ಕವಿತೆ ಕಾರ್ನರ್

ಬಾ ಮಗುವೆ ಬಾ!

Image result for father fishing with his son

ಕು.ಸ.ಮಧುಸೂದನ

ನಾನೇನೂ ಅಲ್ಲ


ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ

ಹೇಳಲಾಗದೆ ಏನನ್ನೂ ತಡವರಿಸಿದಾಗ

ಮೊದಲಬಾರಿ ಯೋಚಿಸಿದೆ

ನಾನ್ಯಾರು
ಮತ್ತು
ನಾನೇನು?

ಯಾವ ದಾರಿಯೂ ನನ್ನದಾಗಲಿಲ್ಲ
ಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ.

ಸೋತಿದ್ದೇನೊ ಗೊತ್ತಾಯಿತಾದರು
ಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ.

ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರು
ಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ.

ಕನಸುಗಳು ನನಗೂ ಇದ್ದವು
ಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು

ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು.

ಆತ್ಮದ ಮಾತಿಗಿಂತ ಸುಖವೇ ಮುಖ್ಯ
ಎಂದು ನಾನಂದುಕೊಂಡಿದ್ದರೆ ಇವತ್ತು ಮದ್ಯದಂಗಡಿಯ ಹೊಸಿಲಲಿ
ಇಳಿಸಂಜೆಗಳ ನೀಳ ರಾತ್ರಿಗಳ ಕಳೆಯ ಬೇಕಿರಲಿಲ್ಲ.

ದೇವರೆಂದೂ ನನಗೆ ಸಹಾಯ ಮಾಡುವನೆಂದು ನಾನೆಂದೂ ನಂಬಲಿಲ್ಲ
ನಂಬಿದ್ದರೂ ಪಾಪ ಅವನಿಗೆಷ್ಟು ಜನ ಗ್ರಾಹಕರೋ

ಸಮಯವಾದರೂ ಹೇಗೆ ಸಿಕ್ಕೀತು ನನ್ನಂತ ಪಾಪಿಯ ಬಗ್ಗೆ ಯೋಚಿಸಲು.

ನನ್ನ ಸುತ್ತ ತೀರಾ ದೇವರಂತ ಮನುಷ್ಯರಾರು ಇರಲಿಲ್ಲ.
ನನ್ನ ಸರಿದಾರಿಯಲ್ಲಿ ನಡೆಸಲು.

ನಾನು ಶಾಲೆಗೆ ಹೋಗಿದ್ದು ಒಂದಷ್ಟು ಅಕ್ಷರಗಳನ್ನು ಕಲಿಯಲು ಮಾತ್ರ

ಅವರು ನೀತಿಪಾಠ ಹೇಳಲು ಶುರು ಮಾಡಿದೊಡನೆ ನಾನು ನಿದ್ದಗೆ ಜಾರುತ್ತಿದ್ದೆ.
ಅನೀತಿಯಲ್ಲೇ ಮುಳುಗಿದವರು ನೀತಿಯ ಬಗ್ಗೆ
ಮಾತಾಡುವುದು ತಪ್ಪೆಂದು ಅವರಿಗೂ ಗೊತ್ತಿತ್ತು.

ಹಾಗಂತ ನಾನು ಕಡುಪಾಪಿಯೇನು ಆಗಿರಲಿಲ್ಲ.

ಹಸಿದು ಬಂದವರಿಗೆ ನನ್ನ ತಟ್ಟೆಯಲಿದ್ದ ಅನ್ನದಲ್ಲೆ ಒಂದಿಷ್ಟು ತೆಗೆದು ನೀಡಿದ್ದೇನೆ.

ಬಾರವಾದ ಮೂಟೆ ಹೊತ್ತು ಹೋಗುತ್ತಿದ್ದ ವಯಸ್ಸಾದ ಹಮಾಲಿಯೊಬ್ಬನಿಗೆ ಅವನ ಬಾರ ಹೊತ್ತು ಸಹಾಯ ಮಾಡಿದ್ದೇನೆ

ಹಾಗೆಯೇ ಅಕ್ಕಪಕ್ಕದವರಿಗೆ ಕಿರಿಕಿರಿಯಾಗದಂತೆ ರಾತ್ರಿಗಳಲ್ಲಿ ಕಂಠಮಟ್ಟ ಕುಡಿದರೂ ಗದ್ದಲಮಾಡದೆ ತೆಪ್ಪಗೆ
ಮಲಗಿ ಉಪಕಾರವನ್ನೂ ಮಾಡಿದ್ದೇನೆ!

ಇವತ್ತಿಗೂ ನನಗೆ ಅಯ್ಯೋ ಅನಿಸುವುದು
ಕಾನ್ವೆಂಟಿಗೆ ಹೋಗುವ ಆ ಎಳೆಯ ಕಂದಮ್ಮಗಳನ್ನು ಕಂಡಾಗ

ತಮ್ಮ ಪೂರ್ವೀಕರೆಲ್ಲ ಸೇರಿ ಮಾಡಿದಷ್ಟೂ ಪಾಪಗಳ ಮೂಟೆಯನ್ನು ಬೆನ್ನಿನ ಚೀಲಕ್ಕೇರಿಸಿಕೊಂಡು ನಡುಬಾಗಿಸಿ ನಡೆಯುವ ಮಕ್ಕಳನ್ನು
ನೋಡಿದಾಗೆಲ್ಲ

ಗಾಣದ ಎತ್ತುಗಳು ನೆನಪಾಗಿ ಕಣ್ಣಲ್ಲಿ ನೀರು ಸುರಿಸುತ್ತೇನೆ.

ತಮಗೆ ವಯಸ್ಸಾದ ಮೇಲೆ ಅನ್ನ ಹಾಕಲೆಂದು
ಅವರ ಬಾಲ್ಯವನ್ನು ಕಿತ್ತುಕೊಂಡು
ಶಾಲೆಯೆಂಬ ನರಕಕ್ಕೆ ಕಳಿಸುವ ಅಪ್ಪಅಮ್ಮಂದಿರನ್ನು ಹಿಡಿದು
ಒದೆಯಬೇಕೆಂದು ಸಾವಿರ ಸಾರಿ ಅನಿಸಿದರೂ
ಸುಮ್ಮನಾಗಿದ್ದೇನೆ!

ಬಾ ಮಗುವೆ ಇಲ್ಲಿ ಬಾ
ನಿನ್ನ ಹೆಗಲ ಮೇಲಿನ ಬ್ಯಾಗನ್ನು ಇಲ್ಲಿ ಇಳಿಸಿ ಇಡು

ಬಾ ನನ್ನ ಜೊತೆ ಊರಂಚಿನ ಕಾಡಿಗೆ ಹೋಗೋಣ.

ಅಲ್ಲಿ ನಿನ್ನಂತೆಯೇ ಮುದ್ದಾಗಿರುವ ಚಿಟ್ಟೆಗಳಿವೆ
ಹೂ ಹುಡುಕಿ ಹಾರುವ ಅವನ್ನು ಹಿಡಿಯೋಣ

ಪಕ್ಕದಲ್ಲಿ ಹರಿಯುವ ನದಿಯ ದಂಡೆಯಲ್ಲಿ ಕೂತು
ಮರಿಮೀನುಗಳಿಗೆ ಗಾಳ ಹಾಕಿ ಕಾಯೋಣ.

ಮದ್ಯಾಹ್ನ ಹೊಟ್ಟೆ ಹಸಿದಾಗ ಅಲ್ಲೇ ಸಿಗುವ
ಕಾಡಿನ ಹಣ್ಣುಗಳ ಕಚ್ಚಿ ತಿನ್ನೋಣ

ಒಂದು ಹೇಳುತ್ತೇನೆ ಕೇಳು ಮಗು
ನಿಸರ್ಗ ಕಲಿಸುವುದಕ್ಕಿಂತ ಹೆಚ್ಚಾದ ಪಾಠವನ್ನು
ಯಾವ ಶಾಲೆಗಳು ಯಾವ ಶಿಕ್ಷಕರುಗಳೂ ಕಲಿಸಲಾರರು.

ನಾಗರೀಕತೆಯ ಮುಖವಾಡ ಹೊತ್ತ ಜಗತ್ತಿನಲ್ಲಿ
ಯಾರೂಕಲಿಸದೆ ಕಲಿಯಬಹುದಾದದ್ದು
ವಂಚನೆ ದ್ರೋಹಗಳು ಮಾತ್ರ

ಬಾ ಮಗುವೆ ಬಂದುಬಿಡು

ನಾನು ಸಾಯುವುದರೊಳಗಾಗಿ ನಿನಗೆ
ಮೀನು ಹಿಡಿಯುವುದ ನದಿಯೊಳಗ ಈಜುವುದ
ಬೆಣಚುಕಲ್ಲು ಗೀಚಿ ಬೆಂಕಿ ಹೊತ್ತಿಸಿ ಮೀನು ಬೇಯಿಸುವುದ
ಕಲಿಸುವೆ.

ಬಾ ಮಗುವೆ ನಾನು ನಿನ್ನ ಅಪ್ಪನಾಗಲಾರದ ಅಪ್ಪ!
……..

Leave a Reply

Back To Top