ಹನಿಮೂನ್
ಗಿರೀಶ ಜಕಾಪುರೆ, ಮೈಂದರ್ಗಿ
ಹನಿಮೂನ್
ಈ ಬಿಕನಾಶಿ ಚಂದ್ರನಿಗೆ ಬುದ್ಧಿಯಿಲ್ಲ
ಸುರಿಯುತ್ತಾನೆ ವಿರಹದ ಅಗ್ನಿಗೆ ತುಪ್ಪ..!
ಲಾಲ್‌ಬಾಗ್‌ಗೆ ಹೊರಟಿದ್ದವು
ಎರಡು ಹಕ್ಕಿಗಳು ಹನಿಮೂನ್‌ಗೆಂದು
ಸಮುದ್ರತೀರದ ಕಾಂಕ್ರೀಟ್ ಕಾಡಿನಿಂದ,
ಒಂದೇಸಮನೆ ಧಾವಿಸುತ್ತಿತ್ತು ಎದೆಯಲ್ಲಿ
ನಿಗಿನಿಗಿ ಕೆಂಡವಿರಿಸಿಕೊಂಡು ಉಸಿರಿನಿಂದ
ಬಿಸಿಹೊಗೆ ಚಿಮ್ಮುವ ಉಗಿಬಂಡಿ..,
ನಾನೋ ಅಲೆಮಾರಿ, ಹತ್ತಿದೆ ರೈಲು
ಅವಳು ನನ್ನ ತೊರೆದುಹೋದ ನಿಲ್ದಾಣದಲಿ
ಕಾಲಿಡಲೂ ಅವಕಾಶವಿರದಷ್ಟು ರಶ್ಶು
ಆದರೂ ನನಗೆ ರೈಲಿನ ಮೇಲೆ ಏನೋ ಕ್ರಶ್ಶು
ಅವರು ಇಬ್ಬರು, ಎರಡು ಬರ್ಥಗಳು
ನಾನು ಎಂದಿನಂತೆಯೇ ವೇಟಿಂಗ್ ಲಿಸ್ಟು..!
ಗಮನಿಸಿದೆ..
ಅವಳ ಅಂಗೈ ಮದರಂಗಿ ಚೂರೂ ಮಾಸಿಲ್ಲ
ಅವನ ಕಣ್ಣಲಿ ಮಿಲನದ ಉಮೇದು.. ಆದರೂ
ಯಾವುದೋ ಸಣ್ಣ ವಿಷಯ, ಪುಟ್ಟ ತಕರಾರು
ಹುಸಿ ಹುಸಿ ಮುನಿಸು, ಏನೋ ಸ-ವಿರಸ..!
ಈ ಕೊರೆಯುವ ಚಳಿಯ ಎದುರಿಗೆ
ಎಷ್ಟು ಹೊತ್ತು ನಿಲ್ಲುತ್ತದೆ ವಿರಹ?..?
ಚುಕ್ಕೆಗಳು ಢಾಳಾಗುವ ಹೊತ್ತಿಗೆ ಆತ :
‘ಸರ್, ನೀವು ಮೇಲಿನ ಬರ್ಥಲಿ ಮಲಗಿ
ನಾವಿಬ್ಬರೂ ಒಂದರಲ್ಲಿ ಅಡಜೆಸ್ಟ್ ಆಗ್ತೀವಿ’ ಎಂದ
ನನಗೂ ಅದೇ ಬೇಕಿತ್ತು
ಕಾಲು ಚಾಚಿದರೆ ಸಾಕಿತ್ತು
ಇಡೀರಾತ್ರಿ ಆ ಹಕ್ಕಿಗಳು ತಬ್ಬಿ ಮಲಗಿದ್ದವು
ಕೆಳಗಿನ ಬರ್ಥನಿಂದ ಹೊಮ್ಮುತ್ತಿತ್ತು
ಹಿತವಾದ ಶಾಖ..! ಅಗ್ಗಿಷ್ಟಿಕೆಯ ಝಳ..!
ಹೌದು, ನನ್ನ ಕನಸಲ್ಲೂ ಬಂದಿದ್ದಳು ಅವಳು
ನಾನು ಮುನಿದು, ಮರೆತು ಬಂದಿದ್ದ
ಕಶ್ಮೀರಿ ಶಾಲು ಕೊಟ್ಟು ಹೋದಳು
ಇಡೀ ರಾತ್ರಿಗಾಗಿ ಮುತ್ತು ಬಿಟ್ಟುಹೋದಳು
ಬೆಳಗೆದ್ದು ಕಣ್ಣುಜ್ಜುತ್ತ ನಾನು ಆ ಹಕ್ಕಿಗಳಿಗೆ
ಹೇಳುವುದಕ್ಕೂ ಮುನ್ನವೇ ಅವೇ ಒಕ್ಕೊರಲಿನಿಂದ
ಮಧುವಾಗಿ ಉಲಿದವು ‘ಥ್ಯಾಂಕ್ಸ್’
ಈಗ ಗೊಂದಲದಲ್ಲಿದ್ದೇನೆ ನಾನು ಹೇಳಬೇಕು
ಎಂದಿದ್ದ ಥ್ಯಾಂಕ್ಸ್ ಈಗ ಯಾರಿಗೆ ಹೇಳಲಿ?
ಮುಗಿಲಲಿ ನೋಡಿದರೆ ಚಂದ್ರನೂ ಇಲ್ಲ..!
ಥೂ.. ಈ ಬಿಕನಾಶಿ ಚಂದ್ರನಿಗೆ ಬುದ್ಧಿಯೇ ಇಲ್ಲ
ಸುರಿಯುತ್ತಾನೆ ವಿರಹದ ಅಗ್ನಿಗೆ ಜೇನು-ತುಪ್ಪ..!..!
**********