರ,
ಊರಿಂದ ಊರಿಗೆ ಹೋಗುವವರ
ಶಾಲಾಕಾಲೇಜು ಮಕ್ಕಳ,ಓಪ್ಪತ್ತು ಊಟದ
ವ್ಯಾಪಾರಸ್ಥರ,ಕೂಲಿ ನಂಬಿದ
ಸ್ಟೇಷನ್ ಕೂಲಿಕಾರ್ಮಿಕರ,
ಊರುಕೇರಿಯ ಸಾರ್ವಜನಿಕರ ಪರದಾಟ
ಅವರದೇ ಜೀವನದಲ್ಲೊಂದಿಷ್ಟು ಗೋಳಾಟ
ಅರೆಸೇನೆ,ಪೊಲೀಸಪಡೆಗಳಿಂದ ಮದ್ದುಗುಂಡು,
ಅಶ್ರುವಾಯುಗಳ ಎರಚಾಟ
ಕಟ್ಟಾಳು ಕರೆ ತಂದವರಿಗೆ ಬಿರಿಯಾನಿ ಬಾಡೂಟ
ಬೀರುಬ್ರಾಂಡಿ,ವಿಸ್ಕಿ ಕುಡಿದವರ ನಡುವೆ ಏರ್ಪಟ್ಟ ಮಂಗನಾಟ
ಎಡಬಲ ನೀತಿ ನಿಯಮಗಳ ನಡುವೆ ತಿಕ್ಕಾಟ
ಸಾವಿರ ಸಾವಿನ ಪ್ರತಿಫಲಕ್ಕೆ
ನಡುರಾತ್ರಿ ದಕ್ಕಿದ ಸ್ವಾತಂತ್ರ್ಯಕ್ಕೆ ಶನಿಕಾಟ

*******

Leave a Reply

Back To Top