ಕಾವ್ಯಯಾನ

ಮೌನ ಮತ್ತು ಕವಿ

Selective Focus Photography of Bee Near on Purple Petaled Flower

ಕೊಟ್ರೇಶ್ ಅರಸಿಕೆರೆ

ಅದು ಹಾರಾಡುವ ರೀತಿಗೆ,
ರೆಕ್ಕೆಗಳಿವೆ ಎಂಬ ಖುಷಿಗೆ ,
ಮನ ಸೋತಿದ್ದೆ ಆ ಚಿಟ್ಟೆಗೆ!

ಇತ್ತೀಚೆಗೆ…..

ಯಾಕೋ ಕಿರಿಕಿರಿ ಎನಿಸಿತು
ಭಾರೀ ಶಬ್ದ ಎಂದೆನಿಸಿತು;
ಮೌನ ನಾಶಮಾಡುತ್ತಿದೆ ಅನಿಸಿತು

ಈಗ ಸರಿಯಾಗಿ ನೋಡಲೆತ್ನಿಸಿದೆ
ಚಮಕ್ ಬೆಳಕಿಗೆ ಅದು ಆಕರ್ಷಿತ
ಆಗುತ್ತಿತ್ತು!
ನೋಡಿದೆ…ಪರಿಶೀಲಿಸಿದೆ…ಅಯ್ಯೋ
ಅದು ಏರೋಪ್ಲೇನ್ ಚಿಟ್ಟೆ!!

ಮೌನ ಅರಿಯದ ಕವಿಯೊಬ್ಬ
ಕವಿಯೇ?
ವರ್ತಮಾನಕ್ಕೆ ಸ್ಪಂದಿಸುವ ನೆಪ
ಎಷ್ಟೆಲ್ಲಾ ಕೂಳತನ!
ಹಡೆದವ್ವನ ಝಾಡಿಸಿ ಒದೆಯುವ
ದುಷ್ಟತನ!!

ಆಗ….

ಕವಿಯೊಬ್ಬ ಹಾಡಿದನೆಂದರೆ
ದೇಶವೇ ರೋಮಾಂಚನ;
ರೋಮ ರೋಮಗಳಲ್ಲಿ ದೇಶ
ಪ್ರೇಮ!

ದಾಂಪತ್ಯ, ಸಹಜೀವನ
ಪವಿತ್ರ ಪ್ರೇಮ!

ಈಗ….

ವಂಚನೆ,ಕೂಳತ್ವ….
ರೋಮ ರೋಮಗಳಲ್ಲಿ
ಅಪವಿತ್ರ ಪ್ರೇಮ,ಅನೈತಿಕತೆ

ಮೌನವೆಲ್ಲಾ ಮಲಗಿ ಬಿಟ್ಟಿದೆ;
ತಣ್ಣನೆಯ ಶವದ ಹಾಗೆ!
ಕವಿ ಅರಚುತ್ತಿದ್ದಾನೆ….
ರಾಕ್,ಪಾಪ್…
ನಾಚಿಕೆ ಬಿಟ್ಟಂತೆ
ದೇಹವನ್ನೆಲ್ಲಾ ಹರಾಜಿಗಿಟ್ಟಿದ್ದಾನೆ
ತನ್ನ ತಾ ಮಾರಿ ಕೊಳ್ಳುತ್ತಾ……!
ಸದ್ದಿಗೆ ಇಲ್ಲಿ ಯಾರೂ ಬೆಲೆ ಕೊಡರು
ಎಂಬುದ ಮರೆತು!

ಇಥದನೆಲ್ಲಾ ಧಿಕ್ಕರಿಸಿಯೂ
ಅಲ್ಲಲ್ಲಿ….

ಮೌನ,ಕಾಯಕ ಅರಿತ ಚಿಟ್ಟೆಗಳು
ಹೂವಿನಿಂದ ಹೂವಿಗೆ ಹಾರಿ
ಮಕರಂದ ಹೀರುತ್ತಾ,ಕೊಡುತ್ತಾ
ತೆಗೆದು ಕೊಳ್ಳುತ್ತಾ ಪವಿತ್ರ ಪ್ರೇಮ
ಬಂಧನ ನಿರ್ಮಿಸುತ್ತಿವೆ ಸದ್ದಿಲ್ಲದೆ!

********

One thought on “ಕಾವ್ಯಯಾನ

Leave a Reply

Back To Top